7

ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ: ರೈತ ಸಂಘ ನಿರ್ಧಾರ

Published:
Updated:

ವಿಜಯಪುರ: ‘ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್ ಪಕ್ಷಗಳಿಗೆ ಪಾಠ ಕಲಿಸಲು ಅಖಂಡ ಕರ್ನಾಟಕ ರೈತ ಸಂಘದಿಂದ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು’ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ತಿಳಿಸಿದರು.

ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಗೌಡಪ್ಪಗೌಡ ಮೈಗೂರ, ವಿಜಯಪುರ ನಗರ– ದೋಂಡಿಬಾ ಪವಾರ, ನಾಗಠಾಣ ಕ್ಷೇತ್ರದಿಂದ ಡಾ.ರಾಮಚಂದ್ರ ಬಮ್ಮನಜೋಗಿ ಕಣಕ್ಕಿಳಿಯಲಿದ್ದು, ಏ. 23 ರಂದು ನಾಮಪತ್ರ ಸಲ್ಲಿಸಲಿದ್ದಾರೆ’ ಎಂದು ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೇಂದ್ರ ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡಿಸಲು ವಿಫಲರಾದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರೈತರ ಮತ ಕೇಳಲು ನೈತಿಕತೆ ಇಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಎಂ.ಬಿ.ಪಾಟೀಲ ತಮ್ಮ ಕ್ಷೇತ್ರದಲ್ಲಿ ಸೀರೆ, ಬಾಂಡೆ ಸಾಮಾನು ವಿತರಿಸಿ, ಆಮಿಷ ಒಡ್ಡುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದರು.

‘ನಾಡಿನ ಸಂಪತ್ತನ್ನು ಲೂಟಿ ಮಾಡುವ ರಾಜಕಾರಣಿಗಳನ್ನು ಕಡೆಗಣಿಸಿ, ರೈತರ ಏಳಿಗೆಗಾಗಿ ಶ್ರಮಿಸುತ್ತಿರುವ ಅಖಂಡ ಕರ್ನಾಟಕ ರೈತ ಸಂಘದ ಅಭ್ಯರ್ಥಿಗಳಿಗೆ ಮತ ನೀಡಲು ಕೇಳಿಕೊಳ್ಳಲಾಗುವುದು’ ಎಂದು ಅರವಿಂದ ಹೇಳಿದರು.

‘ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಪ್ರತಿ ಗ್ರಾಮಗಳ ಎಲ್ಲ ವಾರ್ಡ್‌ಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ನಿತ್ಯ ಎಂಟು ಗಂಟೆ ತ್ರಿಫೇಸ್‌ ವಿದ್ಯುತ್ ಪೂರೈಕೆ, ಸಾಲದಿಂದ ಮುಕ್ತಗೊಳಿಸಲು ಹೊಸ ಯೋಜನೆ ಜಾರಿ, ಜಮೀನುಗಳಿಗೆ ತೆರಳುವ ದಾರಿ ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಪ್ರಣಾಳಿಕೆಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ’ ಎಂದರು. ಘೋಷಿತ ಅಭ್ಯರ್ಥಿಗಳಾದ ಗೌಡಪ್ಪಗೌಡ ಮೈಗೂರ, ರಾಮಚಂದ್ರ ಬೊಮ್ಮನಜೋಗಿ ಉಪಸ್ಥಿತರಿದ್ದರು.

**

ರಾಜ್ಯದಲ್ಲಿ ಅಧಿಕಾರ ನಡೆಸಿರುವ ಎಲ್ಲ ಪಕ್ಷಗಳು ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿ, ಗುಲಾಮರಂತೆ ನಡೆಸಿಕೊಂಡಿದ್ದಾರೆ – ಅರವಿಂದ ಕುಲಕರ್ಣಿ, ರಾಜ್ಯ ಕಾರ್ಯದರ್ಶಿ, ಅಖಂಡ ಕರ್ನಾಟಕ ರೈತ ಸಂಘ.

**

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry