ಭಾನುವಾರ, ಡಿಸೆಂಬರ್ 15, 2019
25 °C

ಅಕ್ಷಯ ತೃತೀಯ: ಭರ್ಜರಿ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

ಅಕ್ಷಯ ತೃತೀಯ: ಭರ್ಜರಿ ವಹಿವಾಟು

ಮುಂಬೈ: ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಲು ಗ್ರಾಹಕರು ಹೆಚ್ಚಿನ ಉತ್ಸಾಹ ತೋರಿಸಿದ್ದರಿಂದ ದೇಶದಾದ್ಯಂತ ಚಿನ್ನಾಭರಣ ಮಳಿಗೆಗಳಲ್ಲಿ ಗಣನೀಯ ವಹಿವಾಟು ನಡೆದಿದೆ.

‘ಎಲ್ಲೆಡೆ ಉತ್ತಮ ಖರೀದಿ ವಹಿವಾಟು ನಡೆದಿದ್ದು, ದಕ್ಷಿಣ ಭಾರತದಲ್ಲಿ ಬೆಳಿಗ್ಗೆಯಿಂದಲೇ ಚಿನ್ನಾಭರಣಗಳ ಖರೀದಿ ಚುರುಕಾಗಿತ್ತು. ರಾತ್ರಿ 10 ಗಂಟೆಯವರೆಗೂ ಮಳಿಗೆಗಳಲ್ಲಿ ಗ್ರಾಹಕರ ದಟ್ಟಣೆ ಕಂಡುಬಂದಿತ್ತು. ಚಿನ್ನದ ಬೆಲೆ ದುಬಾರಿಯಾಗಿದ್ದರೂ, ಖರೀದಿ ಉತ್ಸಾಹಕ್ಕೆ ಅಡ್ಡಿಯಾಗಿಲ್ಲ’ ಎಂದು ಚಿನ್ನಾಭರಣ ಸಂಘದ ರಾಷ್ಟ್ರೀಯ ನಿರ್ದೇಶಕ ಸೌರಭ್‌ ಗಾಡ್ಗೀಳ್‌ ಹೇಳಿದ್ದಾರೆ.

‘ಅಕ್ಷಯ ತೃತೀಯ ಸಂಭ್ರಮಾಚರಣೆಯಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನ ಇದೆ. ಗ್ರಾಹಕರಲ್ಲಿ ಈ ಬಾರಿಯೂ ಖರೀದಿ ಉತ್ಸಾಹ ಕಂಡು ಬಂದಿದೆ’ ಎಂದು ವಿಶ್ವ ಚಿನ್ನ ಮಂಡಳಿಯ ಭಾರತ ಘಟಕದ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ಅವರು ಹೇಳಿದ್ದಾರೆ.

‘ಆನ್‌ಲೈನ್‌ ವಹಿವಾಟು ಮತ್ತು ಡಿಜಿಟಲ್‌ ರೂಪದಲ್ಲಿನ ಚಿನ್ನದ ಖರೀದಿ ಪ್ರವೃತ್ತಿಯು ಜನಪ್ರಿಯಗೊಳ್ಳುತ್ತಿದೆ. ಹೀಗಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಖರೀದಿ ವಹಿವಾಟು ಹೆಚ್ಚಳವಾಗಿದೆ. ಜತೆಗೆ ಮದುವೆ ಋತುವಿನ ಬೇಡಿಕೆಯೂ ಇದರ ಜತೆ ಸೇರಿಕೊಂಡಿದೆ.

‘ಸಮಗ್ರ ಚಿನ್ನದ ನೀತಿ ರೂಪಿಸುವುದಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವುದು ಚಿನ್ನದ ಆರ್ಥಿಕ ಮಹತ್ವಕ್ಕೆ ಇಂಬು ನೀಡಲಿದೆ. ಚಿನ್ನದ ವಹಿವಾಟಿನ ವಿಶ್ವಾಸಾರ್ಹತೆ ಹೆಚ್ಚಿಸುವ ಉದ್ಯಮದ ಪ್ರಯತ್ನಗಳಿಗೆ ಸರ್ಕಾರದ ಈ ನಿಲುವು ಪೂರಕವಾಗಿದೆ’ ಎಂದು ಹೇಳಿದ್ದಾರೆ.

‘ಚಿನ್ನಾಭರಣ ಮಳಿಗೆಗಳಿಗೆ ಭೇಟಿ ಕೊಟ್ಟ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಚಿನ್ನದ ಬೆಲೆ ಹೆಚ್ಚಳವು ಖರೀದಿ ಉತ್ಸಾಹಕ್ಕೆ ಅಡ್ಡಿಪಡಿಸಿಲ್ಲ. ಗ್ರಾಹಕರ ಉತ್ಸಾಹ ಆಧರಿಸಿ ಹೇಳುವುದಾದರೆ ಹಿಂದಿನ ವರ್ಷಕ್ಕಿಂತ ಈ ಬಾರಿ ಶೇ 20ರಷ್ಟು ವಹಿವಾಟು ಹೆಚ್ಚಳವಾಗಿದೆ’ ಎಂದು ಚಿನ್ನಾಭರಣ ವರ್ತಕ ಕುಮಾರ್ ಜೈನ್‌ ಅವರು ಹೇಳಿದ್ದಾರೆ.

ಸಾಂಪ್ರದಾಯಿಕ ಮದುವೆ ಆಭರಣಗಳು, ಲೈಟ್‌ವೇಟ್‌ ಆಭರಣಗಳು ಮತ್ತು ಚಿನ್ನದ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.

ಅಕ್ಷಯ ತೃತೀಯ: ಚಿನ್ನಾಭರಣ ಖರೀದಿ ಭರಾಟೆ
ಬೆಂಗಳೂರು:
ಅಕ್ಷಯ ತೃತೀಯ ಪ್ರಯುಕ್ತ ನಗರದ ಚಿನ್ನಾಭರಣ ಮಳಿಗೆಗಳು ಗ್ರಾಹಕರಿಂದ ತುಂಬಿ ತುಳುಕಿದವು. ಬೆಳಿಗ್ಗೆಯಿಂದಲೇ ಮಳಿಗೆಗಳಿಗೆ ಭೇಟಿ ಕೊಟ್ಟ ಗ್ರಾಹಕರು ಭಿನ್ನ ವಿಭಿನ್ನ ವಿನ್ಯಾಸಗಳ ಆಭರಣಗಳನ್ನು ಖರೀದಿಸಿದರು. ಮಾರಾಟ ಜೋರು ಎನ್ನುವ ಖುಷಿ ಮಾಲೀಕರದ್ದಾದರೆ, ಸಿಬ್ಬಂದಿ ಮಾತ್ರ ಸುಸ್ತೋ ಸುಸ್ತು.

‘ಅಕ್ಷಯ ತೃತೀಯ ದಿನ ಏನೇ ಖರೀದಿಸಿದರೂ ಶ್ರೇಯಸ್ಸು ಎನ್ನುವ ನಂಬಿಕೆ ಹಿರಿಯರ ಕಾಲದಿಂದಲೂ ಇದೆ. ಪ್ರತಿ ವರ್ಷ ಈ ದಿನವೇ ಚಿನ್ನ ಖರೀದಿಸುತ್ತೇನೆ’ ಎಂದು ಇಂದಿರಾನಗರದ ಸುಮಿತ್ರಾ ತಿಳಿಸಿದರು.

‘ತುಂಬಾ ಒಳ್ಳೆಯ ಪ್ರತಿಕ್ರಿಯೆ ಇದೆ. ಹತ್ತು ದಿನದ ವ್ಯಾಪಾರ ಇವತ್ತು ಒಂದೇ ದಿನದಲ್ಲಿ ಆಗಿಬಿಡುತ್ತದೆ. ಅನೇಕರು ತಮಗೆ ಬೇಕಾದ ವಿನ್ಯಾಸದ ಆಭರಣಗಳನ್ನು ಮೊದಲೇ ಆಯ್ಕೆ ಮಾಡಿ, ಕಾಯ್ದಿರಿಸುತ್ತಾರೆ’ ಎಂದು ನವರತನ್‌ ಜ್ಯುವೆಲ್ಲರ್ಸ್‌ನ ಮಾಲೀಕ ಗೌತಮ್‌ ಚಂದ್‌ ತಿಳಿಸಿದರು.

ಜೋಯಾಲುಕ್ಕಾಸ್‌ನ ಮಾರುಕಟ್ಟೆ ಮುಖ್ಯಸ್ಥ ಜೀಜಿ ಕೆ. ಮ್ಯಾಥ್ಯು, ‘ಅಕ್ಷಯ ತೃತೀಯ ಪ್ರಯುಕ್ತ ಗ್ರಾಹಕರಿಂದ ಸಿಕ್ಕಾಪಟ್ಟೆ ಪ್ರತಿಕ್ರಿಯೆ ಇದೆ. ಅನೇಕರು ಮೊದಲೇ ಬುಕಿಂಗ್‌ ಮಾಡಿದ್ದರು. ಇವತ್ತು ಸುಮಾರು 16 ಕೆ.ಜಿ.ಯಷ್ಟು ಆಭರಣಗಳು ಮಾರಾಟವಾಗಿವೆ' ಎಂದರು.

ಬೆಂಗಳೂರಿನಲ್ಲಿ 6,000ಕ್ಕೂ ಹೆಚ್ಚು ಆಭರಣ ಮಳಿಗೆಗಳಿವೆ. ಎಲ್ಲ ಕಡೆಯೂ ಒಳ್ಳೆಯ ವ್ಯಾಪಾರ ಆಗಿದೆ' ಕೋಟಿ ರೂಪಾಯಿಗೂ ಹೆಚ್ಚಿನ ವಹಿವಾಟು ನಡೆದಿದೆ’ ಎಂದು ಬೆಂಗಳೂರು ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ವೆಂಕಟೇಶ ಬಾಬು ಮಾಹಿತಿ ನೀಡಿದರು.

 

ಪ್ರತಿಕ್ರಿಯಿಸಿ (+)