ಸೋಮವಾರ, ಜೂಲೈ 13, 2020
22 °C
ನದಿ ಪಾತ್ರದಲ್ಲೇ ಅಕ್ರಮ ರಸ್ತೆ ನಿರ್ಮಾಣ; ಹಾಡಹಗಲೇ ಮರಳು ಲೂಟಿ

ನದಿ ಒಡಲು ಬಗೆಯುತ್ತಿರುವ ದಂಧೆಕೋರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನದಿ ಒಡಲು ಬಗೆಯುತ್ತಿರುವ ದಂಧೆಕೋರರು

ಹೂವಿನಹಡಗಲಿ: ತಾಲ್ಲೂಕಿನ ಹೊನ್ನಾಯಕನಹಳ್ಳಿ ಬಳಿ ತುಂಗಭದ್ರಾ ನದಿಯ ಒಡಲು ಬಗೆದು ಹಾಡಹಗಲೇ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ನದಿಯ ಎಡದಂಡೆ ಮುಂಡರಗಿ ತಾಲ್ಲೂಕಿನ ದಂಧೆಕೋರರು ಅಂತರ್ ಜಿಲ್ಲಾ ಗಡಿ ದಾಟಿ ಈ ಭಾಗದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ.

ಬಹುತೇಕ ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸಂದರ್ಭವನ್ನು ಬಳಸಿಕೊಂಡು ದಂಧೆಕೋರರು ನದಿ ಪಾತ್ರವನ್ನು ಜೆ.ಸಿ.ಬಿ. ಯಂತ್ರಗಳಿಂದ ಬಗೆಯಲು ಶುರುವಿಟ್ಟುಕೊಂಡಿದ್ದಾರೆ.

ಹೂವಿನಹಡಗಲಿ ತಾಲ್ಲೂಕು ಹೊನ್ನಾಯಕನಹಳ್ಳಿ ಬಳಿಯಿಂದ ತುಂಗಭದ್ರಾ ನದಿಯನ್ನು ಪ್ರವೇಶಿಸಿದರೆ ಅಕ್ರಮ ಮರಳು ಗಣಿಗಾರಿಕೆಯ ಕರಾಳ ದೃಶ್ಯಗಳು ಕಣ್ಣಿಗೆ ರಾಚುತ್ತವೆ.

ಮುಂಡರಗಿ ತಾಲ್ಲೂಕು ಶೀರನಹಳ್ಳಿ ದಡದಿಂದ ದಾಳಿ ಇಟ್ಟಿರುವ ದಂಧೆಕೋರರು ನದಿ ಪಾತ್ರದ ಮಧ್ಯ ಭಾಗದಲ್ಲಿ ಜೆ.ಸಿ.ಬಿ. ಯಂತ್ರಗಳಿಂದ ನದಿಯ ಒಡಲು ಬಗೆಯುತ್ತಿದ್ದಾರೆ. ಮರಳು ಸಾಗಾಟಕ್ಕೆ ಅನುಕೂಲ ಆಗುವಂತೆ ನದಿ ಪಾತ್ರದಲ್ಲೇ ಅಕ್ರಮವಾಗಿ ತಾತ್ಕಾಲಿಕ ರಸ್ತೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಮರಳು ಗಣಿಗಾರಿಕೆಯ ನಿಯಮಗಳನ್ನು ಗಾಳಿಗೆ ತೂರಿ ನದಿ ಪಾತ್ರದಲ್ಲಿ ಭಾರಿ ಕಂದಕಗಳನ್ನು ತೋಡಿ ನದಿಯ ಸ್ವರೂಪವನ್ನೇ ಬದಲಿಸಿದ್ದಾರೆ.

ತುಂಗಭದ್ರಾ ನದಿಯ ಬಲದಂಡೆಯಲ್ಲಿ ಬರುವ ಹೂವಿನಹಡಗಲಿ ಭಾಗದಲ್ಲಿ ಮರಳು ಅಕ್ರಮ ಸಂಪೂರ್ಣ ನಿಲ್ಲದಿದ್ದರೂ ಕಡಿವಾಣ ಬಿದ್ದಿದೆ. ಎಡದಂಡೆಯ ಮುಂಡರಗಿ ತಾಲ್ಲೂಕಿನಲ್ಲಿ ಸಾಗಾಟ ನಿರಾತಂಕವಾಗಿದೆ. ಎಡದಂಡೆಯ ದಂಧೆಕೋರರು ಅಂತರ್ ಜಿಲ್ಲಾ ಗಡಿ ದಾಟಿ ಜೆ.ಸಿ.ಬಿ. ಯಂತ್ರಗಳನ್ನು ಬಳಸಿ ಮರಳು ಸಾಗಿಸುತ್ತಿದ್ದಾರೆ.

ಹೊನ್ನಾಯಕನಹಳ್ಳಿ ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಹಡಗಲಿ ಠಾಣೆಯ ಪಿಎಸ್‌ಐ ಸಿದ್ದರಾಮೇಶ್ವರ ಸಿಬ್ಬಂದಿಯೊಂದಿಗೆ ತೆರಳಿ ದಾಳಿ ಮಾಡುತ್ತಿದ್ದಂತೆ ಜೆ.ಸಿ.ಬಿ. ಮತ್ತು ಟಿಪ್ಪರ್‌ ಸಮೇತ ದಂಧೆಕೋರರು ಪರಾರಿಯಾಗಿದ್ದಾರೆ.

‘ಇಲ್ಲಿ ಮರಳು ದಂಧೆಗಾಗಿ ಮುಂಭಾಗ, ಹಿಂಭಾಗ ನೋಂದಣಿ ಸಂಖ್ಯೆಯನ್ನು ಅಳಿಸಿರುವ ಟಿಪ್ಪರ್‌ ಹಾಗೂ ನೊೋಂದಣಿ ಸಂಖ್ಯೆಯೇ ಇಲ್ಲದ ಜೆ.ಸಿ.ಬಿ. ಯಂತ್ರಗಳನ್ನು ಬಳಸಿಕೊಂಡು ಮರಳು ಸಾಗಿಸಲಾಗುತ್ತಿದೆ. ಈ ಕುರಿತು ವಿಚಾರಿಸಿದರೆ ಇಲ್ಲಿನ ಮರಳು ಬ್ಲಾಕ್‌ಗಳು ಟೆಂಡರ್ ಆಗಿವೆ. ಸಿಂಗಟಾಲೂರು ಸ್ಟಾಕ್‌ ಯಾರ್ಡ್‌ಗೆ ಮರಳು ಸಾಗಿಸುವುದಾಗಿ ಸುಳ್ಳು ಹೇಳುತ್ತಾರೆ’ ಎಂದು ಹೊನ್ನಾಯಕನಹಳ್ಳಿ ಗ್ರಾಮಸ್ಥರು ತಿಳಿಸಿದರು.

‘ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆಗೆ ಯಂತ್ರ ಬಳಸುವುದನ್ನು ಸುಪ್ರೀಂಕೋರ್ಟ್‌ನ ಹಸಿರು ಪೀಠ ನಿಷೇಧಿಸಿದೆ. ಜಲಮೂಲಗಳನ್ನು ಕಲುಷಿತಗೊಳಿಸದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ನಿಯಮಾವಳಿ ರೂಪಿಸಿದೆ. ಆದರೆ, ಇಲ್ಲಿ ಮರಳು ಗಣಿಗಾರಿಕೆಯ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ನದಿಯ ಸ್ವರೂಪವನ್ನೇ ಬದಲಿಸಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದ್ದಾರೆ’ ಎಂದರು.

‘ಅಧಿಕಾರಿಗಳು ಇತ್ತ ಗಮನಹರಿಸಿ, ಗದಗ ಮತ್ತು ಬಳ್ಳಾರಿಯ ಅಂತರ್ ಜಿಲ್ಲಾ ಗಡಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳಬೇಕು. ಗಡಿ ಮೀರಿದ ಮರಳು ಅಕ್ರಮ ತಡೆಗಟ್ಟುವ ಜತೆಗೆ ಗ್ರಾಹಕರಿಗೆ ಸುಲಭವಾಗಿ ಮರಳು ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

**

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನವರು ಮರಳು ದೋಚುತ್ತಿರುವುದರಿಂದ ಅಲ್ಲಿನ ಪೊಲೀಸರ ನೆರವು ಪಡೆದು ಜಂಟಿ ಕಾರ್ಯಾಚರಣೆ ನಡೆಸುತ್ತೇವೆ –ಸಿದ್ದರಾಮೇಶ್ವರ, ಪಿಎಸ್‌ಐ, ಹೂವಿನಹಡಗಲಿ.

**

ಕೆ.ಸೋಮಶೇಖರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.