ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಸ್ಥಳದಲ್ಲೇ ಖಾತರಿಪಡಿಸಿಕೊಳ್ಳಿ

ಮುಂದುವರೆದ ಮತದಾನ ಜಾಗೃತಿ: ಸಿಇಒ ಶಿವಾನಂದ ಕಾಪಶಿ
Last Updated 18 ಏಪ್ರಿಲ್ 2018, 11:26 IST
ಅಕ್ಷರ ಗಾತ್ರ

ಉಡುಪಿ: ಮತದಾನ ಜಾಗೃತಿ ಮುಂದುವರಿಸಿರುವ ಮತದಾರರ ಜಾಗೃತಿ ಹಾಗೂ ಪಾಲ್ಗೊಳ್ಳುವಿಕೆ ಸಮಿತಿ (ಸ್ವೀಪ್) ಕಾಪುವಿನಲ್ಲಿ ಮಂಗಳವಾರ ನಡೆಸಿ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಮಾನವ ಸರಪಳಿ ರಚಿಸಿ ಮತದಾನದ ಮಹತ್ವ ಸಾರಿದರು.

ಕಾಪು ವೀರಭದ್ರ ದೇವಸ್ಥಾನದ ವೃತ್ತದಿಂದ ಲಕ್ಷ್ಮೀ ಜನಾರ್ದನ ದೇವಸ್ಥಾನದ ವರೆಗೆ ಚೆಂಡೆಯೊಂದಿಗೆ ನಡೆದ ಜಾಥಾದಲ್ಲಿ ಸುಮಾರು 400ಕ್ಕೂ ಅಧಿಕ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು. ಮತದಾನದ ಮಹತ್ವ ಹಾಗೂ ಸಂದೇಶ ನೀಡುವ ಭಿತ್ತಿಪತ್ರಗಳನ್ನು ಅವರು ಪ್ರದರ್ಶಿಸಿದರು. ಧ್ವನಿವರ್ಧಕಗಳ ಮೂಲಕ ಜಾಗೃತಿ ಗೀತೆಗಳನ್ನು ಕೇಳಿಸಲಾಯಿತು.

ಆ ನಂತರ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಮತದಾನ ಪ್ರತಿಜ್ಞಾ ವಿಧಿ ಭೋಧಿಸಿದರು. ಈ ಬಾರಿ ಚುನಾವಣಾ ಆಯೋಗವು ನೈತಿಕ ಮತದಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಪ್ರತಿಯೊಬ್ಬ ಮತದಾರರು ಯಾವುದೇ ಆಸೆ, ಆಮಿಷ, ಒತ್ತಡ, ಪ್ರಲೋಭನೆಗಳಿಗೆ ಒಳಗಾಗದೇ ವಿವೇಚನೆ ಬಳಸಿ ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡಿ ಎಂದು ಅವರು ಕರೆ ನೀಡಿದರು.

ಯಾವ ವ್ಯಕ್ತಿಗೆ ಮತವನ್ನು ಚಲಾಯಿಸಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ಈ ಬಾರಿ ಮತ ಖಾತ್ರಿ ಯಂತ್ರ (ವಿವಿ ಪ್ಯಾಟ್) ಅಳವಡಿಸಲಾಗುವುದು. ಮತದಾನ ಮಾಡಿದ ನಂತರ ಜನರು ಖಾತ್ರಿಪಡಿಸಿಕೊಳ್ಳಬಹುದು. ಈ ವಿವಿ ಪ್ಯಾಟ್ ಯಂತ್ರಗಳ ಕಾರ್ಯ ನಿರ್ವಹಣೆ ಕುರಿತಂತೆ ಜಿಲ್ಲೆಯಾದ್ಯಂತ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ವಿವಿ ಪ್ಯಾಟ್ ಯಂತ್ರದ ಕುರಿತಂತೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ಅಶೋಕ್ ಕಾಮತ್ ಪ್ರಾತ್ಯಕ್ಷಿಕೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್, ಜಿಲ್ಲಾ ವಾರ್ತಾಧಿಕಾರಿ ಕೆ. ರೋಹಿಣಿ ಉಪಸ್ಥಿತರಿದ್ದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಸ್ವಾಗತಿಸಿದರು. ಪಿಡಿಓ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

**

ಮತದಾರರು ನೈತಿಕ ಮತದಾನಕ್ಕೆ ಆದ್ಯತೆ ನೀಡಬೇಕು ಹಾಗೂ ಅಕ್ಕಪಕ್ಕದ ಮನೆಯವರು, ಪರಿಸರದ ಜನರಿಗೆ ಸಹ ಈ ವಿಷಯವನ್ನು ತಲುಪಿಸಬೇಕು – ಶಿವಾನಂದ ಕಾಪಶಿ, ಸಿಇಒ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT