ಶುಕ್ರವಾರ, ಡಿಸೆಂಬರ್ 13, 2019
19 °C

‘ಸಿರಿಯಾ ಕಾರ್ಯಾಚರಣೆ: ನಿಲುವು ಬದಲಾವಣೆ ಇಲ್ಲ’

ಎಎಫ್‌ಪಿ Updated:

ಅಕ್ಷರ ಗಾತ್ರ : | |

‘ಸಿರಿಯಾ ಕಾರ್ಯಾಚರಣೆ: ನಿಲುವು ಬದಲಾವಣೆ ಇಲ್ಲ’

ವಾಷಿಂಗ್ಟನ್‌: ಸಿರಿಯಾದ ವಿಚಾರದಲ್ಲಿ ಅಮೆರಿಕ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದ್ದು, ಸೇನೆಯನ್ನು ಆದಷ್ಟು ಬೇಗ ಅಲ್ಲಿಂದ ವಾಪಸ್‌ ಕರೆಸಿಕೊಳ್ಳುವುದಾಗಿ ಟ್ರಂಪ್‌ ತಿಳಿಸಿದ್ದಾರೆಂದು ಹೇಳಿದೆ.

‘ಸಿರಿಯಾ ವಿಚಾರದಲ್ಲಿ ದೀರ್ಘಕಾಲಿಕ ಮಾತುಕತೆಗೆ ಒತ್ತುನೀಡಬೇಕು’ ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರೋನ್‌ ಅವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಅಮೆರಿಕ ಈ ಹೇಳಿಕೆ ನೀಡಿದೆ.

‘ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯನ್ನು ಸಂಪೂರ್ಣವಾಗಿ ನಾಶಪಡಿಸುವುದು ನಮ್ಮ ಗುರಿ. ಅದೇ ರೀತಿ, ಸಿರಿಯಾವನ್ನು ಸುರಕ್ಷಿತ ರಾಷ್ಟ್ರವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಮಿತ್ರ ರಾಷ್ಟ್ರಗಳು ಸೇನಾ ನೆರವು ನೀಡಬೇಕು’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್ ತಿಳಿಸಿದ್ದಾರೆ.

ರಷ್ಯಾ ಮಧ್ಯಪ್ರವೇಶ ಇಲ್ಲ: ಏಪ್ರಿಲ್‌ 7ರಂದು ಸಿರಿಯಾದ ಡೌಮಾದಲ್ಲಿ ‘ಸರಿನ್’ ಎಂಬ ರಾಸಾಯನಿಕ ಬಳಸಿ ನಡೆಸಿದ್ದ ದಾಳಿಯ ಕುರಿತು ವಿಶ್ವಸಂಸ್ಥೆ ಸೂಚನೆ ಮೇರೆಗೆ ‘ರಾಸಾಯನಿಕ ಅಸ್ತ್ರಗಳ ನಿರ್ಬಂಧ ಸಂಸ್ಥೆ’ ನಡೆಸುವ (ಒಪಿಸಿಡಬ್ಲು) ತನಿಖೆಗೆ ಅಡ್ಡಿಪಡಿಸುವುದಿಲ್ಲ ಎಂದು ರಷ್ಯಾ ಸ್ಪಷ್ಟಪಡಿಸಿದೆ.

‘ಕಾರ್ಯಾಚರಣೆಗೆ ಭದ್ರತೆ ಒದಗಿಸಲು ರಷ್ಯಾ ಬದ್ಧವಾಗಿದೆ’ ಎಂದು ಹೇಗ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.

‘ಸಿರಿಯಾವು ಗೌಪ್ಯವಾಗಿ ನಡೆಸುತ್ತಿರುವ ರಾಸಾಯನಿಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಾಶಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಫ್ರಾನ್ಸ್‌ ರಾಯಭಾರಿ ಒತ್ತಾಯಿಸಿದ್ದಾರೆ.

‘ಸೋಮವಾರ ನಡೆದ ಸಭೆಯಲ್ಲಿ ಸಿರಿಯಾದ ರಾಸಾಯನಿಕ ಅಸ್ತ್ರವನ್ನು ನಾಶಪಡಿಸುವ ಕುರಿತಂತೆ ತಾಂತ್ರಿಕ ಕಾರ್ಯದರ್ಶಿಯವರು ಪ್ರಮುಖ ಆದ್ಯತೆ ನೀಡಿದ್ದಾರೆ’ ಎಂದು ಒಪಿಸಿಡಬ್ಲ್ಯು ಸಭೆ ಬಳಿಕ ಫಿಲಿಪೆ ಲಲ್ಲಿಯೊಟ್‌ ತಿಳಿಸಿದರು.

ಸಿರಿಯಾದ ಮೇಲೆ ಯುದ್ಧ ಘೋಷಿಸಿಲ್ಲ: ಮ್ಯಾಕ್ರೋನ್‌

ಪ್ಯಾರಿಸ್‌ ವರದಿ:
ಸಿರಿಯಾದ ಮೇಲೆ ಅಮೆರಿಕ ಜತೆಗೂಡಿ ನಡೆಸಿದ ವೈಮಾನಿಕ ದಾಳಿ ಆ ದೇಶದ ಮೇಲೆ ಘೋಷಿತ ಯುದ್ಧವಲ್ಲ ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರೋನ್‌  ಸ್ಪಷ್ಟಪಡಿಸಿದ್ದಾರೆ.

ಈ ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಮಾತುಕತೆಗೆ ಮುಂದಾಗುವಂತೆ ಅವರನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

‘ಬಷರ್‌–ಅಲ್‌–ಅಸ್ಸಾದ್‌ ವಿರುದ್ಧ ನಾವು ಯುದ್ಧ ಘೋಷಿಸಿಲ್ಲ. ಆದರೆ ರಾಸಾಯನಿಕ ದಾಳಿ ನಡೆಸಿದವರಿಗೆ ತಕ್ಕ ಸಂದೇಶ ಕಳುಹಿಸುವುದು ಅಗತ್ಯವಾಗಿತ್ತು’ ಎಂದು ದಾಳಿಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)