ಭಾನುವಾರ, ಡಿಸೆಂಬರ್ 15, 2019
19 °C
ಫ್ಲೈಯಿಂಗ್‌ ಸ್ಕ್ವಾಡ್ ಹಾಗೂ ಎಸ್ಎಎಸ್‌ಟಿ ಸಭೆ

ಶಂಕಾಸ್ಪದ ವಾಹನ ತಪಾಸಣೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಂಕಾಸ್ಪದ ವಾಹನ ತಪಾಸಣೆಗೆ ಸೂಚನೆ

ವಿಜಯಪುರ: ವಿಧಾನಸಭಾ ಚುನಾವಣೆ ಅಂಗವಾಗಿ ರಚಿಸಲಾಗಿರುವ ಸಂಚಾರಿ ವಿಚಕ್ಷಣ ದಳಗಳು, ಸ್ಥಾನಿಕ ಕಣ್ಗಾವಲು ಸಮಿತಿಗಳು ಚುರುಕಾಗಿ ಕಾರ್ಯನಿರ್ವಹಿಸುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಗುರುತಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಮಾಂಗಣದಲ್ಲಿ ಸೋಮವಾರ ನಡೆದ ಫ್ಲೈಯಿಂಗ್‌ ಸ್ಕ್ವಾಡ್ ಹಾಗೂ ಎಸ್ಎಎಸ್‌ಟಿ ತಂಡಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಂತರರಾಜ್ಯ ಹಾಗೂ ಅಂತರ ಜಿಲ್ಲಾ ಗಡಿ ಚೆಕ್ ಪೋಸ್ಟ್‌ಗಳು 24 ಗಂಟೆಗಳ ಕಾರ್ಯನಿರ್ವಹಿಸಬೇಕು. ಸಂಬಂಧಪಟ್ಟ ತಂಡಗಳು ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡುವ ಜೊತೆಗೆ ಯಾವುದೇ ರೀತಿಯ ಅಕ್ರಮ ವಸ್ತುಗಳ ಸಾಗಾಣಿಕೆ ಕಂಡು ಬಂದಲ್ಲಿ ತಕ್ಷಣ ಜಪ್ತಿ ಮಾಡಿಕೊಂಡು ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ವಿವಿಧ ಮಾರ್ಗಗಳಲ್ಲಿ ಗುಪ್ತ ವರದಿ ಆಧಾರದ ಮೇಲೆ ಚಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಧಿಕಾರಿಗಳು ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ತೋರಬಾರದು. ಸಂಶಯಾಸ್ಪದ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಚುನಾವಣಾ ಅಧಿಕಾರಿಗಳು, ವಿಚಕ್ಷಣ ದಳಗಳು, ಸ್ಥಾನಿಕ ಕಣ್ಗಾವಲು ತಂಡಗಳು, ವಿಎಸ್‌ಟಿ ಹಾಗೂ ವಿವಿಟಿ ತಂಡಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎಂ. ಸುಂದರೇಶಬಾಬು, ವಿಡಿಯೋ ಚಿತ್ರೀಕರಣ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಚಟುವಟಿಕೆಯನ್ನು ದಾಖಲಿಸಿ ಕಾನೂನಿನ್ವಯ ಕ್ರಮ ಕೈಗೊಳ್ಳಬೇಕು. ದಿನನಿತ್ಯ ತಮ್ಮ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸಬೇಕು. ಸಾರ್ವಜನಿಕರೊಂದಿಗೆ ಯಾವುದೇ ರೀತಿಯ ದುರ್ನಡತೆ ನಡೆಸದಿರಲು ತಿಳಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಶೆಟ್ಟೆಣ್ಣವರ ಯತ್ನಾಳ, ಸಿದ್ದಾಪುರ, -ಅರಕೇರಿ, ಸಿಂದಗಿ ನಾಕಾ, ಬಬಲೇಶ್ವರ ನಾಕಾ, ಇಂಡಿ ನಾಕಾ, ಸೊಲ್ಲಾಪುರ ನಾಕಾ, ಶಿರಾಡೋಣ ಚೆಕ್‌ಪೋಸ್ಟ್‌, ಕೊಂಕಣಗಾಂವ, ಉಮರಾಣಿ, ಸಂಕನಾಳ, ಮಣ್ಣೂರ ಕ್ರಾಸ್, ಗೊಲಗೇರಿ ಚೆಕ್‌ಪೋಸ್ಟ್‌, ದೇವಣಗಾಂವ ಸೇರಿದಂತೆ ವಿವಿಧ ಚಕ್‌ಪೋಸ್ಟ್‌ಗಳ ಕಾರ್ಯಾಚರಣೆಗಳ ಕುರಿತು ಪರಿಶೀಲನೆ ನಡೆಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಸನ್ನ, ಎಫ್ಎಸ್‌ಟಿ, ಎಸ್‌ಎಸ್‌ಟಿ ತಂಡಗಳ ಅಧಿಕಾರಿಗಳು ಉಪಸ್ಥಿತರಿದ್ದರು.

**

ಸಾರ್ವಜನಿಕ ಸಭೆ, ಸಮಾರಂಭಗಳು, ರ್‍ಯಾಲಿಗಳ ಮೇಲೆ ನಿಗಾ ಇಡಬೇಕು. ನಿರಂತರ ಸಂಶಯಾಸ್ಪದ ವಾಹನಗಳ ತಪಾಸಣೆ ನಡೆಸಬೇಕು – ಎಂ. ಸುಂದರೇಶಬಾಬು, ಸಿಇಒ, ಜಿಲ್ಲಾ ಪಂಚಾಯಿತಿ.

**

ಪ್ರತಿಕ್ರಿಯಿಸಿ (+)