ಮಂಗಳವಾರ, ಜೂಲೈ 7, 2020
27 °C

5ಜಿಯಿಂದ ಮತ್ತಷ್ಟು ಸ್ಮಾರ್ಟ್ ಆಗಲಿದೆ ಜೀವನ

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

5ಜಿಯಿಂದ ಮತ್ತಷ್ಟು ಸ್ಮಾರ್ಟ್ ಆಗಲಿದೆ ಜೀವನ

ಇಂದಿನ ಆಧುನಿಕ ಅವಸರದ ಜೀವನದ ಭರಾಟೆಯಲ್ಲಿ ಎಲ್ಲವೂ ತುರ್ತಾಗಿ ಆಗಬೇಕಿದೆ. ಮನೆಯ ಕೆಲಸಗಳಿಂದ ಹಿಡಿದು ಕಚೇರಿ ಕೆಲಸಗಳವರೆಗೆ ಎಲ್ಲವೂ ಚಿಟಿಕೆ ಹೊಡೆಯುವಷ್ಟರಲ್ಲಿ ಪೂರ್ಣಗೊಳ್ಳಬೇಕು. ನಮ್ಮ ಕೆಲಸಗಳಿಗೆ ಅನುಗುಣವಾಗಿ ತಂತ್ರಜ್ಞಾನ ಅಭಿವೃದ್ಧಿಯೂ ನಿತ್ಯ ಹೊಸ ರೂಪ ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ದೂರ ಸಂಪರ್ಕ ಸೇವೆಗಳು 3ಜಿ, 4ಜಿಗಳನ್ನು ಮೀರಿಸಿ 5ಜಿ ಹಂತ ಪ್ರವೇಶಿಸಲು ತುದಿಗಾಲಲ್ಲಿ ನಿಂತಿವೆ.

ಈಚೆಗಷ್ಟೇ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಸ್ಯಾಮ್ಸಂಗ್ ಪ್ರಸ್ತುತಪಡಿಸಿದ 5ಜಿ ಹೋಂ ರೌಟರ್‌ಗಳ ವೇಗ ಸೆಕೆಂಡ್ ಗೆ 4 ಗಿಗಾಬೈಟ್ಸ್ ನಷ್ಟು ದಾಖಲಾಗಿದೆ. ಈ ವೇಗದಲ್ಲಿ 50ಜಿಬಿ ವೇಗದ ಗೇಮ್ ತಂತ್ರಾಂಶವನ್ನು 2 ನಿಮಿಷದಲ್ಲಿ, 100ಜಿಬಿ 4ಕೆ ಗುಣಮಟ್ಟದ ಚಲನಚಿತ್ರವನ್ನು 4ನಿಮಿಷದಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಪ್ರಸ್ತುತ ನಮ್ಮ ದೇಶದಲ್ಲಿ ಅಂತರ್ಜಾಲದ ಸರಾಸರಿ ವೇಗ ಸೆಕೆಂಡ್‌ಗೆ 6.5 ಮೆಗಾಬೈಟ್ಸ್ ನಷ್ಟು ಇದೆ. ಇದಕ್ಕೆ ಹೋಲಿಕೆ ಮಾಡಿಕೊಂಡರೆ 5ಜಿ ವೇಗ ಎಷ್ಟರ ಮಟ್ಟಿಗೆ ಇರಲಿದೆ ಎಂಬುದನ್ನು ಊಹಿಸಿಕೊಳ್ಳಬಹುದು.

ಸುಲಭವಾಗಲಿದೆ ದಿನಸಿ ಖರೀದಿ: ಪ್ರಸ್ತುತ ಸ್ಮಾರ್ಟ್ ಪರಿಕರಗಳು ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿರುವುದರಿಂದ, ವೇಗದ ಅಂತರ್ಜಾಲ ಸಂಪರ್ಕದ ಸಹಾಯದಿಂದ ಮನೆಯ ಪರಿಕರಗಳ ಮೂಲಕವೇ ದಿನಸಿ ಖರೀದಿ ಮಾಡಲು ಸುಲಭವಾಗುತ್ತದೆ. ಉದಾಹರಣೆಗೆ ಸ್ಮಾರ್ಟ್ ರೆಫ್ರಿಜಿರೇಟರ್‌ಗಳು ಇದ್ದಲ್ಲಿ ಅದರೊಳಗೆ ನಿತ್ಯ ತುಂಬಿಸಿ ಇಡುವ ಹಾಲು, ಸೊಪ್ಪು, ಮೊಟ್ಟೆ ಇತ್ಯಾದಿ ಪದಾರ್ಥಗಳನ್ನು ಪರಿಕರವೇ ಲೆಕ್ಕ ಹಾಕಿ ನೇರವಾಗಿ ಅಂಗಡಿಯವನಿಗೆ ಸಂದೇಶ ರೂಪದಲ್ಲಿ ತಿಳಿಸಲು ಸಾಧ್ಯವಾಗುತ್ತದೆ.

ಇಂಧನ ಉಳಿತಾಯ: ವಿದ್ಯುತ್ ಅನ್ನು ಹೆಚ್ಚಾಗಿ ಬಳಸುವ ವಿದ್ಯುತ್ ಉಪಕರಣಗಳನ್ನು ವಿದ್ಯುತ್ ದರಕ್ಕೆ ತಕ್ಕಂತೆ ಬಳಸಿಕೊಳ್ಳುವಂತೆ ಮಾಡಬಹುದು. ಇದರ ಮೂಲಕ ಇಂಧನ ಉಳಿತಾಯದ ಜತೆಗೆ ಖರ್ಚು ಕಡಿಮೆಯಾಗುತ್ತದೆ. ವಿದ್ಯುತ್ ಸ್ಮಾರ್ಟ್ ದೀಪಗಳು, ಮನೆಯನ್ನು ಬೆಚ್ಚಗಿಡುವ ಥರ್ಮೊಸ್ಟಾಟ್‌ನಂತಹ ಪರಿಕರಗಳು ನಮ್ಮ ಜೀವನಶೈಲಿಗೆ ಅನುಗುಣವಾಗಿ ಕೆಲಸ ಮಾಡುವಂತೆ ಮಾಡಬಹುದು. ಉದಾಹರಣೆಗೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗ್ರಹಿಸಿ ಎಲ್ಲ ವಿದ್ಯುತ್ ಪರಿಕರಗಳು ತಮ್ಮಷ್ಟಕ್ಕೆ ತಾವೇ ನಿಷ್ಕ್ರಿಯಗೊಳ್ಳುವಂತೆ ಮಾಡಬಹುದು. ನಾವು ಮನೆಗೆ ತಲುಪುತ್ತಿದ್ದಂತೇ ನಮ್ಮನ್ನು ಗುರುತಿಸಿ ಸಕ್ರಿಯಗೊಳ್ಳುವಂತೆ ಮಾಡಬಹುದು.

ಮಕ್ಕಳ ಮೇಲೆ ನಿಗಾ: ಸ್ಮಾರ್ಟ್ ಫೋನ್‌ಗಳ ಸಹಾಯದಿಂದಲೇ ಪೋಷಕರು ಮಕ್ಕಳ ಆರೋಗ್ಯದ ಕುರಿತು ಕಾಳಜಿ ವಹಿಸಬಹುದು. ಮಕ್ಕಳು ಹೇಗಿದ್ದಾರೆ. ಮೈ ಬಿಸಿಯಾಗಿದೆಯೇ, ಉಸಿರಾಟ ಹೇಗಿದೆ ಎಂಬುದನ್ನು ಮನೆಯಲ್ಲಿನ ಸೆನ್ಸರ್‌ಗಳು ಗ್ರಹಿಸಿ ಕಚೇರಿಯಲ್ಲಿರುವ ನಮಗೆ ಮಾಹಿತಿ ರವಾನಿಸಬಹುದು. ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ಎಚ್ಚರಿಕೆ ಸಂದೇಶ ಕಳುಹಿಸಬಹುದು. ಈ ಸ್ಮಾರ್ಟ್ ಸೆನ್ಸರ್‌ಗಳ ಮೂಲಕ ಮನೆಯಲ್ಲಿನ ಸಾಕು ಪ್ರಾಣಿಗಳ ಮೇಲೆ ನಿಗಾ ಇಡಬಹುದು.

ಸಂಚಾರ ದಟ್ಟಣೆ ನಿಯಂತ್ರಣ: 5ಜಿ ಅಂತರ್ಜಾಲ ಸಂಪರ್ಕದಿಂದ ಪ್ರಯಾಣ ಮತ್ತಷ್ಟು ಸಲೀಸಾಗಬಹುದು. ಸಂಚಾರ ದಟ್ಟಣೆಗೆ ಅನುಗುಣವಾಗಿ ಟ್ರಾಫಿಕ್ ದೀಪಗಳು ತಾವಾಗಿಯೇ ಸಮಯವನ್ನು ಹೊಂದಿಸಿಕೊಳ್ಳಬಹುದು. ಆಂಬುಲೆನ್ಸ್‌ಗಳು ರಸ್ತೆಯಲ್ಲಿ ನಿಂತಿದ್ದರೆ, ಅವನ್ನು ಗುರುತಿಸಿ ದಾರಿ ಮಾಡಿಕೊಡಬಹುದು. ರಸ್ತೆಯಲ್ಲಿ ಅಳವಡಿಸಿರುವ ಸೆನ್ಸರ್‌ಗಳು ನೇರವಾಗಿ ವಾಹನಗಳ ಡ್ಯಾಷ್ ಬೋರ್ಡ್‌ಗಳ ಜತೆ ಅನುಸಂಧಾನವಾಗಿ ಅಲ್ಲಿಯ ವಾತಾವರಣ ಮತ್ತು ವಾಹನಗಳ ದಟ್ಟಣೆಗೆ ಅನುಗುಣವಾಗಿ ವಾಹನದ ವೇಗವನ್ನೂ ನಿಯಂತ್ರಿಸಬಹುದು.

ಸ್ಮಾರ್ಟ್ ಅಲಾರಂ: ಕಚೇರಿಗೆ ಹೋಗುವ ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದರೆ ಅಥವಾ ಅಪಘಾತಗಳು ನಡೆದಿದ್ದರೆ ಅಂತಹ ವಿಷಯಗಳನ್ನು ಸೆನ್ಸರ್‌ಗಳು ಗ್ರಹಿಸಿ, ಕೂಡಲೇ ನಮ್ಮನ್ನು ಎಚ್ಚರಿಸಿ ಪರ್ಯಾಯ ದಾರಿ ತೋರಿಸಬಹುದು.

ಸುಖಕರವಾಗಲಿದೆ ಕಾರು ಪ್ರಯಾಣ: ಕಾರಿನಲ್ಲಿ ಇಂಧನ ಖಾಲಿಯಾಗುವ ಹಂತಕ್ಕೆ ತಲುಪಿದ್ದರೆ, ಗಾಲಿ ಗಳಲ್ಲಿ ಗಾಳಿ ಕಡಿಮೆಯಾಗಿದ್ದರೆ, ವಾಹನಕ್ಕೆ ಸರ್ವಿಸ್ ಮಾಡಿಸಬೇಕಾದ ಅನಿವಾರ್ಯತೆ ಇದ್ದರೆ,  ಮೆಕ್ಯಾನಿಕ್ ಕೇಂದ್ರಗಳ ಜತೆ ಪರಿಕರಗಳೇ ಸಂಪರ್ಕ ಪಡೆದುಕೊಂಡು ಸಂದೇಶ ಕಳುಹಿಸಬಹುದು. ಐಒಟಿ ತಂತ್ರಜ್ಞಾನದ ಮೂಲಕ ನಾವು ಮಾಡಬೇಕಾಗಿರುವ ಇಂತಹ ಹಲವು ಕೆಲಸಗಳನ್ನು ಸಾಧನಗಳೇ ಮಾಡಿ ಮುಗಿಸಬಹುದು.

ಆರೋಗ್ಯ ರಕ್ಷಣೆ: ಔಷಧಿ ಖಾಲಿಯಾದರೆ ಬಾಟಲಿಗಳ ಮೇಲಿರುವ ಕೋಡ್‌ಗಳನ್ನು ಸೆನ್ಸರ್‌ಗಳು ಗ್ರಹಿಸಿ ವೈದ್ಯರ ಸಂಪರ್ಕ ಸಾಧಿಸಿ ಮತ್ತೊಂದು ಕಳುಹಿಸಿಕೊಡುವಂತೆ ಸಂದೇಶ ರವಾನಿಸಬಹುದು. ನಾವು ಔಷಧಿಗಳನ್ನು ಸೇವಿಸುತ್ತಿದ್ದೇವೆಯೋ, ಇಲ್ಲವೋ ಎಂಬುದನ್ನೂ ವೈದ್ಯರು ಗಮನಿಸಬಹುದು. ಈ ವೇಗದ ಅಂತರ್ಜಾಲದ ಸಹಾಯದಿಂದ ಮನೆಯಲ್ಲಿ ಯಾರಾದರೂ ಮಧುಮೇಹ,  ರಕ್ತದೊತ್ತಡ ಇತ್ಯಾದಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅವರ ಆರೋಗ್ಯ ಕಾಳಜಿ ಕುರಿತು ನಮಗಿಂತ ಹೆಚ್ಚಾಗಿ ಸ್ಮಾರ್ಟ್ ಪರಿಕರಗಳೇ ನಿಗಾ ವಹಿಸಲಿವೆ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ. ರಕ್ತದೊತ್ತಡ  ಇತ್ಯಾದಿ ಮಾಹಿತಿ ಸ್ಮಾರ್ಟ್ ಫೋನ್‌ಗೆ ಆಗಾಗ್ಗೆ ಸಂದೇಶ ರೂಪದಲ್ಲಿ ಬರಬಹುದು.

ತಂತ್ರಜ್ಞಾನ ಬಳಕೆ ಸುಲಭ: ಅತ್ಯಧಿಕ ವೇಗದ ಅಂತರ್ಜಾಲ ಸಂಪರ್ಕದ ಸಹಾಯ ದಿಂದ ವರ್ಚುವಲ್ ರಿಯಾಲಿಟಿ, ಆಗ್ಮೆಂಟೆಡ್‌ ರಿಯಾಲಿಟಿ ಇತ್ಯಾದಿ ತಂತ್ರಜ್ಞಾನಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೇ ಬಳಸಿಕೊಳ್ಳ ಬಹುದು. ಮುಖ್ಯವಾಗಿ ಇಂಟರ್ ನೆಟ್ ಆಫ್ ಥಿಂಗ್ಸ್ ವಿಷಯದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳು ಆಗಬಹುದು.

ಉದಾಹರಣೆಗೆ ಈ ಐಒಟಿ ತಂತ್ರಜ್ಞಾನದ ಮೂಲಕದ ಅಂತರ್ಜಾಲದ ಸಂಪರ್ಕದೊಂದಿಗೆ ಕೆಲಸ ಮಾಡುವ ಎಲ್ಲ ಸಾಧನಗಳು, ಯಂತ್ರಗಳನ್ನು ಒಟ್ಟು ಗೂಡಿಸಬಹುದು. ಇವು ನಮ್ಮ ಅಗತ್ಯಗಳನ್ನು ಮೊದಲೇ ಗ್ರಹಿಸಿ ನಮಗೆ ಮಾಹಿತಿ ರವಾನಿಸಬಹುದು.

**

5ಜಿ ಎಂದರೆ?

ಪ್ರಸ್ತುತ ನಾವು ವೈರ್‌ಲೆಸ್ ಮೊಬೈಲ್ ನೆಟ್‌ವರ್ಕ್ಸ್‌ಗಳಿಗೆ ಬಳಸುತ್ತಿರುವ 4ಜಿ ಎಲ್‌ಟಿಇ ತಂತ್ರಜ್ಞಾನದ ಮಂದಿನ ಹಂತ. ಮಿಂಚಿನ ವೇಗದಲ್ಲಿ ಕೆಲಸ ಮಾಡುವ ಈ ತಂತ್ರಜ್ಞಾನವನ್ನು ಕೇವಲ ದೂರ ಸಂಪರ್ಕಕ್ಕೆ ಅಷ್ಟೇ ಅಲ್ಲ, ಹೋಂ ಇಂಟರ್‌ನೆಟ್‌ನಂತಹ ಹಲವು ತಂತ್ರಾಂಶಗಳಿಗೆ ಬಳಸಿಕೊಳ್ಳಬಹುದು.

5ಜಿ ತಂತ್ರಜ್ಞಾನವನ್ನು ಮುಂದಿನ ವರ್ಷ ನಡೆಯುವ ವರ್ಲ್ಡ್ ಕಮ್ಯುನಿಕೇಷನ್ ಕಾನ್ಫ್‌ರೆನ್ಸ್ ನಂತರ ಪೂರ್ಣ ಪ್ರಮಾಣದಲ್ಲಿ ನಿರ್ವಹಣೆ ಮಾಡುವ ಅವಕಾಶಗಳಿದ್ದರೂ, ಇದು ಎರಡು ರೀತಿಯಲ್ಲಿ ಬಳಕೆಗೆ ಬರುವ ಸಾಧ್ಯತೆ ಇದೆ. ಪ್ರಾಥಮಿಕ, ಮಧ್ಯ ಬ್ಯಾಂಡ್ 6 ಗಿಗಾ ಹರ್ಟ್ಸ್‌ಗಿಂತ ಕಡಿಮೆ ತರಾಂಗಂತರ, ಹೈ ಬ್ಯಾಂಡ್ 6 ಗಿಗಾಹರ್ಟ್ಸ್‌ಗಿಂತ ಹೆಚ್ಚಿನ ತರಾಂಗತರ ಮೂಲಕ ಮತ್ತು ಮಿಲಿ ಮೀಟರ್ ವೇವ್ ಬ್ಯಾಂಡ್‌ಗಳ ಮೂಲಕ ಸೇವೆ ಪಡೆಯಬಹುದು. ಈ ಎರಡೂ ಬ್ಯಾಂಡ್‌ಗಳು ಪ್ರಸ್ತುತ ಬಳಸುತ್ತಿರುವ ಎಲ್‌ಟಿಇ ನೆಟ್‌ವರ್ಕ್ಸ್‌ನ  ಸಾಮರ್ಥ್ಯವನ್ನು ಹಾಗೂ ಕಾರ್ಯ ವೈಖರಿಯನ್ನು ಮತ್ತಷ್ಟು ಹೆಚ್ಚಿಸಬಹುದು.

5ಜಿ ಮಿಲಿಮೀಟರ್ ತರಂಗಗಳಿಗೆ ತಂತಿಯ ಸಹಾಯದಿಂದ ಸಂಪರ್ಕ ಕಲ್ಪಿಸುವ ಅಗತ್ಯ ಇರುವುದಿಲ್ಲ. ನಮ್ಮ ಮೊಬೈಲ್ ಫೋನ್‌ಗಳಿಗೆ ಸಿಗುವ ನೆಟ್‌ವರ್ಕ್ ರೀತಿಯಲ್ಲೇ ಇವು ಕೂಡ ಗಾಳಿಯ ಮೂಲಕವೇ ಸೇವೆ ಒದಗಿಸುತ್ತವೆ. ಉದಾಹರಣೆಗೆ ಮನೆಯ ಹೊರಗಡೆ ಆ್ಯಂಟೆನಾ ಅಳವಡಿಸಿದರೆ, ಇದು ಸೆಲ್‌ಫೋನ್ ಟವರ್‌ಗಳ ಮೂಲಕ ತರಂಗಗಳನ್ನು ಗ್ರಹಿಸಿ ಮನೆಯಲ್ಲಿನ 5ಜಿ ರೌಟರ್‌ಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ವೈ-ಫೈ ಸಹಾಯದಿಂದ ಕೆಲಸ ಮಾಡುವ ಎಲ್ಲ ಪರಿಕರಗಳು ಅಂತರ್ಜಾಲದ ಸಂಪರ್ಕ ಪಡೆದುಕೊಳ್ಳುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.