ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಧಿಕಾರದ ಅಟ್ಟ’ಕ್ಕೇರಲು ಸಕ್ಕರೆ ಕಾರ್ಖಾನೆ ಏಣಿ!

Last Updated 16 ಏಪ್ರಿಲ್ 2018, 19:48 IST
ಅಕ್ಷರ ಗಾತ್ರ

– ವೆಂಕಟೇಶ್ ಜಿ.ಎಚ್.

ಬಾಗಲಕೋಟೆ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೃಷ್ಣಾ ತೀರದಲ್ಲಿ ಸಕ್ಕರೆ ಲಾಬಿ ಸದ್ದು ಮಾಡುತ್ತಿದೆ. 70ರ ದಶಕದಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ಪಾತ್ರದಲ್ಲಿ ನೀರಾವರಿ ಸೌಲಭ್ಯ ಹೆಚ್ಚಾದ ನಂತರ ಕಬ್ಬು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳು ಪೈಪೋಟಿಯಲ್ಲಿ ತಲೆ ಎತ್ತಿವೆ. ಜೊತೆಗೆ ರಾಜಕಾರಣದಲ್ಲೂ ‘ಪ್ರಭಾವಿ’ ಪಾತ್ರ ವಹಿಸಿವೆ.

ಜಿಲ್ಲೆಯ 13 ಸಕ್ಕರೆ ಕಾರ್ಖಾನೆಗಳ ಪೈಕಿ 10 ಕಾರ್ಖಾನೆಗಳ ಆಡಳಿತ ಚುಕ್ಕಾಣಿ ಪ್ರಮುಖ ರಾಜಕೀಯ ಮುಖಂಡರ ಹಿಡಿತದಲ್ಲಿದೆ. ಅವರಲ್ಲಿ ಬಹುತೇಕರು ಈ ಬಾರಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಿಂದ ಕಣಕ್ಕಿಳಿಯಲಿದ್ದಾರೆ. ಕಾರ್ಖಾನೆ ಷೇರುದಾರರು, ಸಿಬ್ಬಂದಿ ಹಾಗೂ ಕಬ್ಬು ಪೂರೈಸುವ ರೈತರೇ ಇವರಿಗೆ ಪ್ರಮುಖ ಮತ ಬ್ಯಾಂಕ್.

ಮೊದಲ ಚುನಾವಣೆಯಲ್ಲೇ ನಂಟು: ಸಕ್ಕರೆ ಉದ್ಯಮ ಹಾಗೂ ರಾಜಕಾರಣದ ನಂಟು, ಜಿಲ್ಲೆಯಲ್ಲಿ 1952ರ ಚುನಾವಣೆಯಿಂದಲೇ ಕಾಣಸಿಗುತ್ತದೆ. ಬೀಳಗಿ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದ (1952–1972) ಯಡಹಳ್ಳಿಯ ಆರ್.ಎಂ.ದೇಸಾಯಿ, ಬೆಳಗಾವಿ ಜಿಲ್ಲೆ ಅಥಣಿ ಬಳಿ 1945ರಲ್ಲಿ ಆರಂಭವಾದ ಉಗಾರ ಸಕ್ಕರೆ ಕಾರ್ಖಾನೆ ನಿರ್ದೇಶಕರಾಗಿದ್ದರು. ಇದು ಉತ್ತರ ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆ. 1972ರಲ್ಲಿ ಮುಧೋಳ ತಾಲ್ಲೂಕು ಸಮೀರವಾಡಿಯ ಸೋಮಯ್ಯ ಶುಗರ್ಸ್ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ತಲೆಯೆತ್ತಿದವು. ಅವುಗಳ ಸ್ಥಾಪನೆಯಲ್ಲಿ ರಾಜಕಾರಣಿಗಳೇ ಮುಂಚೂಣಿಯಲ್ಲಿದ್ದಾರೆ.

ಜಿಲ್ಲೆಯ ಪ್ರಮುಖರಾದ ಜೆ.ಟಿ.ಪಾಟೀಲ, ಶಾಮನೂರು ಮಲ್ಲಿಕಾರ್ಜುನ, ಮುರುಗೇಶ ನಿರಾಣಿ, ಎಸ್‌.ಆರ್‌.ಪಾಟೀಲ, ಶಿವಕುಮಾರ ಮಲಘಾಣ, ಸಿದ್ದು ನ್ಯಾಮಗೌಡ, ಬಿ.ಬಿ.ಚಿಮ್ಮನಕಟ್ಟಿ ಮುಂತಾದವರೆಲ್ಲರೂ ಸಕ್ಕರೆ ಕಾರ್ಖಾನೆಗಳ ಒಡೆಯರು ಅಥವಾ ಅವುಗಳೊಂದಿಗೆ ನಂಟು ಹೊಂದಿದವರು.

ಉದ್ಯಮ ವಲಯಕ್ಕೆ ಸರ್ಕಾರ ನಿಗದಿಪಡಿಸಿರುವ ಸಾಮಾಜಿಕ ಹೊಣೆಗಾರಿಕೆಯೇ (ಸಿಎಸ್‌ಆರ್‌) ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲು ವೇದಿಕೆ ಆಗಿದೆ. ಆರೋಗ್ಯ ಶಿಬಿರ, ವೃತ್ತಿ ತರಬೇತಿ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯದಂತಹ ಮೂಲ ಸೌಕರ್ಯ ಕಲ್ಪಿಸುವಂತಹ ಸಾಮಾಜಿಕ ಚಟುವಟಿಕೆಗಳ ಮೂಲಕ ಅವರು ಜನರ ಸಂಪರ್ಕಕ್ಕೆ ಬರುತ್ತಾರೆ. ಅದಕ್ಕಾಗಿ ಫೌಂಡೇಷನ್‌, ಟ್ರಸ್ಟ್‌, ಸೊಸೈಟಿ ಹೆಸರಿನ ಸಂಸ್ಥೆಗಳನ್ನು ರಚಿಸಿಕೊಂಡಿದ್ದಾರೆ. ಕ್ರಮೇಣ ಅದೇ ಒಡನಾಟವನ್ನು ರಾಜಕೀಯ ಬೆಳವಣಿಗೆಗೆ ಮೆಟ್ಟಿಲಾಗಿಸಿಕೊಳ್ಳುತ್ತಾರೆ.

ಸಿಎಸ್‌ಆರ್ ಚಟುವಟಿಕೆ, ಉದ್ಯಮ ವಲಯ ಸಮಾಜಕ್ಕೆ ಸಂದಾಯ ಮಾಡಲೇಬೇಕಾದ ಅನಿವಾರ್ಯ ಋಣ. ಅದನ್ನು ಅರಿಯದ ಫಲಾನುಭವಿಗಳು, ಸಂಕಷ್ಟದಲ್ಲಿ ನೆರವಿನ ಹಸ್ತ ಚಾಚಿದವರ ಋಣಭಾರ ತಮ್ಮ ಮೇಲಿದೆ ಎಂದು ಭಾವಿಸಿ, ಅವರು ಹೇಳಿದವರಿಗೇ ಮತ ಹಾಕಿ ಕೈ ತೊಳೆದುಕೊಳ್ಳುತ್ತಾರೆ.

ಆ ಪ್ರದೇಶದಲ್ಲಿ ತಮ್ಮದೇ ಜಾತಿ– ಧರ್ಮದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಮಾಲೀಕರೇ ನೇರವಾಗಿ ಚುನಾವಣಾ ಕಣಕ್ಕಿಳಿಯುತ್ತಾರೆ. ಇಲ್ಲವೇ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಹಾಕಿಸುತ್ತಾರೆ. ಹೀಗೆ ಗೆದ್ದವರು ಕಬ್ಬಿನ ಬೆಲೆ ನಿಗದಿ, ಸಕ್ಕರೆ ಮಾರುಕಟ್ಟೆ ನಿಯಂತ್ರಣ, ರೈತರ ಬಾಕಿ ಪಾವತಿ, ಸರ್ಕಾರದ ಪಾಲು ನಿಗದಿ... ಹೀಗೆ ಎಲ್ಲಾ ಹಂತದಲ್ಲೂ ಮತ ಹಾಕಿದವರ ಪರ ನಿಲ್ಲದೇ ಮತ ಹಾಕಿಸಿದವರೊಂದಿಗೆ ಕೈ ಜೋಡಿಸಬೇಕಾಗುತ್ತದೆ.

ಸಕ್ಕರೆ ಕಾರ್ಖಾನೆ ಮಾಲೀಕರೇ ಶಾಸಕರು, ಸಚಿವರಾಗಿ ಆಯ್ಕೆಯಾಗುತ್ತಾರೆ. ಹಾಗಾಗಿ ಕಬ್ಬಿನ ಬೆಲೆ, ಸಕ್ಕರೆ ಲೆವಿ ನಿಗದಿ, ಕಬ್ಬಿನ ಉಪ ಉತ್ಪನ್ನಗಳ ಬೆಲೆ, ಕಾರ್ಖಾನೆಗಳಿಗೆ ಬಡ್ಡಿ ರಹಿತ ಸಾಲ ನೀಡಿಕೆ ಎಲ್ಲ ವಿಚಾರಗಳಲ್ಲೂ ಸರ್ಕಾರವು ಮಾಲೀಕರ ಹಿತ ಕಾಯತ್ತದೆ. ಇಲ್ಲಿ ರೈತರ ಹಿತ ಗೌಣವಾಗುತ್ತದೆ.

– ಸುಭಾಷ್ ಶಿರಬೂರ, ರಾಜ್ಯ ಕಬ್ಬು ನಿಯಂತ್ರಣ ಮಂಡಳಿ ಸದಸ್ಯ, ಮುಧೋಳ

ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಸರ್ಕಾರ ರಿಯಾಯಿತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಿರುತ್ತದೆ. ಹಾಗಾಗಿ ಕಾರ್ಖಾನೆ ಮಾಲೀಕರಿಗೂ ಕೆಲವು ಸಾಮಾಜಿಕ ಜವಾಬ್ದಾರಿಗಳಿವೆ. ಹಲವು ಮಾಲೀಕರು ಸ್ವತಃ ಕಬ್ಬು ಬೆಳೆಗಾರರಾದ್ದರಿಂದ ಅವರಿಗೆ ರೈತರ ಸಂಕಷ್ಟ ಗೊತ್ತು. ಜೊತೆಗೆ ಸಾರ್ವಜನಿಕ ಬದುಕಿನಲ್ಲಿರುವುದರಿಂದ ಬೆಳೆಗಾರರ ಹಿತ ಕಾಪಾಡಲೇ ಬೇಕಾಗುತ್ತದೆ. ಹಾಗಾಗಿ ಇಲ್ಲಿ ಸಕ್ಕರೆ ಲಾಬಿ ಪ್ರಶ್ನೆ ಗೌಣ.

– ಮಲ್ಲಿಕಾರ್ಜುನ ಹೆಗ್ಗಳಗಿ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ, ಬೆಳಗಾವಿ
*****

ಎಂ. ಮಹೇಶ

ಬೆಳಗಾವಿ: ಜಿಲ್ಲೆಯ ಹಲವು ಮುಖಂಡರು ತಮ್ಮ ರಾಜಕೀಯದ ಏಳಿಗೆಗಾಗಿ ಸಕ್ಕರೆ ಕಾರ್ಖಾನೆಗಳನ್ನು ಏಣಿ ಮಾಡಿಕೊಂಡಿರುವ ವಿದ್ಯಮಾನ ಹಿಂದಿನಿಂದಲೂ ನಡೆಯುತ್ತಾ ಬಂದಿದೆ.  ಈ ಚುನಾವಣೆಯಲ್ಲೂ ಸಕ್ಕರೆ ಲಾಬಿ ಸದ್ದು ಮಾಡುತ್ತಿದೆ.

ಜಿಲ್ಲೆಯಲ್ಲಿ 1.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಅತಿ ಹೆಚ್ಚು ಅಂದರೆ, 24 ಸಕ್ಕರೆ ಕಾರ್ಖಾನೆಗಳಿವೆ. ಸಹಕಾರ ಕ್ಷೇತ್ರದಲ್ಲಿರುವ ಹತ್ತನ್ನು ಹೊರತುಪಡಿಸಿದರೆ, ಉಳಿದವು ಖಾಸಗಿ ಕಾರ್ಖಾನೆಗಳು. ಇವು ಒಂದಿಲ್ಲೊಂದು ರೀತಿಯಲ್ಲಿ ಜನರ ಮೇಲೆ ಪ್ರಭಾವ ಬೀರುತ್ತಿವೆ. ಕಾರ್ಖಾನೆಗಳ ಸಾರಥಿಗಳಾದ ರಾಜಕೀಯ ನೇತಾರರು, ಅವುಗಳ ಮೂಲಕ ಜನರ ಒಲವು ಗಳಿಸಿಕೊಳ್ಳಲು ಯತ್ನಿಸುವುದು ಸಾಮಾನ್ಯವಾಗಿದೆ.

ಪ್ರಭಾವ ಹೇಗೆ?: ‘1970ರ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದವು. ಸಹಕಾರ ರಂಗದ ಕಾರ್ಖಾನೆಗಳು ಬಲ ಕಳೆದುಕೊಳ್ಳುತ್ತಾ ಬಂದಂತೆ ಹಲವು ಮುಖಂಡರು ಸ್ವಂತ ಕಾರ್ಖಾನೆಗಳನ್ನು ಆರಂಭಿಸಿದರು. ಅವುಗಳನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳಲು ಆರಂಭಿಸಿದರು. ತಮ್ಮ ಕಬ್ಬನ್ನು ಸಕಾಲದಲ್ಲಿ ಅರೆಯುವಂತಾಗಲಿ, ಒಳ್ಳೆಯ ದರ ಸಿಗಲಿ ಎಂಬ ಉದ್ದೇಶದಿಂದ ಷೇರು ಖರೀದಿಸುವ ಬೆಳೆಗಾರರೇ ಮಾಲೀಕರ ಆಶಾಕಿರಣ. ಅವರ ಅನಿವಾರ್ಯಗಳನ್ನು ಚುನಾವಣೆ ಸಂದರ್ಭದಲ್ಲಿ ತಮ್ಮ ಒಳಿತಿಗಾಗಿ ಬಳಸಿಕೊಳ್ಳುವ ಬಲಾಢ್ಯರು ರಾಜಕಾರಣದಲ್ಲೂ ಮೇಲೆ ಬರುತ್ತಿದ್ದಾರೆ’ ಎಂದು ವಿಶ್ಲೇಷಿಸುತ್ತಾರೆ ಹೋರಾಟಗಾರ ಅಶೋಕ ಚಂದರಗಿ.

‘ಮಾಲೀಕರಾದವರು ಆ ಭಾಗದ ಒಂದಷ್ಟು ಮಂದಿಗೆ ಉದ್ಯೋಗ ನೀಡುತ್ತಾರೆ ಹಾಗೂ ಹೇಳಿದಂತೆ ಕೇಳಬೇಕು, ಚುನಾವಣೆಯಲ್ಲಿ ತಮ್ಮ ಪರ ಪ್ರಚಾರ ಮಾಡಬೇಕು ಎಂದೆಲ್ಲ ನಿರೀಕ್ಷಿಸುತ್ತಾರೆ. ಷೇರುದಾರರು ಸ್ಪಂದಿಸದಿದ್ದಲ್ಲಿ, ಕಬ್ಬು ಕಡಿಯಲು ಸಕಾಲದಲ್ಲಿ ಕಾರ್ಮಿಕರ ತಂಡವನ್ನು ಕಳುಹಿಸುವುದಿಲ್ಲ. ಕಟಾವು ತಡವಾದರೆ, ಕಬ್ಬಿಗೆ ಒಳ್ಳೆಯ ದರ ದೊರೆಯುವುದಿಲ್ಲ. ತಮ್ಮ ವಿರುದ್ಧ ಹೋದವರಿಗೆ ಈ ರೀತಿಯ ಅಸಹಕಾರ, ಶೋಷಣೆ ನೀಡುವುದನ್ನು ಸಕ್ಕರೆ 'ಕುಳಗಳು' ಮಾಡುತ್ತವೆ. ಒಟ್ಟಿನಲ್ಲಿ ಜನ ತಮ್ಮ ಸುತ್ತಲೂ ಓಡಾಡಬೇಕು ಹಾಗೂ ಮತದಾರರನ್ನು ಸೆಳೆದುಕೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಕಾರ್ಖಾನೆ ಆರಂಭಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರ್ಖಾನೆಯಿಂದ ಹೆಚ್ಚಿನ ರಾಜಕೀಯ ಲಾಭ ಇರುವುದೇ ಇದಕ್ಕೆ ಕಾರಣ’ ಎನ್ನುತ್ತಾರೆ ಅವರು.

ರಾಜ್ಯದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಬೆಳಗಾವಿ ಜಿಲ್ಲೆಯ ಪಾಲು ದೊಡ್ಡದು. ಇದಕ್ಕೆ ಖಾಸಗಿ ವಲಯದ ಕಾರ್ಖಾನೆಗಳೂ ಕೊಡುಗೆ ನೀಡುತ್ತಿವೆ.

ಅಥಣಿಯ ಬಿಜೆಪಿ ಶಾಸಕ ಲಕ್ಷ್ಮಣ ಸವದಿ ತಮ್ಮ ನೇತೃತ್ವದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಮೂಲಕ ಉತ್ತಮ ದರ ಘೋಷಿಸಿ ಜನರನ್ನು ಸೆಳೆಯಲು ಮುಂದಾಗಿದ್ದಾರೆ. ಸಹಕಾರ ಸಚಿವ ರಮೇಶ ಜಾರಕಿಹೊಳಿ ಗೋಕಾಕ ತಾಲ್ಲೂಕು ಹಿರೇನಂದಿಯಲ್ಲಿ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ನಡೆಸುತ್ತಿದ್ದಾರೆ. ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಮೇಲೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಅವರ ಸಹೋದರ ಲಖನ್‌ ಜಾರಕಿಹೊಳಿ ಹಿಡಿತವಿದೆ.

ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಎರಡು ಕಾರ್ಖಾನೆಗಳ ಒಡೆಯ. ಸಕ್ಕರೆ ರಾಜಕಾರಣಕ್ಕೆ ಇತ್ತೀಚಿನ ಸೇರ್ಪಡೆ ಎಂದರೆ, ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ. ಸವದತ್ತಿ ತಾಲ್ಲೂಕಿನಲ್ಲಿ, ಹರ್ಷ ಶುಗರ್ಸ್ ಹೆಸರಿನಲ್ಲಿ ಅವರು ಕಾರ್ಖಾನೆ ಆರಂಭಿಸಿದ್ದಾರೆ.

ಜೊತೆಗೆ, ಇತರ ಪ್ರಮುಖರಾದ ಸಂಸದ ಪ್ರಕಾಶ ಹುಕ್ಕೇರಿ, ಸುಭಾಸ ಜೋಶಿ, ಉಮೇಶ ಕತ್ತಿ, ಶ್ರೀಮಂತ ಪಾಟೀಲ, ಕಲ್ಲಪ್ಪ ಮಗೆಣ್ಣವರ, ಗಣೇಶ ಹುಕ್ಕೇರಿ, ಪ್ರಭಾಕರ ಕೋರೆ, ಅವರ ಪುತ್ರ ಅಮಿತ್‌ ಕೋರೆ, ಸಚ್ಚಿದಾನಂದ ಖೋತ, ಅಂಜಲಿ ನಿಂಬಾಳ್ಕರ್‌ ಎಲ್ಲರಿಗೂ ಸಕ್ಕರೆ ಉದ್ಯಮದಲ್ಲಿ ‍ಪ್ರತ್ಯಕ್ಷ ಅಥವಾ ಪರೋಕ್ಷ ಹಿಡಿತವಿದೆ.

ರಾಜಕೀಯ ಕ್ಷೇತ್ರಕ್ಕೆ ಬರಬೇಕು, ಜನಪ್ರತಿನಿಧಿ ಆಗಬೇಕು ಎಂಬ ಉದ್ದೇಶದಿಂದಲೇ ಕೆಲವರು ಸಕ್ಕರೆ ಕಾರ್ಖಾನೆ ಆರಂಭಿಸಿದ್ದಾರೆ.

– ಶಿವಾನಂದ ಕೌಜಲಗಿ, ಮಾಜಿ ಸಚಿವ

ತಮ್ಮ ನೇತೃತ್ವದ ಕಾರ್ಖಾನೆಗಳಿಗೆ ಕಬ್ಬು ಪೂರೈಸುವವರ ಮನವೊಲಿಸಿಕೊಳ್ಳಲು ರಾಜಕಾರಣಿಗಳು ಕಸರತ್ತು ನಡೆಸುವುದು ಸಾಮಾನ್ಯವಾಗಿದೆ. ಕಬ್ಬಿಗೆ ಮುಂಚಿತವಾಗಿ ದರ ಘೋಷಿಸುವುದು, ಕಬ್ಬನ್ನು ಬೇಗ ಅರೆಯುವುದು, ಮುಂಗಡ ಕೊಡುವುದು ಹಾಗೂ ರೈತರಿಗೆ ಸಾಲ ನೀಡುವುದೂ ಉಂಟು. ಷೇರುದಾರರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುತ್ತಾರೆ.

– ಶಹಜಹಾನ ಇಸ್ಮಾಯಿಲ್‌ ಡೊಂಗರಗಾವ, ಮಾಜಿ ಶಾಸಕ
****

– ಎಂ.ಎನ್‌.ಯೋಗೇಶ್‌

ಖಾಸಗಿ ಲಾಬಿಗೆ ಬಲಿಯಾದ ಮೈಷುಗರ್‌, ಪಿಎಸ್‌ಎಸ್‌ಕೆ

ಮಂಡ್ಯ: ಸಕ್ಕರೆ ಕಾರ್ಖಾನೆ ಅಂಗಳದಲ್ಲಿ ರಾಜಕಾರಣ ಹಾಗೂ ಖಾಸಗಿಯವರ ಲಾಬಿ, ಜಿಲ್ಲೆಯ ಎರಡು ಐತಿಹಾಸಿಕ ಕಾರ್ಖಾನೆಗಳನ್ನು ರೋಗಗ್ರಸ್ತಗೊಳಿಸಿವೆ. ಬಂಡವಾಳಶಾಹಿಗಳ ಪ್ರಭಾವ ತಡೆಯಲು ವಿಫಲರಾದ ಜನಪ್ರತಿನಿಧಿಗಳು, ನಗರದ ಮೈಷುಗರ್‌ ಕಾರ್ಖಾನೆ ಹಾಗೂ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಗಳ (ಪಿಎಸ್ಎಸ್‌ಕೆ) ಯಂತ್ರಗಳನ್ನು ತುಕ್ಕು ಹಿಡಿಸುತ್ತಿದ್ದಾರೆ.

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮೈಷುಗರ್‌ ಅವನತಿಯ ಹಂತದಲ್ಲಿತ್ತು. ಅದನ್ನು ಪುನಶ್ಚೇತನಗೊಳಿಸುವ ಪ್ರಯತ್ನ ಕೈಗೂಡಲಿಲ್ಲ. ಬದಲಿಗೆ, ಅವರು 2003ರಲ್ಲಿ ಮದ್ದೂರು ತಾಲ್ಲೂಕು ಕೊಪ್ಪ ಬಳಿ ತಮ್ಮ ತಂದೆಯ ಹೆಸರಿನಲ್ಲಿ ಎಸ್‌.ಸಿ.ಮಲ್ಲಯ್ಯ ಷುಗರ್‌ ಕಂಪನಿ (ಈಗ ಎಸ್‌.ಎಲ್‌.ಎನ್‌ ಸಕ್ಕರೆ ಕಾರ್ಖಾನೆ) ಸ್ಥಾಪಿಸಿದರು. ಇದು ಬಿಟ್ಟರೆ ರಾಜಕಾರಣಿಗಳ ನೇರ ಹಿಡಿತದಲ್ಲಿ ಯಾವ ಕಾರ್ಖಾನೆಯೂ ಜಿಲ್ಲೆಯಲ್ಲಿ ಇಲ್ಲ. ಆದರೆ, ರಾಜಕಾರಣಿಗಳ ಮೇಲಾಟ ಮಾತ್ರ ಇದ್ದೇ ಇದೆ. ಪರೋಕ್ಷವಾಗಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ.

‘ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ (1970), ಕೆ.ಆರ್‌.ಪೇಟೆಯ ಐಸಿಎಲ್‌ (1996) ಹಾಗೂ ಮಲ್ಲಯ್ಯ ಸಕ್ಕರೆ ಕಂಪನಿ ಜಿಲ್ಲೆಯಲ್ಲಿ ಖಾಸಗಿ ಲಾಬಿಯನ್ನು ಪರಿಚಯಿಸಿದವು. ಚಾಮುಂಡೇಶ್ವರಿ ಕಾರ್ಖಾನೆ ಆರಂಭದಿಂದಲೂ ಮೈಷುಗರ್‌ ವ್ಯಾಪ್ತಿಯ ಕಬ್ಬು ಸೆಳೆದು ಸಮಸ್ಯೆ ಸೃಷ್ಟಿಸುತ್ತಲೇ ಇತ್ತು. ನಂತರ ತಮಿಳುನಾಡು, ಆಂಧ್ರಪ್ರದೇಶದ ಬಂಡವಾಳಶಾಹಿಗಳು ಖಾಸಗಿ ಸಕ್ಕರೆ ಕಾರ್ಖಾನೆಗಳ ಚುಕ್ಕಾಣಿ ಹಿಡಿದರು. ಖಾಸಗಿ ಲಾಬಿಗೆ ಮಣಿದ ಜನಪ್ರತಿನಿಧಿಗಳು ಸರ್ಕಾರಿ ಕಾರ್ಖಾನೆಯ ಕತ್ತು ಹಿಸುಕಿದರು. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಲು ಮೈಷುಗರ್‌ ಅವನತಿಯೂ ಮುಖ್ಯ ಕಾರಣ’ ಎಂದು ರೈತ ಮುಖಂಡ ಕೆ.ಬೋರಯ್ಯ ಹೇಳುತ್ತಾರೆ.

ಮೈಷುಗರ್‌ ದರಕ್ಕೆ ಬೇಡಿಕೆ: ಮೈಷುಗರ್‌ ನಿಗದಿ ಮಾಡುತ್ತಿದ್ದ ಕಬ್ಬಿನ ದರ ಇಡೀ ರಾಜ್ಯದ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಅನ್ವಯವಾಗುತ್ತಿತ್ತು. ಮೈಷುಗರ್‌ ದರವನ್ನು ಎಲ್ಲಾ ಕಾರ್ಖಾನೆಗಳೂ ಕೊಡಬೇಕು ಎಂದು ರೈತರು ಬೇಡಿಕೆ ಇಡುತ್ತಿದ್ದರು. ಹೀಗಾಗಿ ಖಾಸಗಿ ಕಾರ್ಖಾನೆಗಳ ಮಾಲೀಕರಿಗೆ ಮೈಷುಗರ್‌ ನುಂಗಲಾಗದ ತುತ್ತಾಗಿತ್ತು. ಖಾಸಗಿ ಲಾಬಿ ದಟ್ಟವಾಗಿ ಹರಡಲು ಇದು ಪ್ರಮುಖ ಕಾರಣವಾಯಿತು.

ಮೈಷುಗರ್‌ ಕಾರ್ಖಾನೆ ಹಾಗೂ ಪಿಎಸ್‌ಎಸ್‌ಕೆ ಪುನಶ್ಚೇತನ ಈಗ ಚುನಾವಣಾ ವಿಷಯವಾಗಿ ಮಾರ್ಪಟ್ಟಿದೆ. ಎಲ್ಲ ಪಕ್ಷಗಳೂ ಈ ಕಾರ್ಖಾನೆಗೆ ಮರುಜೀವ ಕೊಡುವ ಭರವಸೆ ನೀಡುತ್ತಾ ಜನರನ್ನು ಮತ ಕೇಳುತ್ತಿವೆ.

₹ 500 ಕೋಟಿ ಬಿಡುಗಡೆ

ಎಲ್ಲ ಪಕ್ಷಗಳ ಸರ್ಕಾರಗಳೂ ಮೈಷುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಿವೆ. 2005ರಿಂದ ಇಲ್ಲಿಯವರೆಗೆ ₹ 500 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೂ ಕಾರ್ಖಾನೆಯ ಚಕ್ರ ತಿರುಗಿಲ್ಲ. ನಾಲ್ಕು ವರ್ಷಗಳಿಂದ ನಿಂತಿದ್ದ ಮೈಷುಗರ್‌ ಕಾರ್ಖಾನೆ 2017ರ ಜುಲೈ 5ರಂದು ಪುನರಾರಂಭವಾಯಿತು. ಆದರೆ ಕಬ್ಬು ಕೊರತೆ, ಕಳಪೆ ಯಂತ್ರಗಳ ಸಮಸ್ಯೆಗಳ ಕಾರಣವೊಡ್ಡಿ ಕಬ್ಬು ಅರೆಯಲೇ ಇಲ್ಲ. ಈ ಭಾಗದ ಜನಪ್ರತಿನಿಧಿಗಳು ಸರ್ಕಾರಿ ಸಕ್ಕರೆ ಕಾರ್ಖಾನೆಗೆ ಜೀವತುಂಬುವಲ್ಲಿ ವಿಫಲರಾದರು. 2 ಲಕ್ಷ ಟನ್‌ ಪೂರೈಸಲು ಒಪ್ಪಿದ್ದ ರೈತರು ಹೈರಾಣಾದರು.

‘ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹಣ ಮಾಡಿಕೊಳ್ಳಲು ಮೈಷುಗರ್‌ ಉತ್ತಮ ಸ್ಥಳ. ಸರ್ಕಾರ ಕೊಟ್ಟ ಹಣದಲ್ಲಿ ಒಂದು ಹೊಸ ಕಾರ್ಖಾನೆ ಕಟ್ಟಬಹುದಾಗಿತ್ತು. ಸರ್ಕಾರ ಮುಂದೆ ಹಣ ಕೊಡುತ್ತದೆ, ಹಿಂದಿನ ಬಾಗಿಲಿನಿಂದ ಆ ಹಣ ರಾಜಕಾರಣಿಗಳ ಪಾಲಾಗುವಂತೆ ನೋಡಿಕೊಳ್ಳುತ್ತದೆ. ರಾಜಕಾರಣಿಗಳು ಕಾರ್ಮಿಕರಲ್ಲಿ ರಾಜಕೀಯ ಪಕ್ಷಗಳ ಗುಂಪುಗಳನ್ನು ಸೃಷ್ಟಿಸಿದ್ದಾರೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಹೇಳುತ್ತಾರೆ.

ಮೈಷುಗರ್‌ ಕಾರ್ಖಾನೆಗೆ ಅಧ್ಯಕ್ಷರಾಗಿ ಬರುತ್ತಿದ್ದ ಆಡಳಿತ ಪಕ್ಷದ ಮುಖಂಡರ ದುರಾಡಳಿತ ಕಾರ್ಖಾನೆಯ ಅವನತಿಗೆ ಕಾರಣವಾಯಿತು. ಸಕ್ಕರೆ ತುಂಬಿಸುವ ಚೀಲ ಕೊಳ್ಳುವಲ್ಲೂ ಹಣ ಮಾಡುತ್ತಿದ್ದ ಉದಾಹರಣೆಗಳಿವೆ. ನೇಮಕಾತಿ, ಸ್ವಜನ ಪಕ್ಷಪಾತ, ನಕಲಿ ಯಂತ್ರಗಳ ಅಳವಡಿಕೆಯಿಂದ ಕಾರ್ಖಾನೆ ಹಳ್ಳ ಹಿಡಿಯಿತು.

– ಎಂ.ಬಿ.ನಾಗಣ್ಣಗೌಡ, ಕಾರ್ಮಿಕ ಹೋರಾಟಗಾರ

ಪಿಎಸ್‌ಎಸ್‌ಕೆ ರೈತರ ನಂಬಿಕೆಯ ಮೇಲೆ ನಡೆಯುತ್ತಿತ್ತು. ಈ ವರ್ಷ ಕಬ್ಬು ಪೂರೈಕೆ ಮಾಡಿದರೆ ರೈತರು ಮುಂದಿನ ವರ್ಷ ಹಣ ಪಡೆಯುತ್ತಿದ್ದರು. ರೈತರಿಗೆ ಕಾರ್ಖಾನೆಯ ಮೇಲೆ ಅಷ್ಟು ನಂಬಿಕೆ ಇತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ನಮ್ಮ ವ್ಯಾಪ್ತಿಯ ಕಬ್ಬು ಬೇರೆ ಜಿಲ್ಲೆಗಳ ಖಾಸಗಿ ಕಾರ್ಖಾನೆಗಳ ಪಾಲಾಗಿದೆ. ಇದನ್ನು ಅಧಿಕಾರಿಗಳೇ ಪೋಷಣೆ ಮಾಡಿದ್ದಾರೆ. ರಾಜಕಾರಣಿಗಳು ಇದಕ್ಕೆ ಬೆಂಗಾವಲಾಗಿ ನಿಂತಿದ್ದಾರೆ.

– ಕೆ.ಎಸ್‌.ನಂಜುಂಡೇಗೌಡ, ಪಿಎಸ್‌ಎಸ್‌ಕೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT