ಭಾನುವಾರ, ಡಿಸೆಂಬರ್ 15, 2019
25 °C

ಹಣ ಮುಖ್ಯವಾಯಿತು, ನಿಷ್ಠಾವಂತರು ಬೇಡವಾದರೆ?: ಮಾಜಿ ಶಾಸಕ ಎನ್.ಸಂಪಂಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣ ಮುಖ್ಯವಾಯಿತು, ನಿಷ್ಠಾವಂತರು ಬೇಡವಾದರೆ?: ಮಾಜಿ ಶಾಸಕ ಎನ್.ಸಂಪಂಗಿ

ಚಿಕ್ಕಬಳ್ಳಾಪುರ: ‘ಬಾಗೇಪಲ್ಲಿ ಕ್ಷೇತ್ರದಲ್ಲಿ 30 ವರ್ಷಗಳಿಂದ ಕಾಂಗ್ರೆಸ್‌ಗೆ ನಿಷ್ಠೆಯಿಂದ ದುಡಿದು ಪಕ್ಷ ಸಂಘಟಿಸಿದ ನನಗೆ ಇವತ್ತು ನಿಜವಾಗಿ ಅನ್ಯಾಯವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿದವರಿಗೆ (ಎಸ್.ಎನ್.ಸುಬ್ಬಾರೆಡ್ಡಿ) ಇವತ್ತು ಮಣೆ ಹಾಕಿ ಟಿಕೆಟ್ ನೀಡುವ ಕೆಲಸ ಮಾಡಿದ್ದಾರೆ. ವರಿಷ್ಠರಿಗೆ ಹಣ ಮುಖ್ಯವಾಯಿತು. ನಿಷ್ಠಾವಂತರು ಬೇಡವಾಯಿತೆ’ ಎಂದು ಮಾಜಿ ಶಾಸಕ ಎನ್.ಸಂಪಂಗಿ ಖಾರವಾಗಿ ಪ್ರಶ್ನಿಸಿದರು. 

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಪಂಗಿ ಅವರು ಟಿಕೆಟ್ ಕೈತಪ್ಪಿದ್ದಕ್ಕೆ ನಗರದಲ್ಲಿ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ವರಿಷ್ಠರು ಮತ್ತು ಸಂಸದ ವೀರಪ್ಪ ಮೊಯಿಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘1998ರಲ್ಲಿ ಸಿಪಿಎಂ ವಿರುದ್ಧ ಗೆದ್ದ ಬಳಿಕ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲ್ಲೂಕು ಪಂಚಾಯಿತಿ ವರೆಗೆ ಕಾಂಗ್ರೆಸ್ ಕಟ್ಟಿಕೊಂಡು ಬಂದೆವು. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ  ಮತ್ತು ರಾಹುಲ್ ಗಾಂಧಿ ಜತೆ ಕೆಲಸ ಮಾಡಿದವರು ನಾವು. ಕೆಳ ಹಂತದಿಂದ ಬೆಳೆಯುತ್ತ ನಾನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೂಡ ಕೆಲಸ ಮಾಡಿರುವೆ. ವರಿಷ್ಠರು ಇದನ್ನೆಲ್ಲ ಹೈಕಮಾಂಡ್ ಗಮನಕ್ಕೆ ತರದೆ, ದೊಡ್ಡ ವ್ಯಾಪಾರ ಮಾಡಿಕೊಂಡು ಕಾಂಗ್ರೆಸ್ ಕಟ್ಟುವ ಕೆಲಸ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ಮಂಗಳೂರಿನಲ್ಲಿ ಮೂರು ಬಾರಿ ಸೋತಿದ್ದ ವೀರಪ್ಪ ಮೊಯಿಲಿ ಅವರು 2009ರಲ್ಲಿ ಈ ಭಾಗದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸುವುದಾಗಿ ನನ್ನನ್ನು ಕೇಳಿಕೊಂಡಾಗ ಕಾಂಗ್ರೆಸ್ ಉಳಿಸಬೇಕು ಎನ್ನುವ ಕಾರಣಕ್ಕೆ ಅವರಿಗೆ ಸಹಕಾರ ನೀಡಿದೆವು. ಆಗ ಅನೇಕ ಸ್ಥಳೀಯ ಮುಖಂಡರು ಮೊಯಿಲಿ ಅವರಿಗೆ ವಿರುದ್ಧವಾಗಿದ್ದರು. ಆದರೂ ನಾವು ಮೊಯಿಲಿ ಅವರಿಗಾಗಿ ದುಡಿದೆವು. ಬಾಗೇಪಲ್ಲಿ ಕ್ಷೇತ್ರದಲ್ಲಿ ಅವರಿಗೆ 26 ಸಾವಿರ ಮತಗಳನ್ನು ಕೊಟ್ಟೆವು’ ಎಂದು ತಿಳಿಸಿದರು.

‘ಇಲ್ಲಿಂದ ಲೋಕಸಭೆಗೆ ಆಯ್ಕೆಯಾದ ಮೊಯಿಲಿ ಅವರು ಕೇಂದ್ರದಲ್ಲಿ ಸಚಿವರಾದರು. ಆ ವೇಳೆ ಅವರೇ 14 ವರ್ಷ ಅಜ್ಞಾತವಾಸದಲ್ಲಿ ಇದ್ದವನನ್ನು ಕರೆದುಕೊಂಡು ಸಂಪಂಗಿ ರಾಜಕೀಯ ಪುರ್ನಜನ್ಮ ಕೊಟ್ಟರು ಎಂದು ಹೇಳಿಕೊಂಡಿದ್ದರು. ಇವತ್ತು ಅವರು ಏನು ಕೆಲಸ ಮಾಡಿದ್ದಾರೆ? ನಾವು ಇಲ್ಲದಿದ್ದರೆ ಮೊಯಿಲಿ ಅವರು ಇಲ್ಲಿ ಬಂದು ಲೋಕಸಭೆ ಸದಸ್ಯರಾಗುತ್ತಿದ್ದರೆ? ಬಹಳ ನೋವಾಗುತ್ತಿದೆ’ ಎಂದು ಬೇಸರ ಹೊರಹಾಕಿದರು.

‘ಈವರೆಗೆ ಮೊಯಿಲಿ ಅವರಿಗೆ ತೊಂದರೆಯಾಗದಂತೆ ನಡೆದುಕೊಂಡಿರುವೆ. ಅವರಿಗೆ ಏನು ಅನ್ಯಾಯ ಮಾಡಿರುವೆ? ನನ್ನ ಮೇಲೆ ಭ್ರಷ್ಟಾಚಾರದ ಆರೋಪಗಳೆನಾದರೂ ಇವೆಯಾ? ನಮ್ಮಂತಹ ನಿಷ್ಠಾವಂತ ಕಾಂಗ್ರೆಸಿಗರನ್ನು ಬಾವಿಗೆ ದೂಡುವ ಕೆಲಸ ಮಾಡಬಾರದು. ಏಕೆಂದರೆ ನಮ್ಮನ್ನೇ ನಂಬಿರುವವರು ಬಹಳಷ್ಟು ಜನರಿದ್ದಾರೆ’ ಎಂದು ಹೇಳಿದರು.

‘ವೀರಪ್ಪ ಮೊಯಿಲಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ನಾಯಕರು. ಆದರೆ ಈ ಭಾಗದಲ್ಲಿ ಒಬ್ಬೇ ಒಬ್ಬ ಹಿಂದುಳಿದ ವರ್ಗದವರಿಗೆ ಟಿಕೆಟ್ ಕೊಡಲಿಲ್ಲ. ಇಂತಹ ಅನ್ಯಾಯವಾದರೂ ಮೊಯಿಲಿ ಅವರು ಕಣ್ಮುಚ್ಚಿಕೊಂಡು ಬೇರೆಯವರಿಗೆ ಟಿಕೆಟ್ ಕೊಡಿಸುತ್ತಾರೆ. ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಸಹಕಾರ ನೀಡಿದ್ದಕ್ಕೆ ನಮಗೆ ಈ ರೀತಿ ಫಲಿತಾಂಶ ಕೊಟ್ಟಿದ್ದಾರೆ’ ಎಂದು ಕಿಡಿಕಾರಿದರು.

‘ವರಿಷ್ಠರಿಗೆ ಇನ್ನೂ ನಾಲ್ಕೈದು ದಿನಗಳು ಕಾಲಾವಕಾಶವಿದೆ. ಕಾಂಗ್ರೆಸ್‌ನಲ್ಲಿ ಕೊನೆಯ ಗಳಿಗೆ ವರೆಗೆ ಬಿ.ಫಾರಂ ಬದಲಾಯಿಸಿ ಕೊಡುತ್ತಾರೆ. ನನಗೇನಾದರೂ ಟಿಕೆಟ್ ಕೊಡದಿದ್ದರೆ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಡೆ ತೀರ್ಮಾನಿಸುತ್ತೇನೆ. 1999ರಲ್ಲಿ ಕೂಡ ಜಾಲಪ್ಪ ಅವರು ನನಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದರು. ಆದರೆ ಕಾರ್ಯಕರ್ತರು ನನ್ನ ಕೈಬಿಡಲಿಲ್ಲ. ಈ ಬಾರಿ ಕೂಡ ಟಿಕೆಟ್ ನೀಡದಿದ್ದರೆ ಅದೇ ಸ್ಥಿತಿ ಉದ್ಭವಿಸುತ್ತದೆ’ ಎಂದರು. ಈ ವೇಳೆ ಸಂಪಂಗಿ ಬೆಂಬಲಿಗರು ವೀರಪ್ಪ ಮೊಯಿಲಿ ಅವರ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಕ್ರಿಯಿಸಿ (+)