ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ಹತ್ತು ಮಂದಿ ಸಾವು

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದ್ದು, ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ತಂದೆ ಮಗ ಸೇರಿ ಹತ್ತು ಮಂದಿ ಮೃತಪಟ್ಟಿದ್ದಾರೆ.

ಕಲಬುರ್ಗಿ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಹಲವೆಡೆ ಭಾನುವಾರ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ. ಯಾದಗಿರಿ ಜಿಲ್ಲೆಯಲ್ಲಿ ಐದು ಜನ ಮತ್ತು ರಾಯಚೂರಲ್ಲಿ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ.

ಶಹಾಪುರ ತಾಲ್ಲೂಕು ಶಾರದಹಳ್ಳಿಯಲ್ಲಿ ಹಣಮಂತ (44), ಅವರ ಪುತ್ರ ಭೀಮಣ್ಣ (14), ಸುರಪುರ ತಾಲ್ಲೂಕು ಪಿರಗಾರನದೊಡ್ಡಿಯಲ್ಲಿ ಮೌನೇಶ ಪಿರಗಾರ (12), ಯಾದಗಿರಿಯಲ್ಲಿ ಕುಮಾರ ಬಸವಲಿಂಗಪ್ಪ (32), ಗುರುಮಠಕಲ್‌ ತಾಲ್ಲೂಕು ಚಿಂತನಪಲ್ಲಿ ಗ್ರಾಮದಲ್ಲಿ ಬುಕ್ಕಪ್ಪ ಜಂಗಲಬನೆ (32) ಮತ್ತು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕು ಸಾಲಗುಂದಾದಲ್ಲಿ ಮಹಿಬೂಬಸಾಬ ರಾಜಾನಾಯಕ (19) ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಮ್ಮನಹಳ್ಳಿ ಗ್ರಾಮದ ಸತೀಶ ನಾರಾಯಣಪುರ (16), ಚಡಚಣ ತಾಲ್ಲೂಕಿನ ಬರಡೋಲದ ಅಡವಿ ವಸತಿಯ ಪ್ರತಿಭಾ ಹನುಮಂತ ಸಂಖ (8), ಪೂಜಾ ಈರಣ್ಣ ನೀಲಗಾರ (12) ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ನೀಲಗುಂದದ ಉಮೇಶ ಯಲ್ಲಪ್ಪ ಹಲಗಿ (38) ಸಿಡಿಲು ಬಡಿದು ಮೃತಪಟ್ಟವರು.

ವಿಜಯಪುರ, ಬಾಗಲಕೋಟೆ, ಗದಗ ಹಾಗೂ ಬಳ್ಳಾರಿ ಜಿಲ್ಲೆಯ ಅಲ್ಲಲ್ಲಿ ಬಿರುಸಿನ ಮಳೆಯಾಗಿದೆ.

ಹೊಸಪೇಟೆಯಲ್ಲಿ ಬಿರುಗಾಳಿ ಸಹಿತ ಮಳೆಗೆ, ಇಲ್ಲಿನ ಜಂಬುನಾಥಹಳ್ಳಿ ರಸ್ತೆಯ ಬುಡ್ಗ ಜಂಗಮ ಕಾಲೊನಿಯ 20ಕ್ಕೂ ಹೆಚ್ಚು ಗುಡಿಸಲುಗಳಿಗೆ ಹಾನಿಯಾಗಿದೆ. ಗಾಳಿಯ ರಭಸಕ್ಕೆ ತಗಡಿನ ಶೀಟ್‌ಗಳು ಹಾರಿಹೋಗಿದ್ದು, ಗುಡಿಸಲ್ಲಿಲ್ಲಿದ್ದ ಸಾಮಾನುಗಳು ಹಾಳಾಗಿವೆ. ತಾಲ್ಲೂಕಿನ ಹೊಸೂರು, ನಾಗೇನಹಳ್ಳಿ, ಮಲಪನಗುಡಿ, ಹೊಸಮಲಪನಗುಡಿ, ಕಡ್ಡಿರಾಂಪುರ, ಹಂಪಿಯಲ್ಲೂ ಮಳೆಯಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ, ಕುಳಗೇರಿ ಕ್ರಾಸ್‌ನಲ್ಲಿ ಹಾಗೂ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಸಾಧಾರಣ ಮಳೆಯಾಗಿದೆ.

ಸಿಂಧನೂರು ತಾಲ್ಲೂಕಿನ ಹಂಚಿನಾಳದಲ್ಲಿ ಒಣಗಲು ಹಾಕಿದ್ದ ಭತ್ತದ ಮೇಲೆ ಆಲಿಕಲ್ಲು ಮಳೆ ಸುರಿದಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ಸುತ್ತಮುತ್ತ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ. ಬಸವಣ್ಣ ಕ್ಯಾಂಪ್, ನಾಗನಕಲ್ಲು, ಪನ್ನಾಪುರ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ ಸುರಿದಿದ್ದು ನೂರಾರು ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಇದೇ ಪ್ರದೇಶದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ.

ಕುಷ್ಟಗಿ ತಾಲ್ಲೂಕಿನ ತೋಪಲಕಟ್ಟಿ, ವಣಗೇರಿ, ತಳುವಗೇರಾ, ಸಂಗನಾಳ ಮತ್ತಿತರೆಡೆ ಉತ್ತಮ ಮಳೆಯಾಗಿದೆ.

ಮಂಗಳೂರು ನಗರ, ಉಳ್ಳಾಲ, ಬಂಟ್ವಾಳ ಸಹಿತ ಕರಾವಳಿಯ ಹಲವೆಡೆ, ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ, ಕಡೂರು ಭಾಗಗಳಲ್ಲಿ ಮಳೆ ಸುರಿಯುತು.

ನರಸಿಂಹರಾಜಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಧ್ಯಾಹ್ನ ಗುಡುಗು ಸಹಿತ ಹದವಾದ ಮಳೆ ಸುರಿಯಿತು. ರಾವೂರು, ಲಿಂಗಾಪುರ, ಹಂತುವಾನಿ, ವರಕಟ್ಟೆ, ಬಿ.ಎಚ್.ಕೈಮರ, ವರ್ಕಾಟೆ ಗ್ರಾಮಗಳಲ್ಲೂ ಮಳೆ ಸುರಿದಿದೆ.

ಕೊಡಗು ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಉಡೋತ್‌, ಬೆಟ್ಟಗೇರಿ, ಆವಂದೂರು, ಪಾಲೂರು, ಅಪ್ಪಂಗಳ ವ್ಯಾಪ್ತಿಯಲ್ಲಿ ಒಂದು ತಾಸು ಜೋರು ಮಳೆ ಸುರಿದಿದೆ.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಆಲಿಕಲ್ಲು ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ. ಸಾಗರ ಮತ್ತು ಭದ್ರಾವತಿ ತಾಲ್ಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದ್ದು, ಶಿಕಾರಿಪುರ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ.

ಪುತ್ತೂರಿನಲ್ಲಿ 4 ಸೆಂ.ಮೀ. ಮಳೆ
ಬೆಂಗಳೂರು:
ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಿದೆ.

ಪುತ್ತೂರಿನಲ್ಲಿ 4 ಸೆಂ.ಮೀ, ಸುಬ್ರಹ್ಮಣ್ಯದಲ್ಲಿ 3, ಚಿಂಚೋಳಿ, ಸುಳ್ಯ, ಬೇಲೂರಿನಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ.

ಬಳ್ಳಾರಿಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಒಳನಾಡು ಹಾಗೂ ಕರಾವಳಿಯ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT