ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಗಳು‌ ಹಳ್ಳಿ ಜನರ ಸೇವೆ ಮಾಡಲಿ’

Last Updated 12 ಏಪ್ರಿಲ್ 2018, 19:08 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯೆ ಆಗಬೇಕು ಎನ್ನುವಮಗಳ ಕನಸನ್ನು ನಾವು ಈಡೇರಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಆಕೆ ವೈದ್ಯಕೀಯ ಸೇವೆ ಮಾಡಬೇಕು ಎನ್ನುವನಮ್ಮ ಬಯಕೆಯನ್ನೂ ನನಸು ಮಾಡುತ್ತಾಳೆ ಎಂಬ ನಂಬಿಕೆ ಇದೆ...’

ಗುರುವಾರ ಇಲ್ಲಿ ನಡೆದ ರಾಜೀವ ಗಾಂಧಿ ವಿಶ್ವವಿದ್ಯಾಲಯದ 20ನೇ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕ ಪಡೆದ ಜೆ.ಎಸ್‌.ಅರ್ಪಿತಾ ಅವರ ತಂದೆ ಜಯಶೀಲ ರೆಡ್ಡಿ ಅವರ ಭಾವುಕ ನುಡಿಗಳಿವು. ಅರ್ಪಿತಾ ಧಾರವಾಡದ ಎಸ್‌ಡಿಎಂ ಮೆಡಿಕಲ್‌ ಕಾಲೇಜಿನಲ್ಲಿ ಕಮ್ಯುನಿಟಿ ಮೆಡಿಸಿನ್‌ ಹಾಗೂ ಮೈಕ್ರೊಬಯಾಲಜಿ ವಿಭಾಗದಲ್ಲಿ ಓದಿದ್ದಾರೆ.

‘ಚಿತ್ರದುರ್ಗ ನಮ್ಮ ಊರು. ನಾನು, ಪತ್ನಿ ಶಾಂತಕುಮಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಚಿಕ್ಕಂದಿನಿಂದಲೂ ಅವಳಿಗೆ ವೈದ್ಯೆ ಆಗುವ ಕನಸಿತ್ತು. ನಾನು ಹಳ್ಳಿಯಿಂದಲೇ ಬಂದವನು. ಅಲ್ಲಿಯವರ ಸಮಸ್ಯೆಗಳ ಅರಿವು ನನಗಿದೆ. ಹೀಗಾಗಿ ನಮ್ಮ ಮಗಳು ಗ್ರಾಮೀಣ ಜನರ
ಸೇವೆ ಮಾಡಿ, ಅಲ್ಲಿ ಜನರ ಪ್ರೀತಿ ಗಳಿಸಬೇಕು ಎಂಬುದು ನಮ್ಮ ಆಸೆ’ ಎಂದರು.

ಮಲೇಷ್ಯಾ ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆದು ದಾವಣಗೆರೆಯ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸ್‌ನಲ್ಲಿ ಓದಿ ನಾಲ್ಕು ಚಿನ್ನದ ಪದಕ ಪಡೆದ ಖುಷಿ ಡಾ. ಲಿಮ್‌ ಬೂನ್‌ ಹೂಯಿ ಅವರದ್ದಾಗಿತ್ತು.

‘ಖಾಸಗಿ ಕಂಪನಿಯಲ್ಲಿ ಅಪ್ಪ ಕೆಲಸ ಮಾಡುತ್ತಿದ್ದರು. ಅಮ್ಮ ಟೇಲರ್‌ ಆಗಿದ್ದರು. ನಾನು ಭಾರತಕ್ಕೆ ಬಂದ ಮೊದಲ ವರ್ಷದಲ್ಲಿಯೇ ಅಮ್ಮ
ತೀರಿಕೊಂಡರು. ನಾನು ವೈದ್ಯನಾಗಬೇಕು ಎಂಬುದು ಅವರಿಬ್ಬರ ಕನಸು. ಅಣ್ಣ ಎಂಜಿನಿಯರ್‌. ನಾನು ಈಗ ವೈದ್ಯ ಹಾಗೂ ನಾಲ್ಕು ಚಿನ್ನದ ಪದಕ ಪಡೆದಿದ್ದೇನೆ ಎನ್ನುವುದು ಖುಷಿ ತಂದಿದೆ. ಮಲೇಷ್ಯಾ ಸರ್ಕಾರದ ನಿಯಮದಂತೆ ಅಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ಭಾರತ, ಅದರಲ್ಲೂ ಕರ್ನಾಟಕ ನನಗೆ ತುಂಬಾ ಇಷ್ಟವಾಯಿತು. ಕನ್ನಡವನ್ನೂ ಅಲ್ಪಸ್ವಲ್ಪ ಮಾತಾಡುತ್ತೇನೆ. ಮುಂದೆ ಭಾರತಕ್ಕೆ ಬಂದು ಇಲ್ಲಿಯೂ ಕೆಲ ವರ್ಷ ಸೇವೆ ಸಲ್ಲಿಸುವೆ’ ಎಂದರು.

ಎಂಬಿಬಿಸ್‌ನಲ್ಲಿ ಅತಿಹೆಚ್ಚು ಅಂಕ ಗಳಿಸಿ ಎರಡು ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದಿರುವ ಎಂ.ಎಸ್‌.ರಾಮಯ್ಯ ಮೆಡಿಕಲ್‌ ಕಾಲೇಜ್‌ನ ಡಾ.ಶ್ವೇತಾ ಶ್ರೀಧರ್‌, ‘ಮನೆಯಲ್ಲಿ ಅಪ್ಪ ಒಬ್ಬರನ್ನು ಬಿಟ್ಟು ಎಲ್ಲರೂ ವೈದ್ಯರೇ. ಅತಿ ಹೆಚ್ಚು ಅಂಕ ಗಳಿಸಿರುವುದು ಖುಷಿ
ನೀಡುತ್ತಿದೆ. ವೈದ್ಯೆ ಆಗಿ ಸೇವೆ ಮಾಡಬೇಕು ಎಂಬುದೇ ನನ್ನ ಕನಸು. ಸ್ನಾತಕೋತ್ತರ ಪದವಿ ಮುಗಿಸಿ ಗ್ರಾಮೀಣ ಪ್ರದೇಶಗಳಲ್ಲಿ
ಸೇವೆ ಸಲ್ಲಿಸುವೆ’ ಎಂದರು.

ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಮಾತನಾಡಿ, ‘ವೈದ್ಯಕೀಯ ಕ್ಷೇತ್ರ ಇರುವುದು ಸೇವೆ ಮಾಡಲು, ಹಣ ಸಂಪಾದನೆ ಮಾಡಲು ಅಲ್ಲ. ಶ್ರದ್ಧೆ ಮತ್ತು ನಿಷ್ಠೆಯಿಂದ ಜನರ ಸೇವೆ ಮಾಡಿ. ನಿಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸುವುದೇ ದೇಶಪ್ರೇಮ’ ಎಂದರು. ರಾಜ್ಯಪಾಲ ವಜುಭಾಯಿ ವಾಲಾ, ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಎಂ.ಕೆ.ರಮೇಶ್‌ ಹಾಗೂ ಉಪರಾಷ್ಟ್ರಪತಿಗಳು 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಿದರು.

* ಮೊದಲ ಆದ್ಯತೆ ಮಾತೃಭಾಷೆಗೆ ನೀಡಿ. ಹಳೆಯ ಜೀವನ ಶೈಲಿಗೆ ಜನರು ಹಿಂತಿರುಗುವಂತೆ ಮಾಡುವ ಜವಾಬ್ದಾರಿ ವೈದ್ಯರುಗಳದ್ದು’   

–ವೆಂಕಯ್ಯನಾಯ್ಡು, ಉಪ ರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT