4
‘ಭದ್ರಾ ಮೇಲ್ದಂಡೆ ಯೋಜನೆ: ವೈಜ್ಞಾನಿಕ ವರದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ

‘ನೀರಿಗೆ ಕನ್ನ ಹಾಕಿದವರಿಗೆ ಸನ್ಮಾನ, ಹಾರ–ತುರಾಯಿ’

Published:
Updated:
‘ನೀರಿಗೆ ಕನ್ನ ಹಾಕಿದವರಿಗೆ ಸನ್ಮಾನ, ಹಾರ–ತುರಾಯಿ’

ಹಿರಿಯೂರು: ನಮ್ಮ ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಬರಬೇಕಿದ್ದ ನೀರಿಗೆ ಕನ್ನ ಹಾಕಿದ ಹೊಸದುರ್ಗದ ಶಾಸಕರನ್ನು, ತುಮಕೂರು ಜಿಲ್ಲಾ ಸಚಿವರನ್ನು ಕರೆಸಿ ಹಾರ–ತುರಾಯಿ ಹಾಕಿ ಸನ್ಮಾನ ಮಾಡಿ, ಅವರಿಂದ ಭಾಷಣ ಮಾಡಿಸುತ್ತಿರುವುದು ನೋವಿನ ಸಂಗತಿ ಎಂದು ನಗರಸಭೆ ಮಾಜಿ ಸದಸ್ಯ ಜಿ. ಧನಂಜಯಕುಮಾರ್ ಹೇಳಿದರು.

ತಾಲ್ಲೂಕಿನ ಕಸವನಹಳ್ಳಿಯ ‘ನಮ್ಮ ಗ್ರಂಥಾಲಯ’ದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಭದ್ರಾ ಮೇಲ್ದಂಡೆ ಯೋಜನೆ, ವೈಜ್ಞಾನಿಕ ವರದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಬಳಿ ಹೊಸದುರ್ಗ ಪಟ್ಟಣಕ್ಕೆ ಕುಡಿಯುವ ನೀರಿಗೆಂದು ವೇದಾವತಿ ನದಿಗೆ ಅಡ್ಡಲಾಗಿ 1 ಟಿಎಂಸಿ ಸಾಮರ್ಥ್ಯದ ಪಿಕ್‌ಅಪ್ ನಿರ್ಮಿಸಲಾಗಿತ್ತು. ಇದು ಸಾಲದು ಎಂಬಂತೆ ಅಲ್ಲಿನ ಶಾಸಕರು ಇದೇ ನದಿಗೆ ಕೆಲ್ಲೋಡು ಮೇಲ್ಭಾಗದಲ್ಲಿ ಮೂರು ಪಿಕ್‌ಅಪ್ ಹಾಗೂ

₹ 350 ಕೋಟಿ ವೆಚ್ಚದಲ್ಲಿ ನೂರಾರು ಚೆಕ್ ಡ್ಯಾಂ ನಿರ್ಮಿಸಿರುವುದಾಗಿ ಹಾಲುರಾಮೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ಹೇಳಿಕೊಂಡಿದ್ದಾರೆ ಎಂದು ಟೀಕಿಸಿದರು.

ಮಳೆಗಾಲದಲ್ಲಿ ವೇದಾವತಿ ನದಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೇರವಾಗಿ ಹರಿಸುವ 5 ಟಿಎಂಸಿ ನೀರು ವಾಣಿವಿಲಾಸ ಜಲಾಶಯಕ್ಕೆ ಬರುತ್ತದೆ. ಹಿರಿಯೂರಿಗೆ ಸಿಂಹಪಾಲು ಸಿಗುತ್ತದೆ ಎಂದು ಅಲ್ಲಿನ ಶಾಸಕರು ಜನರ ಕಿವಿಗೆ ಹಲವು ಬಾರಿ ಹೂವು ಇಟ್ಟು ಹೋಗಿದ್ದಾರೆ. 5 ಟಿಎಂಸಿ ನೀರು ಅವರು ನಿರ್ಮಿಸಿರುವ ಪಿಕ್‌ಅಪ್ ಗಳನ್ನು ಹಾರಿಕೊಂಡು ಬರುತ್ತದೆಯೇ? ತುಂಬಿದ ನಂತರ ಬರುತ್ತದೆಯೇ? ಎಂಬ ವಿಚಾರದ ಬಗ್ಗೆ ಶಾಸಕ ಡಿ. ಸುಧಾಕರ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಪುಸ್ತಕದ ಲೇಖಕ ಕಸವನಹಳ್ಳಿ ರಮೇಶ್ ಮಾತನಾಡಿ, ‘ಚುನಾವಣೆಗಳಲ್ಲಿ ವ್ಯಾಪಾರಿಗಳ ಬದಲಿಗೆ ರಾಜಕಾರಣಿಗಳನ್ನು ಗೆಲ್ಲಿಸಬೇಕು. ವ್ಯಾಪಾರಿಗಳು ಕೇವಲ ಲಾಭವನ್ನು, ಕುಟುಂಬದ ಹಿತವನ್ನು ನೋಡುತ್ತಾರೆ. ಯೋಜನೆ ತಡವಾಗುವುದರ ಹಿಂದಿನ ವಾಸ್ತವಾಂಶವನ್ನು ಈ ಕೃತಿಯಲ್ಲಿ ಬಿಚ್ಚಿಡಲಾಗಿದೆ. ಸಿಸಿ ರಸ್ತೆ, ಸಮುದಾಯ ಭವನ ನಿರ್ಮಿಸಿದರೆ ಜನರ ಬದುಕು ಹಸನಾಗದು. ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ನೀರಾವರಿ ಯೋಜನೆ ಜಾರಿಗೆ ಮುಂದಾಗಬೇಕು. ಭದ್ರಾ ಯೋಜನೆ ಜನರ ಹೋರಾಟದ ಫಲ’ ಎಂದು ಹೇಳಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮಾತನಾಡಿ, ‘ಭದ್ರಾ ಮೇಲ್ದಂಡೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಕೊಟ್ಟ ಕೀರ್ತಿ ಎಸ್.ಎಂ. ಕೃಷ್ಣ ಅವರಿಗೆ ಸಲ್ಲುತ್ತದೆ. ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದಾಗ ₹ 500 ಕೋಟಿ ಹಣ ಮೀಸಲಿಡುವ ಮೂಲಕ ಯೋಜನೆಗೆ ಚಾಲನೆ ಸಿಕ್ಕಿತು. ಸಿದ್ದರಾಮಯ್ಯನವರು 2017ರಲ್ಲಿ ಯೋಜನೆ ಮುಗಿಸುತ್ತೇವೆ ಎಂದು ಭರವಸೆ ನೀಡಿ ಮಾತಿಗೆ ತಪ್ಪಿದರು. ನೀರಿಗಾಗಿ ಹೋರಾಟ ಮಾಡಿದ್ದು ನಾವು. ಆದರೆ ಸಚಿವ ಜಯಚಂದ್ರ ನಮ್ಮ ಪಾಲಿನ ನೀರನ್ನು ಚಿಕ್ಕನಾಯಕನಹಳ್ಳಿಗೆ ಒಯ್ದರು. ನಮ್ಮ ಶಾಸಕರು, ಸಂಸದರು, ಸಚಿವರು ಮೌನವಾಗಿದ್ದರ ಫಲ ನಾವು ಅನ್ಯಾಯಕ್ಕೆ ಒಳಗಾದೆವು’ ಎಂದು ಹೇಳಿದರು.

ಪ್ರಗತಿಪರ ರೈತ ಆಲೂರು ರವೀಂದ್ರ ಮಾತನಾಡಿ, ‘ತಾಲ್ಲೂಕಿನಲ್ಲಿ 12,500 ತೆಂಗಿನ ಮರಗಳು ಒಣಗಿವೆ. ಅದಕ್ಕಿಂತ ಹೆಚ್ಚು ಅಡಿಕೆ ನಾಶವಾಗಿದೆ. ಈಗ ನಡೆಯಲಿರುವ ಚುನಾವಣೆಯಲ್ಲಿ ಸಿಸಿ ರಸ್ತೆ, ಭವನಗಳನ್ನು ನಿರ್ಮಿಸಿ ಕಮಿಷನ್ ಹೊಡೆಯುವವರ ಬದಲಿಗೆ, ನೀರಾವರಿ ಯೋಜನೆಗಳ ಜಾರಿಗೆ ಆಸಕ್ತಿ ಇರುವವರನ್ನು ಆಯ್ಕೆ ಮಾಡಿಕೊಳ್ಳಬೇಕು. 35 ಕಿ.ಮೀ. ದೂರ ಕ್ರಮಿಸುವ ವೇದಾವತಿ ಮತ್ತು ಸುವರ್ಣಮುಖಿ ನದಿಗಳಿಗೆ ಕನಿಷ್ಠ 5 ಕಿ.ಮೀ.ಗೆ ಒಂದರಂತೆ ಪಿಕ್ ಅಪ್ ನಿರ್ಮಿಸಿ ನೀರನ್ನು ಹಿಡಿದಿಡಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಡಿವೈಎಸ್ಪಿ ಬಿ. ರಾಮಚಂದ್ರಪ್ಪ ಮಾತನಾಡಿ, ‘ಕಸವನಹಳ್ಳಿ ಸಮೀಪ ರೈತರೆಲ್ಲ ಸೇರಿ ಹಣ ಹಾಕಿ ವೇದಾವತಿ ನದಿಗೆ ನಿರ್ಮಿಸಿದ್ದ ಒಡ್ಡನ್ನು ಅಧಿಕಾರಸ್ಥರ ಹಿಂಬಾಲಕರು ಮರಳು ದೋಚಲು ನೆಲಸಮ ಮಾಡಿದ್ದಾರೆ. ಒಡ್ಡು ನಿರ್ಮಿಸಿದ್ದರಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಿತ್ತು. ದುಷ್ಟರು ಸಂಹಾರ ಮಾಡಿದ್ದರೂ ಮತ್ತೆ ಅದನ್ನು ನಿರ್ಮಿಸುವ ಮೂಲಕ ಸಾತ್ವಿಕ ಉತ್ತರ ನೀಡುತ್ತೇವೆ. ಯಗಚಿ ನದಿಯನ್ನು ವೇದಾವತಿ ನದಿಗೆ ಜೋಡಿಸುವ ಕಾರ್ಯ ಮಾಡಿದ್ದರೆ 40 ವರ್ಷದ ಹಿಂದೆಯೇ ನಮ್ಮ ಜಲಾಶಯ ತುಂಬುತ್ತಿತ್ತು. ನೀರಾವರಿ ಬಗ್ಗೆ ನಮ್ಮ ಜನಪ್ರತಿನಿಧಿಗಳ ಅನಾದರ ಬೇಸರ ತರಿಸಿದೆ’ ಎಂದರು.

ನಿವೃತ್ತ ಎಂಜಿನಿಯರ್ ಯಳನಾಡು ಜಗನ್ನಾಥ್, ಚಳ್ಳಕೆರೆ ತಿಪ್ಪೇಸ್ವಾಮಿ, ಡಾ.ಸಿಎಚ್. ರಾಯ್ ಮಾತನಾಡಿದರು. ಎಂ.ಟಿ. ಸುರೇಶ್, ನಿವೃತ್ತ ಶಿಕ್ಷಕ ರಾಮಚಂದ್ರಪ್ಪ, ಆಲೂರು ಕಾಂತರಾಜ್, ಚಾಂದ್ ಪೀರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry