ಎಲ್ಲ ಜಾತಿ– ಧರ್ಮದವರಿಗೆ ಆದ್ಯತೆ ನೀಡಿದ ಕಾಂಗ್ರೆಸ್‌

7
ಜಿಲ್ಲೆಯ ಪ್ರಭಾವಿ ಸಮುದಾಯವಾದ ಲಿಂಗಾಯತರಿಗೇ ಸಿಂಹ ಪಾಲು

ಎಲ್ಲ ಜಾತಿ– ಧರ್ಮದವರಿಗೆ ಆದ್ಯತೆ ನೀಡಿದ ಕಾಂಗ್ರೆಸ್‌

Published:
Updated:

ಬೆಳಗಾವಿ: ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವ ಕಾಂಗ್ರೆಸ್‌, ಎಲ್ಲ ಜಾತಿ, ಧರ್ಮದವರಿಗೆ ಆದ್ಯತೆ ನೀಡಿರುವುದು ಕಂಡುಬಂದಿದೆ. ಲಿಂಗಾಯತ– 6, ಮರಾಠಾ– 3, ಪರಿಶಿಷ್ಟ ಜಾತಿ–2, ಪರಿಶಿಷ್ಟ ಪಂಗಡ–2, ಮುಸ್ಲಿಂ, ಬ್ರಾಹ್ಮಣ, ಕುರುಬ ಹಾಗೂ ದೇವಾಂಗ ಸಮುದಾಯದ ತಲಾ ಒಬ್ಬೊಬ್ಬರಿಗೆ ಟಿಕೆಟ್‌ ನೀಡಿದೆ.

ಜಿಲ್ಲೆಯ ಪ್ರಭಾವಿ ಸಮುದಾಯದವಾಗಿರುವ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬಂದಿದೆ. ಮೂರರಲ್ಲಿ ಒಂದು ಭಾಗದಷ್ಟು ಟಿಕೆಟ್‌ಗಳನ್ನು ಇದೇ ಸಮುದಾಯಕ್ಕೆ ನೀಡಲಾಗಿದೆ. ಚಿಕ್ಕೋಡಿ– ಸದಲಗಾದ ಗಣೇಶ ಹುಕ್ಕೇರಿ, ಅಥಣಿ– ಮಹೇಶ ಕುಮಟಹಳ್ಳಿ, ಹುಕ್ಕೇರಿ– ಎ.ಬಿ. ಪಾಟೀಲ, ಬೆಳಗಾವಿ ಗ್ರಾಮಾಂತರ– ಲಕ್ಷ್ಮಿ ಹೆಬ್ಬಾಳಕರ, ಬೈಲಹೊಂಗಲ– ಮಹಾಂತೇಶ ಕೌಜಲಗಿ ಹಾಗೂ ರಾಮದುರ್ಗ– ಅಶೋಕ ಪಟ್ಟಣ ಅವರಿಗೆ ಟಿಕೆಟ್‌ ಲಭಿಸಿದೆ.

ಹಲವು ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವ ಮರಾಠಾ ಸಮುದಾಯಕ್ಕೆ ಸೇರಿದ ಮೂರು ಜನ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗಿದೆ. ನಿಪ್ಪಾಣಿ– ಕಾಕಾಸಾಹೇಬ ಪಾಟೀಲ, ಕಾಗವಾಡ– ಶ್ರೀಮಂತ ಪಾಟೀಲ ಹಾಗೂ ಖಾನಾಪುರ– ಡಾ.ಅಂಜಲಿ ನಿಂಬಾಳ್ಕರ ಅವರು ಸ್ಥಾನ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಎರಡು ಎಸ್‌ಸಿ ಹಾಗೂ ಒಂದು ಎಸ್‌ಟಿ ಮೀಸಲು ಕ್ಷೇತ್ರ ಇದೆ. ಇದರ ಹೊರತಾಗಿ ಕಾಂಗ್ರೆಸ್‌ ಒಂದು ಸ್ಥಾನ ಹೆಚ್ಚುವರಿಯಾಗಿ ಎಸ್.ಟಿ.ಗೆ ನೀಡಿದೆ. ಎಸ್‌ಸಿ ಮೀಸಲು ಕ್ಷೇತ್ರವಾಗಿರುವ ರಾಯಬಾಗ ಕ್ಷೇತ್ರಕ್ಕೆ ಪ್ರದೀಪಕುಮಾರ ಮಾಳಗಿ ಹಾಗೂ ಕುಡಚಿ ಕ್ಷೇತ್ರಕ್ಕೆ ಅಮಿತ್‌ ಘಾಟ್ಗೆ ಅವರಿಗೆ ಅವಕಾಶ ನೀಡಿದೆ.

ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಯಮಕನಮರಡಿ ಕ್ಷೇತ್ರದ ಟಿಕೆಟ್‌ ಸತೀಶ ಜಾರಕಿಹೊಳಿ ಅವರಿಗೆ ಲಭಿಸಿದೆ. ಇವರ ಸಹೋದರ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಗೋಕಾಕ (ಸಾಮಾನ್ಯ ಕ್ಷೇತ್ರ) ಟಿಕೆಟ್‌ ನೀಡಲಾಗಿದೆ.

ಬೆಳಗಾವಿ ಉತ್ತರ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯದ ಫಿರೋಜ್‌ ಸೇಠ್‌, ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ದೇವಾಂಗ ಸಮುದಾಯದ ಎಂ.ಡಿ. ಲಕ್ಷ್ಮಿನಾರಾಯಣ, ಅರಬಾವಿ ಕ್ಷೇತ್ರಕ್ಕೆ ಕುರುಬ ಸಮುದಾಯದ ಅರವಿಂದ ದಳವಾಯಿ ಹಾಗೂ ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಬ್ರಾಹ್ಮಣ ಸಮುದಾಯದ ವಿಶ್ವಾಸ ವೈದ್ಯ ಅವರಿಗೆ ಟಿಕೆಟ್‌ ಲಭಿಸಿದೆ.

ಹೊಸಬರಿಗೆ ಅವಕಾಶ:

17 ಜನರ ಪೈಕಿ 3 ಅಭ್ಯರ್ಥಿಗಳು ಪ್ರಥಮ ಬಾರಿಗೆ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ರಾಯಬಾಗ ಮತಕ್ಷೇತ್ರದಿಂದ 1989, 1994, 1999 ಹಾಗೂ 2008ರಲ್ಲಿ ಕುಡಚಿಯಿಂದ ಆಯ್ಕೆಯಾಗಿದ್ದ ಶ್ಯಾಮ ಘಾಟ್ಗೆ ಅವರ ಪುತ್ರರಾಗಿರುವ ಅಮಿತ್‌ ಘಾಟ್ಗೆ ಮೊದಲ ಬಾರಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಬಿಜೆಪಿ ಸರ್ಕಾರವಿದ್ದಾಗ ವಿಧಾನಪರಿಷತ್ ಸದಸ್ಯರಾಗಿದ್ದ ಎಂ.ಡಿ. ಲಕ್ಷ್ಮಿನಾರಾಯಣ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ತುಮಕೂರಿನವರಾದ ಲಕ್ಷ್ಮಿನಾರಾಯಣ ದೇವಾಂಗ ಸಮುದಾಯಕ್ಕೆ ಸೇರಿದವರು. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರಿರುವುದರಿಂದ ಅವರಿಗೆ ಟಿಕೆಟ್‌ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ವಿಶ್ವಾಸ ವೈದ್ಯ ಅವರು ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ.

ಅಚ್ಚರಿಯ ತೀರ್ಮಾನಗಳು:

ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ವಿಶ್ವಾಸ ವೈದ್ಯ ಅವರಿಗೆ ಟಿಕೆಟ್‌ ದೊರಕಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಕಳೆದ ಬಾರಿ ಪಕ್ಷೇತರರಾಗಿ ನಿಂತು ತೀವ್ರ ಪೈಪೋಟಿ ನೀಡಿದ್ದ ಆನಂದ ಛೋಪ್ರಾ ಅವರಿಗೆ ಟಿಕೆಟ್‌ ತಪ್ಪಿದೆ. ಇವರು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರ ಗುಂಪಿನ ಜೊತೆ ಗುರುತಿಸಿಕೊಂಡಿದ್ದರಿಂದಲೇ ಟಿಕೆಟ್‌ ತಪ್ಪಿದೆ ಎಂದು ಹೇಳಲಾಗುತ್ತಿದೆ.

ಪಕ್ಷಾಂತರಿಗಳು:

ಅರಬಾವಿ ಕ್ಷೇತ್ರದಿಂದ 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಅರವಿಂದ ದಳವಾಯಿ, 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಈ ಬಾರಿ ಅವರಿಗೆ ಅರಬಾವಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ದೊರೆತಿದೆ. ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರ್ಪಡೆಯಾದ ಶ್ರೀಮಂತ ಪಾಟೀಲ ಅವರಿಗೆ ಕಾಗವಾಡ ಟಿಕೆಟ್‌ ದೊರೆತಿದೆ.

ವಿಧಾನ ಪರಿಷತ್ ಸದಸ್ಯ ವಿವೇಕರಾವ್‌ ಪಾಟೀಲ ಆಪ್ತ ಪ್ರದೀಪಕುಮಾರ ಮಾಳಗಿ ಅವರಿಗೆ ರಾಯಬಾಗ ಕ್ಷೇತ್ರದ ಟಿಕೆಟ್‌ ದೊರೆತಿದೆ. ಕಳೆದ ಬಾರಿ ಇವರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ವಿವೇಕರಾವ್‌ ಅವರ ಜೊತೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ದೊರೆಯದಿದ್ದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಂಜಲಿ ನಿಂಬಾಳ್ಕರ್‌ ಅವರಿಗೆ ಈ ಸಲ ಕಾಂಗ್ರೆಸ್‌ ಪಕ್ಷ ಅಧಿಕೃತವಾಗಿ ಟಿಕೆಟ್‌ ನೀಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry