ಶುಕ್ರವಾರ, ಆಗಸ್ಟ್ 14, 2020
23 °C
ಅರಕಲಗೂಡು: ಹ್ಯಾಟ್ರಿಕ್‌ ಜಯ ದಾಖಲಿಸಿದ ಕೆ.ಬಿ.ಮಲ್ಲಪ್ಪ

ಪಕ್ಷಕ್ಕಿಂತ ಅಭ್ಯರ್ಥಿಗೆ ಮಣೆ ಹಾಕಿದ ಮತದಾರ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಪಕ್ಷಕ್ಕಿಂತ ಅಭ್ಯರ್ಥಿಗೆ ಮಣೆ ಹಾಕಿದ ಮತದಾರ

ಹಾಸನ:  ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾದ ಅರಕಲಗೂಡು ಕ್ಷೇತ್ರ ನೀರಾವರಿ ತಜ್ಞ ಎಚ್‌.ಎನ್‌.ನಂಜೇಗೌಡ, ಖಾಸಗಿ ಬಸ್‌ ನಿರ್ವಾಹಕ ಪುಟ್ಟೇಗೌಡ, ಪ್ರಾಮಾಣಿಕತೆಗೆ ಹೆಸರಾದ ಕೆ.ಬಿ.ಮಲ್ಲಪ್ಪ, ಜಿ.ಎ.ತಿಮ್ಮೇಗೌಡರಂತಹ ರಾಜಕಾರಣಿಗಳನ್ನು ವಿಧಾನಸಭೆಗೆ ಕಳುಹಿಸಿದ ಹೆಗ್ಗಳಿಕೆ ಹೊಂದಿದೆ.

ಸಾಮಾನ್ಯ ಕ್ಷೇತ್ರದಲ್ಲಿ ಮತದಾರರು ಮೂರು ಪಕ್ಷಗಳಿಗೂ ಮಣೆ ಹಾಕಿದ್ದಾರೆ. ಆರು ಬಾರಿ ಕೆ.ಬಿ.ಮಲ್ಲಪ್ಪ, ಎ.ಟಿ.ರಾಮಸ್ವಾಮಿ ಕಣಕ್ಕಿಳಿದಿದ್ದರೆ, ಎ.ಮಂಜು ಏಳನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹ್ಯಾಟ್ರಿಕ್‌ ಸಾಧನೆ ಮಾಡಿದ ದಾಖಲೆ ಕೆ.ಬಿ. ಮಲ್ಲಪ್ಪ ಹೆಸರಿನಲ್ಲಿದೆ.

ಈ ಕ್ಷೇತ್ರದಲ್ಲಿ ಗೆಲುವಿನ ಶುಭಾರಂಭ ಮಾಡಿದ್ದು ಜಿ.ಎ.ತಿಮ್ಮಪ್ಪಗೌಡ. ಸ್ವತಂತ್ರ ಭಾರತದಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ನಾಮನಿರ್ದೇಶನಗೊಂಡು ಜಿಲ್ಲೆಯ ಪ್ರಥಮ ಸಂಸದ ಜಿ.ಎ.ತಿಮ್ಮಪ್ಪಗೌಡ ಅವರು (13,087 ಮತ) 1952ರಲ್ಲಿ ನಡೆದ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಇವರ ಪ್ರತಿಸ್ಪರ್ಧಿ ಎಂಪಿಪಿ ಅಭ್ಯರ್ಥಿ ಕೆ.ಕೇಶವಮೂರ್ತಿ 8,158 ಮತ ಗಳಿಸಿ ಪರಾಭವಗೊಂಡರು.

1957ರ ಚುನಾವಣೆಯಲ್ಲಿ ತಿಮ್ಮಪ್ಪಗೌಡರು ಖಾಸಗಿ ಬಸ್‌ ನಿರ್ವಾಹಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟೇಗೌಡರ ಎದುರು ಸೋತರು.

1962ರಲ್ಲಿ ನಡೆದ ಚುನಾವಣೆಯಲ್ಲಿ ತಿಮ್ಮಪ್ಪಗೌಡ ಮರು ಆಯ್ಕೆ ಆಗುವುದರೊಂದಿಗೆ ಕ್ಷೇತ್ರವನ್ನು ಮರಳಿ ಕಾಂಗ್ರೆಸ್ ತೆಕ್ಕೆಗೆ ತಂದುಕೊಟ್ಟರು. ಪ್ರತಿಸ್ಪರ್ಧಿಯಾಗಿದ್ದ ಪ್ರಜಾ ಸೋಷಲಿಸ್ಟ್‌ ಪಾರ್ಟಿಯ ಎಚ್‌.ಎನ್‌.ನಂಜೇಗೌಡ ಸೋಲು ಕಂಡರು.

ನೀರಾವರಿ ತಜ್ಞರಂದೇ ಪ್ರಸಿದ್ಧಿ ಪಡೆದಿದ್ದ ಎಚ್‌.ಎನ್‌.ನಂಜೇಗೌಡರಿಗೆ 1967ರ ಚುನಾವಣೆ ರಾಜಕೀಯ ಮರುಜನ್ಮ ನೀಡಿತು. ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಅರಕಲಗೂಡು ತಾಲ್ಲೂಕಿನ ಹನ್ಯಾಳು ಗ್ರಾಮದ ಗೌಡರು, ಮೈಸೂರಿನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದರು. ರಾಜಕೀಯದತ್ತ ಆಸಕ್ತಿ ಬೆಳೆದಿದ್ದರಿಂದ ತವರೂರಿಗೆ ಹಿಂದಿರುಗಿ ಸ್ಪರ್ಧಿಸಿದ್ದರು.

1972ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಂಜೇಗೌಡರು ಸ್ಪರ್ಧಿಸಿ, ಸತತ ಎರಡನೇ ಬಾರಿಗೆ ಆಯ್ಕೆಯಾದರು. 1978ರ ಚುನಾವಣೆಯಲ್ಲಿ ಗೌಡರುಮೂರನೇ ಸ್ಥಾನಕ್ಕೆ ಕುಸಿದರು.

1983ರಲ್ಲಿ ಜನತಾ ಪಾರ್ಟಿಯಿಂದ ಸ್ಪರ್ಧಿಸಿದ್ದ ಕೆ.ಬಿ.ಮಲ್ಲಪ್ಪ ಅವರು ಕಾಂಗ್ರೆಸ್‌ನ ಬಿ.ಎನ್‌.ಪುಟ್ಟೇಗೌಡ ವಿರುದ್ಧ ಜಯಶಾಲಿಯಾದರು. ಸತತ ಮೂರು ಚುನಾವಣೆಯಲ್ಲಿ ಜಯಗಳಿಸಿದ ಕೀರ್ತಿ ಕೆ.ಬಿ.ಮಲ್ಲಪ್ಪ ಅವರಿಗೆ ಸಲ್ಲುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಚಿವರಾಗುವ ಯೋಗವೂ ಅರಸಿ ಬಂತು.

ಸಂಸತ್‌ ಚುನಾವಣೆ ಹಿನ್ನಡೆಯಿಂದಾಗಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹೊಸ ಜನಾದೇಶ ಪಡೆಯಲು ವಿಧಾನಸಭೆ ವಿಸರ್ಜಿಸಿದ ಕಾರಣ

1985ರಲ್ಲಿ ಮಲ್ಲಪ್ಪ ಮತ್ತೊಂದು ಚುನಾವಣೆ ಎದುರಿಸಬೇಕಾಯಿತು. ಜನತಾ ಪಕ್ಷ ಪರವಾದ ಅಲೆ ಅವರಿಗೆ ಹ್ಯಾಟ್ರಿಕ್‌ ಗೆಲುವು ತಂದು ಕೊಟ್ಟಿತು.

1994ರಲ್ಲಿ ಎ.ಟಿ.ರಾಮಸ್ವಾಮಿ ಮರು ಆಯ್ಕೆಯಾಗುವ ಮೂಲಕ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದರು. 1989ರ ಚುನಾವಣೆಯಲ್ಲಿ ಮೊದ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ರಾಜಕಾರಣ ಆರಂಭಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಕೊಂಡಿದ್ದ ಎ.ಮಂಜು, ಬಿಜೆಪಿಯಿಂದ ಕಣಕ್ಕಿಳಿದು ಪರಾಜಿತರಾದರು.

ಎರಡು ಚುನಾವಣೆಗಳಲ್ಲಿ ಎ.ಟಿ.ರಾಮಸ್ವಾಮಿ ಎದುರು ಸೋಲು ಕಂಡಿದ್ದ ಎ.ಮಂಜು, 1999ರಲ್ಲಿ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದರು. ಇದರೊಂದಿಗೆ ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಒದಗಿಸಲು ಆಸರೆಯಾದರು.

ಅರಕಲಗೂಡು ತಾಲ್ಲೂಕಿನ ಹನ್ಯಾಳು ಗ್ರಾಮದ ಎ.ಮಂಜು ವಿದ್ಯಾಭ್ಯಾಸ ಪೂರೈಸಿ, ತಮ್ಮ ರಾಜಕೀಯ ಜೀವನ ಬೆಂಗಳೂರಿನಲ್ಲಿ ಆರಂಭಿಸಿದರು. ವಿಧಾನಸಭೆ ಪ್ರವೇಶಿಸಲು ತವರು ಕ್ಷೇತ್ರ ಅರಕಲಗೂಡು ಆಯ್ಕೆ ಮಾಡಿಕೊಂಡರು. ಅವರ ಭಾವ, ಮಾಜಿ ಸಚಿವ ಎಚ್.ಎನ್‌.ನಂಜೇಗೌಡರು ಕ್ಷೇತ್ರ ಪ್ರತಿನಿಧಿಸಿದ್ದು, ತಮಗೆ ಅನುಕೂಲ ಕಲ್ಪಿಸಬಹುದು ಹಾಗೂ ಸಹಕಾರ ಸಿಗಬಹುದು ಎನ್ನುವ ಲೆಕ್ಕಾಚಾರ ಹೊಂದಿದ್ದರು.

2004ರ ಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮೂವರು ಶಾಸಕರು ಪರಾಭವಗೊಂಡರು. ಅವರಲ್ಲಿ ಮಂಜು ಸಹ ಒಬ್ಬರು. ಕಾಂಗ್ರೆಸ್‌ನಿಂದ ಮಂಜುಗೆ ಟಿಕೆಟ್‌ ನೀಡಲಾಯಿತು. ಇದರಿಂದ ಅಸಮಾಧಾನಗೊಂಡ ರಾಮಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮಂಜು ಅವರನ್ನು ಸೋಲಿಸಿದರು.

ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ನಡೆದ ಚುನಾವಣೆಯಲ್ಲಿ ಮತ್ತೆ ಮಂಜು ಗೆಲುವು ಪಡೆದರು. ಅರಕಲಗೂಡು ಕ್ಷೇತ್ರಕ್ಕೆ ಹೊಳೆನರಸೀಪುರ ಕ್ಷೇತ್ರದಲ್ಲಿದ್ದ ಕುರುಬ ಸಮುದಾಯ ಪ್ರಾಬಲ್ಯ ಹೊಂದಿರುವ ಹಳ್ಳಿ ಮೈಸೂರು ಹೋಬಳಿ ಸೇರ್ಪಡೆಗೊಂಡಿತು. ಕ್ಷೇತ್ರದ ಮೇಲೆ ಮಂಜು ಹಿಡಿತ ಸಾಧಿಸಿದರು.

ಸಚಿವರಾದ ಮಂಜು

2013ರಲ್ಲಿ ರಾಜ್ಯದಾದ್ಯಂತ ಬೀಸಿದ ಕಾಂಗ್ರೆಸ್‌ ಪರವಾದ ಅಲೆ, ಪಕ್ಷದ ಸಂಘಟನೆ ಮಂಜು ಅವರನ್ನು ಗೆಲುವಿನ ದಡ ಸೇರಿಸಿತು.ಸಚಿವರಾಗುವ ಯೋಗವೂ ಒಲಿದು ಬಂತು. ಪ್ರಾರಂಭದ ಎರಡು ವರ್ಷ ನಂತರ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರಾದರು. ಮಂಜು 61369 ಮತ ಪಡೆದು ಜೆಡಿಎಸ್‌ನ ಎ.ಟಿ.ರಾಮಸ್ವಾಮಿ (52,575 ಮತ) ಅವರನ್ನು ಸೋಲಿಸಿದರು. ಪಕ್ಷೇತರ ಅಭ್ಯರ್ಥಿ ಎಚ್‌.ಯೋಗಾ ರಮೇಶ್‌ 32,477 ಮತ ಗಳಿಸಿದ್ದರು.

ಎಟಿಆರ್ ರಾಜಕೀಯ ಜೀವನ

ಎಂ.ಎಸ್ಸಿ (ಎ.ಜಿ) ವ್ಯಾಸಂಗ ಮುಗಿಸಿ ಅರಕಲಗೂಡು ತಾಲ್ಲೂಕಿನ ಅಬ್ಬೂರು ಗ್ರಾಮ ದಲ್ಲಿ ಕೃಷಿ ಮಾಡಿಕೊಂಡಿದ್ದ ಎ.ಟಿ.ರಾಮಸ್ವಾಮಿ ಜನತಾ ಪಕ್ಷದಿಂದ ರಾಜಕೀಯ ಜೀವನ ಆರಂಭಿಸಿದ್ದರು. 1987ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ, ಅಲ್ಪ ಮತಗಳ ಅಂತರದಿಂದ ಪರಾಭವಗೊಂಡರು. 1989ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೆ.ಬಿ.ಮಲ್ಲಪ್ಪ ಅವರನ್ನು ಸೋಲಿಸಿ ಶಾಸನಸಭೆ ಪ್ರವೇಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.