ಭಾನುವಾರ, ಡಿಸೆಂಬರ್ 15, 2019
17 °C
ಕಾಲುವೆ ಖಾಲಿ: ಎರಡೂ ಕೆರೆಗಳು ಭರ್ತಿ

ಬೇಸಿಗೆಯಲ್ಲಿ ನೀರಿನ ಕೊರತೆ ಇಲ್ಲ...

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬೇಸಿಗೆಯಲ್ಲಿ ನೀರಿನ ಕೊರತೆ ಇಲ್ಲ...

ಬಳ್ಳಾರಿ: ಈ ಬಾರಿಯ ಬೇಸಿಗೆ ಹಿಂದಿನ ವರ್ಷದಂತೆ ಅಲ್ಲ ಎಂಬುವುದು ನಗರದ ಜನರಿಗೆ ಈಗಾಗಲೇ ಗೊತ್ತಾಗಿದೆ. ಏಕೆಂದರೆ ಏಪ್ರಿಲ್‌ ಎರಡನೇ ವಾರ ಮುಗಿದ ಬಳಿಕವು ಎಂಟು ದಿನಕ್ಕೊಮ್ಮೆ ನಿಯಮಿತವಾಗಿ ನೀರು ಪೂರೈಕೆಯಾಗುತ್ತಿದೆ.

ಹಿಂದಿನ ಎರಡು ಬೇಸಿಗೆ ಕಾಲ ಈ ರೀತಿ ಇರಲಿಲ್ಲ. ‘ಕನಿಷ್ಠ 15 ದಿನಕ್ಕೊಮ್ಮೆ ನೀರು ಪೂರೈಕೆಯಾದರೆ ಅದೇ ನಮ್ಮ ಪುಣ್ಯ’ ಎಂಬ ನಿರೀಕ್ಷೆಯಲ್ಲಿ ಜನ ಕಾಯುತ್ತಿದ್ದರು. ಕೆಲವೊಮ್ಮೆ 20 ದಿನವಾದರೂ ಕೆಲವು ಬಡಾವಣೆಗಳಿಗೆ ನೀರು ಪೂರೈಕೆಯಾಗದೆ ಖಾಸಗಿ ಟ್ಯಾಂಕರ್‌ಗಳ ಮೇಲಿನ ಅವಲಂಬನೆ ಅನಿವಾರ್ಯವಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ.

ಹಿಂದಿನ ವರ್ಷ ನವೆಂಬರ್‌ನಲ್ಲಿ ಸಭೆ ನಡೆಸಿದ್ದ ನೀರಾವರಿ ಸಲಹಾ ಸಮಿತಿಯು ಬೆಳೆಗಳಿಗೆ ನೀರು ಹರಿಸುವುದಕ್ಕಿಂತಲೂ ಜನರಿಗೆ ಕುಡಿಯುವ ಸಲುವಾಗಿ ನೀರು ಸಂಗ್ರಹಿಸಿಡುವುದು ಮುಖ್ಯ ಎಂದು ಭಾವಿಸಿ, ನಿರ್ಧಾರ ಕೈಗೊಂಡ ಪರಿಣಾಮ ಇದು.

ಬಳ್ಳಾರಿ, ಸಿರುಗುಪ್ಪ ಮತ್ತು ಹೊಸಪೇಟೆಯ ಭತ್ತದ ಬೆಳೆಗಾರರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ. ಆದರೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ, ಜನರಿಗೆ ಕುಡಿಯುವ ನೀರಿನ ಪೂರೈಕೆಗೆ ಭಂಗ ಬಾರದ ರೀತಿಯಲ್ಲಿ ಸನ್ನಿವೇಶವನ್ನು ನಿರ್ವಹಿಸುತ್ತಿದೆ.

3 ತಿಂಗಳು ತೊಂದರೆ ಇಲ್ಲ:

ನಗರದಲ್ಲಿ ಸದ್ಯ ನೀರು ಪೂರೈಕೆ ಪರಿಸ್ಥಿತಿ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ, ‘ನಗರಕ್ಕೆ ನೀರು ಪೂರೈಸುವ ಮೋಕಾ ಮತ್ತು ಅಲ್ಲಪುರ ಕೆರೆಗಳಲ್ಲಿ ಸಾಕಷ್ಟು ನೀರಿದೆ. ಈಗಿನ ರೀತಿಯಲ್ಲೇ ಪೂರೈಸಿದರೆ ಮೂರು ತಿಂಗಳ ಕಾಲ ನೀರಿನ ಕೊರತೆ ಇರುವುದಿಲ್ಲ’ ಎಂದು ಹೇಳಿದರು.

‘ಅಲ್ಲೀಪುರ ಕೆರೆಯಲ್ಲಿ ಆರು ಮೀಟರ್‌ನಷ್ಟು ನೀರಿದೆ. ಅದನ್ನು ಕನಿಷ್ಠ 140 ದಿನ ಪೂರೈಸಬಹುದು. ಮೋಕಾ ಕೆರೆಯಲ್ಲಿರುವ ನೀರನ್ನು ಎರಡೂವರೆ ತಿಂಗಳವರೆಗೂ ಪೂರೈಸಬಹುದು. ಹೀಗಾಗಿ ಈ ಬಾರಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇಲ್ಲ’ ಎಂದರು.

ಕಾಲುವೆಯಲ್ಲಿ ನೀರಿಲ್ಲ:

‘ಮಾರ್ಚ್ ಅಂತ್ಯದಿಂದಲೇ ಕಾಲುವೆಗೆ ತುಂಗಭದ್ರಾ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಜುಲೈ ಕೊನೆಯವರೆಗೂ ಕಾಲುವೆಯಲ್ಲಿ ನೀರು ಬರುವುದು ಅನುಮಾನ. ಆದರೆ ನಮ್ಮ ಕೆರೆಗಳಲ್ಲಿ ನೀರಿದೆ. ಹೀಗಾಗಿ ನಗರದ ನಿವಾಸಿಗಳು ನಿರಾಳವಾಗಿರಬಹುದು’ ಎಂದರು.

ಕೊಳವೆಬಾವಿ: ಹಿಂದಿನ ವರ್ಷ ನೀರಿನ ಕೊರತೆ ತೀವ್ರವಾಗಿದ್ದ ಕಾರಣ ಹಳೆ ಕೊಳವೆಬಾವಿಗಳನ್ನು ದುರಸ್ತಿ ಮಾಡಿಸಲಾಗಿತ್ತು. ಕೆಲವೆಡೆ ಜಲ ಮರುಪೂರಣಗೊಳಿಸಲಾಗಿತ್ತು. ಹೊಸ ಕೊಳವೆಬಾವಿಗಳನ್ನೂ ಕೊರೆಸಲಾಗಿತ್ತು. ಹೀಗಾಗಿ ಒಂದು ವೇಳೆ ನೀರಿನ ಕೊರತೆ ಎದುರಾದರೂ ಸನ್ನಿವೇಶವನ್ನು ನಿಭಾಯಿಸಬಲ್ಲೆವು’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು

‘ನೀರು ಮಿತವಾಗಿ ಬಳಸಿ’

‘ಬೇಸಿಗೆಯಲ್ಲೂ ನೀರು ನಿಯಮಿತವಾಗಿ ಪೂರೈಕೆಯಾಗುತ್ತಿದೆ ಎಂದು ನಗರದ ಜನ ನೀರನ್ನು ಯಥೇಚ್ಚವಾಗಿ ಬಳಸಬಾರದು. ಮಿತವಾಗಿ, ಅಗತ್ಯಕ್ಕೆ ತಕ್ಕಷ್ಟು ನೀರನ್ನು ಮಾತ್ರ ಬಳಸಬೇಕು’ ಎಂದು ಆಯುಕ್ತರು ಮನವಿ ಮಾಡಿದರು.

**

ನಗರದಲ್ಲಿ ನೀರು ಪೂರೈಕೆ ವಿಚಾರದಲ್ಲಿ ಪಾಲಿಕೆಯು ಜನರಿಗೆ ತೊಂದರೆ ಉಂಟು ಮಾಡುವುದಿಲ್ಲ – ಬಿ.ಎಚ್.ನಾರಾಯಣಪ್ಪ, ಪಾಲಿಕೆ ಆಯುಕ್ತ.

**

 

ಪ್ರತಿಕ್ರಿಯಿಸಿ (+)