ನೇಣುಗಂಬ ಹೇಗಿದೆ?

7

ನೇಣುಗಂಬ ಹೇಗಿದೆ?

Published:
Updated:

ಎಂಟು ವರ್ಷದ ಬಾಲೆಯ ಮೇಲೆ ಕಠುವಾದಲ್ಲಿ ನಡೆದ ಬರ್ಬರ ಅತ್ಯಾಚಾರದ ನಂತರ ಎಲ್ಲ ಕಡೆ ಆಕ್ರೋಶ ಹೊಮ್ಮುತ್ತಿದೆ. ಬರ್ಬರತೆ ತೀರ ಹೆಚ್ಚಾದರೆ ಮಾತ್ರ ಕೂಗೆಬ್ಬಿಸಬೇಕೆಂಬ ವಿಲಕ್ಷಣ ತರ್ಕಕ್ಕೆ ನಾವೆಲ್ಲ ಬರುವಂತಾಗಿದೆ.

ಏಕೆ ಅತ್ಯಾಚಾರ ಹೆಚ್ಚಾಗುತ್ತಿದೆ? ಮೊಬೈಲ್ ಇರುವ ಎಲ್ಲರೂ ಈಗ ಕಾಮೋತ್ತೇಜಕ ದೃಶ್ಯಗಳನ್ನು ಎಲ್ಲಿ, ಯಾವಾಗ ಬೇಕಾದರೂ ನೋಡಬಹುದು. ಅಲ್ಲಿ ಕಂಡದ್ದನ್ನು ಅನುಭವಿಸುವ ತೆವಲಿದ್ದವನಿಗೆ ಅಂಥ ಕೃತ್ಯಕ್ಕೆ ಏನು ಶಿಕ್ಷೆ ಕಾದಿದೆ ಎಂಬುದು ಗೊತ್ತೇ ಇರುವುದಿಲ್ಲ. ಶಿಕ್ಷೆಯ ವಿವರಗಳು ಕಾನೂನು ಪುಸ್ತಕದಲ್ಲಿ, ಅರ್ಥವಾಗದ ಭಾಷೆಯಲ್ಲಿವೆ. ಎರಡು ವರ್ಷಗಳ ಹಿಂದೆ ಇಂಥ ಕೃತ್ಯವನ್ನು ಎಸಗಿ ಶಿಕ್ಷೆಗೆ ಗುರಿಯಾದವನು ಈಗ ಏನು ಮಾಡುತ್ತಿದ್ದಾನೆ? ಕೈಕಾಲುಗಳಿಗೆ ಕೋಳ ಹಾಕಿಸಿಕೊಂಡು ಜೈಲಲ್ಲಿ ಕಂಬಳಿ ನೇಯುತ್ತ ಕೂತಿದ್ದಾನೆಯೇ? ಉರಿ ಬಿಸಿಲಲ್ಲಿ ಇಟ್ಟಿಗೆ ಬಟ್ಟಿಯಲ್ಲಿ ಬೆವರಿಳಿಸಿ ದುಡಿಯುತ್ತಿದ್ದಾನೆಯೇ? ದುಡಿದು ಸುಸ್ತಾಗಿ ತುಣುಕು ರೊಟ್ಟಿಗಾಗಿ ಕ್ಯೂ ನಿಂತಿದ್ದಾನೆಯೇ?... ಒಂದೂ ನಮಗೆ ಗೊತ್ತಾಗುತ್ತಿಲ್ಲ.

2005ರಲ್ಲಿ ನಿಠಾರಿ ಪ್ರಕರಣದಲ್ಲಿ ಹಲವು ಬಾಲಕಿಯರನ್ನು ಕೊಂದಿದ್ದ ಸುರಿಂದರ್‌ ಕೊಲಿ ಎಂಬಾತ ಮರಣ ದಂಡನೆ ತಪ್ಪಿಸಿಕೊಂಡು ಈಗೇನು ಮಾಡುತ್ತಿದ್ದಾನೆ? 2012ರಲ್ಲಿ ವಿಮಾನ ಪರಿಚಾರಿಕೆ ಗೀತಿಕಾ ಶರ್ಮಾ ಮೇಲೆ ಅತ್ಯಾಚಾರ ಮಾಡಿ ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದ ಹರಿಯಾಣದ ಸಚಿವ ಗೋಪಾಲ್ ಕಾಂಡಾ ಈಗೇನು ಮಾಡುತ್ತಿದ್ದಾನೆ? ಶಿಕ್ಷೆಗೊಳಗಾದವರ ಸ್ಥಿತಿಯ ಬಗ್ಗೆ ಮಾಧ್ಯಮಗಳು ಆಗಾಗ ವರದಿ ಮಾಡುತ್ತಿರಬೇಕು. ಶಿಕ್ಷೆಯ ಭಯ ಮನದಾಳದಲ್ಲಿ ಅಚ್ಚಾದರೆ ಮಾತ್ರ ಅಂಥ ಕೃತ್ಯಗಳಿಂದ ಜನ ದೂರ ಉಳಿಯುತ್ತಾರೆ.

ಮಕ್ಕಳ ಮೇಲೆ ಅತ್ಯಾಚಾರ ಮಾಡುವವರಿಗೆ ಮರಣದಂಡನೆ ವಿಧಿಸುವ ಬಿಗಿ ಕಾನೂನು ಬರಬೇಕೆಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ. ಬಿಗಿ ಕಾನೂನುಗಳು ಈಗಾಗಲೇ ಇವೆ. ಕಠುವಾದಲ್ಲಿ ನಡೆದ ಅತ್ಯಾಚಾರ ಕೃತ್ಯದ ಆರೋಪಿಗೆ ಐಪಿಸಿ 302ನೇ ಕಲಮಿನ ಪ್ರಕಾರ ಮರಣದಂಡನೆ ಕೊಡಬಹುದು. ನೇಣು ಬಿಗಿಯುವುದನ್ನಂತೂ ತೋರಿಸುವಂತಿಲ್ಲ. ನೇಣುಗಂಬವನ್ನು ಅಥವಾ ನಿಜವಾದ ಹಗ್ಗವನ್ನಾದರೂ ಆಗಾಗ ತೋರಿಸಬಹುದಲ್ಲವೇ? ತೋರಿಸಿದೆಯೇ ನಮ್ಮ ಸರ್ಕಾರ? ಜೈಲುವಾಸಿಗಳ ಊಟದ ತಟ್ಟೆಯನ್ನಾದರೂ ತೋರಿಸಿದೆಯೇ?

ಮೇಘನಾ ಶೇಖರ, ಕೆಂಗೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry