ಮಂಗಳವಾರ, ಜೂಲೈ 7, 2020
27 °C

‘ದೃಷ್ಟಿಕೋನದತ್ತ ನೋಟ’

ಲಾವಣ್ಯಗೌರಿ ವೆಂಕಟೇಶ್ Updated:

ಅಕ್ಷರ ಗಾತ್ರ : | |

‘ದೃಷ್ಟಿಕೋನದತ್ತ ನೋಟ’

ಇತ್ತೀಚಿಗೆ ಸಿನಿಮಾ ನಟ ರಮೇಶ್ ಅರವಿಂದ್‍ರವರು ಮಾತನಾಡಿರುವ ವಿಡಿಯೊ ತುಣುಕೊಂದನ್ನು ನೋಡಿ ಬಹಳವಾಗಿ ಪ್ರಭಾವಿತಳಾದೆ. ದೃಷ್ಟಿಕೋನದ ಬಗ್ಗೆ ಅವರು ಹೇಳಿದ ಕಥೆ ಇಲ್ಲಿ ಪ್ರಸ್ತುತ. ಕಟ್ಟಡ ನಿರ್ಮಾಣದ ಕೆಲಸವೊಂದು ನಡೆಯುತ್ತಿರುತ್ತದೆ. ಅಲ್ಲಿಗೆ ಬಂದ ಪ್ರವಾಸಿಗನೊಬ್ಬ, ಅಲ್ಲಿ ಕೆಲಸ ಮಾಡುತ್ತಿರುವ ಮೂವರನ್ನು ಮಾತನಾಡಿಸುತ್ತಾನೆ. ಒಬ್ಬನ ಹತ್ತಿರ ಹೋಗಿ ‘ಇಲ್ಲಿ ಏನು ಕೆಲಸ ಮಾಡುತ್ತಿದ್ದೀರಿ?’ ಎಂದು ವಿಚಾರಿಸುತ್ತಾನೆ. ಅದಕ್ಕುತ್ತರವಾಗಿ ಆತ ‘ಅಯ್ಯೋ ಸ್ವಾಮೀ, ಏನು ಹೇಳಲಿ? ನಾನು ಮಾಡುವ ಕೆಲಸಕ್ಕೆ ಇವರು ಕೊಡುವ ಕೂಲಿ ಏನೇನೂ ಸಾಕಾಗುವುದಿಲ್ಲ. ಬೆಳಗ್ಗಿನಿಂದ ಸಂಜೆಯ ತನಕ ದುಡಿಸಿಕೊಳ್ಳುತ್ತಾರೆ, ನನಗಂತೂ ಸಾಕಾಗಿದೆ’ ಎಂದು ಹೇಳಿ, ಗೊಣಗಿಕೊಂಡೇ ಕೆಲಸವನ್ನು ಮುಂದುವರೆಸುತ್ತಾನೆ. ಯಾತ್ರಿಕ ಎರಡನೆಯವನ ಬಳಿ ಹೋಗಿ, ಮೊದಲನೆಯವನಿಗೆ ಕೇಳಿದ ಪ್ರಶ್ನೆಯನ್ನೇ ಕೇಳುತ್ತಾನೆ. ಅದಕ್ಕೆ ಎರಡನೆಯವನು ‘ಸ್ವಾಮೀ, ಇಲ್ಲಿ ಕೆಲಸಕ್ಕೆ ತಕ್ಕ ಸಂಬಳ ಕೊಡುತ್ತಾರೆ. ಬೆಳಗ್ಗೆಯೆಲ್ಲಾ ಕೆಲಸ ಮಾಡಿ, ಸಂಜೆ ಮನೆಗೆ ಹೋಗಿ ಹೆಂಡತಿ–ಮಕ್ಕಳ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇನೆ. ನಮ್ಮ ಧಣಿಗಳು ಚೆನ್ನಾಗಿರಲಿ’ ಎಂದು ಹರಸುತ್ತಾನೆ. ಪ್ರವಾಸಿಗ ಮೂರನೆಯವನ ಬಳಿ ಹೋಗಿ, ಮೊದಲಿಬ್ಬರಿಗೆ ಕೇಳಿದ ಪ್ರಶ್ನೆಯನ್ನೇ ಕೇಳುತ್ತಾನೆ. ಅದಕ್ಕಾತ, ‘ಸ್ವಾಮೀ, ನಾವಿಲ್ಲಿ ದೇವಸ್ಥಾನವನ್ನು ಕಟ್ಟುತ್ತಿದ್ದೇವೆ. ಬಹಳ ಪುಣ್ಯವಾದ ಕೆಲಸ. ದೇವರ ಮನೆಯನ್ನು ಕಟ್ಟುತ್ತಿದ್ದೇವೆ. ಮುಂದೆ ನೂರಾರು, ಸಾವಿರಾರು ಭಕ್ತರು ಬಂದು ದೇವರ ಸೇವೆ ಮಾಡುವ ಜಾಗ’ ಎಂದು ಸಂಭ್ರಮದಿಂದ ಹೇಳುತ್ತಾನೆ.

ಈ ಮೇಲಿನ ಕಥೆಯಿಂದ ತಿಳಿಯುವುದೇನೆಂದರೆ, ಮೂವರೂ ಮಾಡುತ್ತಿರುವ ಕೆಲಸ ಒಂದೇ; ಆದರೆ ಮೂವರೂ ಅದನ್ನು ನೋಡುತ್ತಿರುವ ದೃಷ್ಟಿಕೋನ ಮಾತ್ರ ಬೇರೆ ಬೇರೆ. ಮೊದಲನೆಯವನು ಮಾಡುವ ಕೆಲಸದಲ್ಲಿ ತೃಪ್ತಿಯಿಲ್ಲದೇ ಗೊಣಗಿಕೊಂಡೇ ಕೆಲಸ ಮಾಡುತ್ತಿರುತ್ತಾನೆ. ಎರಡನೆಯವನಿಗೆ ತಾನು ಮಾಡುತ್ತಿರುವ ಕೆಲಸ ತೃಪ್ತಿ ಕೊಟ್ಟಿದೆ ಹಾಗೂ ಅದಕ್ಕಾಗಿ ಆತ ಆಭಾರಿಯಾಗಿದ್ದಾನೆ. ಇನ್ನು ಮೂರನೆಯವನು ಮಾಡುತ್ತಿರುವ ಕೆಲಸವನ್ನೇ ದೇವರೆಂದು ನಂಬಿದ್ದಾನೆ. ನಮ್ಮ ಕನ್ನಡದಲ್ಲಿ ಪ್ರಸಿದ್ಧವಾದ ನಾಣ್ಣುಡಿಯೊಂದು ಇದೆ, ‘ಬಿತ್ತಿದಂತೆ ಬೆಳೆ’ ಎಂದು. ನಾವು ಯಾವ ರೀತಿಯ ಬೀಜವನ್ನು ಬಿತ್ತುತ್ತೇವೋ ಅದೇ ರೀತಿಯ ಫಲವನ್ನು ಪಡೆಯುತ್ತೇವೆ.

ಹಾಗೆಯೇ ವಿಷಯ ಏನೇ ಇರಲಿ, ನಾವು ಯಾವ ದೃಷ್ಟಿಯಿಂದ ನೋಡುತ್ತೇವೋ ಅದರ ಮೇಲೆಯೇ ಪರಿಸ್ಥಿತಿ ಅವಲಂಬಿತವಾಗಿರುತ್ತದೆ. ಅಂದರೆ ನಮ್ಮ ದೃಷ್ಟಿಕೋನದ ಆಧಾರದ ಮೇಲೆ ಪರಿಸ್ಥಿತಿಯನ್ನು ಒಳ್ಳೆಯದು ಅಥವಾ ಕೆಟ್ಟದ್ದನ್ನಾಗಿಸುವ ಸಾಮರ್ಥ್ಯ ನಮ್ಮ ಕೈಯಲ್ಲೇ ಇದೆ ಅಲ್ಲವೇ? ಹಾಗಾದರೆ ಈ ದೃಷ್ಟಿಕೋನ ಅಥವಾ ಮನೋಭಾವನೆ ಎಂದರೆ ಏನು? ನಮ್ಮ ಸುತ್ತಮುತ್ತಲಿನ ಜನರು, ವಸ್ತುಗಳು, ಪರಿಸ್ಥಿತಿ, ಘಟನೆ – ಇವುಗಳ ಮೇಲೆ ನಾವು ಮಾಡುವ ವಿಮರ್ಶೆ ಅಥವಾ ಅವುಗಳನ್ನು ನಾವು ನೋಡುವ ದೃಷ್ಟಿ ಹೇಗಿರುತ್ತದೆ ಎನ್ನುವುದನ್ನೇ ಮೂಲಭೂತವಾಗಿ ದೃಷ್ಟಿಕೋನ ಎನ್ನುತ್ತೇವೆ. ಪ್ರತಿಯೊಬ್ಬರ ಜೀವನದಲ್ಲಿ ಬರುವ ಘಟನೆಗಳು ಒಳ್ಳೆಯದೂ ಅಥವಾ ಕೆಟ್ಟದ್ದೂ ಇರಬಹುದು. ಈ ಘಟನೆಗಳು ಒಳ್ಳೆಯವೋ ಅಥವಾ ಕೆಟ್ಟವೋ – ಎನ್ನುವುದು ಅವರವರ ದೃಷ್ಟಿಕೋನದ ಮೇಲೆ ಆಧಾರವಾಗಿರುತ್ತದೆ. ಪರಿಸ್ಥಿತಿ ಎಷ್ಟೇ ಕೆಟ್ಟದ್ದಾಗಿದ್ದರೂ ಅದನ್ನು ನಾವು ನಿಭಾಯಿಸುವ ರೀತಿ ಸಕಾರಾತ್ಮಕವಾಗಿದ್ದರೆ, ಎಂತಹ ವಿಷಮಸ್ಥಿತಿಯನ್ನಾದರೂ ದಾಟಿ ಬರಬಹುದು. ಅದೇ ಪರಿಸ್ಥಿತಿ ಒಳ್ಳೆಯದಾಗಿದ್ದರೂ ನಾವು ನೋಡುವ ದೃಷ್ಟಿ ನಕಾರಾತ್ಮಕವಾಗಿದ್ದಲ್ಲಿ ಆಗ ಒಳ್ಳೆಯ ಪರಿಸ್ಥಿತಿಯೂ ಕೆಡುತ್ತದೆ. ಈ ರೀತಿ ನಕಾರಾತ್ಮಕವಾಗಿ ಯೋಚಿಸುವವರು, ಅಸಮಾಧಾನವನ್ನು ತಮಗೆ ತಾವೇ ಸೃಷ್ಟಿಸಿಕೊಂಡು ತಮಗೂ ನೆಮ್ಮದಿಯಿಲ್ಲದಂತೆ ಮಾಡಿಕೊಳ್ಳುತ್ತಾರೆ ಹಾಗೂ ತಮ್ಮ ಸುತ್ತಲಿನ ಜನರನ್ನೂ ನೆಮ್ಮದಿರಹಿತರನ್ನಾಗಿ ಮಾಡಬಲ್ಲರು. ನಮ್ಮ ದೃಷ್ಟಿಕೋನದ ಆಧಾರದ ಮೇಲೆ ನಮ್ಮ ಜೀವನ ಹೇಗೆ ರೂಪುಗೊಳ್ಳುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ!

ನಮ್ಮ ಧೋರಣೆಯ ಮತ್ತು ವ್ಯಕ್ತಿತ್ವದ ಪ್ರತಿಬಿಂಬವೇ ನಡೆವಳಿಕೆ. ಧೋರಣೆ ಅಥವಾ ದೃಷ್ಟಿಕೋನ ಒಳ್ಳೆಯದಾಗಿದ್ದರೆ, ನಡೆವಳಿಕೆ ಮತ್ತು ಆಲೋಚನೆಯೂ ಒಳ್ಳೆಯದಾಗಿರುತ್ತದೆ. ಧೋರಣೆ ಸರಿ ಇಲ್ಲದಿದ್ದರೆ, ನಡವಳಿಕೆಯೂ ಸರಿ ಇರುವುದಿಲ್ಲ. ಒಬ್ಬೊಬ್ಬರ ದೃಷ್ಟಿಕೋನವು ಒಂದೊಂದು ರೀತಿ ಇರುತ್ತದೆ. ಕೆಲವರು ವಿಷಯವನ್ನು, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ತರ್ಕಬದ್ಧವಾಗಿ ಯೋಚಿಸಿ ಒಂದು ತೀರ್ಮಾನಕ್ಕೆ ಬರುತ್ತಾರೆ. ಯಾವುದೇ ಪರಿಸ್ಥಿತಿಯ ಮೇಲಾಗಲೀ ಅಥವಾ ಯಾವುದೇ ವ್ಯಕ್ತಿಯ ಮೇಲಾಗಲೀ ತಟ್ಟನೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಇದನ್ನು ಅರಿವಿನಿಂದ ಅಥವಾ ತಿಳಿವಳಿಕೆಯಿಂದ ಕೂಡಿದ ದೃಷ್ಟಿಕೋನ ಎನ್ನುತ್ತೇವೆ. ಮತ್ತೆ ಕೆಲವರು ಒಬ್ಬ ವ್ಯಕ್ತಿಯ ಅಥವಾ ಪರಿಸ್ಥಿತಿಯ ಬಗ್ಗೆ ಭಾವನಾತ್ಮಕವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದು ಒಳ್ಳೆಯದೂ ಆಗಿರಬಹುದು ಹಾಗೂ ಕೆಟ್ಟದ್ದೂ ಆಗಿರಬಹುದು. ಇನ್ನೂ ಕೆಲವರು ವ್ಯಕ್ತಿಯ ಕೆಲಸ, ವರ್ತನೆಯನ್ನು ನೋಡಿ, ಅದರ ಆಧಾರದ ಮೇಲೆ ತಮ್ಮ ದೃಷ್ಟಿಕೋನವನ್ನು ನಿರ್ಧರಿಸುತ್ತಾರೆ; ಹಾಗೂ ಶೀಘ್ರವಾಗಿ ಇವರು ಹೀಗೇ ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ಆ ವ್ಯಕ್ತಿ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ಯೋಚಿಸುವ ಪ್ರಮೇಯಕ್ಕೇ ಹೋಗುವುದಿಲ್ಲ. ಒಬ್ಬ ವ್ಯಕ್ತಿಯ ನಡೆವಳಿಕೆ ಆತನ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಒಬ್ಬರ ವರ್ತನೆಯಿಂದ ಅವರನ್ನು ನಾವು ನೋಡುವ ದೃಷ್ಟಿ ಬದಲಾಗಬಾರದು. ನಮ್ಮ ದೃಷ್ಟಿಕೋನ ನಮ್ಮ ಸಾಮರ್ಥ್ಯವನ್ನು ತೋರಿಸುವುದಿಲ್ಲ, ಬದಲಿಗೆ ನಮ್ಮ ಯೋಗ್ಯತೆ ಯಾವ ಮಟ್ಟದಲ್ಲಿ ಇದೆ ಎಂದು ನಿರ್ಣಯಿಸುತ್ತದೆ. ಜೀವನದಲ್ಲಿ ನಮ್ಮ ನಿಯಂತ್ರಣದಲ್ಲಿರುವವು ದೃಷ್ಟಿಕೋನ ಹಾಗೂ ಸಾಧನೆ. ಹಾಗಾದರೆ ನಮ್ಮ ಧೋರಣೆ ನಮ್ಮ ನಿಯಂತ್ರಣದಲ್ಲಿದೆಯೆಂದಾದರೆ, ಅದನ್ನು ಬದಲಿಸಿಕೊಳ್ಳಲು ಸಾಧ್ಯವೇ?

ಪ್ರತಿಯೊಬ್ಬರ ದೃಷ್ಟಿಕೋನವು ಅವರು ಬೆಳೆದ ಪರಿಸರ, ಕುಟುಂಬ, ನೆರೆಹೊರೆ – ಇವುಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರು ಸದಾ ಕಾಲ ಮತ್ತೊಬ್ಬರನ್ನು ದೂರುತ್ತಲೇ ಇರುತ್ತಾರೆ. ಇಂತಹವರ ಸನಿಹದಲ್ಲಿದ್ದರೆ, ಅದೇ ಮನೋಭಾವನೆ ನಮ್ಮಲ್ಲೂ ಬೆಳೆಯುತ್ತದೆ. ಪರಿಸ್ಥಿತಿಯನ್ನು ಅರಿತು ಇಂತಹವರಿಂದ ದೂರವಿದ್ದಲ್ಲಿ ನಮ್ಮ ದೃಷ್ಟಿಕೋನದ ಬದಲಾವಣೆಯಾಗುತ್ತದೆ. ಅಷ್ಟೇ ಏಕೆ, ಮಾಧ್ಯಮಗಳಾದ ಪತ್ರಿಕೆ, ರೇಡಿಯೋ, ದೂರದರ್ಶನ – ಇವು ಕೂಡ ನಮ್ಮ ದೃಷ್ಟಿಕೋನವನ್ನು ಬದಲಿಸಬಲ್ಲವು. ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಮನೋಶಕ್ತಿಗಿಂತ ಮಿಗಿಲಾದುದು ಯಾವುದೂ ಇಲ್ಲ. ಸಂದರ್ಭ ಎಷ್ಟೇ ಕೆಟ್ಟದಾಗಿದ್ದರೂ ಮನೋಭಾವನೆ ಒಳ್ಳೆಯದಾಗಿದ್ದಲ್ಲಿ ಅದನ್ನು ಎದುರಿಸುವ ಸಾಮರ್ಥ್ಯ ತನ್ನಿಂದ ತಾನೇ ಬರುತ್ತದೆ. ಸಾಮಾನ್ಯವಾಗಿ ಸ್ನೇಹಿತರು ಅಥವಾ ನಮಗಿಷ್ಟವಾದ ವ್ಯಕ್ತಿಗಳು ಹೇಳುವ ವಿಷಯಗಳು ನೇರವಾಗಿ ಮನಸ್ಸಿಗೆ ನಾಟುತ್ತವೆ. ಆದರೆ ಸ್ನೇಹಿತರ ಆಯ್ಕೆಯ ವಿಷಯದಲ್ಲಿ ನಾವು ಜಾಗರೂಕರಾಗಿರಬೇಕು. ಒಳ್ಳೆಯ ಸ್ನೇಹ ಒಳ್ಳೆಯ ಜೀವನಕ್ಕೆ ನಾಂದಿ. ಇನ್ನು ಬಹಳಷ್ಟು ಸಂದರ್ಭಗಳಲ್ಲಿ ವಿಷಯವನ್ನು ಪೂರ್ಣವಾಗಿ ಅರಿಯದೆಯೇ ನಮ್ಮ ಭಾವನೆಯನ್ನು ವ್ಯಕ್ತಪಡಿಸಿಬಿಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ತೀರ್ಮಾನಕ್ಕೆ ಬರುವ ನಡೆವಳಿಕೆಯನ್ನು ಬೆಳಸಿಕೊಂಡಲ್ಲಿ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳಬಹುದು.

ಪರಿಸ್ಥಿತಿ ಯಾವುದೇ ಆಗಿರಲಿ, ಅದರ ನಿಯಂತ್ರಣ ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ನಮ್ಮ ಭಾವನೆಗಳನ್ನು ನಮ್ಮ ಅಂಕೆಯಲ್ಲಿರಿಸಬಹುದಲ್ಲವೇ? ನಮ್ಮ ನಿಲುವನ್ನು ಅಥವಾ ಧೋರಣೆಯನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳುವುದರ ಮೂಲಕ ಎಂತಹ ಪರಿಸ್ಥಿತಿಯನ್ನು ಬೇಕಾದರೂ ಎದುರಿಸಬಹುದು. ಒಬ್ಬ ವ್ಯಕ್ತಿಯನ್ನು ಈತ ಹೀಗೇ ಎಂದು ನಿರೂಪಿಸುವ ಎರಡು ಗುಣಗಳೆಂದರೆ, ಆತನ ಸಹನೆ ಮತ್ತು ಧೋರಣೆ. ಒಬ್ಬ ವ್ಯಕ್ತಿ ಏನೂ ಇಲ್ಲದ ಪರಿಸ್ಥಿತಿಯಲ್ಲಿ, ಆತ ತೋರಿಸುವ ಸಹನೆ, ಸಂಯಮ, ಆ ವ್ಯಕ್ತಿ ಎಂತಹವನು ಎಂದು ತಿಳಿಸುತ್ತದೆ. ಹಾಗೆಯೇ ಆತನ ಬಳಿ ಸರ್ವ ಸಂಪತ್ತೂ ಇದ್ದಾಗ, ಆತನ ಧೋರಣೆ, ಯೋಚನೆ, ಬೇರೆಯವರ ಬಗ್ಗೆ ಹೇಗಿದೆ ಎಂಬುದು ಆತ ಏನು ಎನ್ನುವುದನ್ನು ನಿರ್ಧರಿಸುತ್ತದೆ. ಈ ದಿನ ಹೇಗಿದೆ ಎಂದು ತಿಳಿದುಕೊಳ್ಳಲು ಭವಿಷ್ಯದ ಮೊರೆ ಹೋಗಬೇಕಿಲ್ಲ. ನಮ್ಮ ಮನೋಭಾವನೆ ಈ ದಿನ ಒಳ್ಳೆಯದೋ ಅಥವಾ ಕೆಟ್ಟದ್ದೋ ಎನ್ನುವುದು ಆ ದಿನ ಹೇಗಿದೆ ಎಂದು ನಿರ್ಧರಿಸುತ್ತದೆ.  ಒಳ್ಳೆಯ ಮನೋಭಾವನೆಯನ್ನು ಪ್ರತಿದಿನವೂ ಹೊಂದಿದರೆ, ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಎಷ್ಟು ವರ್ಷ ಜೀವಿಸಿದ್ದೇವೆ ಎನ್ನುವುದಕ್ಕಿಂತ ಎಷ್ಟು ನೆಮ್ಮದಿಯ ಕ್ಷಣಗಳನ್ನು ಕಳೆದಿದ್ದೇವೆ ಎನ್ನುವುದು ಮುಖ್ಯ. ನಾವು ಚಿಕ್ಕ ಮಕ್ಕಳಿಂದ ಕೂಡ ಕಲಿಯುವುದು ಬಹಳಷ್ಟಿರುತ್ತದೆ. ಒಳ್ಳೆಯ ಮನೋಭಾವನೆಗೆ ವಯಸ್ಸಿನ ಗಡಿಯಿಲ್ಲ. ಅನುಭವದಿಂದ ಬೆಳೆದು ಬಂದ ದೃಷ್ಟಿಕೋನ ನಮ್ಮ ಪ್ರೌಢತೆಯನ್ನು ತಿಳಿಸುತ್ತದೆಯೇ ಹೊರತು ನಮ್ಮ ವಯಸ್ಸನ್ನು ಅಲ್ಲ.

ದೃಷ್ಟಿಕೋನವನ್ನು ಅಯಸ್ಕಾಂತಕ್ಕೆ ಹೋಲಿಸಬಹುದು. ಒಳ್ಳೆಯ ದೃಷ್ಟಿಕೋನವನ್ನು ಹೊಂದಿದ್ದರೆ ಅದು ಒಳ್ಳೆಯದನ್ನೇ ಆಕರ್ಷಿಸುತ್ತದೆ. ಕೆಟ್ಟ ಮನೋಭಾವನೆಯನ್ನು ಹೊಂದಿದ್ದರೆ, ಅದು ಕೆಟ್ಟದ್ದನ್ನೇ ಆಕರ್ಷಿಸುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವುದೇ ಆತನ ದೃಷ್ಟಿಕೋನ! 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.