ಭಾನುವಾರ, ಡಿಸೆಂಬರ್ 15, 2019
23 °C
ಅನಿಲ್‌ ಮೆಣಸಿನಕಾಯಿಗೆ ಟಿಕೆಟ್‌; ಬಿದರೂರ ಅಸಮಾಧಾನ; ಪ್ರಚಾರಕ್ಕೂ ತಟ್ಟಿದ ಬಿಸಿ

ಕಮಲ ಪಾಳೆಯದಲ್ಲಿ ಭಿನ್ನಮತ ಸ್ಫೋಟ

ಜೋಮನ್ ವರ್ಗೀಸ್ Updated:

ಅಕ್ಷರ ಗಾತ್ರ : | |

ಕಮಲ ಪಾಳೆಯದಲ್ಲಿ ಭಿನ್ನಮತ ಸ್ಫೋಟ

ಗದಗ: ಜಿಲ್ಲೆಯ ಕಮಲ ಪಾಳೆಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಗದಗ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿ ಘೋಷಣೆ ಕೊನೆಗೂ ಆಗಿದೆ. ಆದರೆ, ಟಿಕೆಟ್‌ ಘೋಷಣೆ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ.

2013ರಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಈ ಕ್ಷೇತ್ರದಲ್ಲಿ ಎರಡನೆಯ ಸ್ಥಾನ ಪಡೆದು ಗಮನ ಸೆಳೆದಿದ್ದ ಅನಿಲ್‌ ಮೆಣಸಿನಕಾಯಿ ಅವರಿಗೆ ಈ ಬಾರಿ ಪಕ್ಷ ಮಣೆ ಹಾಕಿದೆ. ಇದನ್ನು ವಿರೋಧಿಸಿ, ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

ಟಿಕೆಟ್ ಸಿಗದಿದ್ದರಿಂದ ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸುವ ಸಲುವಾಗಿ ಬಿದರೂರ ಅವರು ಮಂಗಳವಾರ ತಮ್ಮ ನಿವಾಸದಲ್ಲಿ ಸಭೆ ಕರೆದಿದ್ದರು.ಈ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಬಿದರೂರ ಅವರು ಪಕ್ಷೇತರರಾಗಿ ಕಣಕ್ಕಿಳಿಯಬೇಕು ಎಂದು ಒತ್ತಾಯಿಸಿದರು.

ಟಿಕೆಟ್‌ ವಂಚಿತರಾಗಿರುವ ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಕುರಡಗಿ ಮತ್ತು ಮೋಹನ ಮಾಳಶೆಟ್ಟಿ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ, ಇವರಿಬ್ಬರು ‘ವ್ಯಕ್ತಿ ಮುಖ್ಯವಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಹೀಗಾಗಿ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇವೆ. ಟಿಕೆಟ್ ಸಿಗದಿದ್ದಾಗ ಆಕ್ರೋಶ ಸಹಜ. ಇದು ಶಮನವಾಗಿ ಎಲ್ಲರೂ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತೇವೆ’ ಎಂದು ಸಭೆಗೆ ಸ್ಪಷ್ಟವಾಗಿ ತಿಳಿಸಿ ಹೊರನಡೆದರು.ಇದರಿಂದ ಸಭೆಯ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಾರದೆ ಗೊಂದಲದ ಗೂಡಾಗಿ ಬದಲಾಯಿತು.

‘ಪಕ್ಷಕ್ಕಾಗಿ ದುಡಿದವರಲ್ಲಿ ಯಾರಿಗೆ ಟಿಕೆಟ್‌ ಕೊಟ್ಟರೂ ಸಮಾಧಾನ ಇರುತ್ತಿತ್ತು. ಆದರೆ, ನಿನ್ನೆ ಮೊನ್ನೆ ಹೊರಗಿನಿಂದ ಬಂದವರಿಗೆ ಟಿಕೆಟ್‌ ನೀಡಲಾಗಿದ್ದು, ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸದೇ ಹೈಕಮಾಂಡ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ’ ಎಂದು ಬಿದರೂರು ಆಕ್ರೋಶ ವ್ಯಕ್ತಪಡಿಸಿದರು.

‘ಕಾರ್ಯಕರ್ತರು ಹಾಗೂ ಬೆಂಬಲಿಗರ ಅಭಿಪ್ರಾಯಗಳನ್ನು ಸಂಗ್ರಹಿಸಿ ಇನ್ನೆರಡು ದಿನಗಳಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಗದಗ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ಗಾಗಿ ಈ ಬಾರಿ ಒಟ್ಟು 8 ಮಂದಿ ಕಣದಲ್ಲಿದ್ದರು. ಆದರೆ, ಪಕ್ಷವು ಆಂತರಿಕ ಸಮೀಕ್ಷೆ ನಡೆಸಿ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡಿದೆ. ಸಮೀಕ್ಷೆಯಲ್ಲಿ ಗೆಲ್ಲುವ ಸಾಧ್ಯತೆ ಇರುವುದು ಅನಿಲ್‌ ಮೆಣಸಿನಕಾಯಿಗೆ ಎನ್ನುವುದು ಗೊತ್ತಾಗಿದೆ. ಜತೆಗೆ ಬಿದರೂರ ಅವರು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ ಪಾಟೀಲ ಅವರ ವಿರುದ್ಧ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಇದು ಕೂಡ ಅವರಿಗೆ ಹಿನ್ನಡೆಯಾಯಿತು’ ಎಂದು ಬಿಜೆಪಿ ಜಿಲ್ಲಾ ಘಟಕದ ಮುಖಂಡರೊಬ್ಬರು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಂಜುನಾಥ ಬಸಪ್ಪ ಅಬ್ಬಿಗೇರಿ ಸಹ ಗದಗ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಇತ್ತೀಚೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಗದುಗಿಗೆ ಬಂದಾಗ ಅವರಿಗೆ ಮನವಿಯನ್ನೂ ಸಲ್ಲಿಸಿದ್ದರು. ಆದರೆ, ಅವರಿಗೂ ಟಿಕೆಟ್‌ ಕೈತಪ್ಪಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅವರು ಹೇಳಿದರು.‘ಪಕ್ಷ ಒಡೆದವರು ಬಿ.ಎಸ್. ಯಡಿಯೂರಪ್ಪ ಹಾಗೂ ಶ್ರೀರಾಮುಲು ಹೊರತು ಕಾರ್ಯಕರ್ತರಲ್ಲ. ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡದವರಿಗೆ ಪರ್ಯಾಯ ಶಕ್ತಿ ತೋರಿಸಬೇಕು’ ಎಂದರು.

‘ಅನಿಲ್‌ ಮೆಣಸಿನಕಾಯಿ ಅವರು ಗದುಗಿನಲ್ಲಿ ಪ್ರತ್ಯೇಕ ಕಚೇರಿ ಮಾಡಿದಾಗಲೇ ಜಿಲ್ಲಾಧ್ಯಕ್ಷ ಸಿ.ಸಿ. ಪಾಟೀಲ ಅವರು ಮೂಗುದಾರ ಹಾಕಬೇಕಿತ್ತು. ಆದರೆ, ಅವರು ವಿಫಲರಾಗಿದ್ದಾರೆ. ಈಗ ರಾಜ್ಯಾಧ್ಯಕ್ಷರು ಪಕ್ಷದೊಂದಿಗೆ ಗುರುತಿಸಿಕೊಳ್ಳದೇ ಇರುವವರಿಗೆ ಟಿಕೆಟ್ ನೀಡಿದ್ದಾರೆ. ಕಾರ್ಯಕರ್ತರನ್ನು ಸಾಯಿಸಿದ್ದಾರೆ’ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

ಗದಗ ಕ್ಷೇತ್ರದ ಫಲಿತಾಂಶ ಮಹತ್ವದ್ದು

ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಫಲಿತಾಂಶ ಮಹತ್ವದ್ದು. ಇಲ್ಲಿ ಯಾವ ಪಕ್ಷ ಗೆಲ್ಲುತ್ತದೆಯೋ, ಆ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತದೆ ಎಂಬ ಮಾತಿದೆ. ಗದಗ ವಿಧಾನಸಭಾ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. 14 ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅದರಲ್ಲೂ ಕೆ.ಎಚ್. ಪಾಟೀಲ ಕುಟುಂಬದವರೇ ಒಟ್ಟು 9 ಬಾರಿ ಆಯ್ಕೆಯಾಗಿರುವುದು ಈ ಮತಕ್ಷೇತ್ರದ ವಿಶೇಷ.

ಎರಡು ದಶಕಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ‘ಸೋಲಿಲ್ಲದ ಸರದಾರ’ ಎಂದು ಹೆಸರು ಪಡೆದಿದ್ದ ಎಚ್‌.ಕೆ ಪಾಟೀಲ ಅವರು, ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುತಿಸಿಕೊಂಡು 2008ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ, ಶ್ರೀಶೈಲಪ್ಪ ಬಿದರೂರ ವಿರುದ್ಧ 8616 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. 2013ರಲ್ಲಿ ಈ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ನಡೆಯಿತು. ಶ್ರಿಶೈಲಪ್ಪ ಬಿದರೂರ (ಬಿಜೆಪಿ), ಅನಿಲ ಮೆಣಸಿನಕಾಯಿ (ಬಿಎಸ್ಆರ್) ಮತ್ತು ಎಸ್.ಬಿ.ಸಂಕಣ್ಣವರ (ಕೆಜೆಪಿ) ಕಣದಲ್ಲಿದ್ದರು. ಬಿದರೂರ ಅವರು 18715 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡರು. ಅನಿಲ್‌ ಮೆಣಸಿನಕಾಯಿ 36478 ಮತಗಳನ್ನು ಪಡೆದರು. 70475 ಮತಗಳನ್ನು ಪಡೆದು ಎಚ್‌.ಕೆ.ಪಾಟೀಲ ಆಯ್ಕೆಯಾದರು.

ಮನವೊಲಿಕೆ ಯತ್ನ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ. ಪಾಟೀಲ ಮತ್ತು ರೋಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಮಂಗಳವಾರ ಸಂಜೆ ಶ್ರೀಶೈಲಪ್ಪ ಬಿದರೂರ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಮನ ಒಲಿಸಲು ಪ್ರಯತ್ನಿಸಿದರು.

**

ಪಕ್ಷ ವಿರೋಧಿ ಚಟುವಟಿಕೆ, ರೆಸಾರ್ಟ್ ರಾಜಕಾರಣದಲ್ಲಿ ಭಾಗಿಯಾಗಿಲ್ಲ, ಕೆಜೆಪಿ, ಬಿಎಸ್‌ಆರ್‌ ಕಾಂಗ್ರೆಸ್‌ಗೆ ಹೋಗದೆ ಪಕ್ಷ ನಿಷ್ಠೆ ಮೆರೆದವು. ಈಗ ಪಕ್ಷ ಅನ್ಯಾಯ ಮಾಡಿದೆ  – ಶ್ರೀಶೈಲಪ್ಪ ಬಿದರೂರ, ಮಾಜಿ ಶಾಸಕ, ಬಿಜೆಪಿ ಟಿಕೆಟ್ ವಂಚಿತ.

**

ಪ್ರತಿಕ್ರಿಯಿಸಿ (+)