‘ಮಲೆನಾಡಿನ ಪ್ರಾಕೃತಿಕ ಸಂಪತ್ತು ಉಳಿಸಿ’

7
ಶೃಂಗೇರಿಯಲ್ಲಿ ಮಲೆನಾಡು ದಿನ ಆಚರಣೆ

‘ಮಲೆನಾಡಿನ ಪ್ರಾಕೃತಿಕ ಸಂಪತ್ತು ಉಳಿಸಿ’

Published:
Updated:

ಶೃಂಗೇರಿ: ‘ಮಲೆನಾಡಿನ ಸಂಸ್ಕೃತಿಯನ್ನು ಪ್ರೀತಿಸುವ ಮನಸ್ಸುಗಳು ಮರೆಯಾಗುತ್ತಿದ್ದು, ಉದ್ಯೋಗ ಅರಸಿ ಹೆಚ್ಚಿನ ಯುವಕರು ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಜವಾಬ್ದಾರಿಯನ್ನು ಹೊರುವ, ಕೃಷಿಯನ್ನು ಪ್ರೀತಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದು ನಿವೃತ್ತ ಶಿಕ್ಷಕ ಯೋಗಪ್ಪ ತಿಳಿಸಿದರು.

ಶೃಂಗೇರಿಯ ಶಿಕ್ಷಣ ಸ್ನೇಹಿ ಟ್ರಸ್ಟ್ ತಾಲ್ಲೂಕಿನ ಹೊಸಕೊಪ್ಪ ಕೃಷಿಕ ಕಳಸಪ್ಪ ಹೆಗ್ಡೆ ಅವರ ಮನೆ ಅಂಗಳದಲ್ಲಿ ಭಾನುವಾರ ಆಯೋಜಿಸಿದ್ದ ‘ಮಲೆನಾಡು ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡಿನ ನೆಲ, ಜಲವನ್ನು ಸಂರಕ್ಷಿಸಿದ ಪೂರ್ವಿಕರು ತಮ್ಮತನವನ್ನು ನಮಗಾಗಿ ನೀಡಿ ಹೋಗಿದ್ದಾರೆ. ಆದರೆ ನಾವು ಇರುವುದನ್ನು ಬಿಟ್ಟು ಇಲ್ಲದೆಡೆಗೆ ಸಾಗುತ್ತಿದ್ದೇವೆ. ದಟ್ಟ ಅರಣ್ಯಗಳ ನಡುವೆ ಪುಟ್ಟಮನೆಗಳಲ್ಲಿ ವಾಸವಾಗಿದ್ದ ಸಾಂಸ್ಕೃತಿಕ ನೆಲೆಗಟ್ಟು ಮರೆಯಾಗಿದ್ದು ಮಲೆನಾಡು ಬರಿದಾಗುತ್ತಿದೆ’ ಎಂದರು.

ಶಿಕ್ಷಣ ಸ್ನೇಹಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅನಿಲ್ ಹೊಸಕೊಪ್ಪ ಮಾತನಾಡಿ, ‘ಮಲೆನಾಡಿನಲ್ಲಿ ಅಯಾ ಸಮೂದಾಯದ ಸಂಸ್ಕೃತಿಗಳಿಗೆ ತಕ್ಕಂತೆ ಭಾಷೆ ಇದ್ದು, ಮಲೆನಾಡಿನ ಮೂಲ ಭಾಷೆ ಕನ್ನಡ, ಆದರೆ  ಕಸ್ತೂರಿ ರಂಗನ್ ವರದಿಯನ್ನು ಆಂಗ್ಲಭಾಷೆಯಲ್ಲಿ ಮುದ್ರಿಸಿ ಮಲೆನಾಡಿಗರಿಗೆ ನೀಡಲಾಗಿದೆ. ಈ ವರದಿ ಜಾರಿಗೆ ಬಂದಲ್ಲಿ ನಮಗೆ ಸತ್ತಾಗ ಬಾಯಿಗೆ ನೀರು ಬಿಡುವ ಕಾರ್ಯಕ್ರಮವಾಗುತ್ತದೆ’ ಎಂದರು.

‘ನಮ್ಮ ಸಂಸ್ಕೃತಿ, ಸಂಸ್ಕಾರಗಳು ಮರೆಯಾಗುತ್ತಿದ್ದು, ಬದುಕು ಅಸಹನೀಯವಾಗಿ ಮಾರ್ಪಟ್ಟಿದೆ. ಇಲ್ಲಿರುವ ಸಮಸ್ಯೆಗಳನ್ನು ಜನರು ಗಂಭೀರವಾಗಿ ಚಿಂತಿಸುತ್ತಿಲ್ಲ. ತಮ್ಮ ಸ್ವಾರ್ಥಪರ ಚಿಂತನೆಗಳಿಂದ ಬದುಕು ದುಡಿಯುತ್ತಾ ಹೋಗುವ ಜನರು ಇರುವ ತನಕ ಮಲೆನಾಡಿನ ಸಮಸ್ಯೆಗಳು ಸಮಸ್ಯೆಗಳಾಗಿ ಉಳಿಯುತ್ತವೆ. ನಮ್ಮ ಹಿರಿಯರು ನೆಟ್ಟ ಮರಗಳನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆಯವರ ಅನುಮತಿ ಬೇಕಾಗಿದೆ. ಇದು ಯಾವ ನ್ಯಾಯ’ ಎಂದರು.

ಕೃಷಿಕ ನವೀನ್ ಕರುವಾನೆ ಮಾತನಾಡಿ ‘ಮಲೆನಾಡಿನ ಜನರ ನಡುವೆ ಒಗ್ಗಟ್ಟಿನ ಕೊರತೆ ಇದ್ದು, ರಾಜಕಾರಣಿಗಳು ಸಾಮಾನ್ಯರನ್ನು ಹಾದಿ ತಪ್ಪಿಸುತ್ತಿದ್ದಾರೆ. ಜನರು ಇಲ್ಲ ಎಂದಾಕ್ಷಣ ಹೋರಾಟಗಳು ನಿಲ್ಲಬಾರದು. ನಮ್ಮ ಮನಸ್ಸಿನಲ್ಲಿ ಪ್ರಾಮಾಣಿಕತೆ, ನಂಬಿಕೆ ಇರಬೇಕು. ರೈತರ ಪರ ಬಂದ ಗೋರಖ್‌ ಸಿಂಗ್ ವರದಿ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇಲ್ಲ’ ಎಂದರು.

ಶಿಕ್ಷಣ ಸ್ನೇಹಿ ಟ್ರಸ್ಟ್‌ನ ಜಗದೀಶ್ ಕಣದಮನೆ, ಕೆ.ಟಿ ಮಂಜುನಾಥ್, ಸಂತೋಷ್ ಕಾಳ್ಯ, ಶುಭಕೃತ, ರತ್ನಾಕರ್‌, ಅವಿನಾಶ್, ನಾಗನ್ ಹಾಗೂ ಸದಸ್ಯರು ಹಾಜರಿದ್ದರು.

**

ಸಮಸ್ಯೆಗಳ ವಿರುದ್ಧ ಹೋರಾಟ ಮಾಡಲು ಮಲೆನಾಡಿಗರು ಪಕ್ಷಭೇದ ಮರೆತು ಒಂದಾಗಬೇಕು. ಮಣ್ಣಿನ ಸಂಸ್ಕೃತಿಯನ್ನು ಪ್ರೀತಿಸುವ ಯುವ ಮನಸ್ಸುಗಳು ಒಗ್ಗೂಡಬೇಕು –  ಅನಿಲ್ ಹೊಸಕೊಪ್ಪ, ಸಂಸ್ಥಾಪಕ ಅಧ್ಯಕ್ಷ, ಶಿಕ್ಷಣ ಸ್ನೇಹಿ ಟ್ರಸ್ಟ್ ಶೃಂಗೇರಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry