ಭಾನುವಾರ, ಡಿಸೆಂಬರ್ 15, 2019
19 °C
ವಿರಾಟ್ ಬಳಗಕ್ಕೆ ಅಶ್ವಿನ್ ಪಡೆಯ ಸವಾಲು: ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದಲ್ಲಿ ಕನ್ನಡಿಗರ ದಂಡು

ಜಯದ ಖಾತೆ ತೆರೆಯುವತ್ತ ಆರ್‌ಸಿಬಿ ಚಿತ್ತ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಜಯದ ಖಾತೆ ತೆರೆಯುವತ್ತ ಆರ್‌ಸಿಬಿ ಚಿತ್ತ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾದಾಗಿನಿಂದಲೂ ಪ್ರಶಸ್ತಿ ಗೆಲ್ಲುವ ಕನಸು ಕೈಗೂಡದ ಎರಡು ತಂಡಗಳು ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು 11ನೇ ಆವೃತ್ತಿಯ ಐಪಿಎಲ್‌ನಲ್ಲಿ ಸೆಣಸಾಟ ನಡೆಸಲಿವೆ. ಟೂರ್ನಿಯಲ್ಲಿ ಈಗಾಗಲೇ ಎರಡೂ ತಂಡಗಳು ಒಂದೊಂದು ಪಂದ್ಯ ಆಡಿವೆ. ಆರ್‌ಸಿಬಿಯು ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಸೋತಿತ್ತು. ಈ ಪಂದ್ಯದಲ್ಲಿ ಜಯದ ಖಾತೆ ತೆರೆಯುವತ್ತ ಚಿತ್ತ ನೆಟ್ಟಿದೆ.

ಆದರೆ ಕಿಂಗ್ಸ್‌ ತಂಡವು ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ ಜಯಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತ ಬೆಳೆದಿರುವ ಕನ್ನಡಿಗರಾದ ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್ ಮತ್ತು ಕರುಣ್ ನಾಯರ್ ಅವರು ಕಿಂಗ್ಸ್‌ ತಂಡದ ಗೆಲುವಿನ ರೂವಾರಿಗಳಾಗಿದ್ದರು.

ಅದರಲ್ಲೂ ರಾಹುಲ್ ಅವರು 14 ಎಸೆತಗಳಲ್ಲಿ 50 ರನ್‌ ಗಳಿಸಿ ದಾಖಲೆ ನಿರ್ಮಿಸಿದ್ದರು. ಕರುಣ್ ನಾಯರ್ ಕೂಡ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ರಾಹುಲ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದ ಮಯಂಕ್ ಒಂದು ಅಮೋಘ ಸಿಕ್ಸರ್ ಬಾರಿಸಿದ್ದರು. ಆದರೆ ಕೇವಲ ಏಳು ರನ್ ಮಾತ್ರ ಗಳಿಸಿದ್ದರು.

ಇಲ್ಲಿಯೂ ಇದೇ ಜೋಡಿ ಕಿಂಗ್ಸ್ ಪರ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಿಲ್ಲರ್, ಮಾರ್ಕಸ್ ಸ್ಟೋಯಿನಿಸ್ ಕೂಡ ಉತ್ತಮ ಲಯದಲ್ಲಿದ್ದಾರೆ. ಎಡಗೈ ಆಲ್‌ರೌಂಡರ್ ಯುವರಾಜ್ ಸಿಂಗ್  ತಮ್ಮ ಲಯ ಕಂಡುಕೊಂಡರೆ ಆರ್‌ಸಿಬಿ ಬೌಲರ್‌ಗಳು ಕೈಕೈ ಹಿಸುಕಿಕೊಳ್ಳಬೇಕಾದೀತು.

ಮೇಲ್ಮೈ ದುರಸ್ತಿಯಾಗಿರುವ ಇಲ್ಲಿಯ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡುವಂತೆ ಕಾಣುತ್ತಿದೆ. ಅಶ್ವಿನ್ ಅವರು ಇಲ್ಲಿಯೂ ಮೂವರು ಸ್ಪಿನ್ನರ್ ಮತ್ತು ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿಯುವರೇ ಎಂಬುದನ್ನು ಕಾದು ನೋಡಬೇಕು.

ಮಧ್ಯಮವೇಗಿಗಳಾದ ಮೋಹಿತ್ ಶರ್ಮಾ ಮತ್ತು ಆ್ಯಂಡ್ರ್ಯೂ ಟೈ ಆವರು ಉತ್ತಮ ಲಯದಲ್ಲಿದ್ದಾರೆ. ಅಶ್ವಿನ್, ಅಕ್ಷರ್ ಪಟೇಲ್ ಮತ್ತು ಅಫ್ಗಾನಿಸ್ತಾನದ ಮುಜೀಬ್ ಉರ್ ರೆಹಮಾನ್ ಪಂದ್ಯವನ್ನು ತಮ್ಮ ಪರವಾಗಿ ಸೆಳೆದುಕೊಳ್ಳಬಲ್ಲ ಚಾಣಾಕ್ಷ ಬೌಲರ್‌ಗಳು.  ಆದರೆ ಆತಿಥೇಯ ತಂಡದ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ.

ಪುಟಿದೇಳುವ ಸವಾಲು: ಹೋದ ವರ್ಷದ ಟೂರ್ನಿಯಲ್ಲಿ ಪ್ಲೇ ಆಫ್‌ ಹಂತ ತಲುಪುವಲ್ಲಿ ವಿಫಲವಾಗಿದ್ದ ಆರ್‌ಸಿಬಿ ಈ ಸಲವೂ ಸೋಲಿನೊಂದಿಗೆ ಟೂರ್ನಿ ಆರಂಭಿಸಿದೆ. ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಎದುರಿನ ಪಂದ್ಯದಲ್ಲಿ  ಆರ್‌ಸಿಬಿಯು ಬ್ರೆಂಡನ್ ಮೆಕ್ಲಮ್ ಮತ್ತು ಕ್ವಿಂಟನ್ ಡಿ ಕಾಕ್ ಜೋಡಿಯನ್ನು ಇನಿಂಗ್ಸ್‌ ಆರಂಭಿಸಲು ಕಣಕ್ಕಿಳಿಸಿತ್ತು. ಅದರಲ್ಲಿ ಮೆಕ್ಲಮ್ 43 ರನ್ ಗಳಿಸಿದ್ದರು. ಆದರೆ ಕ್ವಿಂಟನ್ ಬೇಗನೆ ಔಟಾಗಿದ್ದರು.

ಮೂರನೆ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ವಿರಾಟ್ 31 ರನ್‌ ಗಳಿಸಿದರು. ಆದರೆ ತಮ್ಮ ಎಂದಿನ ಸ್ಫೋಟಕ ಶೈಲಿಯಲ್ಲಿ  ಆಡಿರಲಿಲ್ಲ. ಆದರೆ, ಎಬಿಡಿ ಮತ್ತು ಮನದೀಪ್ ಸಿಂಗ್ ಅವರ ಅಬ್ಬರದ ಆಟದಿಂದಾಗಿ ತಂಡವು 176 ರನ್‌ಗಳನ್ನು ಗಳಿಸಿತ್ತು.

ಆದರೆ ಈ ಹೋರಾಟದ ಮೊತ್ತದ ಬಲದಿಂದ ತಂಡಕ್ಕೆ ಜಯ ಕೊಡಿಸುವಲ್ಲಿ ಬೌಲರ್‌ಗಳು ವಿಫಲರಾಗಿದ್ದರು. ವೇಗಿ ಕ್ರಿಸ್ ವೋಕ್ಸ್‌ ಮೂರು ವಿಕೆಟ್ ಕಬಳಿಸಿದ್ದರು. ಆದರೆ ರನ್‌ಗಳನ್ನು ಧಾರಾಳವಾಗಿ ನೀಡಿದ್ದರು.

ಉಮೇಶ್ ಯಾದವ್ ಕೂಡ ಎರಡು ವಿಕೆಟ್ ಗಳಿಸಿದ್ದರು. ಆದರೆ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್ ಮತ್ತು ಕುಲವಂತ್ ಖೆಜ್ರೊಲಿಯಾ ವೈಫಲ್ಯ ಅನುಭವಿಸಿದ್ದು ಆರ್‌ಸಿಬಿಗೆ ದುಬಾರಿಯಾಗಿತ್ತು. ತವರಿನ ಅಂಗಳದಲ್ಲಿ ಮಿಂಚುವ ಅವಕಾಶವನ್ನು ಇವರು ಬಳಸಿಕೊಳ್ಳುವ ನಿರೀಕ್ಷೆ ಇದೆ.

**

ತಂಡಗಳು

ಆರ್‌ಸಿಬಿ: ವಿರಾಟ್ ಕೊಹ್ಲಿ (ನಾಯಕ), ಬ್ರೆಂಡನ್ ಮೆಕ್ಲಮ್, ಕ್ವಿಂಟನ್ ಡಿ ಕಾಕ್, ಎಬಿ ಡಿವಿಲಿಯರ್ಸ್, ಸರ್ಫರಾಜ್ ಖಾನ್, ಮನದೀಪ್ ಸಿಂಗ್, ಕ್ರಿಸ್ ವೋಕ್ಸ್, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್, ಕುಲವಂತ್ ಖೆಜ್ರೊಲಿಯಾ, ಡೇನಿಯಲ್ ವೆಟೋರಿ (ಮುಖ್ಯ ಕೋಚ್),

ಕಿಂಗ್ಸ್ ಇಲೆವನ್ ಪಂಜಾಬ್: ರವಿಚಂದ್ರನ್ ಅಶ್ವಿನ್ (ನಾಯಕ), ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್, ಯುವರಾಜ್ ಸಿಂಗ್, ಡೇವಿಡ್ ಮಿಲ್ಲರ್, ಮಾರ್ಕಸ್ ಸ್ಟೋಯಿನಿಸ್, ಅಕ್ಷರ್ ಪಟೇಲ್, ಆ್ಯಂಡ್ರ್ಯೂ ಟೈ, ಮೋಹಿತ್ ಶರ್ಮಾ, ಮುಜೀಬ್ ಉರ್ ರೆಹಮಾನ್, ಬ್ರಾಡ್ ಹಾಜ್ (ಮುಖ್ಯ ಕೋಚ್), ವೆಂಕಟೇಶ್ ಪ್ರಸಾದ್ (ಬೌಲಿಂಗ್ ಕೋಚ್),

ಪಂದ್ಯ ಆರಂಭ: ರಾತ್ರಿ 8ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

**

ಟೂರ್ನಿಯಲ್ಲಿ ಈಗಷ್ಟೇ ಒಂದು ಪಂದ್ಯ ಮುಗಿದಿದೆ. ಒಂದು ಸೋಲಿನಿಂದ ತಮ್ಮ ತಂಡ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಬ್ರೆಂಡನ್ ಮೆಕ್ಲಮ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದು ಫಲ ನೀಡಿದೆ.

-ಡೇನಿಯಲ್ ವೆಟೋರಿ, ಆರ್‌ಸಿಬಿ ಕೋಚ್

ಪ್ರತಿಕ್ರಿಯಿಸಿ (+)