ಗುರುವಾರ , ಡಿಸೆಂಬರ್ 12, 2019
20 °C
ಶಾಶ್ವತ ನೀರಾವರಿ ಹೋರಾಟದ ನಿರಂತರ

ಭರವಸೆಗಳಿಗೆ ಕಂಗೆಟ್ಟ ಬಾಯಾರಿದ ಜನರು

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಭರವಸೆಗಳಿಗೆ ಕಂಗೆಟ್ಟ ಬಾಯಾರಿದ ಜನರು

ಚಿಕ್ಕಬಳ್ಳಾಪುರ: ಬಾಯಾರಿದ ಬಯಲುಸೀಮೆಗೆ ‘ಶಾಶ್ವತ ನೀರಾವರಿ’ಯೊಂದೇ ಪರಿಹಾರ ಎಂದು ನಂಬಿ ಎರಡು ದಶಕಗಳಿಂದ ಜಿಲ್ಲೆಯಲ್ಲಿ ನೀರಾವರಿ ಹೋರಾಟ

ಗಾರರು ಕೈಗೊಂಡಿರುವ ನಿರಂತರ ಜನಾಂದೋಲನ ಅರಣ್ಯರೋದನವಾಗಿಯೇ ಉಳಿದಿದೆ. ಸಂವೇದನೆ ಇಲ್ಲದ ಸರ್ಕಾರಗಳು, ಜನಪ್ರತಿನಿಧಿಗಳೇ ಇದಕ್ಕೆ ಕಾರಣವಾಗಿದ್ದಾರೆ.

ಪರಿಣಾಮ, ಅತಿ ಹೆಚ್ಚು ಕೆರೆಗಳು ಹಾಗೂ ನಿಸರ್ಗ ನಿರ್ಮಿತ ಕಾಲುವೆಗಳ ಜಾಲ ಹೊಂದಿರುವ ಬಯಲುಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆ ಅಂತರ್ಜಲದ ಅತಿ ಬಳಕೆಯಿಂದಾಗಿ ರಾಜಸ್ಥಾನದ ನಂತರ ಮರುಭೂಮಿಯ ಸ್ವರೂಪ ಪಡೆಯುತ್ತಿವೆ. ಜಲಕ್ಷಾಮದಿಂದ ತತ್ತರಿಸಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಫ್ಲೋರೈಡ್, ನೈಟ್ರೇಟ್ ಅಂಶ ಉಳ್ಳ ನೀರು ಕುಡಿದು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದವರ ನಿಖರ ಲೆಕ್ಕ ಈವರೆಗೆ ಸಿಕ್ಕಿಲ್ಲ.

ರಾಜ್ಯದಲ್ಲಿ ಪ್ರಾಂತ್ಯವಾರು ಬಳಕೆಯಾಗುತ್ತಿರುವ 1,035 ಟಿಎಂಸಿ ನೀರಿನಲ್ಲಿ ಬಯಲು ಸೀಮೆ ಪ್ರದೇಶಕ್ಕೆ ಹನಿ ನೀರು ಹರಿದಿಲ್ಲ. ಜಿಲ್ಲೆಯಲ್ಲಿ ಪಂಚಗಿರಿ ಶ್ರೇಣಿಯಿಂದಾಗಿ ಒಂದಾನೊಂದು ಕಾಲದಲ್ಲಿ ಎಂಟು ನದಿಗಳು ಮೈದುಂಬಿ ಹರಿಯುತ್ತಿದ್ದವು. ಸಾವಿರಾರು ಕೆರೆಗಳು ಕೃಷಿಯನ್ನು ಸಮೃದ್ಧಗೊಳಿಸಿದ್ದವು. ಇಂತಹ ಪ್ರದೇಶದಲ್ಲೀಗ ಕಳೆದ ಎರಡು ದಶಕಗಳಿಂದಲೂ ನೀರಿಗಾಗಿ ಹಾಹಾಕಾರ ಕಾಣಿಸಿಕೊಂಡಿದೆ.

ಪ್ರಣಾಳಿಕೆಯಲ್ಲಿ ನೀರಿಗೆ ಅಗ್ರಸ್ಥಾನ: ಅನೇಕ ದಶಕಗಳಿಂದ ಶಾಶ್ವತ ನೀರಾವರಿ ಹೋರಾಟದಿಂದ ಸುದ್ದಿಯಲ್ಲಿರುವ ಜಿಲ್ಲೆಯಲ್ಲಿ ಎರಡು ದಶಕಗಳಿಂದ ಈಚೆಗೆ ನಡೆದ ಎಲ್ಲಾ ಚುನಾವಣೆಗಳ ಪ್ರಣಾಳಿಕೆಗಳ ಪಟ್ಟಿಯಲ್ಲಿ ‘ನೀರು’ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಹರಿಯುವ ನದಿಗಳು ಒಣಗುತ್ತಿದ್ದಂತೆ ರಾಜಕಾರಣಿಗಳ ಬಾಯಲ್ಲಿ ನೀರಾವರಿ ವಿಚಾರವಾಗಿ ಸೆಲೆ ಒಡೆದ ಹೊಳೆಗಳು ಇಂದಿಗೂ ರಭಸದಿಂದಲೇ ಹರಿಯುತ್ತಿವೆ!

ಪ್ರತಿ ಚುನಾವಣೆಯಲ್ಲಿ ‘ರಾಜಕೀಯ’ ಮಾಡುವವರ ಬಾಯಲ್ಲಿ ಹರಿಯುವ ಸುಳ್ಳಿನ ‘ಪ್ರವಾಹ’ ನೋಡಿ ‘ಕನಸಿನ ಹೊಳೆ’ಯಲ್ಲಿ ಈಜಾಡುತ್ತ ಬಂದವರಿಗೆ ನಿಂತ ನೆಲದ ಬಿಸಿ ತಟ್ಟಿ ತಣಿಯದ ‘ಬಾಯಾರಿಕೆ’ ಆಗಾಗ ಕಾಣಿಸಿಕೊಂಡು ಪ್ರತಿಭಟನೆ, ಬಂದ್, ರಸ್ತೆ ತಡೆಗೆ ಎಡೆ ಮಾಡಿಕೊಡುತ್ತ ಬಂದಿದೆ.

ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಹತ್ತು ವರ್ಷ ಕಳೆಯಿತು. ಅದಕ್ಕೂ ಹತ್ತು ವರ್ಷಗಳ ಮೊದಲೇ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಿನ ಹೋರಾಟದ ಬೀಜಾಂಕುರವಾಗಿತ್ತು. ಅದರ ಫಲವಾಗಿ 1996ರಲ್ಲಿ ಸರ್ಕಾರ ಕೋಲಾರ ಜಿಲ್ಲೆಯ ಕೆರೆಗಳ ಪುನಶ್ಚೇತನ ಮತ್ತು ಅಂತರ್ಜಲ ಅಭಿವೃದ್ಧಿ ಬಗ್ಗೆ ಸರ್ಕಾರಿ ಸ್ವಾಮ್ಯದ ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ), 1997ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು 2000ನೇ ಇಸ್ವಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳಿಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಿಳಿಸಿತ್ತು.

ಶರಾವತಿ ಮತ್ತು ಪಶ್ಚಿಮ ವಾಹಿನಿ ನದಿಗಳಿಂದ ಹರಿದು ಸಮುದ್ರದ ಪಾಲಾಗುತ್ತಿರುವ ಅಪಾರ ಪ್ರಮಾಣದ ನೀರನ್ನು ಬಯಲು ಸೀಮೆ ಕೆರೆಗಳಿಗೆ ಹರಿಸಿ ರೈತರಿಗೆ ನೀರಾವರಿ ಭದ್ರತೆ ಒದಗಿಸಬಹುದು ಎಂದು ಸುದೀರ್ಘ ಅಧ್ಯಯನ ನಡೆಸಿ ಜಿ.ಎಸ್.ಪರಮಶಿವಯ್ಯ ಅವರು 1974ರಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಆ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಒತ್ತಾಯಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಈವರೆಗೆ ಪಟ್ಟು ಹಿಡಿದು ತನ್ನ ಚಳವಳಿ ಮುಂದುವರಿಸಿಕೊಂಡು ಬಂದಿದೆ. ರಾಜ್ಯ ಸರ್ಕಾರ 2004ರಲ್ಲಿ ಸುಮಾರು ₹ 8 ಕೋಟಿ ಖರ್ಚು ಮಾಡಿ ಇಸ್ರೊ ಸಂಸ್ಥೆಯ ರಿಮೋಟ್ ಸೆನ್ಸಿಂಗ್ ಏಜೆನ್ಸಿ ವತಿಯಿಂದ ಏರಿಯೆಲ್ ಟೇರೇನ್ ಮ್ಯಾಪಿಂಗ್ ಸಮೀಕ್ಷೆ ನಡೆಸಿ ವರದಿ ನೀಡಿತು. ಆ ವರದಿ ಕೂಡ ಈವರೆಗೆ ಪರಮಶಿವಯ್ಯ ಅವರ ವರದಿಯಂತೆ ದೂಳು ತಿನ್ನುತ್ತಿದೆ.

ಪರಮಶಿವಯ್ಯ ಅವರ 40 ವರ್ಷಗಳ ಕಠಿಣ ಪರಿಶ್ರಮದ ಅಧ್ಯಯನದ ವರದಿಯನ್ನು ರಾಜ್ಯ ಸರ್ಕಾರಗಳು ಸಜೀವವಾಗಿ ಸಮಾಧಿ ಮಾಡುತ್ತ ಬಂದಿವೆ. 2002ರಲ್ಲಿ ಪ್ರಾದೇಶಿಕ ಮತ್ತು ನೀರಾವರಿ ಅಸಮತೋಲನ ನಿವಾರಿಸಲು ಡಿ.ಎಂ.ನಂಜುಂಡಪ್ಪ ಅವರು ನೀಡಿದ ವರದಿ ಶಿಫಾರಸುಗಳು ಜಾರಿಗೊಳಿಸುವಲ್ಲಿ ಕೂಡ ಸರ್ಕಾರಗಳು ಪರಮ ನಿರ್ಲಕ್ಷ್ಯ ತೋರಿವೆ ಎನ್ನುವುದು ಹೋರಾಟಗಾರರ ಆಕ್ರೋಶಭರಿತ ಆರೋಪ.

ಮತದಾರರ ಎಚ್ಚರಿಸಲು ಜನಾಂದೋಲನ

ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಅಸೀಮ ನಿರ್ಲಕ್ಷ್ಯದ ವಿರುದ್ಧ ಸದ್ಯ ಜನ ಜಾಗೃತಿಗೆ ಮುಂದಾಗಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾತು ತಪ್ಪುವವರ ವಿರುದ್ಧ ಎಚ್ಚರದಿಂದ ಇರಿ ಎಂದು ಮತದಾರರನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದೆ.‘ಬಯಲು ಸೀಮೆ ನೀರಾವರಿ ಬಿಕ್ಕಟ್ಟು’ ಎಂಬ ವಿಷಯದ ಮೇಲೆ ಬಯಲುಸೀಮೆ ಜಿಲ್ಲೆಗಳ ನೀರಾವರಿ ವಿಚಾರದಲ್ಲಿ ಈವರೆಗೆ ಆಗಿರುವ ಅನ್ಯಾಯವನ್ನು ಅಂಕಿಅಂಶಗಳು ದಾಖಲೆಗಳ ಸಮೇತ ಜನರ ಮುಂದಿಟ್ಟು ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ. ಹೋರಾಟಗಾರರ ಅಳಲು ಮತ್ತು ಅವರ ಬಳಿ ಇರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಸಹ ಸದ್ಯ ಹೋರಾಟಗಾರರಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಇದು ಹೋರಾಟಗಾರರಿಗೆ ಆನೆ ಬಲ ತಂದಿದೆ.

ಮತದಾರರನ್ನು ಎಚ್ಚರಿಸಲು ಜನಾಂದೋಲನ

ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಅಸೀಮ ನಿರ್ಲಕ್ಷ್ಯದ ವಿರುದ್ಧ ಸದ್ಯ ಜನ ಜಾಗೃತಿಗೆ ಮುಂದಾಗಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಮಾತು ತಪ್ಪುವವರ ವಿರುದ್ಧ ಎಚ್ಚರದಿಂದ ಇರಿ ಎಂದು ಮತದಾರರನ್ನು ಎಚ್ಚರಿಸುವ ಕೆಲಸಕ್ಕೆ ಮುಂದಾಗಿದೆ. ‘ಬಯಲು ಸೀಮೆ ನೀರಾವರಿ ಬಿಕ್ಕಟ್ಟು’ ಎಂಬ ವಿಷಯದ ಮೇಲೆ ಬಯಲುಸೀಮೆ ಜಿಲ್ಲೆಗಳ ನೀರಾವರಿ ವಿಚಾರದಲ್ಲಿ ಈವರೆಗೆ ಆಗಿರುವ ಅನ್ಯಾಯವನ್ನು ಅಂಕಿಅಂಶಗಳು ದಾಖಲೆಗಳ ಸಮೇತ ಜನರ ಮುಂದಿಟ್ಟು ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ. ಹೋರಾಟಗಾರರ ಅಳಲು ಮತ್ತು ಅವರ ಬಳಿ ಇರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಸಹ ಸದ್ಯ ಹೋರಾಟಗಾರರಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಇದು ಹೋರಾಟಗಾರರಿಗೆ ಆನೆ ಬಲ ತಂದಿದೆ.

ಪಾಯಖಾನೆ ನೀರಲ್ಲಿ ಬರಮುಕ್ತ!

‘ನಮ್ಮ ನಾಯಕರು ಬೆಂಗಳೂರು ಪಾಯಖಾನೆ ನೀರಿನಲ್ಲಿ ಈ ಜಿಲ್ಲೆಗಳನ್ನು ಬರಮುಕ್ತ ಮಾಡಲು ಹೊರಟಿರುವುದು ನಾಚಿಕೆಗೇಡು. ತಮ್ಮ ಪ್ರತಿಷ್ಠೆಗಾಗಿ ನಮ್ಮ ಹೋರಾಟವನ್ನು ಒಡೆಯುವ, ದಿಕ್ಕು ತಪ್ಪಿಸುವ ಷಡ್ಯಂತ್ರ ನಡೆಯುತ್ತಿವೆ. ಆಳುವವರು ತಾತ್ಕಾಲಿಕ ಖುಷಿ ಪಡಿಸುವುದಕ್ಕಾಗಿ ಸಲ್ಲದ ಯೋಜನೆಗಳನ್ನು ಮುಂದಿಟ್ಟು ಅವುಗಳೇ ನೀರಾವರಿ ಯೋಜನೆಗಳೆಂದು ಬಿಂಬಿಸುವ ಕೆಲಸ ನಡೆದಿವೆ. ನಾವು ನೀರಾವರಿಗಾಗಿ ಸಾವಿರಾರು ಕೋಟಿ ಕೊಟ್ಟಿದ್ದೇವೆ ಎನ್ನುವವರು ಯಾರಪ್ಪ ದುಡ್ಡು ಕೊಟ್ಟರು? ತಮ್ಮ ಪಕ್ಷದ ಖಜಾನೆಯಿಂದ ಕೊಟ್ಟಿದ್ದಾರಾ’ ಎಂದು ಆರ್.ಆಂಜನೇಯರೆಡ್ಡಿ ಖಾರವಾಗಿ ಪ್ರಶ್ನಿಸುತ್ತಾರೆ.

ಬೇಡಿಕೆ ಈಡೇರುವವರೆಗೂ ಹೋರಾಟ

ರಾಜಕೀಯ ನಾಯಕರಿಗೆ ಶಾಶ್ವತ ನೀರಾವರಿ ಕಲ್ಪಿಸುವ ಇಚ್ಛಾಶಕ್ತಿ ಇಲ್ಲ. ಅವರಿಗೆ ಚುನಾವಣೆಯಲ್ಲಿ ಗೆಲ್ಲಬೇಕು. ರಾಜಕೀಯದಲ್ಲಿ ದುಡ್ಡು ಮಾಡಬೇಕು. ಬಹುತೇಕ ಜನಪ್ರತಿನಿಧಿಗಳು ಹಾಗೇ ಇದ್ದಾರೆ. ರೈತರ ಗೋಳು ಯಾರೂ ಕೇಳುತ್ತಿಲ್ಲ. ನಮ್ಮದು ಒಂದೇ ಬೇಡಿಕೆ. ಶಾಶ್ವತ ನೀರಾವರಿ ಬೇಡಿಕೆ ಈಡೇರಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ – ಸುಷ್ಮಾ ಶ್ರೀನಿವಾಸ್, ಹೋರಾಟಗಾರ್ತಿ.

**

ಐದು ವರ್ಷಗಳಲ್ಲಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ 43 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹುತೇಕರು ಬೋರ್‌ವೆಲ್ ಸಾಲದ ಶೂಲಕ್ಕೆ ಬಲಿಯಾದವರು – ಆರ್.ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ.

**

 

ಪ್ರತಿಕ್ರಿಯಿಸಿ (+)