ಬುಧವಾರ, ಜುಲೈ 15, 2020
22 °C
ಸೌಲಭ್ಯಕ್ಕೆ ಹತ್ತಿರ, ಮತದಾನದಿಂದ ದೂರ

ಮತದಾರರ ಪಟ್ಟಿಯಿಂದ ದೂರವುಳಿದ ತೃತೀಯ ಲಿಂಗಿಗಳು

ಅನಿಲ್ ಸಾಗರ್ Updated:

ಅಕ್ಷರ ಗಾತ್ರ : | |

ಮತದಾರರ ಪಟ್ಟಿಯಿಂದ ದೂರವುಳಿದ ತೃತೀಯ ಲಿಂಗಿಗಳು

ಶಿವಮೊಗ್ಗ :  ತೃತೀಯ ಲಿಂಗಿಗಳಿಗೆ ಮತದಾನದ ಹಕ್ಕು ನೀಡಿ ಹಲವು ವರ್ಷಗಳು ಕಳೆದಿವೆ. ಆದರೆ, ಜಿಲ್ಲೆಯ ತೃತೀಯ ಲಿಂಗಿಗಳು ಮಾತ್ರ ಮತದಾರರ ಪಟ್ಟಿಯಿಂದ ದೂರವೇ ಉಳಿದಿದ್ದಾರೆ.

ಕುಟುಂಬ ಹಾಗೂ ಸಮಾಜದ ನಿರ್ಲಕ್ಷಕ್ಕೆ ಒಳಗಾಗಿರುವ ತಮ್ಮನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಮತದಾನದ ಹಕ್ಕನ್ನು ನೀಡದೇ ವಂಚಿಸುತ್ತಿವೆ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೇ ಸಮಾಜದಲ್ಲಿ ನೆಮ್ಮದಿಯಿಂದ ಬದುಕಲೂ ಆಗುತ್ತಿಲ್ಲ. ಹಾಗಾಗಿ ಸರ್ಕಾರಗಳು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಮತದಾನದ ಹಕ್ಕು ನೀಡಬೇಕು ಎಂದು ತೃತೀಯ ಲಿಂಗಿಗಳು ದಶಕಗಳಿಂದ ಹೋರಾಟ ನಡೆಸಿದ್ದರು.

ಹಲವು ವರ್ಷಗಳ ಹೋರಾಟದ ಬಳಿಕ ರಾಜ್ಯ ಚುನಾವಣಾ ಆಯೋಗ 2013ರಲ್ಲಿ ಮೊದಲ ಬಾರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು. ಈ ಬಗ್ಗೆ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ಪ್ರಕಟಿಸಿ ತೃತೀಯ ಲಿಂಗಿಗಳಿಗೂ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಿತು. ಇದಾಗಿ 5 ವರ್ಷಗಳು ಕಳೆದರೂ ಜಿಲ್ಲೆಯಲ್ಲಿ ಈವರೆಗೆ ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡವರು ಕೇವಲ 53 ಮಂದಿ ಮಾತ್ರ.

ಸಾವಿರಕ್ಕೂ ಹೆಚ್ಚು ಮಂದಿ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದರಲ್ಲೇ 485 ಜನ ತೃತೀಯ ಲಿಂಗಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ಇಲಾಖೆಯ ಸೌಲಭ್ಯ ಪಡೆದುಕೊಂಡಿದ್ದಾರೆ. ಅಲ್ಲದೇ ಮೈತ್ರಿ ಯೋಜನೆಯಡಿ 519 ತೃತೀಯ ಲಿಂಗಿಗಳು ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಜಿಲ್ಲೆಯಲ್ಲಿ  ಒಂದು ಸಾವಿರದಷ್ಟು ತೃತೀಯ ಲಿಂಗಿಗಳಿದ್ದಾರೆ. ಆದರೆ 53 ಜನ ಹೊರತು ಪಡಿಸಿ ಉಳಿದವರು ಯಾರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಲ್ಲ.

ಜಿಲ್ಲಾಡಳಿತವೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಯಾವುದೇ ಕಾರಣಕ್ಕೂ ಮತದಾನದ ಅವಕಾಶದಿಂದ ವಂಚಿತರಾಗಬಾರದು. ಇಂತಹವರನ್ನು ಗುರುತಿಸಿ ಮತದಾನದ ಹಕ್ಕು ನೀಡಬೇಕು ಎಂದು ಸಾಕಷ್ಟು ಪ್ರಯತ್ನ ನಡೆಸಿದೆ. ಇದಕ್ಕಾಗಿ ಸ್ವೀಪ್‌ ಯೋಜನೆಯಡಿ ಹಲವು ಕಾರ್ಯಕ್ರಮಗಳು ರೂಪಿಸಿದೆ. ಇಷ್ಟಾದರೂ ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ತೃತೀಯ ಲಿಂಗಿಗಳು ಮನಸ್ಸು ಮಾಡಿಲ್ಲ.

ಏನು ಕಾರಣ : ಮತದಾನ ಕೇಂದ್ರದ ಬಳಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ತೃತೀಯ ಲಿಂಗಿಗಳು ಹಿಂಜರಿಯುವುದೇ ಇದಕ್ಕೆ ಕಾರಣವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಕೆಲವು ತೃತೀಯ ಲಿಂಗಿಗಳಿಗೆ ವಾಸಸ್ಥಳ, ಆಧಾರ್ ಕಾರ್ಡ್, ಪಡಿತರ ಚೀಟಿಯಂತಹ ಸೌಲಭ್ಯಗಳು ಇರುವುದಿಲ್ಲ. ಅಲ್ಲದೇ ಕೆಲವರು ಸಾಮಾಜಿಕ ಹಾಗೂ ಕೌಟುಂಬಿಕ ಕಾರಣದಿಂದ ಲಿಂಗ ಪರಿವರ್ತನೆಯಾದ ನಂತರವೂ ದಾಖಲೆಗಳಲ್ಲಿ ತೃತೀಯ ಲಿಂಗಿಗಳು ಎಂದು ಬದಲಾಯಿಸಲು ಇಚ್ಛಿಸುತ್ತಿಲ್ಲ. ಇದೇ ಕಾರಣದಿಂದ ಮತದಾರರ ಪಟ್ಟಿಯಲ್ಲಿ ತೃತೀಯ ಲಿಂಗಗಳ ಕಾಲಂನಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

**

ಅನೇಕರು ಲಿಂಗ ಪರಿವರ್ತನೆಯಾಗುವ ಮೊದಲು ತಮ್ಮ ಶಾಲೆ ದಾಖಲಾತಿಗಳಲ್ಲಿ ಹೆಣ್ಣು ಅಥವಾ ಗಂಡು ಎಂದು ದಾಖಲಿಸಿರುತ್ತಾರೆ. ಅನಂತರದಲ್ಲಿ ಅವರು ತೃತೀಯ ಲಿಂಗಿಗಳು ಎಂದು ಬದಲಾಯಿಸಿಕೊಳ್ಳಲು ಇಷ್ಟಪಡುತ್ತಿಲ್ಲ – ಡಾ.ಎಂ.ಲೋಕೇಶ್‌, ಜಿಲ್ಲಾಧಿಕಾರಿ.

**

ತೃತೀಯ ಲಿಂಗಿಗಳೆಂದರೇ ಸಮಾಜದಲ್ಲಿ ಅಸಡ್ಡೆಯ ಭಾವನೆಯಿದೆ. ಎಲ್ಲರಂತೆ ಮುಕ್ತವಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ನೋವು ತಮಗಿದೆ. ಈ ಕಾರಣದಿಂದಾಗಿಯೇ ಬಹುತೇಕರು ಮತದಾರರ ಪಟ್ಟಿಯಲ್ಲಿ ಹೆಸರು ಬರೆಸಲು ಹಾಗೂ ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಿಲ್ಲ – ಸರೋಜಾ, ತೃತೀಯ ಲಿಂಗಿ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.