ಗುರುವಾರ , ಡಿಸೆಂಬರ್ 12, 2019
20 °C
ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ ಸಮಗ್ರ ಅಭಿವೃದ್ಧಿಗೆ ಪ್ರಣಾಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೀರ್ಥಹಳ್ಳಿ ಸಮಗ್ರ ಅಭಿವೃದ್ಧಿಗೆ ಪ್ರಣಾಳಿಕೆ

ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಪಡೆದು ಪ್ರಣಾಳಿಕೆ ರೂಪಿಸಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಪಟ್ಟಣದ ಬಂಟರ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪಕ್ಷದ ಸ್ಥಳೀಯ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು

ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ಅನುಷ್ಠಾನ ಮಾಡಲು ಆಗದೇ ಇರುವ ಪರಿಸ್ಥಿತಿ ನಿರ್ಮಾಣ ಮಾಡುವುದು ಯಾವುದೇ ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ. ತೀರ್ಥಹಳ್ಳಿಯಂಥಹ ಮಲೆನಾಡಿನ ಸೂಕ್ಷ್ಮ ಪರಿಸರದಲ್ಲಿ ದೊಡ್ಡ ಕೈಗಾರಿಕೆಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಪ್ರವಾಸೋದ್ಯಮಕ್ಕೆ ಉತ್ತಮ ಪ್ರದೇಶ ಹೊಂದಿರುವ ಮಲೆನಾಡಿನಲ್ಲಿ ಇಕೋಟೂರಿಸಂ ಅಭಿವೃದ್ಧಿಪಡಿಸುವ ಕುರಿತು ಹೆಚ್ಚು ಆಸಕ್ತಿ ತೋರುವ ಅಂಶಗಳನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಶಾಸಕನಾಗಿದ್ದ ಅವಧಿಯಲ್ಲಿ ಕೊಡಚಾದ್ರಿ ಅಭಿವೃದ್ಧಿಗೆ ₹ 14 ಕೋಟಿ ಹಣ ಕಾಯ್ದಿರಿಸಲಾಗಿತ್ತು. ಅಲ್ಲಿ ಸ್ವಲ್ಪ ಪ್ರಮಾಣದ ಅಭಿವೃದ್ದಿಯಾಗಿದೆ. ಆಗುಂಬೆ ಪರಿಸರವನ್ನು ಬಳಕೆ ಮಾಡಿಕೊಂಡು ಇಕೋ ಟೂರಿಸಂ ಅಭಿವೃದ್ಧಿಪಡಿಸಲಾಗುವುದು. ಅರಣ್ಯ ಇಲಾಖೆ ಸುಂದರ ಪರಿಸರವಿರುವ ಪ್ರದೇಶಗಳಿಗೆ ಸಾರ್ವಜನಿಕರ ಭೇಟಿಯನ್ನು ತಡೆಹಿಡಿದಿದೆ. ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೋಂ ಸ್ಟೇಗಳು ಹೆಚ್ಚಾಗಿ ಆರಂಭವಾಗುತ್ತಿವೆ. ಇದರಿಂದಾಗಿ ಸ್ಥಳೀಯರಿಗೆ ಸಣ್ಣ ಪುಟ್ಟ ಉದ್ಯೋಗ ಲಭಿಸುವಂತಾಗಿದೆ. ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿದೆ. ಇಂಥಹ ಅಂಶಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದರು.

ತೀರ್ಥಹಳ್ಳಿಯಲ್ಲಿ ತೋಟಗಾರಿಕಾ ಸಂಶೋಧನಾ ಕೇಂದ್ರ ಆರಂಭಿಸಲಾಗಿದ್ದರೂ ಸಂಶೋಧಕರ ನೇಮಕವಾಗಿಲ್ಲ.ವಿಜ್ಞಾನಿಗಳ ನೇಮಕವಾಗದೇ ಇರುವುದರಿಂದ ಸಂಶೋಧನಾ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಕೆರೆಗಳ ಅಭಿವೃದ್ಧಿಗೆ ಬಂದ ಹಣ ದುರುಪಯೋಗವಾಗಿದೆ. ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಚಂಗಾರು, ಮಹಿಷಿ, ಹೊಸಪೇಟೆ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆರಗ ಹೇಳಿದರು.

ಮಲೆನಾಡಿನಲ್ಲಿ ಮಳೆ ಆಶ್ರಿತ ಭತ್ತ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ಹಾಗೂ ಪಾರಂಪರಿಕ ಭತ್ತದ ತಳಿಗಳಾದ ಜೋಳಗ, ಸಣ್ಣವಾಳ್ಯ, ರತ್ನಚೂಡಿ, ಹೆಗ್ಗೆ, ಕರಿದಡಿ ಇತ್ಯಾದಿ ತಳಿಗಳನ್ನು ಬೆಳೆಯುವ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ ಧನ, ಉತ್ತಮ ವೈಜ್ಞಾನಿಕ ಬೆಂಬಲ ಸಿಗುವಂತೆ ಮಾಡಲಾಗುವುದು. ರೈತರ ಆದಾಯ ಹೆಚ್ಚಿಸಲು ಕೃಷಿ ಪರಿಸರ ಪ್ರವಾಸೋದ್ಯಮ, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು ಕ್ರಮ, ಬೆಳೆಗಳ ಸಂರಕ್ಷಣಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದರು.

ಹಗಲು ಹೊತ್ತಿನಲ್ಲಿ ಕೃಷಿಗೆ ವಿದ್ಯುತ್ ಪೂರೈಕೆ, ಸಹಕಾರ ಸಂಘಗಳ ಮೂಲಕ ರೈತರಿಗೆ ಗರಿಷ್ಠ ಸಾಲ ಸೌಲಭ್ಯ, ಮಳೆಗಾಲದ ನೀರನ್ನು ಹಿಡಿದಿಡಲು ಚೆಕ್ ಡ್ಯಾಮ್, ಕೆರೆಗಳ ಹೂಳೆತ್ತುವುದು ಸೇರಿದಂತೆ ಅನೇಕ ಸಂಗತಿಗಳನ್ನು ಪ್ರಣಾಳಿಕೆ ಒಳಗೊಂಡಿದೆ ಎಂದರು.

ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಕೌಶಲಾಭಿವೃದ್ಧಿ ಮತ್ತು ಉದ್ಯೋಗ, ಪ್ರವಾಸೋದ್ಯಮಕ್ಕೆ ಆದ್ಯತೆ, ಕಲೆ ಮತ್ತು ಸಂಸ್ಕೃತಿ ಉಳಿವಿಗೆ ಪೂರಕ ಕಾರ್ಯಕ್ರಮ, ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳನ್ನು ಗಮನಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಭ್ರಷ್ಟಾಚಾರರಹಿತ, ಜನಸ್ನೇಹಿ, ಪಾರದರ್ಶಕ ತಾಲ್ಲೂಕು ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮೋಹನ್ ಶೆಟ್ಟಿ, ಪಕ್ಷದ ಪ್ರಮುಖರಾದ ಬೇಗುವಳ್ಳಿ ಸತೀಶ್, ನಾಗರಾಜಶೆಟ್ಟಿ, ಅಶೋಕಮೂರ್ತಿ, ಸಿ.ಬಿ.ಈಶ್ವರ್, ಶಂಕರನಾರಾಯಣ ಐತಾಳ್, ಭಾರತೀಪುರ ದಿನೇಶ್, ಕುಕ್ಕೆ ಪ್ರಶಾಂತ್, ದಿಂಡ ಮಂಜುನಾಥ್, ಹೆದ್ದೂರು ಮಹೇಶ್, ಹೊದಲ ಬಸವರಾಜ್  ಇದ್ದರು.

ಮೇ.20ಕ್ಕೆ ಆರಗ ನಾಮಪತ್ರ ಸಲ್ಲಿಕೆ

‘ಹಣ ಪ್ರಧಾನ ಚುನಾವಣೆ ಮಾಡುತ್ತಿಲ್ಲ. ನನ್ನಲ್ಲಿ ಹಣವಿಲ್ಲ. ಮಾದರಿ ಚುನಾವಣೆ ಮಾಡುತ್ತೇವೆ. ಮೇ.20ರಂದು ಮಧ್ಯಾಹ್ನ 12 ಗಂಟೆಗೆ ನಾಮ ಪತ್ರ ಸಲ್ಲಿಸುತ್ತೇನೆ. ಈ ಚುನಾವಣೆಯಲ್ಲಿ ಪೇಜ್ ಪ್ರಮುಖರ ಪಾತ್ರ ಮಹತ್ವದ್ದಾಗಿದೆ. ಬೇರೆ ಪಕ್ಷಗಳು ಹಣ ಖರ್ಚು ಮಾಡಿ ಪ್ರಚಾರ ಮಾಡುತ್ತಿದ್ದಾರೆ. ನಮಗೆ ಅಂಥಹ ದುರ್ಗತಿ ಬಂದಿಲ್ಲ. ನಾವು ಮೊದಲ ಸ್ಥಾನದಲ್ಲಿದ್ದೇವೆ. ಎರಡನೇ ಸ್ಥಾನಕ್ಕೆ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ಇದೆ’ ಎಂದು ಆರಗ ಜ್ಞಾನೇಂದ್ರ ಹೇಳಿದರು.

 

ಪ್ರತಿಕ್ರಿಯಿಸಿ (+)