ಬುಧವಾರ, ಜುಲೈ 15, 2020
22 °C

ಮಿಕು ‘ಹ್ಯಾಟ್ರಿಕ್‌’ ಮೋಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಮಿಕು ‘ಹ್ಯಾಟ್ರಿಕ್‌’ ಮೋಡಿ

ಭುವನೇಶ್ವರ: ವೆನಿಜುವೆಲಾದ ಮುಂಚೂಣಿ ವಿಭಾಗದ ಆಟಗಾರ ಮಿಕು, ಮಂಗಳವಾರ ಕಳಿಂಗ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು. ‌

ಮಿಕು ‘ಹ್ಯಾಟ್ರಿಕ್‌’ ಗೋಲುಗಳ ಬಲದಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಚೊಚ್ಚಲ ಸೂಪರ್‌ ಕಪ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿತು.

ಸೆಮಿಫೈನಲ್‌ ಹಣಾಹಣಿಯಲ್ಲಿ ಬಿಎಫ್‌ಸಿ 4–2 ಗೋಲುಗಳಿಂದ ಮೋಹನ್‌ ಬಾಗನ್ ತಂಡದ ಸವಾಲು ಮೀರಿತು. ಹೋದ ವರ್ಷ ನಡೆದಿದ್ದ ಫೆಡರೇಷನ್‌ ಕಪ್‌ ಫೈನಲ್‌ನಲ್ಲಿ ಉಭಯ ತಂಡಗಳು ಎದುರಾಗಿದ್ದಾಗ ಬಿಎಫ್‌ಸಿ ಗೆಲುವಿನ ತೋರಣ ಕಟ್ಟಿತ್ತು.

ನಾಲ್ಕರ ಘಟ್ಟದ ಹೋರಾಟದ ಆರಂಭದಿಂದಲೇ ಸುನಿಲ್‌ ಚೆಟ್ರಿ ಸಾರಥ್ಯದ ಬಿಎಫ್‌ಸಿ ಆಕ್ರಮಣಕಾರಿ ಆಟ ಆಡಿತು. ನಿಶು ಕುಮಾರ್‌, ಉದಾಂತ್‌ ಸಿಂಗ್‌ ಕುಮಾಮ, ಮಿಕು ಮತ್ತು ಹರ್ಮನ್‌ಜ್ಯೋತ್‌ ಸಿಂಗ್‌ ಖಾಬ್ರಾ ಅವರು ಚೆಂಡಿನೊಂದಿಗೆ ನಿರಂತರವಾಗಿ ಎದುರಾಳಿ ಆವರಣ ಪ್ರವೇಶಿಸುವ ಪ್ರಯತ್ನ ನಡೆಸಿದರು. ಆದರೆ ಬಾಗನ್‌ ತಂಡದ ರಕ್ಷಣಾ ಕೋಟೆ ಬೇಧಿಸಿ ಗೋಲು ದಾಖಲಿಸಲು ಇವರಿಗೆ ಆಗಲಿಲ್ಲ.

41ನೆ ನಿಮಿಷದಲ್ಲಿ ಬಾಗನ್‌ ತಂಡ ಖಾತೆ ತೆರೆಯಿತು. ಅಕ್ರಂ ನೀಡಿದ ಪಾಸ್‌ನಲ್ಲಿ ದೀಪಾಂಡ ಡಿಕಾ ಚೆಂಡನ್ನು ಗುರಿ ತಲುಪಿಸಿದರು. 49ನೆ ನಿಮಿಷದಲ್ಲಿ ಬಿಎಫ್‌ಸಿಗೆ ಸಮಬಲದ ಗೋಲು ದಾಖಲಿಸುವ ಉತ್ತಮ ಅವಕಾಶ ಸಿಕ್ಕಿತ್ತು. ಮಿಕು ಒದ್ದು ಕಳುಹಿಸಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ನಿಶು ಕುಮಾರ್‌ ಅದನ್ನು ಗುರಿ ಮುಟ್ಟಿಸಲು ವಿಫಲರಾದರು.

49ನೆ ನಿಮಿಷದಲ್ಲಿ ಬಿಎಫ್‌ಸಿ ಆಟಗಾರ ನಿಶು ಕುಮಾರ್‌, ಬಾಗನ್‌ ತಂಡದ ನಿಖಿಲ್‌ ಅವರನ್ನು ನೆಲಕ್ಕೆ ಬೀಳಿಸಿದರು. ಹೀಗಾಗಿ ನಿಶುಗೆ ಪಂದ್ಯದ ರೆಫರಿ, ಕೆಂಪು ಕಾರ್ಡ್‌ ತೋರಿಸಿ ಅಂಗಳದಿಂದ ಹೊರಗೆ ಕಳುಹಿಸಿದರು. ಆದ್ದರಿಂದ ಬಿಎಫ್‌ಸಿ 10 ಮಂದಿಯೊಂದಿಗೆ ಆಡಬೇಕಾದ ಅನಿವಾರ್ಯತೆ ಎದುರಿಸಿತು. ಹೀಗಿದ್ದರೂ ಬೆಂಗಳೂರಿನ ಆಟಗಾರರು ಎದೆಗುಂದಲಿಲ್ಲ.

ಅಲ್ಬರ್ಟ್‌ ರೋಕಾ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಬಿಎಫ್‌ಸಿ, ದ್ವಿತೀಯಾರ್ಧದಲ್ಲಿ ಗುಣಮಟ್ಟದ ಆಟ ಆಡಿತು. 62ನೆ ನಿಮಿಷದಲ್ಲಿ ಮಿಕು ಮೋಡಿ ಮಾಡಿದರು. ಬಾಗನ್‌ ಆವರಣದ ಬಲತುದಿಯಿಂದ ಉದಾಂತ್‌ ಸಿಂಗ್, ತಮ್ಮತ್ತ ತಳ್ಳಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಮಿಕು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ತಲುಪಿಸಿದರು.

65ನೆ ನಿಮಿಷದಲ್ಲಿ ಮಿಕು, ಮತ್ತೊಮ್ಮೆ ಮಿಂಚಿದರು. ಟೋನಿ ಡೊವ್ಯಾಲ್‌ ನೀಡಿದ ಪಾಸ್‌ನಲ್ಲಿ ಅವರು ಚೆಂಡನ್ನು ಗುರಿ ಮುಟ್ಟಿಸಿದರು. ಹೀಗಾಗಿ ಬಿಎಫ್‌ಸಿ 2–1ರ ಮುನ್ನಡೆ ಗಳಿಸಿತು. 88ನೆ ನಿಮಿಷದಲ್ಲಿ ಬೆಂಗಳೂರಿನ ತಂಡಕ್ಕೆ ಪೆನಾಲ್ಟಿ ಸಿಕ್ಕಿತ್ತು. ಈ ಅವಕಾಶವನ್ನು ಉದಾಂತ್‌ ಸದುಪಯೋಗಪಡಿಸಿಕೊಳ್ಳಲಿಲ್ಲ.

89ನೆ ನಿಮಿಷದಲ್ಲಿ ಮಿಕು ಮತ್ತೊಮ್ಮೆ ಕಾಲ್ಚಳಕ ತೋರಿದರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅವರು ‘ಹ್ಯಾಟ್ರಿಕ್‌’ ಶ್ರೇಯಕ್ಕೆ ಪಾತ್ರರಾದರು.

90ನೆ ನಿಮಿಷದಲ್ಲಿ ನಾಯಕ ಚೆಟ್ರಿ, ಬಿಎಫ್‌ಸಿ ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು. ಚೆಂಡನ್ನು ಸೊಗಸಾದ ರೀತಿಯಲ್ಲಿ ಡ್ರಿಬಲ್‌ ಮಾಡುತ್ತಾ ಬಾಗನ್‌ ತಂಡದ ಆವರಣ ಪ್ರವೇಶಿಸಿದ ಅವರು ಅದನ್ನು ಮಿಂಚಿನ ಗತಿಯಲ್ಲಿ ಒದ್ದು ಗೋಲು ಪೆಟ್ಟಿಗೆಯೊಳಗೆ ತೂರಿಸಿದರು.

90+2ನೇ ನಿಮಿಷದಲ್ಲಿ ಬಾಗನ್‌ ತಂಡ ಹಿನ್ನಡೆ ತಗ್ಗಿಸಿಕೊಂಡಿತು. ಈ ತಂಡದ ದೀಪಾಂಡ ಡಿಕಾ ವೈಯಕ್ತಿಕ ಎರಡನೆ ಗೋಲು ದಾಖಲಿಸಿ ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು.‌

ಏಪ್ರಿಲ್‌ 20 ರಂದು ನಡೆಯುವ ಫೈನಲ್ ಹೋರಾಟದಲ್ಲಿ ಬಿಎಫ್‌ಸಿ ತಂಡ ಈಸ್ಟ್‌ ಬೆಂಗಾಲ್‌ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.