‘ಚಂದ್ರಕಾಂತ ಪಾಟೀಲ ಗೆಲ್ಲಲ್ಲ; ನಮೋಶಿಗೇ ಟಿಕೆಟ್‌ ಕೊಡಿ’

ಭಾನುವಾರ, ಮಾರ್ಚ್ 24, 2019
28 °C
ಪಾಲಿಕೆಯ ಬಿಜೆಪಿಯ ಬಹುತೇಕ ಸದಸ್ಯರ ಆಗ್ರಹ

‘ಚಂದ್ರಕಾಂತ ಪಾಟೀಲ ಗೆಲ್ಲಲ್ಲ; ನಮೋಶಿಗೇ ಟಿಕೆಟ್‌ ಕೊಡಿ’

Published:
Updated:
‘ಚಂದ್ರಕಾಂತ ಪಾಟೀಲ ಗೆಲ್ಲಲ್ಲ; ನಮೋಶಿಗೇ ಟಿಕೆಟ್‌ ಕೊಡಿ’

ಕಲಬುರ್ಗಿ: ‘ಕಲಬುರ್ಗಿ ಉತ್ತರ ಕ್ಷೇತ್ರದಿಂದ ಚಂದ್ರಕಾಂತ ಪಾಟೀಲ ಗೆಲ್ಲುವುದಿಲ್ಲ. ಅವರಿಗೆ ಕ್ಷೇತ್ರದ ಪರಿಚಯವೂ ಇಲ್ಲ. ಗೆಲ್ಲುವ ಕುದುರೆ ಶಶೀಲ್‌ ನಮೋಶಿಗೆ ಟಿಕೆಟ್‌ ನೀಡಬೇಕು’ ಎಂದು ಮಹಾನಗರ ಪಾಲಿಕೆಯ ಬಿಜೆಪಿಯ ಬಹುಪಾಲು ಸದಸ್ಯರು ಹಾಗೂ ಬಿಜೆಪಿ ಉತ್ತರ ಮಂಡಳದ ಪದಾಧಿಕಾರಿಗಳು ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ ಗುಂಡಗುರ್ತಿ, ವಿಶಾಲ ದರ್ಗಿ, ಪಾಲಿಕೆಯ ವಿರೋಧ ಪಕ್ಷದ ನಾಯಕ ಆರ್‌.ಎಸ್‌.ಪಾಟೀಲ ಅವರು, ‘ಪುನರ್‌ ಪರಿಶೀಲನೆ ಮಾಡಿ ಶಶೀಲ್‌ ನಮೋಶಿ ಅವರಿಗೇ ಟಿಕೆಟ್‌ ಕೊಡಬೇಕು’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನು ಒತ್ತಾಯಿಸಿದರು.

‘ನಮ್ಮ ಬೇಡಿಕೆಗೆ ಪಕ್ಷದ ರಾಜ್ಯ ಮುಖಂಡರು ಸ್ಪಂದಿಸದಿದ್ದರೆ ಪಾಲಿಕೆಯ ಯಾವ ಸದಸ್ಯರೂ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುವುದಿಲ್ಲ. ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುತ್ತೇವೆ. ಚಂದ್ರಕಾಂತ ಪಾಟೀಲ ಅವರ ಸೋಲಿಗೆ ಪಕ್ಷದ ರಾಜ್ಯ ಘಟಕವೇ ಹೊಣೆಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಎರಡು ವರ್ಷಗಳಿಂದ ನಮೋಶಿ ಕ್ಷೇತ್ರದಲ್ಲಿ ಬೂತ್‌ಮಟ್ಟದಿಂದ ಕೆಲಸ ಮಾಡುತ್ತಿದ್ದಾರೆ. ಟಿಕೆಟ್‌ ಪಡೆಯುವವರು ಸಂಘ–ಸಂಸ್ಥೆಗಳ ಸದಸ್ಯರು ಆಗಿರಬಾರದು ಎಂದು ಪಕ್ಷದವರು ಹೇಳಿದ್ದರಿಂದ ಅವರು ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಚುನಾವಣೆಗೂ ಸ್ಪರ್ಧಿಸಲಿಲ್ಲ’ ಎಂದರು.

ನಾವು ಪಕ್ಷದ ಶಿಸ್ತಿನ ಕಾರ್ಯ ಕರ್ತರು. ನಮಗೆ ಬಿ.ಜಿ.ಪಾಟೀಲ, ಶಶೀಲ್‌ ನಮೋಶಿ ಸಮಾನರು. ಒಂದು ಸ್ಥಾನ ಕಳೆದುಕೊಳ್ಳಬೇಕಾಗುತ್ತದೆಯಲ್ಲ ಎಂಬ ನೋವು ನಮ್ಮದು’ ಎಂದರು.

‘17 ಜನ ಪಾಲಿಕೆಯ ಬಿಜೆಪಿ ಸದಸ್ಯರ ಪೈಕಿ 16 ಜನ ಶಶೀಲ್‌ ನಮೋಶಿ ಅವರನ್ನು ಬೆಂಬಲಿಸಿದ್ದೇವೆ. ಉತ್ತರ ಕ್ಷೇತ್ರದಲ್ಲಿ ಐವರು ಬಿಜೆಪಿ ಪಾಲಿಕೆ ಸದಸ್ಯರಿದ್ದು, ಅವರಲ್ಲಿ ವಿಠ್ಠಲ ಜಾಧವ ಹೊರತು ಪಡಿಸಿ ಉಳಿದ ನಾಲ್ವರು ನಮ್ಮೊಟ್ಟಿಗೆ ಇದ್ದಾರೆ’ ಎಂದರು.

ರಾಜೀನಾಮೆ: ‘ಮೂರು ಬಾರಿ ನಡೆದ ಸಮೀಕ್ಷೆಯಲ್ಲಿ ಶಶೀಲ್‌ ನಮೋಶಿ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಈಗ ಟಿಕೆಟ್‌ ನೀಡದೆ ಅವರಿಗೆ ಅವಮಾನ ಮಾಡಲಾಗಿದೆ. ಬಿಜೆಪಿ ಉತ್ತರ ಮಂಡಳದ ಎಲ್ಲ ಘಟಕಗಳ 30 ಪದಾಧಿಕಾರಿಗಳ ಪೈಕಿ 22 ಪದಾಧಿಕಾರಿಗಳು ನಮ್ಮ ಹುದ್ದೆಗೆ ರಾಜೀನಾಮೆಯನ್ನು ಬುಧವಾರ ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಸಲ್ಲಿಸಲಿದ್ದೇವೆ’ ಎಂದು ಬಿಜೆಪಿ ಉತ್ತರ ಮಂಡಳ ಪ್ರಧಾನ ಕಾರ್ಯದರ್ಶಿ ಸಿದ್ದು ಸಂಗೋಳಗಿ ಹೇಳಿದರು.

ಬಿಜೆಪಿ ಉತ್ತರ ಮಂಡಳ ಅಧ್ಯಕ್ಷ ವಿಜಯಕುಮಾರ ಕಲಕಟ್ಟಿ, ಪಾಲಿಕೆ ಸದಸ್ಯರಾದ ಪರಶುರಾಮ ನಸಲವಾಯಿ, ವೀರಣ್ಣ ಹೊನ್ನಳ್ಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

"ಬೆದರಿಕೆ ಹಾಕಿದರು': ‘ಪಾಲಿಕೆಯ ವಿರೋಧ ಪಕ್ಷದ ನಾಯಕ ಆರ್‌.ಎಸ್‌. ಪಾಟೀಲ ಅವರಿಗೆ ಬಿ.ಜಿ. ಪಾಟೀಲ ಅವರು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆಂಗಳೂರಿನಲ್ಲಿ ಬೆದರಿಕೆ ಹಾಕಿದ್ದಾರೆ. ಇದು ನಮ್ಮೆಲ್ಲ ಪಾಲಿಕೆಯ ಸದಸ್ಯರಿಗೆ ಬೆದರಿಕೆ ಹಾಕಿದಂತೆ’ ಎಂದು ವಿಶಾಲ ದರ್ಗಿ ಹೇಳಿದರು. ‘16 ಜನ ಪಾಲಿಕೆಯ ಸದಸ್ಯರು ನಮೋಶಿ ಟಿಕೆಟ್‌ ನೀಡುವಂತೆ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದೆವು ಎಂದು ಅವರು ಹೇಳಿದರು.

**

ಬಿ.ಜಿ. ಪಾಟೀಲ ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷರು. ಅವರ ಮಗನಿಗೆ ಟಿಕೆಟ್‌ ನೀಡಿದ್ದು ಸರಿಯಲ್ಲ 

ನಾಗರಾಜ ಗುಂಡಗುರ್ತಿ, ಪಾಲಿಕೆ ಸದಸ್ಯ

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry