7
ಜೆಡಿಎಸ್‌ನ ಕಾನೂನು ಘಟಕ ಆಯೋಜಿಸಿದ್ದ ವಕೀಲರ ಸಮಾವೇಶದಲ್ಲಿ ನಿರ್ಣಯ

ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ

Published:
Updated:
ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ

ಬೆಂಗಳೂರು: ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಅಧಿಕಾರ ನೀಡುವುದು, ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ನೇಮಕ ಮಾಡುವುದು ಸೇರಿದಂತೆ ಆರು ನಿರ್ಣಯಗಳನ್ನು ಜೆಡಿಎಸ್‌ನ ರಾಜ್ಯ ಕಾನೂನು ಘಟಕವು ಕೈಗೊಂಡಿದೆ.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ವಕೀಲರಸಮಾವೇಶ’ದಲ್ಲಿ ಕೈಗೊಂಡ ನಿರ್ಣಯಗಳು ಹೀಗಿವೆ:

‘ಲೋಕಾಯುಕ್ತ ಕಾಯ್ದೆಯನ್ನು ಜಾರಿಗೊಳಿಸಿದ ಕೀರ್ತಿ ಜನತಾ ಪರಿವಾರಕ್ಕೆ ಸಲ್ಲುತ್ತದೆ. ಆದರೆ, ಕಾಂಗ್ರೆಸ್‌ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳವನ್ನು ಜಾರಿಗೊಳಿಸುವ ಮೂಲಕ ಲೋಕಾಯುಕ್ತ ಸಂಸ್ಥೆಯ ಕತ್ತು ಹಿಸುಕುವ ಕೆಲಸ ಮಾಡಿದೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ, ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಬೇಕು’

‘ಹೈಕೋರ್ಟ್‌ಗೆ ಮೂರು ವರ್ಷಗಳಿಂದ ನ್ಯಾಯಮೂರ್ತಿಗಳ ನೇಮಕಾತಿ ನಡೆದಿಲ್ಲ. 32 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿ ಇದ್ದು, ಇವುಗಳ ನೇಮಕಾತಿ ಮಾಡಬೇಕು. ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು 2007ರಲ್ಲಿ ಯುವ ವಕೀಲರಿಗೆ ₹2,000 ಪ್ರೋತ್ಸಾಹ ಧನ ನೀಡಿದ್ದು, ಇದನ್ನು ₹5,000ಕ್ಕೆ ಹೆಚ್ಚಿಸಬೇಕು. ವಕೀಲರು ಆಕಸ್ಮಿಕವಾಗಿ ಮರಣ ಹೊಂದಿದಾಗ ಅವರಿಗೆ ಪರಿಹಾರ ನೀಡಲು ವಕೀಲರ ಪರಿಷತ್ತಿನ ಕಲ್ಯಾಣ ನಿಧಿಗೆ ₹100 ಕೋಟಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು’

‘ಕರ್ನಾಟಕ ಗೃಹ ಮಂಡಳಿ ಹಾಗೂ ಗೃಹ ನಿರ್ಮಾಣ ಪ್ರಾಧಿಕಾರಗಳಲ್ಲಿ ವಕೀಲರಿಗೆ ವಿಶೇಷ ಕೋಟಾದಡಿ ನಿವೇಶನ ಹಂಚಿಕೆ ಮಾಡಬೇಕು. ಆರೋಗ್ಯ ವಿಮೆ ಒದಗಿಸುವುದು. ವಕೀಲರ ಸಂಘಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸುವ ಜತೆಗೆ, ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಪ್ರಾಥಮಿಕ ಚಿಕಿತ್ಸಾಲಯ ತೆರೆಯಬೇಕು. ಆಂಬುಲೆನ್ಸ್‌ ಸೇವೆ ಒದಗಿಸಬೇಕು’.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ‘ಕೋರ್ಟ್‌ಗಳಲ್ಲಿ ನ್ಯಾಯಮೂರ್ತಿ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡುತ್ತಿಲ್ಲ. ಇದಕ್ಕೆ ಬೇರೆ ಬೇರೆ ರಾಜಕೀಯ ಕಾರಣಗಳಿವೆ. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕಾದರೆ, ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕು. ನ್ಯಾಯಮೂರ್ತಿಗಳ ಕೊರತೆಯಿಂದಾಗಿ ಪ್ರಕರಣಗಳ ವಿಚಾರಣೆಗೆ 2ರಿಂದ 3 ವರ್ಷಗಳು ಹಿಡಿಯುತ್ತವೆ. ಇದರಿಂದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಲು ಆಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತರಾಗುವ ವೇಳೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವಿದೆ ಎನ್ನುತ್ತಾರೆ. ನ್ಯಾಯಮೂರ್ತಿಯಾಗಿದ್ದಾಗ ಈ ಮಾತನ್ನು ಹೇಳುವುದಿಲ್ಲ’ ಎಂದು ವ್ಯಂಗ್ಯವಾಡಿದರು.

‘ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ದಾರಿ ತಪ್ಪಿವೆ. ಹಳಿ ತಪ್ಪಿದ ಈ ವ್ಯವಸ್ಥೆಯನ್ನು ಜನರೇ ಸರಿಪಡಿಸಬೇಕು. ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಇದಕ್ಕಾಗಿ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

‘ಸಿ–ಫೋರ್‌ ಕೆಂಪಯ್ಯನ ಶಿಷ್ಯ’

‘ಸಿ–ಫೋರ್‌ ಸಮೀಕ್ಷೆ ಎಂಬುದು ಕೆಂಪಯ್ಯನ ಶಿಷ್ಯ. ದುಡ್ಡು ತೆಗೆದುಕೊಂಡು ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂತು ಸಮೀಕ್ಷೆ ಮಾಡುತ್ತಾರೆ. ಇದಕ್ಕೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕು’ ಎಂದು ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌ ಒತ್ತಾಯಿಸಿದರು.

‘ಸರ್ವಾಧಿಕಾರಿ ಲಕ್ಷಣ ಹೊಂದಿರುವವರು ಮೊದಲು ಮಾಡುವ ಕೆಲಸವೇ ಕಾನೂನನ್ನು ಕೊಲ್ಲುವುದು. ಪ್ರಧಾನಿ ನರೇಂದ್ರ ಮೋದಿ ಅದನ್ನೇ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಸಾಮಾಜಿಕ ನ್ಯಾಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry