ಭಾನುವಾರ, ಡಿಸೆಂಬರ್ 15, 2019
23 °C
2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲರೂ ಶಿಕ್ಷಿತರೇ...

ಪದವೀಧರ ಅಭ್ಯರ್ಥಿಗಳೇ ಹೆಚ್ಚು

ಕೆ.ಎಸ್. ಗಿರೀಶ್ Updated:

ಅಕ್ಷರ ಗಾತ್ರ : | |

ಪದವೀಧರ ಅಭ್ಯರ್ಥಿಗಳೇ ಹೆಚ್ಚು

ಚಾಮರಾಜನಗರ: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಚುನಾವಣೆ (2013)ಯಲ್ಲಿ ಅತ್ಯಂತ ಹೆಚ್ಚಿನ ಪದವೀಧರ ಅಭ್ಯರ್ಥಿಗಳು ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಇದಕ್ಕೆ ಪ್ರತಿಯಾಗಿ ಎಸ್ಸೆಸ್ಸೆಲ್ಸಿ ಪಾಸಾಗದ ಅತ್ಯಂತ ಹೆಚ್ಚಿನ ಅಭ್ಯರ್ಥಿಗಳು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಜಿಲ್ಲಾ ಕೇಂದ್ರವಾದ ಚಾಮರಾಜನಗರವೇ ಈ ವಿಚಾರದಲ್ಲಿ ಹಿಂದೆ ಬಿದ್ದಿತ್ತು.

ಹೌದು, ಜಿಲ್ಲಾ ಕೇಂದ್ರ ಎನಿಸಿದ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 14 ಮಂದಿ ಕಣದಲ್ಲಿದ್ದರು. ಇವರಲ್ಲಿ ಅರ್ಧದಷ್ಟು ಮಂದಿ ಪದವೀಧರರಾಗಿರಲಿಲ್ಲ. ಮೂವರು ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸವನ್ನೇ ಪಡೆದಿರಲಿಲ್ಲ. ಚಾಮರಾಜನಗರ ಬಿಟ್ಟರೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರು ಮಾತ್ರ ಎಸ್ಸೆಸ್ಸೆಲ್ಸಿವರೆಗೆ ಕಲಿಯದ ಅಭ್ಯರ್ಥಿ ಇದ್ದರು. ಉಳಿದಂತೆ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಲ್ಲರೂ ಎಸ್ಸೆಸ್ಸೆಲ್ಸಿ ಕಲಿತವರೇ ಆಗಿದ್ದರು.

ಚಾಮರಾಜನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ 14 ಮಂದಿಯ ಪೈಕಿ  5ನೇ ತರಗತಿವರೆಗೆ ಕಲಿತ ಇಬ್ಬರು ಹಾಗೂ 8ನೇ ತರಗತಿ ಪಾಸಾದ ಒಬ್ಬರು ಅಭ್ಯರ್ಥಿಯಾಗಿದ್ದರೆ, ಇಬ್ಬರು ಮಾತ್ರ ಎಸ್ಸೆ ಸ್ಸೆಲ್ಸಿವರೆಗೆ ಕಲಿತಿದ್ದರು. ಮೂವರು ಪಿಯು ಹಾಗೂ 4 ಮಂದಿ ಪದವೀಧರರಿದ್ದರು. ಇಬ್ಬರು ಸ್ನಾತಕೋತ್ತರ ಪದವಿ ಪಡೆದವರಿದ್ದರು.

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಒಟ್ಟು 10 ಮಂದಿ ಕಣದಲ್ಲಿದ್ದರು. ಇವರಲ್ಲಿ ಎ‌ಲ್ಲರೂ ಎಸ್ಸೆಸ್ಸೆಲ್ಸಿ ಪಡೆದವರೇ ಆಗಿದ್ದರು. ಎಸ್ಸೆಸ್ಸೆಲ್ಸಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ ಒಬ್ಬರು, ಪಿಯುವರೆಗೆ ಮಾತ್ರ ಕಲಿತ ಒಬ್ಬರು ಅಭ್ಯರ್ಥಿಯಾಗಿದ್ದರು. 5 ಮಂದಿ ಪದವೀಧರರು  ಹಾಗೂ ಮೂವರು ಸ್ನಾತಕೋತ್ತರ ಪದವಿ ಪಡೆದವರು ಅಭ್ಯರ್ಥಿಯಾಗಿದ್ದರು.

ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮವಾಗಿ ಕಣದಲ್ಲಿ ಉಳಿದವರ ಸಂಖ್ಯೆ 13. ಇವರಲ್ಲಿ ಒಬ್ಬರು ಮಾತ್ರ 8 ನೇ ತರಗತಿವರೆಗೆ ಕಲಿತವರು ಅಭ್ಯರ್ಥಿಯಾಗಿದ್ದರು. 6 ಮಂದಿ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಕಲಿತವರಿದ್ದರು. ಪಿಯುವರೆಗೆ ಮಾತ್ರ ಕಲಿತ ಒಬ್ಬರು, ತಲಾ ಇಬ್ಬರು ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು ಮತ್ತು ಪಿಎಚ್.ಡಿ ಪದವಿ ಪಡೆದ ಒಬ್ಬರು ಅಭ್ಯರ್ಥಿಯಾಗಿದ್ದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 10 ಮಂದಿ ಸ್ಪರ್ಧಿಸಿದ್ದರು. ಇವರಲ್ಲಿ ಒಬ್ಬರು ಮಾತ್ರ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಕಲಿತವರಿದ್ದರು. 5 ಮಂದಿ ಪದವೀಧರರು, ಮೂವರು ಸ್ನಾತಕೋತ್ತರ ಪದವಿ ಪಡೆದವರಿದ್ದರು.

ಶಾಸಕರಾಗಿ ಆಯ್ಕೆಯಾದವರ ಪೈಕಿ ಚಾಮರಾಜನಗರದ ಪುಟ್ಟರಂಗಶೆಟ್ಟಿ ಪದವೀಧರರಾಗಿದ್ದರೆ ಇವರ ಸಮೀಪದ ಪ್ರತಿಸ್ಪರ್ಧಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಸ್ನಾತ ಕೋತ್ತರ ಪದವೀಧರರಾಗಿದ್ದರು. ಗುಂಡ್ಲುಪೇಟೆಯಲ್ಲಿ 2013ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಎಚ್.ಎಸ್. ಮಹದೇವಪ್ರಸಾದ್ ಸ್ನಾತಕೋತ್ತರ ಪದವೀಧರರಾಗಿದ್ದರೆ, ಸಮೀಪದ ಪ್ರತಿಸ್ಪರ್ಧಿ ನಿರಂಜನಕುಮಾರ್ ಪದವೀಧರರಾಗಿದ್ದರು.

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಎಸ್.ಜಯಣ್ಣ ಹಾಗೂ ಅವರ ಸಮೀಪದ ಪ್ರತಿಸ್ಪರ್ಧಿ ಎನ್.ಮಹೇಶ್ ಸಹ ಸ್ನಾತಕೋತ್ತರ ಪದವೀಧರರಾಗಿದ್ದರು. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ನರೇಂದ್ರ ಸ್ನಾತಕೋತ್ತರ ಪದವೀಧರರಾಗಿದ್ದರೆ, ಇವರ ಸಮೀಪದ ಪ್ರತಿಸ್ಪರ್ಧಿ ಪರಿಮಳ ನಾಗಪ್ಪ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಕಲಿತವರಾಗಿದ್ದರು.

 

ಪ್ರತಿಕ್ರಿಯಿಸಿ (+)