ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮ ಸ್ವಾರ್ಥಕ್ಕಾಗಿ ಹಸಿರು ಉಳಿಸೋಣ’

Last Updated 17 ಏಪ್ರಿಲ್ 2018, 5:21 IST
ಅಕ್ಷರ ಗಾತ್ರ

ಬೆಂಗಳೂರು: ‘ಬದಲಾವಣೆ ನಿಸರ್ಗದ ಸಹಜ ನಿಯಮ, ನಿಜ. ಆದರೆ ಬದಲಾವಣೆಗೆ ಕಾರಣ ಯಾರು ಎನ್ನುವುದೂ ಅಷ್ಟೇ ಮುಖ್ಯ. ಇದಕ್ಕೆ ಪ್ರಕೃತಿಯೇ ಕಾರಣವಾಗಿದ್ದರೆ ಅದು ಸಹಜ ಹಾಗೂ ಪ್ರಶ್ನಾತೀತ. ಆದರೆ, ಬೆಂಗಳೂರಿನ ಬದಲಾವಣೆ ಇದಕ್ಕೆ ಮೀರಿದ್ದು...’

– 2014ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಜಂಟಿಯಾಗಿ ಪ್ರಕಟಿಸಿದ್ದ ‘ನಮ್ಮ ಬೆಂಗಳೂರಿನ ವೃಕ್ಷಗಳು’ ಸಂಶೋಧನಾ ಪ್ರಬಂಧದ ಆರಂಭಿಕ ಸಾಲುಗಳಿವು.

ಬೆಂಗಳೂರಿನ ಬಗ್ಗೆ ಮಾತನಾಡುವಾಗ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ವಾಯುಮಾಲಿನ್ಯ, ಸಂಚಾರ ದಟ್ಟಣೆ, ದೂಳು, ಸೆಖೆ ಇತ್ಯಾದಿ ವಿಷಯಗಳೂ ಇಣುಕುತ್ತವೆ. ನೀವು ಹಲವು ವರ್ಷಗಳಿಂದ ನಗರದಲ್ಲಿ ವಾಸವಿದ್ದರೆ ‘ಇದೆಲ್ಲಾ ಈಚೆಗೆ ಶುರುವಾಗಿದ್ದು. 20 ವರ್ಷಗಳ ಹಿಂದೆ ಬೆಂಗಳೂರು ಹೀಗಿರಲಿಲ್ಲ’ ಎಂದು ಅನುಭವದ ಬುತ್ತಿ ಬಿಚ್ಚಿಕೊಳ್ಳುತ್ತದೆ. ಇಂಥ ಮಾತು ಕಿವಿಗೆ ಬಿದ್ದಾಗಲೆಲ್ಲಾ, ‘2018ಕ್ಕೇ ಬೆಂಗಳೂರಿನ ಅವಸ್ಥೆ ಹೀಗಾಗಿದ್ದರೆ 2031ಕ್ಕೆ ಹೇಗೆ ಆಗಬಹುದು’ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ.

2031 ಎಂದು ನಿರ್ದಿಷ್ಟವಾಗಿ ಇಸವಿಯೊಂದನ್ನು ಪ್ರಸ್ತಾಪಿಸಲು ಮುಖ್ಯವಾದ ಕಾರಣವೊಂದಿದೆ. ಬಿಡಿಎ ಪ್ರಕಟಿಸಿರುವ ‘ಪರಿಷ್ಕೃತ ಮಾಸ್ಟರ್‌ಪ್ಲ್ಯಾನ್’ ಪ್ರಕಾರ, 2031ರ ವೇಳೆಗೆ ಬೆಂಗಳೂರಿನ ಜನಸಂಖ್ಯೆ 2.03 ಕೋಟಿಗೆ ಏರಲಿದೆ. ಬೆಂಗಳೂರಿನ ಹಾಲಿ ಜನಸಂಖ್ಯೆ ಸುಮಾರು 1.23 ಕೋಟಿ. ಈಗಿನ ಪರಿಸ್ಥಿತಿಯೇ ಹೀಗಿದೆ, ಇನ್ನು ಆಗಿನ ಪರಿಸ್ಥಿತಿ ಹೇಗಿರಬಹುದು? ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಳಕ್ಕೂ, ಮರಗಳ ಸಂಖ್ಯೆ ಕುಸಿತಕ್ಕೂ ನೇರ ಸಂಬಂಧವಿದೆ. ‘ನಮ್ಮ ಬೆಂಗಳೂರಿನ ವೃಕ್ಷಗಳು’ ಇದೇ ವಿಷಯವನ್ನು ಸಾರಿ ಹೇಳುತ್ತದೆ.

ಬೆಂಗಳೂರಿನ ಹವಾಮಾನ ಚೆನ್ನಾಗಿದೆ, ದುಡಿಯುವ ಜನರು ಸುಲಭವಾಗಿ ಸಿಗುತ್ತಾರೆ ಎನ್ನುವುದು ಬೆಂಗಳೂರಿಗೆ ಐ.ಟಿ ಕಂಪನಿಗಳು ಬರಲು ಮುಖ್ಯ ಕಾರಣ. ಐ.ಟಿ ಕ್ರಾಂತಿಯು ದೊಡ್ಡ ಮಟ್ಟದಲ್ಲಿ ಇತರ ರಾಜ್ಯಗಳಿಂದ ಜನರನ್ನು ನಗರಕ್ಕೆ ಆಕರ್ಷಿಸಿತು. ಇಷ್ಟು ದೊಡ್ಡ ಜನರನ್ನು ಸಲಹುವ ಸ್ಥಿತಿಯಲ್ಲಿ ನಮ್ಮ ನಗರ ಇರಲಿಲ್ಲ. ಬಿಪಿಒ ಕಂಪನಿಗಳು ಬೆಳೆದಂತೆ ರಸ್ತೆಯ ಮೇಲೆ ಕಾರುಗಳೂ ಹೆಚ್ಚಾದವು. ಚಾಲಕರು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರೂ ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದರು. ಜನದಟ್ಟಣೆ ಬೆಳೆದಂತೆ ಟ್ರಾಫಿಕ್ ಹೆಚ್ಚಾಯಿತು, ಹೆಚ್ಚಾದ ಟ್ರಾಫಿಕ್‌ಗೆ ಸರಿ ಹೊಂದುವಂತೆ ರಸ್ತೆ ವಿಸ್ತರಣೆ, ಫ್ಲೈಓವರ್‌ಗಳು ಬೇಕಾದವು. ಅಭಿವೃದ್ಧಿಯ ವೇಗ ಹೆಚ್ಚಾದಂತೆ ನಗರದಂಚಿನ ಹಸಿರು ಗಡಿ (ಗ್ರೀನ್‌ ಬೆಲ್ಟ್‌) ಅಪ್ರಸ್ತುತವಾಯಿತು. ನಗರದೊಳಗಿನ ಉದ್ಯಾನ, ಕೆರೆಗಳು ನಾಪತ್ತೆಯಾದವು. ಏನಾಗುತ್ತಿದೆ ಎಂದು ಅರಿವಾಗುವುದರೊಳಗೆ ನಗರವು ಹಸಿರಿನ ಆಸರೆಯನ್ನೇ ಕಳೆದುಕೊಂಡಿತ್ತು.

ಐಐಎಸ್‌ಸಿಯ ಸಂಶೋಧಕ ಟಿ.ವಿ. ರಾಮಚಂದ್ರ ಅವರ ಪ್ರಕಾರ, ನಗರವು ಕೇವಲ ಒಂದು ದಶಕದಲ್ಲಿ ಶೇ78ರಷ್ಟು ಹಸಿರಿನ ಆವಾರ ಕಳೆದುಕೊಂಡಿದೆ. ‘2000ದಿಂದ 2014ರ ನಡುವಿನ ಅವಧಿಯಲ್ಲಿ ನಗರೀಕರಣ ಶೇ 125ರಷ್ಟು ಹೆಚ್ಚಾಗಿದೆ. ಇದಕ್ಕೆ ನಾವು ತೆತ್ತ ಬೆಲೆ ಹಸಿರು’ ಎಂಬುದು ಅವರ ವಿಷಾದ.

ನಗರದಲ್ಲಿರುವ ಒಟ್ಟು ಮರಗಳ ಸಂಖ್ಯೆ ಸುಮಾರು 14 ಲಕ್ಷ ಎಂಬ ಉಲ್ಲೇಖ ‘ಬೆಂಗಳೂರಿನ ವೃಕ್ಷಗಳು’ ಅಧ್ಯಯನ ವರದಿಯಲ್ಲಿ ನಮೂದಾಗಿದೆ. ಬೆಂಗ
ಳೂರಿನ ಸದ್ಯದ ಜನಸಂಖ್ಯೆ ಸುಮಾರು 1.23 ಕೋಟಿ. ಈ ಲೆಕ್ಕದಂತೆ ನಗರದ ಪ್ರತಿ 8 ಮಂದಿಗೆ ಒಂದು ಮರ ಸಿಗುತ್ತದೆ. ಆದರೆ ವಾಸ್ತವದಲ್ಲಿ ಒಬ್ಬ ಮನುಷ್ಯ ಬದುಕಲು 8 ಮರಗಳು ಬೇಕು.

‘ಒಬ್ಬ ವ್ಯಕ್ತಿ ಪ್ರತಿದಿನ ಉಸಿರಾಟದ ಮೂಲಕ 540ರಿಂದ 900 ಗ್ರಾಂಗಳಷ್ಟು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆ ಮಾಡುತ್ತಾನೆ. 2.5 ಎಕರೆ ವಿಸ್ತೀರ್ಣದಲ್ಲಿರುವ ವೃಕ್ಷಾವಾರವು ಎಂಟು ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್ ಹೀರಬಲ್ಲದು. ಅಂದರೆ ಪ್ರತಿಯೊಬ್ಬ ವ್ಯಕ್ತಿಗೆ ಎಂಟು ಮರಗಳು ಬೇಕಾಗುತ್ತವೆ. ಬೆಂಗಳೂರಿನ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ’ ಎನ್ನುತ್ತಾರೆ ವಿಜ್ಞಾನಿ ಟಿ.ವಿ. ರಾಮಚಂದ್ರ.

ದಾಖಲಾತಿಗೆ ಹಿಂದೇಟು: ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳನ್ನು ಮಾತನಾಡಿಸಿದರೆ, ಬಿಬಿಎಂಪಿ ವೆಬ್‌ಸೈಟ್ ಎಡತಾಕಿದರೆ ಪ್ರತಿವರ್ಷ ಲಕ್ಷ
ಗಟ್ಟಲೆ ಗಿಡಗಳನ್ನು ನೆಟ್ಟ ಮಾಹಿತಿ ಸಿಗುತ್ತದೆ. ಮೆಟ್ರೊ ನಿಗಮದವರು ಯೋಜನೆ ಜಾರಿ ಸಂದರ್ಭ ಕಡಿದ ಮರಗಳಿಗೆ ಅನುಪಾತ ಲೆಕ್ಕಹಾಕಿ ಗಿಡಗಳನ್ನು ನೆಟ್ಟಿದ್ದಾರೆ. ಇಷ್ಟೆಲ್ಲಾ ಇದ್ದರೂ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಬೇಸಿಗೆ ಅಸಹನೀಯ ಎನಿಸುತ್ತಿದೆ ಏಕೆ? ಹಿಂದಿನ ವರ್ಷ ಮನೆ ಮುಂದಿದ್ದ ಗಿಡ ಈ ವರ್ಷ ಮಾಯವಾಗುತ್ತಿದೆ ಏಕೆ? ನಮ್ಮ ಬಿಬಿಎಂಪಿ ನೆಟ್ಟ ಗಿಡಗಳು ಏನಾದವು?

ನಗರದಲ್ಲಿ ಮರಗಳನ್ನು ಉಳಿಸಲು ಶ್ರಮಿಸುತ್ತಿರುವ ವಿಜಯ್‌ ನಿಶಾಂತ್ ಅವರ ಎದುರು ಈ ಪ್ರಶ್ನೆ ಇರಿಸಿದಾಗ, ‘ಬೆಂಗಳೂರಿನಲ್ಲಿ ಹಸಿರು ಉಳಿಸಬೇಕು ಎನ್ನುವ ಬದ್ಧತೆ ಯಾವ ರಾಜಕೀಯ ಪಕ್ಷಕ್ಕೂ ಇಲ್ಲ. ನಗರದಲ್ಲಿರುವ ಮರಗಳ ಗಣತಿ ಮಾಡೋಣ, ದತ್ತಾಂಶ ರೂಪಿಸೋಣ ಎಂದು ಅನೇಕ ಬಾರಿ ಬಿಬಿ
ಎಂಪಿಗೆ ಮನವಿ ಸಲ್ಲಿಸಿದ್ದೇನೆ. ನನ್ನ ಮಾತಿಗೆ ಕವಡೆ ಕಿಮ್ಮತ್ತೂ ಸಿಕ್ಕಿಲ್ಲ. ಒಮ್ಮೆ ಮರಗಳ ಗಣತಿ ನಡೆದು ದಾಖಲಾತಿ ಪೂರ್ಣಗೊಂಡರೆ ಆ ಮರಗಳು ಸುರಕ್ಷಿತ. ಆ ಮರಗಳನ್ನು ಸುಲಭವಾಗಿ ಕಡಿಯಲು ಸಾಧ್ಯವಿಲ್ಲ. ಎಲ್ಲವೂ ಕಾನೂನಿನ ಪ್ರಕಾರವೇ ಆಗಬೇಕಾಗುತ್ತದೆ. ಅಧಿಕಾರಿಗಳಿಗೆ ದುಡ್ಡು ಮಾಡಲು ಸಾಧ್ಯವಿಲ್ಲ. ಅದಕ್ಕೇ ನನ್ನ ಮನವಿಗೆ ಯಾರೂ ಗಮನಕೊಡುತ್ತಿಲ್ಲ’ ಎಂಬ ಉತ್ತರ ಬಂತು.

2015ರಲ್ಲಿ ಬಿಬಿಎಂಪಿ ಮರಗಳ ಗಣತಿ ಮಾಡುವ ಸಂಬಂಧ ಹೇಳಿಕೆಯೊಂದನ್ನು ಹೊರಡಿಸಿತ್ತು. ಆದರೆ ಇದು ಕಾರ್ಯರೂಪಕ್ಕೆ ಬರಲೇ ಇಲ್ಲ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಅರಣ್ಯ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚೋಳರಾಜ್ ಅವರನ್ನು ಸಂಪರ್ಕಿಸಲು ನಡೆಸಿದ ಯತ್ನ ವಿಫಲವಾಯಿತು.

ಅರಣ್ಯ ಇಲಾಖೆ ಸುಪರ್ದಿಗೆ ಬರಲಿ: ‘ಗಿಡಗಳನ್ನು ವ್ಯವಸ್ಥಿತವಾಗಿ ನೆಡುವುದು ಮತ್ತು ರಕ್ಷಿಸುವುದು ಬಿಬಿಎಂಪಿಗೆ ಸಾಧ್ಯವಿಲ್ಲ. ಅಲ್ಲಿರುವ ಅರಣ್ಯ ವಿಭಾಗ ಮರ ಕಡಿಯಲು ಅನುಮತಿ ನೀಡುವ ಕೆಲಸವನ್ನು ಮಾತ್ರ ಮಾಡುತ್ತಿದೆ. ಈಚೆಗಂತೂ ಗಿಡಗಳನ್ನು ಬೆಳೆಸುವುದೇ ಹಾಸ್ಯದ ವಿಷಯ ಎನ್ನುವಂತೆ ಆಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮರ ಬೆಳೆಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆಯು ಬಿಬಿಎಂಪಿಗೆ ಬಿಟ್ಟುಕೊಟ್ಟು ದೊಡ್ಡ ತಪ್ಪು ಮಾಡಿತು. ಇನ್ನಾದರೂ ಅರಣ್ಯ ಇಲಾಖೆ ತನ್ನ ಹೊಣೆಯರಿತು ಜವಾಬ್ದಾರಿಯನ್ನು ವಾಪಸ್ ಪಡೆದುಕೊಳ್ಳಬೇಕು’ ಎನ್ನುವುದು ನಗರದಲ್ಲಿ ಹಸಿರು ಹರಡಲು ಶ್ರಮಿಸಿದ ನೇಗಿನ
ಹಾಳ್ ಅವರ ಒತ್ತಾಯ.

‘ಜನರಿಗೆ ಗಿಡಗಳನ್ನು ಬೆಳೆಸಬೇಕು ಎನ್ನುವ ಆಸಕ್ತಿ ಇದೆ. ಆದರೆ ಅದಕ್ಕೆ ತಕ್ಕ ಉತ್ತೇಜನ ಸಿಗುತ್ತಿಲ್ಲ. ಗಿಡ–ಮರಗಳಿಂದ ಆಗುವ ಲಾಭದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ನಮ್ಮದು ಸಿಲಿಕಾನ್ ಸಿಟಿ ಅನ್ನುವುದಕ್ಕಿಂತ ಗ್ರೀನ್ ಸಿಟಿ ಎನ್ನಲು ನಾವೆಲ್ಲರೂ ಹೆಮ್ಮೆ ಪಡಬೇಕು. ಬೆಂಗಳೂರಿನ ನರ್ಸರಿಗಳಲ್ಲಿ ಬೆಳೆಸಿದ ಸಸಿಗಳು ದೇಶದ ನಾನಾ ಭಾಗಗಳಲ್ಲಿ ಹೆಮ್ಮರಗಳಾಗಿ ಬೆಳೆದಿವೆ. ನವದೆಹಲಿಯ ಇಂದಿರಾ ಗಾಂಧಿ ಸಮಾಧಿಯ ಸುತ್ತ ಬೆಳೆದಿರುವ ಮರಗಳು ಬೆಂಗಳೂರಿನ ಕೊಡುಗೆ. ಎಲ್ಲವನ್ನೂ ಕಳೆದುಕೊಂಡ ಬಳಿಕ ಹಳಹಳಿಸುವುದಕ್ಕಿಂತ ಈಗಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಮೂಲಸೌಕರ್ಯದ ಹೆಸರಿನಲ್ಲಿ ಮರಗಳನ್ನು ಕಡಿಯುವುದನ್ನು ಕಂಡಾಗ ಸಂಕಟವಾಗುತ್ತದೆ’ ಎನ್ನುತ್ತಾರೆ ಅವರು.

‘ಪರಿಸರ ಪ್ರಜ್ಞೆ, ಪಕ್ಷಿಪ್ರೀತಿ, ಪ್ರಾಣಿಪ್ರೇಮದಂಥ ದೊಡ್ಡ ಮಾತುಗಳನ್ನು ಬಿಡ್ರಿ. ನಾವು ಬದುಕುಳಿಯಬೇಕು ಎನ್ನುವ ಸ್ವಾರ್ಥಕ್ಕಾಗಿಯಾದರೂ ಗಿಡ
ಗಳನ್ನು ಉಳಿಸಿಕೊಳ್ಳಬೇಕ್ರೀ’ ಎಂಬುದು ಹಿರಿಯಜ್ಜನ ಕಿವಿಮಾತು.

ಕಾಳಜಿ ಯಾರಿಗೂ ಇಲ್ಲ: ‘ಬೆಂಗಳೂರಿನಲ್ಲಿ ಪರಿಸರ ಸುಧಾರಿಸಲು ಯತ್ನಿಸಬೇಕು ಎನ್ನುವ ಕಾಳಜಿ ಯಾವುದೇ ರಾಜಕೀಯ ಪಕ್ಷದಲ್ಲಿ ಗೋಚರಿಸುತ್ತಿಲ್ಲ. ‘ಸಂಚಾರ ವ್ಯವಸ್ಥೆ ಸುಧಾರಣೆಗೆ ರಸ್ತೆ ವಿಸ್ತರಣೆ ಅನಿವಾರ್ಯ’ ಎಂದು ಜನರನ್ನು ನಂಬಿಸುವ ರಾಜಕಾರಣಿಗಳು ಇದೇ ಕಾರಣ ಮುಂದೊಡ್ಡಿ, ಮರ
ಗಳನ್ನು ಕಡಿಯಲು ಯೋಜನೆ ರೂಪಿಸುವವರನ್ನು ಹುರಿದುಂಬಿಸುತ್ತಾರೆ’ ಎನ್ನುತ್ತಾರೆ ಪರಿಸರಪರ ಹೋರಾಟಗಾರ ಸ. ಗಿರಿಜಾ ಶಂಕರ.

‘ನಗರದಲ್ಲಿ ರಸ್ತೆಗಳಿಗಾಗಿ ಯೋಜನೆ ರೂಪಿಸುವಾಗ ಒಂದು ಬದಿಗಾದರೂ ಮರಗಳನ್ನು ಬೆಳೆಸಲು ಏಕೆ ಆಲೋಚಿಸುವುದಿಲ್ಲ? ರಾಜಕಾರಣಿಗಳಿಗೆ ಮರ
ಗಳು ಜಾಗ ತಿನ್ನುವ ಶತ್ರುಗಳಂತೆ ಕಾಣಿಸುತ್ತಿವೆ. ಅದೇ ಅಭಿಪ್ರಾಯವನ್ನು ಅವರು ಜನರ ಮನಸ್ಸಿನಲ್ಲಿಯೂ ಬಿತ್ತಿ ಬೆಳೆಸಿದ್ದಾರೆ. ರಾಜರಾಜೇಶ್ವರಿ ನಗರ ಸೇರಿದಂತೆ ಹಲವೆಡೆ ಜನವಸತಿ ಪ್ರದೇಶಗಳಲ್ಲಿಯೂ ಮರಗಳಿಗೆ ಉಳಿಗಾಲವಿಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ನಮ್ಮ ಮನೆ ಬಾಗಿಲಿಗೆ ಮತ ಕೇಳಲು ಬರುವವರನ್ನು ‘ಬೆಂಗಳೂರಿನ ಪರಿಸರ ಜೀವಸ್ನೇಹಿಯಾಗಲು ಏನು ಮಾಡ್ತೀರಿ?’ ಎಂದು ನಾವೆಲ್ಲರೂ ಪ್ರಶ್ನಿಸ
ಬೇಕಿದೆ. ಮುಂದೆ ಯಾವುದೇ ಪಕ್ಷ ಸರ್ಕಾರ ರಚಿಸಿದರೂ ಹಸಿರಿನ ಪರವಾಗಿ ಏನಾದರೂ ಮಾಡಲೇಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ಉಳಿಗಾಲವಿಲ್ಲ’ ಎನ್ನುವುದು ಅವರ ಅಭಿಪ್ರಾಯ.

ದಯವಿಟ್ಟು ಹೀಗೆ ಮಾಡಿ ಸ್ವಾಮಿ...

ವಿಧಾನಸಭೆ ಚುನಾವಣೆಯ ನಂತರ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಮುಖ್ಯಮಂತ್ರಿಗೆ ಬೆಂಗಳೂರಿನ ಪರಿಸರ ಸುಧಾರಿಸಲು ನಾವು ಕೊಡುವ ಐದು ಸಲಹೆಗಳು...

1) ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಪೂರ್ಣ ಮರಗಳ ಗಣತಿ ಆಗಬೇಕು

2) ಹಸಿರಿನ ಮೂಲಗಳನ್ನು ಹುಡುಕಬೇಕು, ಉಳಿಸಬೇಕು

3) ರಸ್ತೆಬದಿ, ಉದ್ಯಾನಗಳು ಸೇರಿದಂತೆ ಎಲ್ಲಿಯೇ ಹೊಸದಾಗಿ ಗಿಡಗಳನ್ನು ನೆಡುವುದಿದ್ದರೂ ವೈವಿಧ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಒಂದೇ ಜಾತಿಯ ಮರಗಳನ್ನು ಬೆಳೆಸುವುದು ಸಲ್ಲದು

4) ಕಬ್ಬನ್‌ಪಾರ್ಕ್, ಲಾಲ್‌ಬಾಗ್‌ ಮಾದರಿಯಲ್ಲಿ ಇನ್ನಷ್ಟು ಉದ್ಯಾನಗಳನ್ನು ಬೆಳೆಸಬೇಕು

5) ರಾಜ್ಯದ ಇತರ ನಗರಗಳನ್ನು ಅಭಿವೃದ್ಧಿಪಡಿಸಿ ಬೆಂಗಳೂರಿನಲ್ಲಿ ಜನಸಂದಣಿ ಕಡಿಮೆಯಾಗುವಂತೆ ಮಾಡಬೇಕು

-ವಿಜಯ್‌ ನಿಶಾಂತ್

1) ‘ನನ್ನ ಅಧಿಕಾರದ ಅವಧಿಯಲ್ಲಿ ಬೆಂಗಳೂರಿನ ಮರಗಳ ಸಂಖ್ಯೆ ಮೂರು ಪಟ್ಟು ಹೆಚ್ಚು ಮಾಡುತ್ತೇನೆ’ ಎಂದು ಪ್ರತಿಜ್ಞೆ ಮಾಡಿ

2) ಕೆರೆಗಳನ್ನು, ಕೆರೆಗಳಿಗೆ ನೀರು ಹರಿಸುವ ಕಾಲುವೆಗಳನ್ನು ಉಳಿಸಿಕೊಳ್ಳಿ. ನಗರಕ್ಕೆ ಕೆರೆಗಳು ಭಾರ ಎನ್ನುವ ಭಾವ ತೊಡೆದುಹಾಕಿ

3) ಹೊಸದಾಗಿ ರಸ್ತೆಗಳನ್ನು ನಿರ್ಮಿಸುವಾಗ ಫುಟ್‌ಪಾತ್‌, ಸೈಕಲ್‌ಪಾತ್ ಮತ್ತು ಗಿಡಗಳನ್ನು ನೆಡಲು ಸ್ಥಳ ನಿಗದಿಮಾಡಿ

4) ಬಿಎಂಟಿಸಿ, ಮೆಟ್ರೊ, ಸಬ್‌ಅರ್ಬನ್ ರೈಲು ವ್ಯವಸ್ಥೆ ಸುಧಾರಿಸಿ. ‘ನನ್ನ ಅವಧಿಯಲ್ಲಿ ಇಂತಿಷ್ಟು ವಾಹನಗಳ ಸಂಖ್ಯೆ ಕಡಿಮೆ ಮಾಡುತ್ತೇನೆ’ ಎಂದು ನಿಮಗೆ ನೀವೇ ಗುರಿ ಹಾಕಿಕೊಳ್ಳಿ

5) ‘ಒಂದು ಮನೆಗೆ ಒಂದೇ ಗಾಡಿ’ ಎನ್ನುವ ನಿಯಮ ಜಾರಿ ಮಾಡಿ

-ಎಸ್‌.ಜಿ. ನೇಗಿನಹಾಳ್

‘ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬೆಂಗಳೂರಿನ ಪರಿಸರ ಸುಧಾರಿಸಲು ಏನು ಮಾಡುತ್ತದೆ?’ ಈ ಪ್ರಶ್ನೆಯನ್ನು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ಎದುರು ಇಡಲಾಯಿತು. ಮೂರೂ ರಾಜಕೀಯ ಪಕ್ಷಗಳ ನಾಯಕರು ನೀಡಿದ ಉತ್ತರ ಇಲ್ಲಿದೆ...

1) ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಂದು ಮರ ಕಡಿದರೆ, ಹತ್ತು ಗಿಡ ನೆಡ್ತೀವಿ

2) ಕಟ್ಟಡಗಳನ್ನು ಕಟ್ಟುವಾಗಲೇ ಪರಿಸರಸ್ನೇಹಿ ವಿಧಾನ ಅನುಸರಿಸಲು ನಿಯಮ ರೂಪಿಸುತ್ತೇವೆ

3) ಸಮೂಹ ಸಾರಿಗೆ ವ್ಯವಸ್ಥೆ ಸುಧಾರಿಸುವ ಮೂಲಕ ಸಂಚಾರ ದಟ್ಟಣೆ ಮತ್ತು ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುತ್ತೇವೆ

– ಜಯಮಾಲಾ, ಕಾಂಗ್ರೆಸ್ ನಾಯಕಿ, ವಿಧಾನ ಪರಿಷತ್ ಸದಸ್ಯೆ

1) ನಗರದ ಪರಿಸರ ಸುಧಾರಿಸಲು, ರಾಜಕೀಯದಿಂದ ಹೊರಗಿರುವ ತಜ್ಞರಿಂದಲೂ ಸಲಹೆಗಳನ್ನು ಪಡೆದುಕೊಳ್ಳುತ್ತೇವೆ

2) ಮೆಟ್ರೊ ಜೊತೆಗೆ ಉಪನಗರ ರೈಲು ವ್ಯವಸ್ಥೆಯನ್ನೂ ಸುಧಾರಿಸುತ್ತೇವೆ

3) ಹೊಸದಾಗಿ ರೂಪಿಸುವ ಲೇಔಟ್‌ಗಳಲ್ಲಿ ಪರಿಸರ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವಂತೆ ಎಚ್ಚರ ವಹಿಸುತ್ತೇವೆ

4) ನಗರ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ, ಉಳಿಸಿಕೊಳ್ಳುತ್ತೇವೆ

– ಸಿ.ಟಿ. ರವಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ

1) ‘ಹಸಿರು ಬೆಂಗಳೂರು’ ನಮ್ಮ ಧ್ಯೇಯ

2) ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುತ್ತೇವೆ

3) ನಿರುದ್ಯೋಗಿ ಯುವಕರನ್ನು ಸ್ವಯಂಸೇವಕರಾಗಿ ನೇಮಿಸಿಕೊಂಡು ಸಾಮಾಜಿಕ ಅರಣ್ಯ ಯೋಜನೆ ಜಾರಿ ಮಾಡುತ್ತೇವೆ

– ರಮೇಶ್‌ ಬಾಬು, ಜೆಡಿಎಸ್ ವಕ್ತಾರ, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT