ಗುರುವಾರ , ಆಗಸ್ಟ್ 13, 2020
21 °C
ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ಚಾಲನೆ; ಮೂರು ಸಾವಿರಕ್ಕೂ ಹೆಚ್ಚು ಬೈಕ್‌ಗಳಲ್ಲಿ ಭಾಗಿ

ಲಿಂಗಾಯತರಿಂದ ಬೃಹತ್‌ ಬೈಕ್‌ ರ‍್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಾಯತರಿಂದ ಬೃಹತ್‌ ಬೈಕ್‌ ರ‍್ಯಾಲಿ

ಬೀದರ್: ಬಸವ ಜಯಂತಿ ಅಂಗವಾಗಿ ಲಿಂಗಾಯತರು ಹಾಗೂ ಬಸವಾಭಿಮಾನಿಗಳು ನಗರದಲ್ಲಿ ಭಾನುವಾರ ಬೈಕ್‌ ರ‍್ಯಾಲಿ ನಡೆಸಿದರು. ನಗರದ ನೆಹರೂ ಕ್ರೀಡಾಂಗಣದಿಂದ ಆರಂಭವಾದ ರ‍್ಯಾಲಿ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಮೈಲೂರು ಕ್ರಾಸ್‌, ಬಿ.ವಿ. ಭೂಮರೆಡ್ಡಿ ಕಾಲೇಜು, ಕುಂಬಾರವಾಡ ಕ್ರಾಸ್‌, ಗುಂಪಾ, ಮೈಲೂರು, ಮೈಲೂರು ಕ್ರಾಸ್‌, ಬೊಮ್ಮಗೊಂಡೇಶ್ವರ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕೆಇಬಿ ಕಚೇರಿ, ಕೇಂದ್ರ ಬಸ್‌ ನಿಲ್ದಾಣ, ಶಿವನಗರದ ಮೂಲಕ ತೆರಳಿ ಪಾಪನಾಶ ದೇವಸ್ಥಾನದ ಬಳಿ ಸಮಾರೋಪಗೊಂಡಿತು.

ಬಸವ ಉತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ರ‍್ಯಾಲಿಯಲ್ಲಿ 3 ಸಾವಿರಕ್ಕೂ ಬೈಕ್‌ಗಳಲ್ಲಿ ಬಸವ ಅಭಿಮಾನಿಗಳು ಭಾಗವಹಿಸಿದ್ದರು. ಯುವಕರು ಬಸವೇಶ್ವರ ಚಿತ್ರವಿದ್ದ ಕೇಸರಿ ಬಣ್ಣದ ಧ್ವಜಗಳನ್ನು ಹಿಡಿದು ಸಾಗಿದರು. ಬಹುತೇಕರು ಬಸವ ಜಯಂತಿ ಉತ್ಸವ ಎಂದು ಬರೆಯಲಾಗಿದ್ದ ಟೊಪ್ಪಿಗೆ ಧರಿಸಿದ್ದರು.

ಮಹಿಳೆಯರು ಕೇಸರಿ ಪೇಟಾ ಧರಿಸಿ ಗಮನ ಸೆಳೆದರು. ಕೆಲವು ಯುವತಿಯರು ಬೈಕ್‌ ಮೇಲೆ ಕುಳಿತು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.‘ಬಸವ ಜಯಂತಿ ಉತ್ಸವಕ್ಕೆ ಜಯವಾಗಲಿ’, ‘ಲಿಂಗಾಯತ ಸ್ವತಂತ್ರ ಧರ್ಮವಾಗಲಿ’ ಎಂದು ಘೋಷಣೆ ಕೂಗಿದರು.

ಇದಕ್ಕೂ ಮುಂಚೆ ನೆಹರೂ ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಮಿಠಾರೆ ಸ್ವಾಗತಿಸಿದರು.

ಸಮಿತಿಯ ಗೌರವಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಉಪಾಧ್ಯಕ್ಷರಾದ ಪ್ರಭುರಾವ್‌ ವಸ್ಮತೆ, ಶ್ರೀಕಾಂತ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಧನ್ನೂರ, ಗೌರವ ಸಲಹೆಗಾರ ಗುರುನಾಥ ಕೊಳ್ಳೂರು, ಚಂದ್ರಶೇಖರ ಪಾಟೀಲ ಗಾದಗಿ, ಸಂಚಾಲಕ ಸುರೇಶ ಚನಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಬಾಬು ವಾಲಿ, ಕೋಶಾಧ್ಯಕ್ಷ ರಜನೀಶ ವಾಲಿ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಶಕುಂತಲಾ ವಾಲಿ, ಅಧ್ಯಕ್ಷೆ ಕರುಣಾ ಶೆಟಕಾರ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ ಪಾಲ್ಗೊಂಡಿದ್ದರು.

**

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಬೀದರ್‌ನಲ್ಲಿ ಬೈಕ್‌ ರ‍್ಯಾಲಿ ನಡೆಸಲಾಗಿದೆ – ಸುರೇಶ ಚನಶೆಟ್ಟಿ,ಸಂಚಾಲಕ, ಬಸವ ಉತ್ಸವ ಸಮಿತಿ.

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.