ಶುಕ್ರವಾರ, ಡಿಸೆಂಬರ್ 13, 2019
19 °C

ಪ್ರಜೆಗಳೆಂದರೆ ಅವರೇ! ರಾಜನೆಂದರೆ ಅವನೇ!!

ಎಸ್‌. ಸೂರ್ಯಪ್ರಕಾಶ ಪಂಡಿತ್ Updated:

ಅಕ್ಷರ ಗಾತ್ರ : | |

ಪ್ರಜೆಗಳೆಂದರೆ ಅವರೇ! ರಾಜನೆಂದರೆ ಅವನೇ!!

ದಶರಥನನ್ನು ಗ್ರಾಮವಾಸಿಗಳೂ ನಗರವಾಸಿಗಳೂ ಸಮಾನವಾಗಿ ಪ್ರೀತಿಸುತ್ತಿದ್ದರು ಎನ್ನುತ್ತದೆ, ರಾಮಾಯಣ. ಇಡಿಯ ಇಕ್ಷ್ವಾಕುವಂಶದ ರಾಜರೆಲ್ಲರೂ ಪ್ರಜೆಗಳ ಆದರಾಭಿಮಾನಗಳಿಗೆ ಪಾತ್ರರಾಗಿದ್ದವರೇ. ಇಂಥ ಜನಪ್ರೀತಿ ಅವರಿಗೆ ದಕ್ಕಿದ್ದಕ್ಕೆ ಕಾರಣ ಅವರ ತಪಸ್ಸು. ಎಲ್ಲೋ ದೂರದ ಕಾಡಿನಲ್ಲಿದ್ದುಕೊಂಡು ಮಾಡಿದ ತಪಸ್ಸು ಅದಲ್ಲ; ಜನರ ನಡುವೆ ರಾಜನಾಗಿದ್ದುಕೊಂಡು, ಅರಮನೆಯ ಅಂತಃಪುರದಲ್ಲಿಯೇ ಇದ್ದುಕೊಂಡು ಮಾಡಿದ ತಪಸ್ಸು. ಅದರ ವಿವರಗಳನ್ನು ಕಾಳಿದಾಸ ‘ರಘುವಂಶ’ದಲ್ಲಿ ಮನಮುಟ್ಟುವಂತೆ ವರ್ಣಿಸಿದ್ದಾನೆ:

‘ರಘುವಂಶದ ರಾಜರು ಹುಟ್ಟಿನಿಂದಲೇ ಪರಿಶುದ್ಧರು; ಹಿಡಿದ ಕೆಲಸವನ್ನು ಅದು ಫಲ ಕೊಡುವವರೆಗೂ ಬಿಡದೆ ಮಾಡುವವರು; ಇಡಿಯ ಭೂಮಂಡಲವನ್ನೇ ಆಳಿದವರು; ತಮ್ಮ ಶೌರ್ಯದ ದೆಸೆಯಿಂದ ಸ್ವರ್ಗಕ್ಕೂ ನೆರವಾಗುವವರು; ಶಾಸ್ತ್ರಾನುಸಾರವಾಗಿ ಯಜ್ಞವಿಧಿಗಳಲ್ಲಿ ನಿರತರಾದವರು; ತಮ್ಮಲ್ಲಿ ಬಯಸಿಬಂದವರು ತೃಪ್ತರಾಗುವವರೆಗೂ ಅವರನ್ನು ಸತ್ಕರಿಸುವಂಥವರು; ತಪ್ಪುಗಳಿಗೆ ಸರಿಯಾದ ಶಿಕ್ಷೆಯನ್ನು ನೀಡಿ ಅಪರಾಧಗಳನ್ನು ನಿಯಂತ್ರಿಸುತ್ತಿದ್ದವರು; ಸರಿಯಾದ ಸಮಯಕ್ಕೆ ನಿದ್ರೆಯಿಂದ ಎದ್ದು, ಪ್ರಜಾಕಾರ್ಯಗಳಲ್ಲಿ ತೊಡಗುತ್ತಿದ್ದವರು; ಅವರು ಸಂಪತ್ತನ್ನು ಸಂಪಾದಿಸಿ ಕೂಡಿಡುತ್ತಿದ್ದುದು ಅದನ್ನು ತ್ಯಾಗದಿಂದ ದಾನಮಾಡುವುದಕ್ಕಾಗಿ; ಸತ್ಯವನ್ನು ಹೇಳಬೇಕೆಂಬ ಸಂಕಲ್ಪವನ್ನು ತೊಟ್ಟವರಾದ ಕಾರಣ ಹೆಚ್ಚು ಮಾತನಾಡದೆ ಮಿತಭಾಷಿಗಳಾಗಿದ್ದರು; ಕೀರ್ತಿಗಾಗಿ ಮಾತ್ರವೇ ಶೌರ್ಯವನ್ನು ಪ್ರದರ್ಶಿಸುತ್ತಿದ್ದರು; ಸಂತಾನಕ್ಕಾಗಿ ಮಾತ್ರವೇ ಗೃಹಸ್ಥರಾಗುತ್ತಿದ್ದರು; ಬಾಲ್ಯದಲ್ಲಿ ಚೆನ್ನಾಗಿ ವಿದ್ಯೆಯನ್ನು ಸಂಪಾದಿಸುತ್ತಿದ್ದರು; ಯೌವನದಲ್ಲಿ ಭೋಗವನ್ನು ಅನುಭವಿಸುತ್ತಿದ್ದರು; ಮುಪ್ಪಿನಲ್ಲಿ ಮುನಿಗಳಂತೆ ಜೀವನವನ್ನು ನಡೆಸುತ್ತಿದ್ದರು; ಕೊನೆಗೆ ಯೋಗದ ಮೂಲಕ ಶರೀರವನ್ನು ತ್ಯಜಿಸುತ್ತಿದ್ದರು’.

ಇಲ್ಲಿ ಗಮನಿಸಬೇಕಾದುದು, ಇಕ್ಷ್ವಾಕುವಂಶದ ರಾಜರು ಅಧಿಕಾರವನ್ನು ಸ್ವಾರ್ಥಕ್ಕಾಗಿಯೋ ಭೋಗಕ್ಕಾಗಿಯೋ ಒದಗಿದ ಹಕ್ಕು ಎಂದು ಭಾವಿಸದೆ, ಅದು ಪ್ರಜೆಗಳಿಗೆ ಒಳಿತನ್ನು ಮಾಡಲು ವಿಧಿಯಿಂದ ಪ್ರಾಪ್ತವಾದ ಕರ್ತವ್ಯ ಎಂದು ಸ್ವೀಕರಿಸಿದ್ದವರು. ಪ್ರಾಚೀನ ಭಾರತದಲ್ಲಿ ರಾಜತ್ವವನ್ನು ಹೇಗೆ ಕಂಡಿದ್ದಾರೆ – ಎನ್ನುವುದು ಇಲ್ಲಿ ವಿಚಾರಾರ್ಹವಾದುದು. ಡಿವಿಜಿಯವರ ಮಾತುಗಳನ್ನೇ ಇಲ್ಲಿ ಉಲ್ಲೇಖಿಸಬಹುದು:

‘... ರಾಜಪದವಿಗೆ ತಳಹದಿ ಇರುವುದೆಲ್ಲಿ? ಎಂಬ ವಿಷಯವು ವಿಚಾರಾರ್ಹವಾಗಿದೆ:

‘ನಾsವಿಷ್ಣುಃ ಪೃಥಿವೀಪತಿಃ’ (ವಿಷ್ಣುವಿನ ಅಂಶವಿಲ್ಲದವನು ರಾಜನಾಗಲಾರನು), ‘ರಾಜಾ ಪ್ರತ್ಯಕ್ಷದೇವತಾ’ (ರಾಜನೇ ಪ್ರತ್ಯಕ್ಷದೈವ) ಎಂಬ ಪುರಾಣವಾಕ್ಯಗಳು ನಮ್ಮಲ್ಲಿ ಎಲ್ಲರಿಗೂ ತಿಳಿದವುಗಳಾಗಿವೆ... ರಾಜನಿಗೆ ದೇವತಾತ್ವವು ಉಂಟಾಗುವುದು ಯಾವ ಕಾರಣದಿಂದ? ಆತನು ಕೈಕೊಳ್ಳುವ ಧರ್ಮದೀಕ್ಷೆಯಿಂದಲೇ ಅಲ್ಲವೆ? ರಾಜಕುಮಾರನು ಸಿಂಹಾಸನದ ಮೇಲೆ ಕುಳಿತು, ದಂಡವನ್ನು ಕೈಯಲ್ಲಿ ಧರಿಸಿದ ಬಳಿಕ ಆತನಿಗೆ ರಾಜತ್ವವೂ, ಆ ಮೂಲಕ ದೇವತಾತ್ವವೂ ಸಂಭವಿಸುವುದೇ ಹೊರತು, ಜನನಕಾಲದಲ್ಲಿಯೇ ಇವು ಅವನಿಗೆ ಸಿದ್ಧವಾಗಿರುವುದಿಲ್ಲ.

‘ಜನ್ಮದಲ್ಲಿ ಇತರ ಎಲ್ಲ ಸಾಮಾನ್ಯಜನದಂತೆ ಇದ್ದೊಬ್ಬ ವ್ಯಕ್ತಿಯು ಕಿರೀಟವೆಂಬೊಂದು ಆಭರಣವನ್ನು ಧರಿಸಿ ಸಿಂಹಾಸನವೆಂಬೊಂದು ಪೀಠದ ಮೇಲೆ ಕೂತಮಾತ್ರಕ್ಕೇ ಇತರರಿಗಾರಿಗೂ ಇಲ್ಲದಂಥ ದೇವಸದೃಶವಾದ ಅಧಿಕಾರವು ಆತನಿಗುಂಟಾಗುವುದು ಹೇಗೆ? ಆ ಆಭರಣವಿಶೇಷಕ್ಕೂ ಆ ಪೀಠವಿಶೇಷಕ್ಕೂ ಇತರರು, – ಎಂದರೆ ಸಮಾಜವು, – ಕೊಟ್ಟಿರುವ ಗೌರವದಿಂದ. ಆ ಆಭರಣವೂ ಆ ಪೀಠವೂ ಇತರ ಆಭರಣಪೀಠಗಳಂತಲ್ಲವೆಂದೂ, ಯಾವ ಧರ್ಮದಿಂದ ತಾನು ಬದುಕಬೇಕಾಗಿರುವುದೋ ಆ ಧರ್ಮವನ್ನು ಕಾಪಾಡುವುದಕ್ಕೆ ಆವಶ್ಯಕವಾದ ಸ್ವಶಕ್ತಿಯನ್ನು ಆ ಕಿರೀಟಸಿಂಹಾಸನಗಳು ಸೂಚಿಸುವುದೆಂದೂ ಸಮಾಜವು ಅನಾದಿಕಾಲದಿಂದ ಸಂಕೇತಮಾಡಿಕೊಂಡು ಬಂದಿವೆ. ಧರ್ಮಸಂರಕ್ಷಣಶಕ್ತಿಗೆ ಗುರುತುಗಳಾದ ಕಿರೀಟ ಸಿಂಹಾಸನ ರಾಜದಂಡಗಳನ್ನು ಎಂಥವನು ಎಂಥ ಸಂಸ್ಕಾರಗಳನ್ನು ಪಡೆದು ಧಾರಣೆ ಮಾಡಬೇಕೆಂಬ ವಿಷಯದಲ್ಲಿಯೂ ಸಮಾಜವು ಅಂಗೀಕರಿಸಿರುವ ಧರ್ಮಶಾಸ್ತ್ರದ ವಿಧಿಯೇ ಇದೆ. ರಾಜ್ಯಪಟ್ಟಾಭಿಷೇಕವು ಹೇಗೆಂದರೆ ಹಾಗೆ ನಡೆಯುವ ಕ್ರಿಯೆಯಲ್ಲ; ಅದು ಧರ್ಮಶಾಸ್ತ್ರವಿಹಿತವಾದ ಕರ್ಮ. ಹೀಗಿರುವುದರಿಂದ ಧರ್ಮವೇ ರಾಜಶಕ್ತಿಗೆ ಮೂಲವೆಂದು ಹೇಳಬೇಕಾಗುತ್ತದೆ. ಯಾವ ಧರ್ಮವನ್ನು ಸಮಾಜವೆಲ್ಲವೂ ಅಂಗೀಕರಿಸಿರುವುದೋ ಆ ಧರ್ಮವನ್ನು ಪರಿಪಾಲಿಸುವುದಕ್ಕೇ ಅಲ್ಲವೆ ರಾಜನು ನಿಯಮಿತನಾಗಿರುವುದು? ರಾಜದಂಡವು ‘ಧರ್ಮ’ಸ್ವರೂಪವಾದುದು...’

ಇಲ್ಲಿ ಧರ್ಮ ಎಂದರೆ ‘ರಿಲಿಜನ್‌’ (Religion) ಅಲ್ಲ ಎಂದು ಮತ್ತೆ ಮತ್ತೆ ಹೇಳಬೇಕಿಲ್ಲವಷ್ಟೆ!

ರಾಜನಿಗೆ ‘ರಾಜತನ’ವನ್ನು ನೀಡುತ್ತಿದ್ದವರು ಪ್ರಜೆಗಳು; ರಾಜನನ್ನೂ ಪ್ರಜೆಗಳನ್ನೂ ಕಾಯುತ್ತಿದ್ದುದು ಧರ್ಮ. ಇದು ಅಂದಿನ ಪ್ರಭುತ್ವದ ಕಲ್ಪನೆ. ಧರ್ಮ ಎಲ್ಲಕ್ಕಿಂತಲೂ ದೊಡ್ಡದು. ಏಕೆಂದರೆ ಎಲ್ಲರ ಹಿತವನ್ನೂ ಕಾಪಾಡಬಲ್ಲ ‘ಸಂವಿಧಾನ’ವೇ ಈ ಧರ್ಮ. ಇದು ಆ ಕಾಲದ ಸಮಾಜ ಒಪ್ಪಿಕೊಂಡಿದ್ದ ರಾಜನೀತಿ. ಇದರ ಅರ್ಥ ಎಲ್ಲ ಕಾಲದಲ್ಲೂ ಆದರ್ಶರಾಜರೇ ಇದ್ದರು, ಸಮೃದ್ಧ ರಾಜ್ಯಗಳೇ ಇದ್ದವು ಎಂಬ ಸರಳ ಸತ್ಯವನ್ನು ಈ ಮಾತುಗಳು ಹೇಳಲುಹೊರಟಿಲ್ಲ. ರಾಜನಿಗೂ ಸಮಾಜಕ್ಕೂ ಪ್ರಜೆಗಳಿಗೂ ಒದಗುವ ಧರ್ಮಸಂಕಟವನ್ನು ಕುರಿತೇ ರಾಮಾಯಣ–ಮಹಾಭಾರತಗಳು ಮಾತನಾಡಿರುವುದು. ಪ್ರಜೆಗಳು ‘ಸಿಂಹಾಸನ’ಕ್ಕೆ ಕೊಟ್ಟ ಗೌರವವನ್ನು ಯಾವ ರಾಜರು ಉಳಿಸಿದರು, ಯಾವ ರಾಜರು ಅದನ್ನು ಉರುಳಿಸಿದರು ಎಂದು ಧ್ವನಿಪೂರ್ಣವಾಗಿ ನಿರೂಪಿಸುವುದೇ ಈ ಅಭಿಜಾತ ಮಹಾಕೃತಿಗಳ ಉದ್ದೇಶ.

ಈ ಹಿನ್ನೆಲೆಯಲ್ಲಿ ರಾಮಾಯಣದ ಅಯೋಧ್ಯೆಯ ವರ್ಣನೆಯನ್ನೂ ದಶರಥನ ವಿವರಗಳನ್ನೂ ನೋಡುವುದರಿಂದ ನಮಗೆ ಹೆಚ್ಚು ಪ್ರಯೋಜನವುಂಟು. ನಾಗರಿಕತೆಯ ವಿವರಗಳೂ ಸಂಸ್ಕೃತಿಯ ಲಕ್ಷಣಗಳನ್ನೂ ಬಳಸಿಕೊಂಡು ಆದರ್ಶರಾಜ್ಯದ ಕಲ್ಪನೆಯನ್ನು ಅದು ಕಂಡರಿಸಿದೆ. ಕೆಲವೊಂದು ವಿವರಗಳನ್ನಷ್ಟೆ ಇಲ್ಲಿ ಮೆಲುಕು ಹಾಕೋಣ.

‘ಅಯೋಧ್ಯೆಯ ರಸ್ತೆಗಳು ಅಗಲವಾಗಿದ್ದವು; ಆ ರಸ್ತೆಗಳನ್ನು ನಿತ್ಯವೂ ಸ್ವಚ್ಛಗೊಳಿಸಿ ನೀರನ್ನು ಚಿಮುಕಿಸಿ ಹೂಗಳನ್ನು ಹರಡುತ್ತಿದ್ದರು’. ನಮ್ಮ ಕಾಲದಲ್ಲಿ ರಸ್ತೆಗಳ ಸ್ಥಿತಿಗತಿಗಳನ್ನೂ ಅವುಗಳ ಪರಿಣಾಮವನ್ನೂ ನೆನೆದು ರಾಮಾಯಣದ ಈ ಮಾತನ್ನು ಮನನ ಮಾಡಿದರೆ ನಾಗರಿಕತೆಯ ಮೂಲಭೂತತತ್ತ್ವಗಳಿಗೆ ಅದು ಎಷ್ಟು ಮಹತ್ವವನ್ನು ಕೊಟ್ಟಿದೆ ಎನ್ನುವುದು ತಿಳಿಯುತ್ತದೆ. ‘ಕಬ್ಬಿನ ಹಾಲಿನಂಥ ಸಿಹಿಯಾದ ನೀರು ಯಥೇಚ್ಛವಾಗಿ ದೊರೆಯುತ್ತಿತ್ತು.’ ಪ್ರಜೆಗಳಿಗೆ ಪ್ರಭುತ್ವ ಕಲ್ಪಿಸಬೇಕಾದ ಮೂಲಭೂತ ಸೌಕರ್ಯಗಳನ್ನು ಮಹಾಕಾವ್ಯ ನಿರೂಪಿಸಿರುವ ಕ್ರಮ ಮನೋಜ್ಞವಾಗಿದೆ.

‘ಪ್ರಜೆಗಳು ತಮ್ಮ ತಮ್ಮ ಸಂಪಾದನೆಯಿಂದ ತೃಪ್ತರಾಗಿದ್ದರು; ಅವರು ಯಾರೂ ಬೇರೊಬ್ಬರ ಹಣಕ್ಕಾಗಿ ಹಂಬಲಿಸುತ್ತಿರಲಿಲ್ಲ. ಆ ಪಟ್ಟಣದಲ್ಲಿ ಕಾಮುಕರಾಗಲೀ ಕ್ರೂರಿಗಳಾಗಲೀ ಇರಲಿಲ್ಲ’ – ಈ ಮಾತನ್ನು ‘ನಾಗರಿಕತೆ’ಯಿಂದ ಎದುರಾಗಬಹುದಾದ ಅಧಃಪತನದ ಬಗ್ಗೆ ನಮ್ಮನ್ನು ಎಚ್ಚರಿಸುತ್ತಿದೆ. ಇಂದಿಗೂ ಭ್ರಷ್ಟಾಚಾರ, ಅತ್ಯಾಚಾರ, ಹಿಂಸಾಚಾರಗಳು ನಾಗರಿಕ ಸಮಾಜವನ್ನು ಅನಾಗರಿಕತೆಗೆ ತಳ್ಳುತ್ತಿರುವ ವಿವರಗಳೇ ಹೌದಷ್ಟೆ. 

‘ಮಂತ್ರಿಗಳು ತಮ್ಮ ಮಕ್ಕಳನ್ನೂ ಕೂಡ ಅಪರಾಧಿಗಳಾಗಿದ್ದರೆ ಶಿಕ್ಷಿಸದೆ ಬಿಡುತ್ತಿರಲಿಲ್ಲ’. ಅಧಿಕಾರ ಏನೆಲ್ಲ ಅನಾಚಾರಗಳನ್ನು ಮಾಡಿಸಬಲ್ಲದು ಎಂಬ ಅರಿವು ರಾಮಾಯಣಕ್ಕೆ ಇದೆ; ಹೀಗಾಗಿಯೇ ಅಧಿಕಾರಕ್ಕೆ ಇರಬೇಕಾದ ಅತ್ಯಂತ ದೊಡ್ಡ ಆದರ್ಶವನ್ನು ಅದು ಈ ಮಾತಿನ ಮೂಲಕ ಎತ್ತಿಹೇಳುತ್ತಿದೆ.

‘ಅಯೋಧ್ಯೆಯಲ್ಲಿ ಯಾವಾಗಲೂ ದುಂದುಭಿ, ಮೃದಂಗ, ವೀಣೆ, ಮದ್ದಲೆ – ಮುಂತಾದ ವಾದ್ಯಗಳ ಮಧುರವಾದ ಧ್ವನಿ ಕೇಳುತ್ತಿದ್ದವು; ಸುಳ್ಳು ಹೇಳತಕ್ಕವನು ಒಬ್ಬನೂ ರಾಜ್ಯದಲ್ಲಿ ಇರಲಿಲ್ಲ; ಎಲ್ಲರೂ ಒಳ್ಳೆಯ ಬಟ್ಟೆಗಳನ್ನು ಧರಿಸಿ ಶ್ರೀಗಂಧವನ್ನು ಲೇಪಿಸಿಕೊಳ್ಳುತ್ತಿದ್ದರು’ – ಇಂಥ ಮಾತುಗಳು ಸಂಸ್ಕೃತಿಯ ಸೂಕ್ಷ್ಮಗಳನ್ನು ಒಕ್ಕಣಿಸುವಂಥವು. ‘ಕೋಸಲೆಯಲ್ಲಿ ಶುಭ್ರವಾದ ಬಿಳಿಯ ಅಕ್ಕಿ (ಶಾಲಿತಂಡುಲ) ಸಮೃದ್ಧವಾಗಿ ದೊರೆಯುತ್ತಿತ್ತು’ – ಈ ಮಾತು ಗಮನಾರ್ಹವಾದುದು. ಅಕ್ಕಿ ಆ ಕಾಲದ ಪ್ರಧಾನ ಆಹಾರದ ಪದಾರ್ಥವಾಗಿತ್ತು ಎಂಬ ಸಮಾಜಶಾಸ್ತ್ರೀಯ ವಿಶ್ಲೇಷಣೆ ಸರಿ; ಅಷ್ಟೆ ಅಲ್ಲದೇ, ಆ ಕಾಲದ ಅಭಿರುಚಿಯನ್ನೂ ಈ ಮಾತು ಧ್ವನಿಸುತ್ತದೆಯಲ್ಲವೆ? ಮಹಾಕಾವ್ಯವೊಂದು ಅಕ್ಕಿಯ ತಳಿಯನ್ನೂ ಆನೆಯ ಪ್ರಭೇದಗಳನ್ನೂ ಕೂಡ ಆವಶ್ಯಕ ವಿವರಗಳಂತೆ ವರ್ಣಿಸಿರುವುದು ವಿಶೇಷವಲ್ಲವೆ? ಪಂಪನೂ ಕೂಡ ಪರಿಮಳಭರಿತವಾದ ಅಕ್ಕಿಯ ತಳಿಯ (ನವಗಂಧಶಾಲಿ) ಬಗ್ಗೆ ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ರಾಜ್ಯ ಎನ್ನುವುದು ರಾಜ ಮತ್ತು ಪ್ರಜೆಗಳಿಂದ ನಿರ್ಮಾಣವಾಗುವಂಥದ್ದು; ಅವರ ಒಳಗಣ ಮತ್ತು ಹೊರಗಣ ಗುಣ–ಸ್ವಭಾವಗಳೇ ಅದರ ಕಾನೂನು–ಕಟ್ಟಳೆಗಳು; ಅವರ ಸುಖಸಮೃದ್ಧಿಯೇ ಆ ರಾಜ್ಯದ ನಾಗರಿಕತೆಯ ಮಾನದಂಡ; ಅವರ ಜೀವನದರ್ಶನವೇ ಆ ಜನಜೀವನದ ಸಂಸ್ಕೃತಿಯ ಸೂಚಕ – ಎನ್ನುವುದನ್ನು ರಾಮಾಯಣ ತುಂಬ ಮಾರ್ಮಿಕವಾಗಿ ಚಿತ್ರಿಸಿದೆ. ‘Society is founded not on the ideals but on the nature of man, and the constitution of man rewrites the constitution of states. But what is the constitution of man?’ ಎಂದಿದ್ದಾರೆ, ವಿಲ್‌ ಡ್ಯುರಂಟ್‌. ಮನುಷ್ಯನ ಸಂವಿಧಾನದ ವಿವರಗಳನ್ನು ಅನಾವರಣ ಮಾಡುವುದೇ ರಾಮಾಯಣದಂಥ ‘ಮಿಥ್‌’ಗಳ ನಿಲುವು.

 

ಪ್ರತಿಕ್ರಿಯಿಸಿ (+)