ಭಾನುವಾರ, ಡಿಸೆಂಬರ್ 15, 2019
19 °C

ಸಂಗಣ್ಣ 'ಚೊಚ್ಚಲ ಮಗ'ನಿಗೆ ಕೊಪ್ಪಳ ಟಿಕೆಟ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗಣ್ಣ 'ಚೊಚ್ಚಲ ಮಗ'ನಿಗೆ ಕೊಪ್ಪಳ ಟಿಕೆಟ್‌?

ಕೊಪ್ಪಳ: 'ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ.ಚಂದ್ರಶೇಖರ ನನ್ನ ಚೊಚ್ಚಲ ಮಗನಿದ್ದಂತೆ. ಅವರಿಗೆ ಟಿಕೆಟ್‌ ಸಿಕ್ಕರೂ ಎಲ್ಲರೂ ಗೆಲುವಿಗಾಗಿ ಶ್ರಮಿಸಬೇಕು' ಎನ್ನುವ ಮೂಲಕ ಸಂಸದ ಸಂಗಣ್ಣ ಕರಡಿ ಅವರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಸಿ.ವಿ.ಚಂದ್ರಶೇಖರ್‌ ಅವರಿಗೆ ಸಿಕ್ಕಿರುವ ಬಗ್ಗೆ ಪರೋಕ್ಷ ಸುಳಿವು ನೀಡಿದರು.

ಭಾನುವಾರ ತಮ್ಮ ನಿವಾಸದ ಆವರಣದಲ್ಲಿ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿಯೂ ಇದೇ ಮಾತನ್ನು ಪದೇಪದೇ ಒತ್ತಿ ಹೇಳಿದ ಸಂಗಣ್ಣ, ಯಾರಿಗೇ ಟಿಕೆಟ್‌ ಸಿಕ್ಕರೂ ಪಕ್ಷಕ್ಕಾಗಿ ಶ್ರಮಿಸಬೇಕು. ಪಕ್ಷದ ವರಿಷ್ಠರು ಇಂದು ಅಥವಾ ನಾಳೆ ಅಭ್ಯರ್ಥಿಯ ಹೆಸರು ಪ್ರಕಟಿಸಲಿದ್ದಾರೆ ಎಂದು ಹೇಳಿದರು. 

ಸಿ.ವಿ.ಚಂದ್ರಶೇಖರ್‌ ಅವರನ್ನು ಟಿಕೆಟ್‌ ಖಚಿತತೆ ಬಗ್ಗೆ ಪ್ರಶ್ನಿಸಿದಾಗ 'ಇದ್ದರೂ ಇರಬಹುದು' ಎಂದು ಹೇಳಿ ಮಾತು ತೇಲಿಸಿದರು.

ಇಂದು (ಭಾನುವಾರ) ಸಂಜೆಯಿಂದ ನಗರದ ಈಶಾನ್ಯ ದಿಕ್ಕಿನಿಂದ ಪಕ್ಷದ ಪ್ರಚಾರ ಆರಂಭಿಸುವುದಾಗಿ ಸಂಗಣ್ಣ ಹೇಳಿದರು.

ಪರಣ್ಣ ಮುನವಳ್ಳಿ, ಕೆ.ವಿರೂಪಾಕ್ಷಪ್ಪಗೆ ಟಿಕೆಟ್‌: ವರಿಷ್ಠರ ಸಭೆಯಲ್ಲಿ ಚರ್ಚೆ

ಗಂಗಾವತಿಯಿಂದ ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರದಿಂದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ವರಿಷ್ಠರ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಸಿ.ವಿ.ಚಂದ್ರಶೇಖರ್‌ ಅವರಿಗೆ ಟಿಕೆಟ್‌ ಸಿಗಬೇಕು ಎಂದು ಒತ್ತಾಯಿಸಿ ಅವರ ಅಭಿಮಾನಿಗಳು ಇತ್ತೀಚೆಗೆ ನಗರದ ಬಸವೇಶ್ವರ ವೃತ್ತದಿಂದ ಗವಿಮಠದವರೆಗೆ ದೀಡು ನಮಸ್ಕಾರ ಸಲ್ಲಿಸಿ ಗಮನ ಸೆಳೆದಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಗದ್ದಲ

ಕಾರ್ಯಕರ್ತರ ಸಭೆಯ ಬಳಿಕ ತಮ್ಮ ನಿವಾಸದೊಳಗೆ ಪತ್ರಿಕಾಗೋಷ್ಠಿ ನಡೆಸುವಾಗಲೂ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಒಳನುಗ್ಗಿ ಗದ್ದಲ ಸೃಷ್ಟಿಸಿದರು. ಅವರನ್ನು ಸಮಾಧಾನಪಡಿಸಲು ಸಂಗಣ್ಣ ಸಹಿತ ಪಕ್ಷದ ಹಿರಿಯ ಮುಖಂಡರು ಪರದಾಡಬೇಕಾಯಿತು.

ತ್ವರಿತ ಸುಳಿವು ಏಕೆ?

'ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿ ಪ್ರಚಾರ ಆರಂಭಿಸಿದೆ. ಮಾತ್ರವಲ್ಲ ಬಿಜೆಪಿಯಲ್ಲಿ ಇನ್ನೂ ಹೆಸರೇ ಪ್ರಕಟವಾಗಿಲ್ಲ. ಯಾರು ಸ್ಪರ್ಧಿಸುತ್ತಾರೆ ಎಂಬುದೇ ಗೊತ್ತಿಲ್ಲ ಎಂದು ಹೇಳುತ್ತಾ ಕಾಂಗ್ರೆಸ್, ತನ್ನ (ಬಿಜೆಪಿ) ಕಾರ್ಯಕರ್ತರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಅಲ್ಲಲ್ಲಿ ಪಕ್ಷ ಸೇರ್ಪಡೆಯಂಥ ಕಾರ್ಯಕ್ರಮಗಳನ್ನು ಆಯೋಜಿಸಿ ಗೊಂದಲ ಸೃಷ್ಟಿಸುತ್ತಿದೆ. ಹೀಗಾಗಿ ಇಂದಿನಿಂದಲೇ ನಾವು ಪ್ರಚಾರ ಆರಂಭಿಸುತ್ತಿದ್ದೇವೆ. ಪಕ್ಷ ಬಿಟ್ಟು ಹೋದ ಕಾರ್ಯಕರ್ತರನ್ನು ಮರಳಿ ಕರೆತರುವ ಪ್ರಯತ್ನವೂ ನಡೆದಿದೆ' ಎಂದು ಸಂಗಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೊದಲು ಸಂಗಣ್ಣ ಹಾಗೂ ಅವರ ಪುತ್ರ ಅಮರೇಶ್‌ ಅವರ ಹೆಸರೇ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳ ಸಾಲಿನಲ್ಲಿ ಕೇಳಿಬರುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಂಗಣ್ಣ, 'ನಾನೂ ಮೊದಲಿನಿಂದಲೂ ಟಿಕೆಟ್‌ ನಿರಾಕರಿಸಿದ್ದೆ. ಈಗಲೂ ಅದೇ ನಿಲುವು ಇದೆ. ಆದರೆ, ಒಂದು ಹಂತದಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‌ ಅವರ ವಿರುದ್ಧ ಸೆಣಸಬೇಕಾದರೆ ನಾನೇ ಕಣಕ್ಕಿಳಿಯಬೇಕು ಎಂದು ಕೆಲವು ಕಾರ್ಯಕರ್ತರು ಒತ್ತಾಯಿಸಿದ್ದರು. ಈಗ ಅದೆಲ್ಲಾ ಮುಗಿದುಹೋದ ವಿಚಾರ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿದ್ದೇವೆ. ನನ್ನನ್ನು ಗೆಲ್ಲಿಸುವುದು ಸಾಧ್ಯವಾಗುವುದಾದರೆ ನನ್ನ ಸ್ಥಾನದಲ್ಲೇ ಸಿ.ವಿ.ಚಂದ್ರಶೇಖರ ನಿಂತರೂ ಏಕೆ ಗೆಲ್ಲಬಾರದು. ಅವರನ್ನು ನಾನೇ ಎಂದು ಭಾವಿಸಿ ಕಾರ್ಯಕರ್ತರು ಕೆಲಸ ಮಾಡಿ ಗೆಲ್ಲಿಸಬೇಕು' ಎಂದು ಕೋರಿದರು.

ಪ್ರತಿಕ್ರಿಯಿಸಿ (+)