ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಅಧಿಕಾರಿಗಳ ತನಿಖೆ

ರಾಜೀವ್‌ ಅವಾಸ್‌ ಯೋಜನೆಯಲ್ಲಿ ಅಕ್ರಮದ ಆರೋಪ: ದೂರು ಸಲ್ಲಿಕೆ
Last Updated 13 ಏಪ್ರಿಲ್ 2018, 12:19 IST
ಅಕ್ಷರ ಗಾತ್ರ

ಕೋಲಾರ: ರಾಜೀವ್ ಅವಾಸ್ ಯೋಜನೆಯಡಿ ನಗರದ ಗಾಂಧಿನಗರ ನಿವಾಸಿಗಳಿಗೆ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬಡಾವಣೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಅನರ್ಹರಿಗೆ ಮನೆ ಹಂಚಿಕೆ ಮಾಡಲಾಗಿದೆ. ಮನೆಗಳ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ ಮತ್ತು ಗುತ್ತಿಗೆದಾರರು ನಿಯಮ ಉಲ್ಲಂಘಿಸಿ ಮನೆಗಳನ್ನು ನಿರ್ಮಿಸಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ನಾರಾಯಣಸ್ವಾಮಿ ಎಂಬುವರು ಲೋಕಾಯುಕ್ತಕ್ಕೆ ಇತ್ತೀಚೆಗೆ ದೂರು ಕೊಟ್ಟಿದ್ದರು.

ಈ ದೂರು ಆಧರಿಸಿ ಲೋಕಾಯುಕ್ತ ಎಸ್ಪಿ (ಪ್ರಭಾರ) ಕೃಷ್ಣಮೂರ್ತಿ, ಇನ್‌ಸ್ಪೆಕ್ಟರ್‌ ಪವನ್‌ಕುಮಾರ್ ಮತ್ತು ಸಿಬ್ಬಂದಿ ತಂಡವು ಬಡಾವಣೆಯಲ್ಲಿ ನಿರ್ಮಾಣವಾಗಿರುವ ಮನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ ಮನೆಗಳನ್ನು ವೀಕ್ಷಿಸಿತು.

ಯೋಜನೆ ಫಲಾನುಭವಿಗಳ ವೈಯಕ್ತಿಕ ವಿವರ, ಉದ್ಯೋಗ ಹಾಗೂ ಆದಾಯದ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದರು. ಅಲ್ಲದೇ, ಮನೆ ಮತ್ತು ನಿವೇಶನದ ದಾಖಲೆಪತ್ರಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಫಲಾನುಭವಿಗಳಿಗೆ ಸೂಚನೆ ನೀಡಿದರು.

ಒಂದೇ ನಿವೇಶನದಲ್ಲಿ ಎರಡು ಮನೆ ನಿರ್ಮಿಸಿರುವ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಮಹಿಳೆಯೊಬ್ಬರು, ‘ಎರಡೂ ಮನೆಗಳು ನಮ್ಮದೇ. ಮನೆ ನಿರ್ಮಾಣಕ್ಕೆ ತಲಾ ₹ 30 ಸಾವಿರ ಬಿಡುಗಡೆಯಾಗಿದೆ. ಪತಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ’ ಎಂಬ ವಿವರಿಸಿದರು.

ಶಿಸ್ತುಕ್ರಮಕ್ಕೆ ಶಿಫಾರಸು: ‘ರಾಜೀವ್ ಅವಾಸ್ ಯೋಜನೆಯಡಿ ಒಂದೇ ಕುಟುಂಬಕ್ಕೆ ಅಕ್ರಮವಾಗಿ ನಾಲ್ಕೈದು ಮನೆ ನೀಡಿರುವುದು ಮತ್ತು ಸರ್ಕಾರಿ ನೌಕರರಿಗೆ ಮನೆ ಮಂಜೂರು ಮಾಡಿರುವ ಸಂಗತಿ ಮೇಲ್ನೋಟಕ್ಕೆ ಗೊತ್ತಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡುತ್ತೇವೆ’ ಎಂದು ಕೃಷ್ಣಮೂರ್ತಿ ಸುದ್ದಿಗಾರರಿಗೆ
ತಿಳಿಸಿದರು.

‘ಕಚೇರಿಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ತನಿಖೆ ಮಾಡುತ್ತಿದ್ದೇವೆ. ಯೋಜನೆಗೆ ಸಂಬಂಧಪಟ್ಟ ಇಲಾಖೆಗಳಿಗೆ ನೋಟಿಸ್‌ ಜಾರಿ ಮಾಡಿ ದಾಖಲೆಪತ್ರಗಳನ್ನು ತರಿಸಿ ಪರಿಶೀಲನೆ ಮಾಡುತ್ತೇವೆ. ಕಂದಾಯ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಕೊಟ್ಟಿರುವುದರಿಂದ ಭಾರಿ ಅಕ್ರಮ ನಡೆದಿರುವುದಾಗಿ ತಿಳಿದುಬಂದಿದೆ. ಈ ಸಂಗತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ’ ಎಂದು ಹೇಳಿದರು.

ದೂರಿನಲ್ಲಿ ಏನಿದೆ?: ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ರಾಜೀವ್‌ಗಾಂಧಿ ಅವಾಸ್ ವಸತಿ ಯೋಜನೆಯಡಿ ನಗರದ ಎರಡು ಮತ್ತು ಮೂರನೇ ವಾರ್ಡ್‌ನಲ್ಲಿ ಸುಮಾರು 650 ಮನೆಗಳನ್ನು ನಿರ್ಮಿಸುತ್ತಿದೆ. ಪ್ರತಿ ಮನೆಗೆ ₹ 3.61 ಲಕ್ಷದಂತೆ ₹ 24 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 14 ಕೋಟಿ ವೆಚ್ಚವಾಗಿದೆ. ನೀರು ಸಂಪರ್ಕ, ರಸ್ತೆ ಸೌಲಭ್ಯ ಹಾಗೂ ವಿದ್ಯುತ್ ಸಂಪರ್ಕಕ್ಕೆ ₹ 40 ಲಕ್ಷ ಬಿಡುಗಡೆಯಾಗಿದೆ ಎಂದು ನಾರಾಯಣಸ್ವಾಮಿ ಅವರು ಲೋಕಾಯುಕ್ತಕ್ಕೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಂಡಳಿಯು ಆಯ್ಕೆ ಮಾಡಿರುವ ಫಲಾನುಭವಿಗಳಲ್ಲಿ ಸರ್ಕಾರಿ ನೌಕರರು, ನಿವೃತ್ತ ನೌಕರರು, ಅವರ ಕುಟುಂಬ ಸದಸ್ಯರು ಹಾಗೂ ಶ್ರೀಮಂತರಿದ್ದಾರೆ. ಬಡವರಿಗಾಗಿ ರೂಪಿಸಲಾದ ಈ ಯೋಜನೆ ಸೌಲಭ್ಯ ಉಳ್ಳವರ ಪಾಲಾಗಿದೆ. ಅನರ್ಹರಿಗೆ ಮನೆ ನಿರ್ಮಿಸಿಕೊಟ್ಟು ಬಾಡಿಗೆ ದಂಧೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ನೀರು ಸಂಪರ್ಕ, ಬೀದಿ ದೀಪ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದೆ. ಮೂಲ ನಕ್ಷೆ ವಿಸ್ತೀರ್ಣದಂತೆ ಮನೆ ನಿರ್ಮಿಸಿಲ್ಲ. ಖಾಲಿ ನಿವೇಶನಗಳಲ್ಲಿ ಪುಟ್ಟ ಮನೆ ನಿರ್ಮಾಣ ಮಾಡಲಾಗಿದೆ. ಆದರೆ, ಮೂಲ ನಕ್ಷೆಗೆ ತಕ್ಕಂತೆ ನಕಲಿ ದಾಖಲೆಪತ್ರ ಸೃಷ್ಟಿಸಲಾಗಿದೆ. ಯೋಜನೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆಯಾಗಿದೆ. ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ದೂರಿದ್ದಾರೆ.

**

ಮಂಡಳಿಯು ನಗರಸಭೆ ವ್ಯಾಪ್ತಿಯನ್ನು ಮೀರಿ ಕಂದಾಯ ಜಮೀನುಗಳಿಗೆ ಲಗ್ಗೆಯಿಟ್ಟಿದೆ. ಕಂದಾ ಯ ಜಮೀನುಗಳಲ್ಲಿನ ನಿವೇಶ ನಗಳಲ್ಲಿ ಮನೆ ನಿರ್ಮಿಸಿ ಅಕ್ರಮ ಎಸಗಲಾಗಿದೆ – ನಾರಾಯಣಸ್ವಾಮಿ, ದೂರುದಾರ.

**

ರಾಜಕೀಯ ದುರುದ್ದೇಶಕ್ಕೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಅನುದಾನ ಬಳಕೆಯಲ್ಲಿ ಅಕ್ರಮ ನಡೆದಿಲ್ಲ. ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದೆ –  ಗಾಂಧಿನಗರ ನಾರಾಯಣಸ್ವಾಮಿ, ನಗರಸಭೆ ಎರಡನೇ ವಾರ್ಡ್‌ ಸದಸ್ಯ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT