ಸೋಮವಾರ, ಆಗಸ್ಟ್ 10, 2020
26 °C
ಎತ್ತಿನಹೊಳೆ ಕಾಮಗಾರಿಗೆ ನಾಲ್ಕು ವರ್ಷ, ಶೇ10ರಷ್ಟು ಪೂರ್ಣಗೊಂಡಿಲ್ಲ; ಭರವಸೆ ಕಳೆದುಕೊಂಡ ಮತದಾರ

ಹರಿಯಲಿಲ್ಲ ಹೊಳೆ, ನಿಂತಿಲ್ಲ ಮಾತಿನ ಮಳೆ!

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಹರಿಯಲಿಲ್ಲ ಹೊಳೆ, ನಿಂತಿಲ್ಲ ಮಾತಿನ ಮಳೆ!

ಚಿಕ್ಕಬಳ್ಳಾಪುರ: ನೀರಾವರಿ ತಜ್ಞ ಜಿ.ಎಸ್‌. ಪರಮ­ಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಲೇಬೇಕು ಎಂಬ ಶಾಶ್ವತ ನೀರಾವರಿ ಹೋರಾಟಗಾರರ ಬೇಡಿಕೆಯನ್ನು ಬದಿಗೊತ್ತಿ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿ ನಾಲ್ಕು ವರ್ಷಗಳೇ ಕಳೆದಿವೆ. ಈವರೆಗೆ ಯೋಜನೆ ಕಾಮಗಾರಿ ಶೇ10 ರಷ್ಟು ಸಹ ಪೂರ್ಣಗೊಂಡಿಲ್ಲ!

ಎತ್ತಿನಹೊಳೆ ಹೆಸರು ಹೇಳಿಕೊಂಡು ಈಗಾಗಲೇ ಸಂಸದ ವೀರಪ್ಪ ಮೊಯಿಲಿ ಅವರು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ‘ವಿಜಯಲಕ್ಷ್ಮಿ’ಯನ್ನು ಒಲಿಸಿಕೊಂಡಾಗಿದೆ. 2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಮತ್ತೆ ಹಳೆಯ ‘ಮಂತ್ರ’ವನ್ನೇ ಪುನರುಚ್ಚರಿಸುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಪ್ರಣಾಳಿಕೆಗಳ ಅಗ್ರಸ್ಥಾನದಲ್ಲಿದ್ದ ಎತ್ತಿನಹೊಳೆ ಈ ಬಾರಿ ಕೂಡ ಆ ಸ್ಥಾನದಿಂದ ಕದಲುವುದಿಲ್ಲ ಎಂಬ ಬಲವಾದ ನಂಬಿಕೆ ಜಿಲ್ಲೆಯ ಪ್ರಜ್ಞಾವಂತ ಮತದಾರರ ಮನದಲ್ಲಿದೆ. ಏಕೆಂದರೆ ಕಳೆದ ಬಾರಿ ಅವರು ಅದಕ್ಕೇ ಮಾರು ಹೋಗಿ ಮತ ಚಲಾಯಿಸಿದ್ದು ಇನ್ನೂ ಮರೆತಿಲ್ಲ.

2009 ರಿಂದ ಈವರೆಗೆ ನಡೆದ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲಿ ಎಲ್ಲ ಪಕ್ಷಗಳ ನಾಯಕರ ಬಾಯಲಿ ಜಿಲ್ಲೆಯಲ್ಲಿ ಹೆಚ್ಚು ನಲಿದಾಡಿದ ಪದವೇನಾದರೂ ಇದ್ದರೆ ಅದು ‘ಎತ್ತಿನಹೊಳೆ’. ಬಯಲುಸೀಮೆಗೆ ‘ಎರಡೇ ವರ್ಷಗಳಲ್ಲಿ ಎತ್ತಿನಹೊಳೆ ನೀರು ಹರಿಯಲಿದೆ’ ಎಂಬ ಹೇಳಿಕೆ ಜಿಲ್ಲೆಯಲ್ಲಿ ಸದ್ಯ ಚಲಾವಣೆ ಕಳೆದುಕೊಂಡ ಸವಕಲು ನಾಣ್ಯದಂತಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಈ ಯೋಜನೆ ಕಾಮಗಾರಿಯ ‘ವೇಗ’, ‘ಪ್ರಗತಿ’ಯನ್ನು ನೋಡಿ ರೋಸಿ ಹೋಗಿರುವ ಜಿಲ್ಲೆಯ ಜನರು ಇದೀಗ ‘ಎತ್ತಿನಹೊಳೆ ಭಾಷಣ’ ಮಾಡುವವರಿಗೆ ಬಹಿರಂಗವಾಗಿಯೇ ಅಪಹಾಸ್ಯ ಮಾಡಿ ಇರುಸು ಮುರುಸು ಉಂಟು ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಾಜಕಾರಣಿಗಳು ಯಾರೂ ಕೇಳದಿದ್ದರೂ ಮಾತ್ರ ರಾಜಕೀಯ ಲಾಭಕ್ಕಾಗಿ ಎತ್ತಿನಹೊಳೆ ಕುರಿತು ಓತಪ್ರೋತವಾಗಿ ಬಾಯಿ ಮಾತಿನ ‘ಪ್ರವಾಹ’ವನ್ನು ಹರಿಸುತ್ತಲೇ ಇದ್ದಾರೆ.

ಮೊದಲಿನಿಂದಲೂ ಎತ್ತಿನಹೊಳೆ ವಿರೋಧಿಸುತ್ತಲೇ ಬಂದಿರುವ ಹೋರಾಟಗಾರರು ‘ಸರ್ಕಾರದ ಅರೆಬರೆ ಅಧ್ಯಯನ, ಅವೈಜ್ಞಾನಿಕ ನಡೆ, ತಾಂತ್ರಿಕವಾಗಿ ಇಟ್ಟಿರುವ ತಪ್ಪು ಮತ್ತು ದೋಷಪೂರಿತ ಹೆಜ್ಜೆಗಳು ಬಯಲು ಸೀಮೆಯ ಕಟ್ಟಕಡೆಯ ಜಿಲ್ಲೆಗಳಿಗೆ ಹನಿ ನೀರು ಹರಿಸಲಾರದು ಎಂಬುದು ಕಟು ಸತ್ಯ’ ಎಂದು ಎದೆ ತಟ್ಟಿ ಹೇಳುತ್ತಿದ್ದಾರೆ.

ಈ ಆರೋಪವನ್ನು ಸರ್ಕಾರ ಭಾಗವಾಗಿರುವವರು ಮತ್ತು ಯೋಜನೆ ರೂಪಿಸುವಲ್ಲಿ ಶ್ರಮಿಸಿದವರು ಬಾಯಿ ಮಾತಿನಲ್ಲಿ ತಳ್ಳಿ ಹಾಕುತ್ತಾರೆ. ಆದರೆ ಹೋರಾಟಗಾರರು ಎತ್ತುವ ಅನೇಕ ಪ್ರಶ್ನೆಗಳಿಗೆ ಸಮರ್ಪಕ, ಸಮಾಧಾನಕರ ಉತ್ತರ ನೀಡುವ ಉತ್ತರದಾಯಿತ್ವದ ಬದ್ಧತೆ ಒಬ್ಬ ಜನಪ್ರತಿನಿಧಿಯೂ ಈವರೆಗೆ ಮೆರೆದಿಲ್ಲ. ಈ ಕುರಿತು ಹೆಚ್ಚು ಪ್ರಶ್ನೆಗಳನ್ನು ಕೇಳಿದರೆ ರಾಜಕೀಯ ಪಕ್ಷಗಳ ನಾಯಕ­ರೆಲ್ಲರೂ ಉಗುಳಲೂ ಆಗದ ನುಂಗಲೂ ಆಗದ ಏನನ್ನೋ ಬಾಯಲ್ಲಿ ಹಾಕಿ­ಕೊಂಡ­ವರಂತೆ ಮಾತನಾಡುತ್ತಾರೆ ವಿನಾ ಸ್ಪಷ್ಟತೆಯಿಂದ ದಿಟ್ಟ ಉತ್ತರ ನೀಡುವ ಧೈರ್ಯ ತೋರಿದವರಿಲ್ಲ.

ಇದೆಲ್ಲದರ ನಡುವೆ ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟದ ಮೇಲೆ ಆಗುತ್ತಿರುವ ಹಾನಿಯನ್ನು ತಪ್ಪಿಸುವ ಉದ್ದೇಶದಿಂದ ಕಾನೂನು ಸಮರಕ್ಕೆ ಇಳಿದಿರುವ ಪರಿಸರವಾದಿಗಳು, ರಾಷ್ಟ್ರೀಯ ಹಸಿರುಪೀಠದ ಮೊರೆ ಹೋಗಿದ್ದಾರೆ. ಜತೆಗೆ ಕಾನೂನು ಸಮರವನ್ನು ತ್ವರಿತಗೊಳಿಸುವ ಇತರ ಅವಕಾಶಗಳನ್ನು ಪರಿಶೀಲಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಯೋಜನೆಗೆ ಅನೇಕ ಅಡೆತಡೆಗಳು ಬರುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಬೆನ್ನು ಬಿಡದ ಗೊಂದಲ

ಗೊಂದಲದ ಗೂಡಿನಲ್ಲೇ ಜನ್ಮತಳೆದ ಎತ್ತಿನಹೊಳೆ ಯೋಜನೆಗೆ ಆರಂಭದಿಂದಲೇ ಅಂಟಿಕೊಂಡ ‘ವಿವಾದ’, ‘ವಿಘ್ನ’ಗಳು ಇಂದಿಗೂ ಕಳಚಿಕೊಂಡಿಲ್ಲ. ಕಳಚಿಕೊಳ್ಳುವ ಲಕ್ಷಣಗಳೂ ಕಾಣಿಸುತ್ತಿಲ್ಲ. ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಸಿಗುವ ಸಾಧ್ಯತೆ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ.

ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ಬೀಳುವ ಸರಾಸರಿ ಮಳೆಯ ಪ್ರಮಾಣದ ಬಗ್ಗೆ ಈವರೆಗೆ ವಿವಿಧ ತಜ್ಞರ ನಡುವೆಯೇ ಏಕಾಭಿಪ್ರಾಯವಿಲ್ಲ. ಜಿಲ್ಲೆಯ ಜನರು ಮಾತ್ರ ಚಾತಕ ಪಕ್ಷಿಗಳಂತೆ ಹೊಳೆಯ ನೀರಿಗಾಗಿ ಕಾಯುತ್ತಲೇ ಇದ್ದಾರೆ.

ಕರ್ನಾಟಕ ನೀರಾವರಿ ನಿಗಮದ ಯೋಜನೆಯ ವರದಿ ಎತ್ತಿನಹೊಳೆಯಲ್ಲಿ 24 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಹೇಳುತ್ತದೆ. ಇದನ್ನು ಅಲ್ಲಗಳೆಯುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ತಜ್ಞರು ಈ ಯೋಜನೆಯಿಂದ 9.55 ಟಿಎಂಸಿ ಅಡಿ ನೀರು ಸಿಗಬಹುದಷ್ಟೇ. ಅದರಲ್ಲಿ 5.84 ಟಿಎಂಸಿ ಅಡಿ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಲಿಕ್ಕಾಗಿಯೇ ಬೇಕಾಗುತ್ತದೆ ಎಂದು ಹೇಳುತ್ತಾರೆ.

‘ನೀರಾವರಿ ನಿಗಮದ ಅಧಿಕಾರಿಗಳು ಒದಗಿಸಿದ ಸುಳ್ಳು ಅಂಕಿ ಅಂಶ ಆಧರಿಸಿ ನೀರಾವರಿ ತಜ್ಞ ಪ್ರೊ. ರಾಮಪ್ರಸಾದ್ ಯೋಜನೆ ಸಿದ್ಧಪಡಿಸಿಕೊಟ್ಟಿದ್ದಾರೆ’ ಎಂದು ಆರೋಪಿಸುವ ಹೋರಾಟಗಾರರು, ‘ಕೇವಲ ಎರಡೇ ವರ್ಷಗಳಲ್ಲಿ ನೀರು ಹರಿಸುತ್ತೇವೆ ಎಂದು ಹೇಳುತ್ತ ಬರುತ್ತಿರುವ ಸರ್ಕಾರ ಯೋಜನೆಯ ಮೂಲ ವರದಿಯ ಜಲ ವಿಜ್ಞಾನ, ಎತ್ತಿನಹೊಳೆ ಜಲಾನಯನ ಪ್ರದೇಶದ ಮಳೆ ಪ್ರಮಾಣ, ನೀರು ಹರಿವಿನ ಪ್ರಮಾಣ ಮತ್ತು ಹಂಚಿಕೆ ಪ್ರಮಾಣದ ಅಂಕಿಅಂಶಗಳನ್ನು ಅಧ್ಯಯನ ಮಾಡಿದೆಯೇ’ ಎಂದು ಪ್ರಶ್ನಿಸುತ್ತಾರೆ.

2012ರಲ್ಲಿ ಕೇಂದ್ರೀಯ ಜಲ ಆಯೋಗ (ಸಿಡಬ್ಲೂಸಿ) ಈ ಯೋಜನೆಯ ಮರು ಅಧ್ಯಯನ ಮಾಡುವಂತೆ ನೀಡಿದ ಗಂಭೀರ ಎಚ್ಚರಿಕೆ ಉಪೇಕ್ಷಿಸಿದ ಸರ್ಕಾರ, 2014ರಲ್ಲಿ ರಾಷ್ಟ್ರೀಯ ಜಲ ವಿಜ್ಞಾನ ಸಂಸ್ಥೆ (ಎನ್‌.ಐ.ಎಚ್‌) ನೀಡಿದ ಸಲಹೆಗಳ ಬಗ್ಗೆ ಕೂಡ ಅಷ್ಟೇ ನಿರ್ಲಕ್ಷ್ಯ ವಹಿಸಿತು ಎನ್ನುವುದು ಅವರ ಆರೋಪ.

ನಮಗೆ ನೀರು ಸಿಗುತ್ತದೆಯೇ? ಹೇಳಿದಷ್ಟು ನೀರಿನ ಲಭ್ಯತೆ ಇದೆಯೇ? ವೈಜ್ಞಾನಿಕ ಅಧ್ಯಯನ ನಡೆದಿದೆಯೇ? ಅಗತ್ಯ ಇಲಾಖೆಗಳ ಪೂರ್ವಾನುಮತಿ ಪಡೆಯಲಾಗಿದೆಯೇ? ಅಗತ್ಯ ಭೂಸ್ವಾಧೀನ ಆಗಿದೆಯೇ?, ಯೋಜನೆಗೆ ಅಗತ್ಯ ವಿದ್ಯುತ್ ಲಭ್ಯವಿದೆಯೇ?.. ಹೀಗೆ ಹೋರಾಟಗಾರರ ಇತ್ಯಾದಿ ಪ್ರಶ್ನೆಗಳಿಗೆ ಈವರೆಗೆ ಯಾರೊಬ್ಬರೂ ಉತ್ತರ ನೀಡಿಲ್ಲ.

ಉತ್ತರಿಸುವವರು ಯಾರು?

2012ರಲ್ಲಿ 10 ಟಿಎಂಸಿ ಅಡಿ ನೀರು ತರಲು ₹ 4 ಸಾವಿರ ಕೋಟಿ ಮೊತ್ತದಲ್ಲಿ ಈ ಯೋಜನೆ ರೂಪಿಸಲಾಗಿತ್ತು. 2013ರಲ್ಲಿ 18 ಟಿಎಂಸಿ ಅಡಿಗೆ ಏರಿಸಿ ವೆಚ್ಚದ ಅಂದಾಜನ್ನು ₹8,500 ಕೋಟಿಗೆ ಏರಿಸಲಾಯಿತು. ಕೆಲವೇ ದಿನಗಳಲ್ಲಿ ಅದನ್ನು ದಿಢೀರ್‌ 24 ಟಿಎಂಸಿ ಅಡಿಗೆ ಹೆಚ್ಚಿಸಿ, ಯೋಜನಾ ವೆಚ್ಚವನ್ನು ₹ 12,900 ಕೋಟಿಗೆ ಮುಟ್ಟಿಸಲಾಯಿತು.

ಸರ್ಕಾರ ಈ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಮೀಸಲಿಟ್ಟ ₹ 3,600 ಕೋಟಿ ಪೈಕಿ ಜನವರಿ 18ರ ವರೆಗೆ ₹ 2,650 ಕೋಟಿ ಖರ್ಚು ಮಾಡಿರುವುದಾಗಿ ಹೇಳಿಕೊಂಡಿದೆ. ಅದರಲ್ಲಿ ಶೇ 60 ರಷ್ಟು ಬರೀ ಪೈಪ್‌ಗಳನ್ನು ಖರೀದಿಸಲು ವೆಚ್ಚ ಮಾಡಲಾಗಿದೆ.

ಒಟ್ಟಾರೆ ಯೋಜನೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಅಡ್ಡಕಟ್ಟೆಗಳನ್ನು ಕಟ್ಟುವ ಹೆಸರಿನಲ್ಲಿ ಶೇ10 ರಷ್ಟು ಕಾಮಗಾರಿ ನಡೆಸಿದ್ದು ಬಿಟ್ಟರೆ ಸಿವಿಲ್ ಕಾಮಗಾರಿಗಳಾಗಲಿ, ಸಾಗಾಣಿಕೆ ಹಂತದ ಕಾಮಗಾರಿಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ.

‘ರಾಜಕಾರಣಿಗಳು ಜನರ ಹಿತಾಸಕ್ತಿಗಿಂತಲೂ ಹೆಚ್ಚಾಗಿ ಗುತ್ತಿಗೆದಾರರ ಹಿತಾಸಕ್ತಿ ನೋಡುತ್ತಿದ್ದಾರೆ. ಇದರಿಂದಾಗಿ ಬಯಲುಸೀಮೆ ರಾಜಕೀಯ ನಾಯಕರಿಗೆ ಆರ್ಥಿಕ ಲಾಭವಾಗಿದೆ. ಈ ಯೋಜನೆ ಫಲಾನುಭವಿಗಳೇ ಇವತ್ತು ಆ ಯೋಜನೆ ಪರವಾಗಿ ಜೋರಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ಯಾವೆಲ್ಲ ಉದ್ದೇಶಗಳಿಗಾಗಿ ₹ 2,650 ಕೋಟಿ ಖರ್ಚು ಮಾಡಿದ್ದಾರೆ ಎಂಬುದು ಬಹಿರಂಗಪಡಿಸಲಿ’ ಎಂದು ಹೋರಾಟಗಾರರು ಸವಾಲು ಹಾಕುತ್ತಿದ್ದಾರೆ.

ದಕ್ಷಿಣ ಕನ್ನಡದಲ್ಲಿ ‘ನೋಟಾ’ ಬಿಸಿ

ಪಶ್ಚಿಮಘಟ್ಟದಲ್ಲಿ ಹುಟ್ಟುವ ನೇತ್ರಾವತಿ ದಕ್ಷಿಣ ಕನ್ನಡದ ಜನರ ಜೀವನದ ಹಾಸುಹೊಕ್ಕಾಗಿದೆ. ಕುಡಿಯುವ ನೀರು, ಕೃಷಿ, ಮೀನುಗಾರಿಕೆ, ಕೈಗಾರಿಕೆಗಳೆಲ್ಲವೂ ಈ ನದಿಯನ್ನು ಅವಲಂಬಿಸಿವೆ. ಎತ್ತಿನ­ಹೊಳೆ ಯೋಜನೆ ಶಂಕುಸ್ಥಾಪನೆ ಸಂದರ್ಭದಲ್ಲಿ ಮೊಯಿಲಿ ‘ಪ್ರಾಣ ಕೊಟ್ಟಾದರೂ ಎತ್ತಿನ­ಹೊಳೆಯ ನೀರನ್ನು ಹರಿಸುತ್ತೇನೆ’ ಎಂದಾಗಲೇ ದಕ್ಷಿಣ ಕನ್ನಡ ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತು.

ಕಳೆದ ನಾಲ್ಕು ವರ್ಷಗಳಲ್ಲಿ ಕರಾವಳಿ ಜನರು, ಪರಿಸರವಾದಿಗಳು ಈ ಯೋಜನೆ ವಿರೋಧಿಸಿ ಅನೇಕ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಪರಿಸರವಾದಿಗಳು ‘ನೋಟಾ’ (ಮೇಲಿನ ಯಾರಿಗೂ ಮತ ಇಲ್ಲ) ಅಭಿಯಾನ ಆರಂಭಿಸಿದ್ದಾರೆ. ಇದರ ಬಿಸಿ ಯಾರಿಗೆ ತಟ್ಟಲಿದೆ ಕಾಯ್ದು ನೋಡಬೇಕಿದೆ.

ಮೊಯಿಲಿ ‘ಕನಸಿನ ಕೂಸು’

ಎತ್ತಿನಹೊಳೆ ಯೋಜನೆ ಸಂಸದ ವೀರಪ್ಪ ಮೊಯಿಲಿ ಅವರ ‘ಕನಸಿನ ಕೂಸು’. 2009ರಲ್ಲಿ ಬಿಜೆಪಿ ಸರ್ಕಾರದ ಎದುರು ಅವರು ತಮ್ಮ ಈ ಮಹತ್ವಾಕಾಂಕ್ಷೆಯ ಯೋಜನೆಯ ಮೊದಲ ಪ್ರಸ್ತಾವ ಇಡುತ್ತಾರೆ. ಅದೇ ವರ್ಷ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ತಮ್ಮ ಪ್ರಸ್ತಾವಕ್ಕೆ ಜೀವ ನೀಡುತ್ತಾರೆ.

ಪರಮಶಿವಯ್ಯ ವರದಿಯ ಅಂತ್ಯದಲ್ಲಿ ಪ್ರಸ್ತಾಪವಾಗಿದ್ದ ಎತ್ತಿನಹೊಳೆಯ ನೀರನ್ನು ತರಬಹುದಾದ ಸಾಧ್ಯತೆಗೆ ಮೊಯಿಲಿ ಅವರು ದಕ್ಷಿಣ ಕನ್ನಡ ಜನರ ವಿರೋಧದ ನಡುವೆಯೂ ಒತ್ತಾಸೆಯಿಂದ ನೀರೆರೆಯುತ್ತಾರೆ. ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸುವ ಕೆಲಸ ನಡೆದಾಗ ಕಾಕತಾಳೀಯ ಎನ್ನುವಂತೆ ದಕ್ಷಿಣ ಕನ್ನಡದ ಮೂಲದ ಡಿ.ವಿ.ಸದಾನಂದಗೌಡರೇ ಮುಖ್ಯಮಂತ್ರಿ­ಯಾಗಿದ್ದರು.

ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮಘಟ್ಟದ ಮೇಲ್ಭಾಗದ ಹಳ್ಳಗಳ ಪ್ರವಾಹದ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸುವ ‘ಎತ್ತಿನಹೊಳೆ’ ಎಂಬ ಹೊಸ ಯೋಜನೆಗೆ ಎರಡು ದಶಕಗಳ ಶಾಶ್ವತ ನೀರಾವರಿ ಹೋರಾಟ ನಿರ್ಲಕ್ಷಿಸಿ 2012ರಲ್ಲಿ ಬಿಜೆಪಿ ಸರ್ಕಾರ ಆಡಳಿತಾತ್ಮಕ ಮಂಜೂರಾತಿ ನೀಡುವ ಮೂಲಕ ಅಸ್ತಿಭಾರ ಹಾಕಿತು.

ಬಿಜೆಪಿ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಯೋಜನೆಯ ವರದಿಯನ್ನು ಪರಿಷ್ಕರಿಸಿತು. ಅಂದಾಜು ವೆಚ್ಚವೂ ಮೂರು ಪಟ್ಟು ದಾಟಿ ಏರಿತು. ಕಾಂಗ್ರೆಸ್‌ನ ಐದು ವರ್ಷಗಳ ಆಡಳಿತ ಮುಗಿಯಿತು. ನೀರು ಮಾತ್ರ ಬರಲಿಲ್ಲ. ಇದೀಗ ಹೋರಾಟಗಾರರು, ‘ತಮ್ಮ ಸ್ವಾರ್ಥಕ್ಕಾಗಿ ಮೊಯಿಲಿ ಅವರು ಬಿಜೆಪಿ ಮತ್ತ ಕಾಂಗ್ರೆಸ್ ಸರ್ಕಾರಗಳನ್ನು ಬಲಿ ಹಾಕಿದರು’ ಎಂದು ಆರೋಪಿಸುತ್ತಿದ್ದಾರೆ.

ಕಮಿಷನ್ ಹೊಡೆಯುವ ಯೋಜನೆ

ಇದೊಂದು ಅವೈಜ್ಞಾನಿಕ ಯೋಜನೆ. ರಾಜಕಾರಣಿಗಳಿಗೆ ಹಣ ಮಾಡುವ, ಪೈಪ್‌ಲೈನ್‌ ಖರೀದಿಯಲ್ಲಿ ಕಮಿಷನ್ ಹೊಡೆಯುವ, ಈ ಭಾಗದ ಜನರ ಮತ ಸೆಳೆಯುವ ಯೋಜನೆ. ವಾಸ್ತವದಲ್ಲಿ ಸರ್ಕಾರ ಹೇಳಿಕೊಂಡಷ್ಟು ನೀರು ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿಯೇ ಇಲ್ಲ. ಅಲ್ಲಿನ ಮಳೆ ಮಾಪನ ಮಾಡದೆ, ಸುಳ್ಳು ಅಂಕಿಸಂಖ್ಯೆಗಳನ್ನು ಜನರ ಮುಂದಿಟ್ಟು ಮರಳು ಮಾಡಲಾಗುತ್ತಿದೆ – ಮಳ್ಳೂರು ಹರೀಶ್, ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ

ಮೋಸ ಮಾಡುವ ಲಾಬಿ

ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಾರ್ವಜನಿಕರಿಗೆ ಮೋಸ ಮಾಡುವ ಲಾಬಿ ಇದು. ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆಯಾಗಿ ಎಷ್ಟು ವರ್ಷವಾಯ್ತು? ಈವರೆಗೆ ಪೈಪ್‌ಲೈನ್ ಮತ್ತು ನೀರು ಎಲ್ಲಿಯ ತನಕ ಬಂದಿದೆ? ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲು ಸರ್ಕಾರ ಮಾಡಿದ ತಂತ್ರವಿದು. ಯೋಜನೆಯ ಕೊನೆಯ ಪ್ರದೇಶವಾದ ನಮಗೆ ನೀರು ಸಿಗುವುದೇ ಇಲ್ಲ. ಆದರೂ ಸರ್ಕಾರ ಜಿಲ್ಲೆಗೆ ನಾಲ್ಕು ಟಿಎಂಸಿ ಅಡಿ ನೀರು ಹರಿಸುವುದಾಗಿ ಘೋಷಿಸಿದೆ – ಆಯೇಷಾ ಸುಲ್ತಾನ್, ಹೋರಾಟಗಾರ್ತಿಕಾಂಗ್ರೆಸ್ ಪಾಪದ ಕೂಸು

ಎತ್ತಿನಹೊಳೆ ಕಾಂಗ್ರೆಸ್ ಸರ್ಕಾರದ ಪಾಪದ ಕೂಸು. ಅಮಾಯಕ ಜನರು, ಮತದಾರರನ್ನು ವಂಚಿಸುವ ತಂತ್ರವಿದು. ನೀರೇ ಸಿಗದಿದ್ದರೂ 24 ಟಿಎಂಸಿ ಅಡಿ ನೀರು ಕೊಡುತ್ತೇವೆ ಎಂದು ಸರ್ಕಾರ ಹೇಳಿ ನಾಲ್ಕು ವರ್ಷಗಳು ಕಳೆದಿದೆ. ಈವರೆಗೆ ಯಾವ ನೀರು ಕೊಡಲಿಲ್ಲ. ಈ ಯೋಜನೆಯಲ್ಲಿ ಬಿಡುಗಡೆಯಾದ ಹಣವನ್ನು ಚುನಾವಣೆ ಖರ್ಚಿಗಾಗಿ ಬಳಸಿಕೊಳ್ಳಲಾಗುತ್ತಿದೆ – ರವಿಕುಮಾರ್, ಜೆಡಿಎಸ್ ಮುಖಂಡ

ಎರಡೇ ವರ್ಷಗಳಲ್ಲಿ ನೀರು ಬರುತ್ತೆ

ನಮ್ಮ ಸರ್ಕಾರ ಬಂದ ಮೇಲೆ ಸಿದ್ದರಾಮಯ್ಯ ಅವರು ಎತ್ತಿನಹೊಳೆಗೆ ಬಜೆಟ್‌ನಲ್ಲಿ ಹಣ ಒದಗಿಸಿದ್ದಾರೆ. ಕಾಮಗಾರಿ ಕೂಡ ನಡೆಯುತ್ತಿದೆ. ಎರಡು ವರ್ಷಗಳಲ್ಲಿ ನಮ್ಮ ಬಯಲುಸೀಮೆಗೆ ಎತ್ತಿನಹೊಳೆ ನೀರು ಬಂದೇ ಬರುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ – ಕೆ.ಎನ್.ಕೇಶವರೆಡ್ಡಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ

ಜನರು ಒಳಮರ್ಮ ಅರಿಯಲಿ

ಎತ್ತಿನಹೊಳೆ ಸಂಸದ ಮೊಯಿಲಿ ಅವರ ಸೃಷ್ಟಿ. ಅವರಿಗೆ ನೀರು ತರಬೇಕು ಎನ್ನುವ ಮನಸ್ಸಿದ್ದರೆ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೃಷ್ಣಾ ನದಿ ನೀರು ಮದನಪಲ್ಲಿವರೆಗೆ ಬರುತ್ತಿತ್ತು. ಆಗ ಕೇವಲ ₹ 500 ಕೋಟಿ ಖರ್ಚು ಮಾಡಿದ್ದರೆ ಅವಿಭಜಿತ ಕೋಲಾರ ಜಿಲ್ಲೆಗೆ ನೀರು ಹರಿಸಬಹುದಿತ್ತು. ಅದನ್ನು ಬಿಟ್ಟು ಇಷ್ಟು ದೊಡ್ಡ ಮೊತ್ತದ ಯೋಜನೆ ರೂಪಿಸಿರುವ ಒಳಮರ್ಮ ಜನರು ಅರಿತುಕೊಳ್ಳಬೇಕು – ಲಕ್ಷ್ಮೀಪತಿ, ಬಿಜೆಪಿ ವಕ್ತಾರ

**

ಎತ್ತಿನಹೊಳೆ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಲಿ. ಇಡೀ ಯೋಜನೆ ಜಂಟಿ ತಾಂತ್ರಿಕ ಮರು ಪರಿಶೀಲನೆ ನಡೆಸಲಿ. ಅಕ್ರಮಗಳ ತನಿಖೆ ನಡೆಸಲಿ –ಆರ್.ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.