ಮಂಗಳವಾರ, ಡಿಸೆಂಬರ್ 10, 2019
24 °C

‘ಹೊಡೆತಕ್ಕೆ ಕಿವಿ ತಮಟೆಗೆ ಪೆಟ್ಟು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹೊಡೆತಕ್ಕೆ ಕಿವಿ ತಮಟೆಗೆ ಪೆಟ್ಟು’

ಬೆಂಗಳೂರು: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದಡಿ ವಿದ್ಯಾರಣ್ಯಪುರದ ನಾರಾಯಣ ಇ ಟೆಕ್ನೊ ಶಾಲೆಯ ಶಿಕ್ಷಕ ವೆಂಕಟಸುಬ್ಬಯ್ಯ ಎಂಬುವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ಹತ್ತನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗನ ಕಿವಿಗೆ ಶಿಕ್ಷಕ ಡಸ್ಟರ್‌ನಿಂದ ಹೊಡೆದಿದ್ದಾರೆ ಎಂದು ತಾಯಿ ದೂರು ನೀಡಿದ್ದರು. ಬಾಲ ನ್ಯಾಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ವಿದ್ಯಾರಣ್ಯಪುರದ ಪೊಲೀಸರು ತಿಳಿಸಿದರು.

ಶಾಲೆಗೆ ರಜೆ ಪ್ರಾರಂಭವಾಗಿದ್ದು, ಬೇಸಿಗೆ ಶಿಬಿರ ನಡೆಯುತ್ತಿದೆ. ಶಿಬಿರದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ ಮೇಲೆ ಬುಧವಾರ ಹಲ್ಲೆ ನಡೆಸಲಾಗಿದ್ದು, ಆ ದೃಶ್ಯ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ವಶಕ್ಕೆ ಪಡೆದಿರುವ ಪೊಲೀಸರು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

‘ಪಕ್ಕದಲ್ಲಿ ಕುಳಿತ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾನೆ ಎಂಬ ಕಾರಣಕ್ಕೆ ನನ್ನ ಮಗನಿಗೆ ಶಿಕ್ಷಕ ಹೊಡೆದಿದ್ದಾರೆ. ಈ ಮುಂಚೆಯೂ ಸಾಕಷ್ಟು ಬಾರಿ ಅದೇ ರೀತಿ ವರ್ತಿಸಿದ್ದರು. ಈ ಬಾರಿ ಹೊಡೆದಾಗ ಮಗನ ಕಿವಿಯ ತಮಟೆಗೆ ಪೆಟ್ಟಾಗಿದ್ದು, ಒಂದು ಹನಿ ನೀರು ಕೂಡ ಕಿವಿಗೆ ಹೋಗದಂತೆ ಕಾಳಜಿ ವಹಿಸಬೇಕು. ಒಂದು ತಿಂಗಳೊಳಗೆ ಗುಣವಾಗಲಿಲ್ಲ ಎಂದರೆ ಚಿಕಿತ್ಸೆ ನೀಡಬೇಕು. ಅದಕ್ಕೆ ₹2 ಲಕ್ಷ ತಗುಲಬಹುದು ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ವಿದ್ಯಾರ್ಥಿಯ ತಂದೆ ಅಳಲು ತೋಡಿಕೊಂಡರು.

‘ನಾನು ತರಕಾರಿ ಮಾರಿಕೊಂಡು ಬದುಕು ನಡೆಸುತ್ತಿದ್ದೇನೆ. ದುಡಿದ ಹಣವನ್ನೆಲ್ಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುತ್ತಿದ್ದೇನೆ. ಇಷ್ಟು ಕೆಟ್ಟದಾಗಿ ಶಿಕ್ಷಿಸುವಂಥ ತಪ್ಪು ನನ್ನ ಮಗ ಏನು ಮಾಡಿದ್ದ’ ಎಂದು ಅವರು ಪ್ರಶ್ನಿಸಿದರು.

ವಿದ್ಯಾರ್ಥಿಯ ತಾಯಿ ಮೂರು ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಸದ್ಯ ಮಾಂಟೆಸ್ಸರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಪೋಷಕರಿಂದ ಪ್ರತಿಭಟನೆ: ಘಟನೆ ಖಂಡಿಸಿ ಪೋಷಕರು ಗುರುವಾರ ಶಾಲೆಯ ಎದುರು ಪ್ರತಿಭಟನೆ ನಡೆಸಿದರು. ‘ಇಂಥ ಘಟನೆ ಇದೇ ಮೊದಲಲ್ಲ. ಶಿಕ್ಷಕರು ಮಕ್ಕಳಿಗೆ ಹೊಡೆದ ಘಟನೆ ಸಾಕಷ್ಟು ಆಗಿದೆ. ಆದರೆ, ಯಾರಿಗೂ ಈಗಿನಷ್ಟು ಗಂಭೀರ ಸಮಸ್ಯೆ ಆಗಿರಲಿಲ್ಲ’ ಎಂದು ಪೋಷಕರು ತಿಳಿಸಿದರು.

‘ತರಗತಿ ನಡೆಯುತ್ತಿದ್ದಾಗ ಸ್ನೇಹಿತನ ಬಳಿ ಮಾತನಾಡಿದೆ ಎನ್ನುವ ಕಾರಣಕ್ಕೆ ಹಿಂದಿ ಶಿಕ್ಷಕರು ನನಗೆ ಡಸ್ಟರ್‌ನಿಂದ ಹೊಡೆದಿದ್ದರು. ನನ್ನ ಹಣೆ ಊದಿಕೊಂಡಿತ್ತು. ಆಗ ನಾನು ಏಳನೇ ತರಗತಿಯಲ್ಲಿದ್ದೆ’ ಎಂದು ಹೆಸರು ಹೇಳಲಿಚ್ಛಿಸದ 8ನೇ ತರಗತಿ ವಿದ್ಯಾರ್ಥಿ ತನ್ನ ಮೇಲೆ ನಡೆದಿದ್ದ ಹಲ್ಲೆಯ ಬಗೆಗೆ ವಿವರಿಸಿದ.

ದುಬಾರಿ ಶುಲ್ಕ: ‘ಪ್ರತಿವರ್ಷ ₹10,000 ಶಾಲಾ ಶುಲ್ಕ ಹೆಚ್ಚಿಸುತ್ತಾರೆ. ಕಟ್ಟಡ ನಿಧಿ ಎಂದು ಹೆಚ್ಚುವರಿ ₹2,500 ಹಣ ಕೇಳುತ್ತಾರೆ. ಈ ಬಗ್ಗೆ ಅಧಿಕಾರಿಗಳ ಬಳಿ ಸ್ಪಷ್ಟೀಕರಣ ದೂರು ನೀಡಿದರೆ ನಿಮ್ಮ ಮಕ್ಕಳನ್ನು ಯಾವುದಾದರೂ ಸರ್ಕಾರಿ ಶಾಲೆಗೆ ಸೇರಿಸಿ ಎನ್ನುತ್ತಾರೆ’ ಎಂದು ಪೋಷಕರೊಬ್ಬರು ಬೇಸರ ವ್ಯಕ್ತಪಡಿಸಿದರು. ಈ ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶಾಲಾ ಆಡಳಿತ ಮಂಡಳಿ ಸದಸ್ಯರು ಲಭ್ಯರಾಗಲಿಲ್ಲ.

ಪ್ರತಿಕ್ರಿಯಿಸಿ (+)