ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಮಯ ರಸ್ತೆಯಲ್ಲಿ ಸಾವಿನ ಹಾದಿಯ ಪಯಣ

ಜನರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದ ರಸ್ತೆಗಳು: ಕಣ್ಣಿದ್ದೂ ಕುರುಡಾದ ಜನಪ್ರತಿನಿಧಿಗಳು
Last Updated 13 ಏಪ್ರಿಲ್ 2018, 12:26 IST
ಅಕ್ಷರ ಗಾತ್ರ

ಕೋಲಾರ: ರಸ್ತೆಗಳಲ್ಲಿ ದೂಳಿನ ಮಜ್ಜನ... ಹೆಜ್ಜೆ ಇಟ್ಟಲೆಲ್ಲಾ ಗುಂಡಿಗಳು... ಕಣ್ಣು ಹಾಯಿಸಿದಲೆಲ್ಲಾ ಕಲ್ಲು ಮಣ್ಣಿನ ರಾಶಿ... ಗುಂಡಿಮಯ ರಸ್ತೆಗಳ ಮಧ್ಯೆ ತೆವಳುತ್ತಾ ಸಾಗುವ ವಾಹನಗಳು... ಇದು ಕ್ಷೇತ್ರದ ರಸ್ತೆಗಳ ದುಸ್ಥಿತಿ.

ಕ್ಷೇತ್ರದ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದ ಬಹುಪಾಲು ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಜನರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ. ಜಿಲ್ಲಾ ಕೇಂದ್ರದ ರಸ್ತೆಗಳೇ ಶೋಚನೀಯವಾಗಿದ್ದು, ಹಳ್ಳಿಗಾಡಿನ ರಸ್ತೆಗಳ ಸ್ಥಿತಿ ಹೇಳತೀರದು. ಗುಂಡಿಮಯ ರಸ್ತೆಗಳಲ್ಲಿನ ಪ್ರಯಾಣವು ಸಾವಿನ ಹಾದಿಯ ಪಯಣವಾಗಿದೆ.

ಕೃಷಿ ಹಾಗೂ ಹೈನುಗಾರಿಕೆ ಪ್ರಧಾನವಾದ ಕ್ಷೇತ್ರದಲ್ಲಿ ಕೃಷಿ ಉತ್ಪನ್ನ ಮತ್ತು ಹಾಲು ಸಾಗಣೆ ವಾಹನಗಳ ಓಡಾಟ ಹೆಚ್ಚಿದೆ. ಉತ್ತಮ ರಸ್ತೆಯು ಜನರ ಪ್ರಮುಖ ಬೇಡಿಕೆ. ಆದರೆ, ಈ ಬೇಡಿಕೆ ಈಡೇರಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಎಡವಿವೆ. ಆರೋಪ– ಪ್ರತ್ಯಾರೋಪದಲ್ಲೇ ಕಾಲ ದೂಡುವ ಜನಪ್ರತಿನಿಧಿಗಳು ರಸ್ತೆಗಳ ವಿಚಾರದಲ್ಲಿ ಕಣ್ಣಿದ್ದೂ ಕುರುಡಾಗಿದ್ದಾರೆ.

ಹೊಸ ರಸ್ತೆ ನಿರ್ಮಾಣ ಮತ್ತು ದುರಸ್ತಿಯ ಮಂತ್ರ ಪಠಿಸುತ್ತಲೇ ಐದು ವರ್ಷದ ಹಾದಿ ಸವೆಸಿರುವ ಜನಪ್ರತಿನಿಧಿಗಳು ನುಡಿದಂತೆ ನಡೆದದ್ದು ವಿರಳ. ಜನರ ಮೂಗಿಗೆ ಅಭಿವೃದ್ಧಿ ಎಂಬ ತುಪ್ಪ ಸವರಿ ರಾಜಕೀಯ ಬೇಳೆ ಬೇಯಿಸಿಕೊಂಡಿರುವ ರಾಜಕಾರಣಿಗಳಿಗೆ ಈಗ ಚುನಾವಣೆ ಹೊಸ್ತಿಲಲ್ಲಿ ರಸ್ತೆಗಳ ನೆನಪಾಗಿದೆ.

‘ಈಗಾಗಲೇ ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದು, ಜನಪ್ರತಿನಿಧಿಗಳು ರಾತ್ರೋರಾತ್ರಿ ಕದ್ದುಮುಚ್ಚಿ ರಸ್ತೆಗಳಿಗೆ ತೇಪೆ ಹಾಕಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆ ಮತದಾನವಾಗಿ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲಿ ರಸ್ತೆಗಳು ಮೊದಲಿನ ಸ್ಥಿತಿಗೆ ಬಂದು ತಲುಪಿರುತ್ತವೆ’ ಎಂದು ಜನ ಆಕ್ರೋಶಭರಿತವಾಗಿ ಹೇಳುತ್ತಾರೆ.

ರಸ್ತೆ ಎಷ್ಟಿದೆ?: ಕೋಲಾರ ಉಪ ವಿಭಾಗದಲ್ಲಿ ಮೂರು ರಾಜ್ಯ ಹೆದ್ದಾರಿಗಳು (ಎಸ್‌.ಎಚ್‌) ಹಾದು ಹೋಗಿವೆ. ಇವುಗಳ ಉದ್ದ 91.32 ಕಿ.ಮೀ ಇದೆ. ಅದೇ ರೀತಿ 26 ಜಿಲ್ಲಾ ಮುಖ್ಯ ರಸ್ತೆಗಳಿದ್ದು (ಎಂಡಿಆರ್), ಇವುಗಳ ಉದ್ದ 251.69 ಕಿ.ಮೀ ಇದೆ. ಲೋಕೋಪಯೋಗಿ ಇಲಾಖೆಯು (ಪಿಡಬ್ಲ್ಯೂಡಿ) ಈ ರಸ್ತೆಗಳನ್ನು ನಿರ್ವಹಣೆ
ಮಾಡುತ್ತಿದೆ.

ನಗರವು ಸುಮಾರು 26.56 ಚದರ ಕಿಲೋ ಮೀಟರ್‌ ವಿಸ್ತಾರವಾಗಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಜನಸಂಖ್ಯೆ ಬೆಳೆದಂತೆ ನಗರದ ವ್ಯಾಪ್ತಿಯೂ ದೊಡ್ಡದಾಗುತ್ತಿದೆ. ನಗರದಲ್ಲಿನ 159 ಕಿ.ಮೀ ರಸ್ತೆಯನ್ನು ನಗರಸಭೆ ಹಾಗೂ 10 ಕಿ.ಮೀ ರಸ್ತೆಯನ್ನು ಪಿಡಬ್ಲ್ಯೂಡಿ ನಿರ್ವಹಣೆ ಮಾಡುತ್ತಿದೆ.

ದೂಳಿನ ಅಭಿಷೇಕ: ತಾಲ್ಲೂಕಿನಲ್ಲಿ ಹಿಂದಿನ ವರ್ಷ ಧಾರಾಕಾರ ಮಳೆಯಾಗಿದ್ದರಿಂದ ರಸ್ತೆಗಳ ಚಿತ್ರಣವೇ ಬದಲಾಗಿದೆ. ಮಳೆಗೆ ರಸ್ತೆಗಳ ಡಾಂಬರು ಕಿತ್ತು ಹೋಗಿದ್ದು, ದೊಡ್ಡ ಗುಂಡಿಗಳಾಗಿವೆ. ಎಂ.ಬಿ.ರಸ್ತೆ, ಎಂ.ಜಿ.ರಸ್ತೆ, ಬಂಗಾರಪೇಟೆ ರಸ್ತೆ, ಅಮ್ಮವಾರಿಪೇಟೆ ರಸ್ತೆ, ಅಂತರಗಂಗೆ ಬೆಟ್ಟದ ರಸ್ತೆ, ಚಿಕ್ಕಬಳ್ಳಾಪುರ ರಸ್ತೆ, ಕಾರಂಜಿಕಟ್ಟೆ ಮುಖ್ಯರಸ್ತೆ ಗುಂಡಿಮಯವಾಗಿವೆ. ಈ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರು, ಜನಸಾಮಾನ್ಯರಿಗೆ ನಿತ್ಯವೂ ದೂಳಿನ ಅಭಿಷೇಕವಾಗುತ್ತಿದೆ.

ಮಣ್ಣಿನ ರಸ್ತೆಗಳು ಹಾಗೂ ಸಿಮೆಂಟ್‌ ರಸ್ತೆಗಳು ಮತ್ತಷ್ಟು ಹಾಳಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಗುಂಡಿಗಳ ನಡುವೆ ವಾಹನಗಳು ಆಮೆ ಗತಿಯಲ್ಲಿ ಸಾಗುವ ದೃಶ್ಯ ಕಂಡುಬರುತ್ತದೆ. ವಾಹನಗಳು ಸಂಚರಿಸಿದಾಗ ಏಳುವ ದೂಳಿನಿಂದ ಜನರ ಆರೋಗ್ಯ ಹಾಳಾಗುತ್ತಿದೆ.

ಶಾಪವಾದ ಕಾಮಗಾರಿ– ದೂಳಿನ ಆರ್ಭಟ: ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲ್ಯೂಎಸ್‌ಡಿಬಿ) ಅಟಲ್‌ ನಗರ ಪುನರುತ್ಥಾನ ಹಾಗೂ ನಗರ ಪರಿವರ್ತನಾ ಯೋಜನೆಯಡಿ (ಅಮೃತ್‌) ಜಿಲ್ಲಾ ಕೇಂದ್ರದಲ್ಲಿ ಆರಂಭಿಸಿರುವ ಒಳ ಚರಂಡಿ (ಯುಜಿಡಿ) ಕಾಮಗಾರಿಯು ನಗರವಾಸಿಗಳಿಗೆ ಶಾಪವಾಗಿದೆ.

ಕೆಯುಡಬ್ಲ್ಯೂಎಸ್‌ಡಿಬಿ ಯುಜಿಡಿ ಕಾಮಗಾರಿಗಾಗಿ ನಗರದೆಲ್ಲೆಡೆ ರಸ್ತೆಗಳನ್ನು ಮನಬಂದಂತೆ ಅಗೆದಿದ್ದು, ನಗರವಾಸಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಬವಣೆ ಪಡುವಂತಾಗಿದೆ. ಕಾಮಗಾರಿಯಿಂದ ನಗರ ಸೌಂದರ್ಯ ಹಾಳಾಗಿದ್ದು, ದೂಳಿನ ಆರ್ಭಟ ಜೋರಾಗಿದೆ.

ಕಾಮಧೇನು: ರಸ್ತೆಗಳ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಯು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪಾಲಿಗೆ ಕಾಮಧೇನು ಇದ್ದಂತೆ. ಜನಪ್ರತಿನಿಧಿಗಳ ಹಿಂಬಾಲಕರು ಹಾಗೂ ಬೆಂಬಲಿಗರು ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತಂದು ರಸ್ತೆಗಳ ಟೆಂಡರ್‌ ಪಡೆದು ಕಾಟಾಚಾರಕ್ಕೆ ಕಾಮಗಾರಿ ಮಾಡಿ ಮುಗಿಸಿದ್ದಾರೆ. ಇನ್ನು ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲಿಸದೆ ಕಚೇರಿಯಲ್ಲೇ ಕುಳಿತು ಗುತ್ತಿಗೆದಾರರಿಗೆ ಬಿಲ್‌ ಮಂಜೂರು ಮಾಡಿ ಕೈತೊಳೆದುಕೊಂಡಿದ್ದಾರೆ.

‘ಒಂದೇ ರಸ್ತೆ ಕಾಮಗಾರಿಗೆ ಮೂರ್ನಾಲ್ಕು ಬಾರಿ ಬಿಲ್‌ ಪಡೆದಿರುವ, ಕಾಮಗಾರಿ ಪೂರ್ಣಗೊಳಿಸದೆ ಬಿಲ್‌ ಮಂಜೂರಾಗಿರುವ, ರಸ್ತೆಗೆ ತೇಪೆ ಹಾಕಿ ಬಿಲ್‌ ಪಡೆದಿರುವ, ರಸ್ತೆಯನ್ನೇ ನಿರ್ಮಿಸದೆ ಬಿಲ್‌ ಮಂಜೂರು ಮಾಡಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಅಧಿಕಾರಿಗಳು ಲಂಚದಾಸೆಗೆ ಗುತ್ತಿಗೆದಾರರ ಜತೆ ಶಾಮೀಲಾಗಿ ಅಕ್ರಮ ಎಸಗಿದ್ದಾರೆ’ ಎಂದು ಜನ ಆರೋಪಿಸುತ್ತಾರೆ.

ಪ್ರಸ್ತಾವ ಸಲ್ಲಿಕೆ: ಪಿಡಬ್ಲ್ಯೂಡಿ ಅಂದಾಜಿನಂತೆ ಕೋಲಾರ ಉಪ ವಿಭಾಗದಲ್ಲಿ 8.20 ಕಿ.ಮೀ ರಾಜ್ಯ ಹೆದ್ದಾರಿ ಹಾಗೂ 16.23 ಜಿಲ್ಲಾ ಮುಖ್ಯ ರಸ್ತೆ ಹಾಳಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 46.03 ಕಿ.ಮೀ ರಾಜ್ಯ ಹೆದ್ದಾರಿ ಮತ್ತು 142.70 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ ಹಾಳಾಗಿದೆ. ಈ ರಸ್ತೆಗಳ ದುರಸ್ತಿಗೆ ಕ್ರಮವಾಗಿ ₹ 1.39 ಕೋಟಿ ಹಾಗೂ ₹ 3.20 ಕೋಟಿ ವೆಚ್ಚವಾಗಲಿದ್ದು, ಅನುದಾನ ಬಿಡುಗಡೆಗೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.

ರಸ್ತೆಗಳ ದುಸ್ಥಿತಿಯಿಂದ ಆಗಾಗ್ಗೆ ಅಪಘಾತ ಸಂಭವಿಸುತ್ತಿದ್ದು, ಸಾವು ನೋವು ಪ್ರಮಾಣ ಹೆಚ್ಚುತ್ತಿದೆ. ಗುಂಡಿಗಳಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ ವಾಹನ ಸವಾರರ ಲೆಕ್ಕವಿಲ್ಲ. ತುಂತುರು ಮಳೆ ಬಂದರೂ ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಗುಂಡಿಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸುತ್ತದೆ. ಗುಂಡಿ ಹಾಗೂ ರಸ್ತೆಗಳಿಗೆ ತಾತ್ಕಾಲಿಕವಾಗಿ ಮಣ್ಣು, ಜಲ್ಲಿ ಪುಡಿ ಸುರಿಸಿ, ಗುತ್ತಿಗೆದಾರರಿಗೆ ಬಿಲ್‌ ಮಾಡಿಕೊಟ್ಟಿದ್ದೆ ಜನಪ್ರತಿನಿಧಿಗಳ ಸಾಧನೆ.

ಜನ ಸೇವೆಯ ಇಚ್ಛಾಶಕ್ತಿಯಿಲ್ಲ

ರಾಜ್ಯದಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಪಕ್ಷವೇ ಆಡಳಿತದಲ್ಲಿದೆ. ಆದರೆ, ಸ್ಥಳೀಯ ಸಂಸ್ಥೆಗಳ ಆಡಳಿತ ಯಂತ್ರವು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಬೇರೆ ವಿಧಾನಸಭಾ ಕ್ಷೇತ್ರಗಳ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಕ್ಷೇತ್ರಗಳನ್ನು ಮಾದರಿ ಕ್ಷೇತ್ರಗಳಾಗಿ ಮಾಡಿದ್ದಾರೆ. ಆದರೆ, ಕೋಲಾರ ಕ್ಷೇತ್ರದ ಶಾಸಕರಿಗೆ ಜನಪರವಾಗಿ ಕೆಲಸ ಮಾಡುವ ಮನಸ್ಸಿಲ್ಲ. ಅಧಿಕಾರಕ್ಕಾಗಿ ಶಾಸಕರಾಗಿರುವ ಅವರಿಗೆ ಜನ ಸೇವೆ ಮಾಡುವ ಇಚ್ಛಾಶಕ್ತಿಯಿಲ್ಲ – ನಾರಾಯಣಸ್ವಾಮಿ, ಸಿಪಿಎಂ ಜಿಲ್ಲಾ ಘಟಕದ ಮಾಜಿ ಕಾರ್ಯದರ್ಶಿ.

ಅನುದಾನ ಸದ್ಬಳಕೆಯಲ್ಲಿ ವಿಫಲ

ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವರ್ತೂರು ಪ್ರಕಾಶ್‌ ಅವರಿಗೆ ಕ್ಷೇತ್ರದ ಹಿತಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯವಾಗಿದೆ. ಕೇಂದ್ರದ ಅನುದಾನವನ್ನು ಸದ್ಬಳಕೆ ಮಾಡುವಲ್ಲಿ ಅವರು ವಿಫಲರಾಗಿದ್ದಾರೆ. ಉತ್ತಮ ರಸ್ತೆಯು ಜನರ ಪ್ರಮುಖ ಬೇಡಿಕೆ. ಶಾಸಕರಿಗೆ ಆ ಬೇಡಿಕೆಯನ್ನೇ ಈಡೇರಿಸಲು ಸಾಧ್ಯವಾಗದಿರುವುದು ಜನರ ದೌರ್ಭಾಗ್ಯ. ಶಾಸಕರ ಅದಕ್ಷತೆಯಿಂದ ಕ್ಷೇತ್ರವು ಅಭಿವೃದ್ಧಿ ವಿಚಾರದಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ – ಓಂಶಕ್ತಿ ಚಲಪತಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ.

ಶಾಸಕರ ಸಾಧನೆ ಶೂನ್ಯ

ಸಿ.ಬೈರೇಗೌಡರು ಸಚಿವರಾಗಿದ್ದ ಸಂದರ್ಭದಲ್ಲಿ ಕ್ಷೇತ್ರದ ರಸ್ತೆಗಳಿಗೆ ಡಾಂಬರು ಹಾಕಲಾಗಿತ್ತು. ಆ ನಂತರ ರಸ್ತೆಗಳು ಡಾಂಬರು ಕಂಡಿಲ್ಲ. ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ತಂದಿರುವುದಾಗಿ ಶಾಸಕರು ಬೊಗಳೆ ಬಿಡುತ್ತಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ 10 ವರ್ಷದಲ್ಲಿ ವರ್ತೂರು ಪ್ರಕಾಶ್‌ರ ಸಾಧನೆ ಶೂನ್ಯ. ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಯಲ್ಲಿ ಶಾಸಕರ ಹಿಂಬಾಲಕರು ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ್ದಾರೆ. ರಸ್ತೆಗಳಿಗೆ ಬಿಡುಗಡೆಯಾದ ಅನುದಾನ ಏನಾಯಿತು ಎಂಬ ಬಗ್ಗೆ ಶಾಸಕರೇ ಉತ್ತರಿಸಬೇಕು – ಇ.ಗೋಪಾಲಪ್ಪ, ಜೆಡಿಎಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ.

ಆತ್ಮವಿಮರ್ಶೆ ಮಾಡಿಕೊಳ್ಳಲಿ

ವಿಪಕ್ಷಗಳು ರಾಜಕೀಯ ದುರುದ್ದೇಶಕ್ಕೆ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಿವೆ. ಈ ಹಿಂದೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನವರು ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು. ವರ್ತೂರು ಪ್ರಕಾಶ್‌ ಶಾಸಕರಾದ ಮೇಲೆ ಹೆಚ್ಚಿನ ಅಭಿವೃದ್ಧಿ ಕೆಲಸವಾಗಿದೆ. ರಾಜಕೀಯ ಲಾಭಕ್ಕೆ ಆರೋಪ ಮಾಡುವ ವಿಪಕ್ಷದವರು ಆತ್ಮವಿಮರ್ಶೆ ಮಾಡಿಕೊಳ್ಳಲಿ – ಕಾಶಿ ವಿಶ್ವನಾಥ್‌, ನಗರಸಭಾ ಸದಸ್ಯ ಹಾಗೂ ನಮ್ಮ ಕಾಂಗ್ರೆಸ್‌ ಮುಖಂಡ.

ಅನುದಾನ ವಾಪಸ್‌ ಹೋಯಿತು

ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. 2017ರ ಸೆಪ್ಟಂಬರ್‌ನಲ್ಲಿ ರಾಜ್ಯ ಸರ್ಕಾರ ಕ್ಷೇತ್ರಕ್ಕೆ ₹ 70 ಕೋಟಿ ಬಿಡುಗಡೆ ಮಾಡಿತ್ತು. ಈ ಪೈಕಿ ಶೇ 50ರಷ್ಟು ಅನುದಾನವನ್ನು ರಸ್ತೆ ಮತ್ತು ನೀರಿನ ಸೌಕರ್ಯಕ್ಕೆ ಮೀಸಲಿಡಲಾಗಿತ್ತು. ಆದರೆ, ರಾಜಕೀಯ ಕಾರಣಕ್ಕೆ ಅನುದಾನ ವಾಪಸ್‌ ಹೋಯಿತು. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ – ಕೆ.ವಿ.ಸುರೇಶ್‌ಕುಮಾರ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ಘಟಕದ ಅಧ್ಯಕ್ಷ.

**

 ದೂಳಿನ ಕಾರಣಕ್ಕೆ ಮನೆಯಿಂದ ಹೊರ ಹೋಗುವುದನ್ನೇ ಕಡಿಮೆ ಮಾಡಿದ್ದೇನೆ. ರಸ್ತೆಗಳಿಗೆ ಡಾಂಬರು ಹಾಕುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ – ಶ್ರೀನಿವಾಸ್‌, ಕೋಲಾರ ನಿವಾಸಿ.

**

ಯುಜಿಡಿ ಕಾಮಗಾರಿಯಿಂದ ನಗರದ ರಸ್ತೆಗಳೆಲ್ಲ ಹಾಳಾಗಿವೆ. ಕಾಮಗಾರಿ ಪೂರ್ಣಗೊಂಡ ನಂತರ ಅಧಿಕಾರಿಗಳು ದುರಸ್ತಿ ಮಾಡಿಲ್ಲ. ರಸ್ತೆಗಳ ದುಸ್ಥಿತಿ ಯಿಂದ ಅಪಘಾತ ಸಂಭವಿಸುತ್ತಿವೆ – ಸರ್ದಾರ್‌ ಖಾನ್‌,ಕೋಲಾರ ನಿವಾಸಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT