ಮಂಗಳವಾರ, ಜೂಲೈ 7, 2020
27 °C
ಕುಸ್ತಿಯಲ್ಲಿ ಪೈಲ್ವಾನರ ಪಾರಮ್ಯ, ಶೂಟಿಂಗ್‌ನಲ್ಲೂ ಮುಂದುವರಿದ ಪದಕದ ಬೇಟೆ

ಭಾರತಕ್ಕೆ ಶುಭ ತಂದ ಶನಿವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಶುಭ ತಂದ ಶನಿವಾರ

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಭಾರತದ ಕ್ರೀಡಾಪಟುಗಳ ಪಾಲಿಗೆ ಶನಿವಾರ ಶುಭದಿನವಾಯಿತು.

ಕುಸ್ತಿ ಅಖಾಡದಲ್ಲಿ ಪೈಲ್ವಾನರು ಪಾರಮ್ಯ ಮುಂದುವರಿಸಿದ್ದು, ಶೂಟಿಂಗ್‌, ಬಾಕ್ಸಿಂಗ್‌, ಅಥ್ಲೆಟಿಕ್ಸ್‌ ಮತ್ತು ಟೇಬಲ್‌ ಟೆನಿಸ್ ಸ್ಪರ್ಧೆಗಳಲ್ಲೂ ಭಾರತದ ಕ್ರೀಡಾಪಟುಗಳು ಚಿನ್ನದ ಬೇಟೆಯಾಡಿ ಚಾರಿತ್ರಿಕ ಸಾಧನೆ ಮಾಡಿದರು. ಹೀಗಾಗಿ ಕೂಟದ ಹತ್ತನೆ ದಿನ ಭಾರತದ ಖಾತೆಗೆ 17 ಪದಕಗಳು ಸೇರ್ಪಡೆಯಾಗಿದ್ದು, ಒಟ್ಟು ಪದಕಗಳ ಸಂಖ್ಯೆ 59ಕ್ಕೆ ಹೆಚ್ಚಿತು.

ಚಿನ್ನಕ್ಕೆ ಮುತ್ತಿಕ್ಕಿದ ವಿನೇಶಾ, ಸುಮಿತ್‌: ಕುಸ್ತಿಯಲ್ಲಿ ವಿನೇಶಾ ಪೋಗಟ್‌ ಮತ್ತು ಸುಮಿತ್‌ ಅವರು ಚಿನ್ನಕ್ಕೆ ಮುತ್ತಿಕ್ಕಿದರು. ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಸಾಕ್ಷಿ ಮಲಿಕ್‌ ಗೋಲ್ಡ್‌ ಕೋಸ್ಟ್‌ನಲ್ಲೂ ಕಂಚಿಗೆ ತೃಪ್ತಿಪಟ್ಟರು.

ಕುಸ್ತಿಯಲ್ಲಿ ಈ ಬಾರಿ ಭಾರತ ಒಟ್ಟು 12 ಪದಕಗಳನ್ನು ಜಯಿಸಿದೆ. ಇದರಲ್ಲಿ ಐದು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿವೆ. 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲಿ ಕುಸ್ತಿಪಟುಗಳು ಒಟ್ಟು 13 ಪದಕಗಳನ್ನು ಜಯಿಸಿದ್ದರು.

ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶಾ ಮೊದಲ ಹೋರಾಟದಲ್ಲಿ 6–5ರಿಂದ ನೈಜೀರಿಯಾದ ಮಿಯೆಸಿನ್ನಿ ಜೆನೆಸಿಸ್‌ ಅವರನ್ನು ಪರಾಭವಗೊಳಿಸಿದರು.

ಎರಡನೆ ಹಣಾಹಣಿಯಲ್ಲಿ 10–0ಯಿಂದ ಆಸ್ಟ್ರೇಲಿಯಾದ ರೂಪಿಂದರ್‌ ಕೌರ್‌ ಸವಾಲು ಮೀರಿದ ವಿನೇಶಾ, ನಂತರದ ಪೈಪೋಟಿಯಲ್ಲಿ 13–3ರಿಂದ ಕೆನಡಾದ ಜೆಸ್ಸಿಕಾ ಮೆಕ್‌ಡೊನಾಲ್ಡ್‌ ಅವರನ್ನು ಸೋಲಿಸಿದರು.

ಪುರುಷರ 125 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ ಅಖಾಡಕ್ಕಿಳಿದಿದ್ದ ಸುಮಿತ್‌ 6–4ರಿಂದ ಕೆನಡಾದ ಕೋರಿ ಜಾರ್ವಿಸ್‌ ಎದುರೂ, 10–4ರಿಂದ ಪಾಕಿಸ್ತಾನದ ತಯ್ಯಬ್‌ ರಝಾ ವಿರುದ್ಧವೂ ಗೆದ್ದರು.

62 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಭಾರತದ ಭರವಸೆಯಾಗಿದ್ದ ಸಾಕ್ಷಿ ಮಲಿಕ್‌ ಮೊದಲ ಪಂದ್ಯದಲ್ಲಿ 10–0ಯಿಂದ ಕ್ಯಾಮರೂನ್‌ನ ಬೆರ್ಥ್ ಎಮಿಲೆನ್ ಎತಾನ್ ನಿಗೊಲ್ ಅವರನ್ನು ಸೋಲಿಸಿದರು.

ಆದರೆ ಎರಡನೆ ಪಂದ್ಯದಲ್ಲಿ ಸಾಕ್ಷಿ 8–11ರಿಂದ ಕೆನಡಾದ ಮಿಷೆಲ್ ಫಜಾರಿ ವಿರುದ್ಧ ಪರಾಭವಗೊಂಡರು. ಮೂರನೆ ಹೋರಾಟದಲ್ಲಿ ನೈಜೀರಿಯಾದ ಅಮಿನಾತ್‌ ಅಡೆನಿಯಿ ಎದುರು ಮಣಿದ ಭಾರತದ ಕುಸ್ತಿಪಟು, ಕೊನೆಯ ಹೋರಾಟದಲ್ಲಿ ಆಸ್ಟ್ರೇಲಿಯಾದ ತಯಲಾ ಫೋರ್ಡ್‌ ವಿರುದ್ಧ ಗೆದ್ದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

86 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಸೋಮವೀರ್‌, ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಕಂಚಿನ ಪದಕದ ಹೋರಾಟದಲ್ಲಿ ಸೋಮವೀರ್‌ 7–3 ಪಾಯಿಂಟ್ಸ್‌ನಿಂದ ಕೆನಡಾದ ಅಲೆಕ್ಸಾಂಡರ್‌ ಮೂರ್‌ ಅವರನ್ನು ಸೋಲಿಸಿದರು.

*

ಚಿನ್ನಕ್ಕೆ ಗುರಿ ಇಟ್ಟ ಸಂಜೀವ್‌: ಶೂಟರ್‌ ಸಂಜೀವ್‌ ರಜಪೂತ್‌ ಪುರುಷರ 50 ಮೀಟರ್ಸ್‌ ರೈಫಲ್‌–3 ಪೊಷಿಸನ್‌ನಲ್ಲಿ ಚಿನ್ನಕ್ಕೆ ಗುರಿ ಇಟ್ಟರು. ಇದರೊಂದಿಗೆ ಕಾಮನ್‌ವೆಲ್ತ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದ ಹಿರಿಮೆಗೆ ಪಾತ್ರರಾದರು.

ಬೆಲ್‌ಮೊಂಟ್‌ ಶೂಟಿಂಗ್‌ ಕೇಂದ್ರದಲ್ಲಿ ನಡೆದ ಫೈನಲ್‌ನಲ್ಲಿ ಸಂಜೀವ್‌ 454.5 ಸ್ಕೋರ್‌ ಸಂಗ್ರಹಿಸಿ ಕೂಟ ದಾಖಲೆ ನಿರ್ಮಿಸಿದರು.

ಅರ್ಹತಾ ಸುತ್ತಿನಲ್ಲಿ 1180 ಸ್ಕೋರ್‌ ಸಂಗ್ರಹಿಸಿದ್ದ ಸಂಜೀವ್‌, ಭಾರತದ ಗಗನ್‌ ನಾರಂಗ್‌ ಹೆಸರಿನಲ್ಲಿದ್ದ ಎಂಟು ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದ್ದರು.

ಗಗನ್‌ ಅವರು 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದ ಅರ್ಹತಾ ಸುತ್ತಿನಲ್ಲಿ 1166 ಸ್ಕೋರ್‌ ಸಂಗ್ರಹಿಸಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಭಾರತೀಯ ನೌಕಾಪಡೆಯ ಅಧಿಕಾರಿಯಾಗಿರುವ ಸಂಜೀವ್‌, ಫೈನಲ್‌ನಲ್ಲೂ ಮೋಡಿ ಮಾಡಿದರು. ಮೊದಲ ಹಂತದ ಅಂತ್ಯಕ್ಕೆ 306.9 ಸ್ಕೋರ್‌ ಗಳಿಸಿದ್ದ ಅವರು ಸ್ಟ್ಯಾಂಡಿಂಗ್‌ ಎಲಿಮಿನೇಷನ್‌ ಹಂತದಲ್ಲೂ ನಿಖರವಾಗಿ ಗುರಿ ಹಿಡಿದು ಚಿನ್ನಕ್ಕೆ ಕೊರಳೊಡ್ಡಿದರು.

ಈ ವಿಭಾಗದಲ್ಲಿ ಕಣದಲ್ಲಿದ್ದ ಚೈನ್‌ ಸಿಂಗ್‌, ಐದನೆ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಅವರು 419.1 ಸ್ಕೋರ್‌ ಗಳಿಸಿದರು.

*ಮೇರಿ ಕೋಮ್‌ಗೆ ಚಿನ್ನ

ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕೂಟದಲ್ಲಿ ಭಾಗವಹಿಸಿದ್ದ ಭಾರತದ ಅನುಭವಿ ಬಾಕ್ಸರ್ ಎಂ.ಸಿ. ಮೇರಿ ಕೋಮ್‌ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದರು.

ಮೂರು ಮಕ್ಕಳ ತಾಯಿಯಾಗಿರುವ 35ರ ಹರೆಯದ ಮೇರಿ,  48 ಕೆ.ಜಿ. ಫ್ಲೈವೇಟ್‌ ವಿಭಾಗದಲ್ಲಿ ಈ ಸಾಧನೆ ಮಾಡಿದರು. ಇದರೊಂದಿಗೆ ಕಾಮನ್‌ವೆಲ್ತ್‌ ಬಾಕ್ಸಿಂಗ್‌ನ ಮಹಿಳಾ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಬಾಕ್ಸರ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು.

ಫೈನಲ್‌ನಲ್ಲಿ ಮೇರಿ 5–0ರಿಂದ ನಾರ್ಥರ್ನ್ ಐರ್ಲೆಂಡ್‌ನ ಕ್ರಿಸ್ಟಿನಾ ಒ ಹರಾ ಅವರನ್ನು ಸೋಲಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಐದು ಚಿನ್ನ ಗೆದ್ದ ಹಿರಿಮೆ ಹೊಂದಿರುವ ಮೇರಿ, ಮೊದಲ ಸುತ್ತಿನಲ್ಲಿ ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ಎರಡನೆ ಸುತ್ತಿನಲ್ಲೂ ಎದುರಾಳಿಯ ಮೇಲೆ ಪ್ರಹಾರ ನಡೆಸಿದ ಭಾರತದ ಬಾಕ್ಸರ್‌ಗೆ ಪಂದ್ಯದ ಐದು ಮಂದಿ ನಿರ್ಣಾಯಕರು ತಲಾ 10 ಪಾಯಿಂಟ್ಸ್‌ ನೀಡಿದರು.

ಮೂರನೆ ಸುತ್ತಿ‌ನಲ್ಲಿ ಮೇರಿ, ಇನ್ನಷ್ಟು ಆಕ್ರಮಣಕಾರಿ ಹೋರಾಟ ನಡೆಸಿದರು. ಎದುರಾಳಿಯ ಮುಖ, ತಲೆ ಮತ್ತು ದವಡೆಗೆ ಶಕ್ತಿಯುತ ಪಂಚ್‌ಗಳನ್ನು ಮಾಡಿ ಪಾಯಿಂಟ್ಸ್‌ ಕಲೆಹಾಕಿದ ಅವರು ಖುಷಿಯ ಕಡಲಲ್ಲಿ ತೇಲಿದರು.

*–ಗೌರವ್‌ ಸೋಳಂಕಿ(ಕೆಂಪು ಪೋಷಾಕು)

ಗೌರವ್‌ ಮೋಡಿ: ಪುರುಷರ 52 ಕೆ.ಜಿ. ವಿಭಾಗದಲ್ಲಿ ಗೌರವ್‌ ಸೋಳಂಕಿ ಚಿನ್ನಕ್ಕೆ ಮುತ್ತಿಕ್ಕಿದರು.

ಫೈನಲ್‌ನಲ್ಲಿ ಗೌರವ್‌ 4–1 ಪಾಯಿಂಟ್ಸ್‌ನಿಂದ ನಾರ್ಥರ್ನ್‌ ಐರ್ಲೆಂಡ್‌ನ ಬ್ರೆಂಡನ್‌ ಇರ್ವಿನ್‌ ಅವರನ್ನು ಸೋಲಿಸಿದರು. 75 ಕೆ.ಜಿ. ವಿಭಾಗದಲ್ಲಿ ವಿಕಾಸ್‌ ಕೃಷ್ಣನ್‌ ಚಿನ್ನದ ಪ‍ದಕಕ್ಕೆ ಕೊರಳೊಡ್ಡಿದರು.

ಫೈನಲ್‌ನಲ್ಲಿ ವಿಕಾಸ್‌ 5–0ರಿಂದ ಕ್ಯಾಮರೂನ್‌ನ ಡಿಯುಡೊನ್ನೆ ವಿಲ್ಫ್ರೆಡ್‌ ಸೆಯಿ ಅವರನ್ನು ಪರಾಭವಗೊಳಿಸಿದರು.

ಪುರುಷರ 49 ಕೆ.ಜಿ. ವಿಭಾಗದಲ್ಲಿ ಅಮಿತ್‌ ಬೆಳ್ಳಿ ತಮ್ಮದಾಗಿಸಿಕೊಂಡರು. ಫೈನಲ್‌ನಲ್ಲಿ ಅಮಿತ್‌ 1–3ರಿಂದ ಇಂಗ್ಲೆಂಡ್‌ನ ಗಲಾಲ ಯಫಾಯ್‌ ವಿರುದ್ಧ ಪರಾಭವಗೊಂಡರು.

60 ಕೆ.ಜಿ. ವಿಭಾಗದ ಫೈನಲ್‌ ಪೈಪೋಟಿಯಲ್ಲಿ ಮನೀಷ್‌ ಕೌಶಿಕ್‌ 2–3ರಿಂದ ಆಸ್ಟ್ರೇಲಿಯಾದ ಹ್ಯಾರಿ ಗ್ಯಾರ್‌ಸೈಡ್‌ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು.

+91 ಕೆ.ಜಿ. ವಿಭಾಗದಲ್ಲಿ ಸತೀಶ್‌ ಕುಮಾರ್‌ ಬೆಳ್ಳಿ ತಮ್ಮದಾಗಿಸಿಕೊಂಡರು. ಚಿನ್ನದ ಪದಕದ ಹಣಾಹಣಿಯಲ್ಲಿ ಸತೀಶ್‌ 0–5ರಿಂದ ಇಂಗ್ಲೆಂಡ್‌ನ ಫ್ರೇಜರ್‌ ಕ್ಲಾರ್ಕ್‌ ವಿರುದ್ಧ ನಿರಾಸೆ ಕಂಡರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವುದು ಅನುಮಾನ

‘2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕುರಿತು ಈಗಲೇ ಏನೂ ಹೇಳಲಾಗದು. ಟೋಕಿಯೊ ಕೂಟದಲ್ಲಿ 48 ಕೆ.ಜಿ. ವಿಭಾಗವನ್ನು ಸೇರ್ಪಡೆ ಮಾಡಿಲ್ಲ. ಹೀಗಾಗಿ 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಬೇಕಾಗುತ್ತದೆ. ಇದಕ್ಕಾಗಿ ತೂಕ ಹೆಚ್ಚಿಸಿಕೊಳ್ಳಬೇಕು. ಇದು ಸವಾಲಿನ ಕೆಲಸ. ಜೊತೆಗೆ ಫಿಟ್‌ನೆಸ್‌ ಕೂಡ ಕಾಪಾಡಿಕೊಳ್ಳಬೇಕು’ ಎಂದು ಮೇರಿ ಕೋಮ್‌ ಹೇಳಿದ್ದಾರೆ.

‘22 ವರ್ಷದ ಬಾಕ್ಸರ್‌ ಕ್ರಿಸ್ಟಿನಾ ವಿರುದ್ಧ ಈ ಹಿಂದೆ ಸೌಹಾರ್ದ ಪಂದ್ಯವೊಂದನ್ನು ಆಡಿದ್ದೆ. ಆಕೆಯ ಸಾಮರ್ಥ್ಯ ಏನು ಎಂಬುದು ಚೆನ್ನಾಗಿ ತಿಳಿದಿತ್ತು. ಹೀಗಾಗಿ ಭಿನ್ನ ಯೋಜನೆ ಹೆಣೆದು ‘ರಿಂಗ್‌’ಗೆ ಇಳಿದಿದ್ದೆ’. ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಬಾಕ್ಸರ್‌ ಎಂಬುದು ಹೆಮ್ಮೆಯ ವಿಷಯ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲಲು ಆಗಿಲ್ಲ. ಆ ಕೊರಗು ನನ್ನನ್ನು ಕಾಡುತ್ತಿದೆ’ ಎಂದು ತಿಳಿಸಿದ್ದಾರೆ.

ಮಣಿಕಾ ಮಿಂಚು: ಮಣಿಕಾ ಬಾತ್ರಾ ಅವರು ಕಾಮನ್‌ವೆಲ್ತ್‌ ಕೂಟದ ಟೇಬಲ್‌ ಟೆನಿಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಗೆ ಪಾತ್ರರಾದರು.

ಆಕ್ಸೆನ್‌ಫೋರ್ಡ್‌ ಸ್ಟುಡಿಯೋಸ್‌ನ ಅಂಗಳದಲ್ಲಿ ನಡೆದ ಫೈನಲ್‌ನಲ್ಲಿ ಮಣಿಕಾ 11–7, 11–6, 11–2, 11–7ರಲ್ಲಿ ಸಿಂಗಪುರದ ಮೆಂಗ್ಯು ಯು ಅವರನ್ನು ಮಣಿಸಿದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 58ನೆ ಸ್ಥಾನದಲ್ಲಿರುವ ಮಣಿಕಾ, ನಾಲ್ಕು ಗೇಮ್‌ಗಳಲ್ಲೂ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿ ಏಕಪಕ್ಷೀಯವಾಗಿ ಗೆಲುವಿನ ತೋರಣ ಕಟ್ಟಿದರು.

ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ ಮಣಿಕಾ 12–10, 5–11, 11–8, 5–11, 5–11, 11–9, 13–11ರಲ್ಲಿ ಸಿಂಗಪುರದ ಫೆಂಗ್ ತಿಯಾನ್‌ವೀ ಅವರಿಗೆ ಆಘಾತ ನೀಡಿದ್ದರು. ಫೆಂಗ್‌, ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೆ ಸ್ಥಾನ ಹೊಂದಿದ್ದಾರೆ.‌

ಶರತ್‌–ಸತ್ಯನ್‌ಗೆ ಬೆಳ್ಳಿ: ಪುರುಷರ ಡಬಲ್ಸ್‌ ವಿಭಾಗದಲ್ಲಿ ಅಚಂತ ಶರತ್‌ ಕಮಲ್‌ ಮತ್ತು ಜ್ಞಾನಶೇಖರನ್‌ ಸತ್ಯನ್‌ ಅವರು ಬೆಳ್ಳಿಯ ಸಾಧನೆ ಮಾಡಿದರು.

ಫೈನಲ್‌ ಹಣಾಹಣಿಯಲ್ಲಿ ಶರತ್‌ ಮತ್ತು ಸತ್ಯನ್‌ 2–3ರಲ್ಲಿ ಇಂಗ್ಲೆಂಡ್‌ನ ಡ್ರಿಂಕಾಲ್‌ ಪಾಲ್‌ ಮತ್ತು ಲಿಯಾಮ್‌ ಪಿಚ್‌ಫೋರ್ಡ್‌ ವಿರುದ್ಧ ಸೋತರು.

ಭಾರತದ ಹರ್ಮಿತ್‌ ದೇಸಾಯಿ ಮತ್ತು ಸನಿಲ್‌ ಶೆಟ್ಟಿ ಈ ವಿಭಾಗದ ಕಂಚು ತಮ್ಮದಾಗಿಸಿಕೊಂಡರು.

ಕಂಚಿನ ಪದಕದ ಹೋರಾಟದಲ್ಲಿ ಹರ್ಮಿತ್‌ ಮತ್ತು ಸನಿಲ್‌ 11–5, 11–6, 12–10ರಲ್ಲಿ ಸಿಂಗಪುರದ ಪಾಂಗ್‌ ಯೆವ್‌ ಎನ್‌ ಕೊಯೆನ್‌ ಮತ್ತು ‍ಪೊಹ್‌ ಶಾವೊ ಫೆಂಗ್‌ ಎಥಾನ್‌ ಅವರನ್ನು ಸೋಲಿಸಿದರು.

*

ಕಾಮನ್‌ವೆಲ್ತ್‌ನಲ್ಲಿ ಚಿನ್ನ ಗೆಲ್ಲುವ ಗುರಿ ಇಟ್ಟುಕೊಂಡಿದ್ದೆ. ಇದಕ್ಕಾಗಿ ಕಠಿಣ ತಾಲೀಮು ಮಾಡಿದ್ದೆ. ನನ್ನ ಕನಸು ಕೈಗೂಡಲಿಲ್ಲ. ಹೀಗಾಗಿ ತುಂಬಾ ನೋವಾಗಿದೆ.

–ಸಾಕ್ಷಿ ಮಲಿಕ್‌, ಭಾರತದ ಕುಸ್ತಿಪಟು

*

ಫಿಟ್‌ನೆಸ್‌ ನನ್ನ ಯಶಸ್ಸಿನ ಗುಟ್ಟು. ಎದುರಾಳಿಯ ಸಾಮರ್ಥ್ಯವನ್ನು ಚೆನ್ನಾಗಿ ಅರಿತಿದ್ದೆ. ಅದಕ್ಕನುಗುಣವಾಗಿ ಯೋಜನೆ ರೂಪಿಸಿ ಕಣಕ್ಕಿಳಿದಿದ್ದೆ. ಹೀಗಾಗಿ ಗೆಲುವು ಸುಲಭವಾಯಿತು.

–ಮೇರಿ ಕೋಮ್‌, ಭಾರತದ ಬಾಕ್ಸರ್‌

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.