ಶುಕ್ರವಾರ, ಡಿಸೆಂಬರ್ 13, 2019
17 °C
ಮುಂಡರಗಿ ಪಟ್ಟಣದಲ್ಲಿ ಬೀಡು ಬಿಟ್ಟಿರುವ ತಮಿಳುನಾಡು ಮೂಲದ ಕತ್ತೆ ಮಾಲೀಕರು

ಕತ್ತೆ ಹಾಲು ಬೇಕೇ ಕತ್ತೆ ಹಾಲು..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತ್ತೆ ಹಾಲು ಬೇಕೇ ಕತ್ತೆ ಹಾಲು..!

ಮುಂಡರಗಿ: ಕತ್ತೆ ಎಂದರೆ ಒಂದು ತಾತ್ಸಾರದ ಪ್ರಾಣಿ. ಬೇರೆಯವರಿಗೆ ಬೈಗುಳವಾಗಿಯೂ ಕತ್ತೆ ಪದ ಬಳಕೆಯಾಗುತ್ತದೆ. ಕತ್ತೆಗೂ ಒಂದು ಕಾಲ ಎಂಬಂತೆ ಈಗ ಕತ್ತೆ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಹಳ್ಳಿಗಳಲ್ಲಿ ಮಕ್ಕಳಿಗೆ ಒಮ್ಮೆಯಾದರೂ ಕತ್ತೆ ಹಾಲು ಕುಡಿಸಬೇಕೆಂಬ ನಂಬಿಕೆ ಇದೆ. ಹೀಗಾಗಿ ಕತ್ತೆ ಸಾಕಿದವರು ಕತ್ತೆಗಳನ್ನು ಹೊಡೆದುಕೊಂಡು, ಹಳ್ಳಿಗಳಿಗೆ ಬಂದು, ಹಾಲು ಹಿಂಡಿ ಕೊಡುತ್ತಾರೆ. ಅನೇಕರಿಗೆ ಇದು ಉಪಜೀವನದ ಮಾರ್ಗವೂ ಆಗಿದೆ. ಇತ್ತೀಚೆಗೆ ತಮಿಳುನಾಡಿನಿಂದ ಬಂದಿರುವ 30ಜನರ ತಂಡವು ಪಟ್ಟಣದಲ್ಲಿ ಬೀಡು ಬಿಟ್ಟಿದ್ದು, 30 ಕತ್ತೆಗಳೊಂದಿಗೆ, ಬೆಳಿಗ್ಗೆ 6ರಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ ಕತ್ತೆ ಹಾಲು ಮಾರಾಟ ಮಾಡುತ್ತಾರೆ.

ನಸುಕಿನಲ್ಲೇ ಮನೆ ಬಾಗಿಲ ಬಳಿ ಕತ್ತೆ ಮರಿ ಮತ್ತು ಹಾಲು ಕರೆಯುವ ಕತ್ತೆಯನ್ನು ಹೊಡೆದುಕೊಂಡು ಮಾಲೀಕರು ‘ಕತ್ತೆ ಹಾಲು ಬೇಕೇ....ಕತ್ತೆ ಹಾಲು....’ ಎಂದು ಕೂಗುತ್ತಾ ಸಂಚರಿಸುತ್ತಾರೆ.ಮನೆಯಿಂದ ಹೊರಬಂದ ಗ್ರಾಹಕರಿಗೆ ಕತ್ತೆ ಹಾಲಿನ ಮಹತ್ವ ವಿವರಿಸುತ್ತಾರೆ.

ಕತ್ತೆ ಹಾಲು ಸೇವಿಸುವುದರಿಂದ ಕೆಮ್ಮು, ಕಫ, ನಗಡಿ ಮಾಯವಾಗುತ್ತವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಯೌವನ ಮರುಕಳಿಸುತ್ತದೆ. ಕಾಮಾಲೆ ಬರುವುದಿಲ್ಲ ಹೀಗೆ ವಿವರಣೆ ಮುಂದುವರಿಯುತ್ತದೆ. ನಾಟಿ ವೈದ್ಯ ಪದ್ಧತಿ ಹಾಗೂ ಆಯುರ್ವೇದದಲ್ಲಿ ನಂಬಿಕೆಯುಳ್ಳವರು ಕತ್ತೆಹಾಲನ್ನು ಸೇವಿಸುತ್ತಾರೆ. ಗ್ರಾಹಕರ ಎದುರಲ್ಲೇ ತಾಜಾ ಹಾಲು ಹಿಂಡಿ ಗ್ರಾಹಕರಿಗೆ ನೀಡುತ್ತಾರೆ.

50 ಮಿ.ಲೀ ಕತ್ತೆ ಹಾಲಿಗೆ ₹100 ದರ. ಒಂದು ಗುಟ್ಟಿ (30ಮಿ.ಲೀ) ಹಾಲಿಗೆ ₹50 ಪಡೆಯುತ್ತಾರೆ. ‘ಕತ್ತೆ ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಒಂದ ಕತ್ತೆಯಿಂದ ಪ್ರತಿ ದಿನ ಸರಾಸರಿ ₹ 300 ರಿಂದ ₹400ಸಂಪಾದನೆಯಾಗುತ್ತದೆ. ₹150 ಕತ್ತೆ ಆಹಾರಕ್ಕೆ ಖರ್ಚಾಗುತ್ತದೆ. ಬಾಕಿ ಉಳಿಯುತ್ತದೆ’ ಎನ್ನುತ್ತಾರೆ ಕತ್ತೆ ಮಾಲೀಕ ಮಣಿ.

‘ಕತ್ತೆ ಹಾಲಿನ ಕುರಿತು ಹಲವು ಸಂಶೋಧನೆಗಳು ನಡೆದಿವೆ. ಆರ್ಯುವೇದ ವಿಜ್ಞಾನದ ಪ್ರಕಾರ ಇದು ಆರೋಗ್ಯಕ್ಕೆ ಒಳ್ಳೆಯದು’ ಎನ್ನುತ್ತಾರೆ ಪಟ್ಟಣದ ಖ್ಯಾತ ಆಯುರ್ವೇದ ವೈದ್ಯ ಡಾ.ಪಿ.ಬಿ.ಹಿರೇಗೌಡರ.

ಕಾಶೀನಾಥ ಬಿಳಿಮಗ್ಗದ

ಪ್ರತಿಕ್ರಿಯಿಸಿ (+)