ಸೋಮವಾರ, ಜುಲೈ 13, 2020
25 °C
ಸಚಿವ ಹೆಗಡೆ ಬೆಂಗಾವಲು ವಾಹನಕ್ಕೆ ಡಿಕ್ಕಿ

‘ಪೂರ್ವ ಯೋಜಿತ ಕೃತ್ಯದಂತಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಪೂರ್ವ ಯೋಜಿತ ಕೃತ್ಯದಂತಿಲ್ಲ’

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ‘ಇಲ್ಲಿಯ ಹಲಗೇರಿ ಬಳಿ ಮಂಗಳವಾರ ರಾತ್ರಿ, ಸಚಿವ ಅನಂತಕುಮಾರ ಹೆಗಡೆ ಅವರ ಬೆಂಗಾವಲು ವಾಹನ ಮತ್ತು ಲಾರಿ ನಡುವಿನ ಡಿಕ್ಕಿಯು ಪೂರ್ವಯೋಜಿತ ಕೃತ್ಯದಂತಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಆಕಸ್ಮಿಕ ಅಪಘಾತವೆಂದೇ ಕಂಡು ಬಂದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಬುಧವಾರ ಸ್ಪಷ್ಟಪಡಿಸಿದರು.

ತಮ್ಮ ಕಾರಿಗೆ ಬೆಂಗಾವಲಾಗಿದ್ದ ಹೆದ್ದಾರಿ ಗಸ್ತು ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಇದೊಂದು ಅಪಘಾತ ಎಂದು ತಮಗೆ ಅನಿಸುತ್ತಿಲ್ಲ. ಲಾರಿ ಚಾಲಕನು, ಉದ್ದೇಶಪೂರ್ವಕವಾಗಿಯೇ ತಮ್ಮ ವಾಹನಕ್ಕೆ ಡಿಕ್ಕಿ ಹೊಡೆಯಲು ಬಂದು, ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಸಚಿವ ಹೆಗಡೆ ಟ್ವೀಟ್‌ ಮಾಡಿದ್ದರು.

‘ಹುಬ್ಬಳ್ಳಿಯಿಂದ ಲಾರಿಯಲ್ಲಿ ದವಸ ಧಾನ್ಯ ತುಂಬಿಕೊಂಡು ಶಿವಮೊಗ್ಗ ಕಡೆಗೆ ಚಾಲಕ ನಾಸೀರ್ ಅಹ್ಮದ್ ಮೊಫಿನ್ ಹೋಗುತ್ತಿದ್ದ. ಹಲಗೇರಿ ಕ್ರಾಸ್‌ನಲ್ಲಿ ಬಲಕ್ಕೆ ತಿರುವು ತೆಗೆದುಕೊಂಡು ಶಿವಮೊಗ್ಗಕ್ಕೆ ಹೋಗಬೇಕಿತ್ತು. ಆದರೆ, ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಕಾರಣ, ಮುಂದೆ ಹೋಗಿದ್ದಾನೆ. ವಾಪಾಸ್ಸಾಗಲೆಂದು ಲಾರಿ ತಿರುಗಿಸುತ್ತಿದ್ದ ವೇಳೆಯಲ್ಲಿ ಘಟನೆ ಸಂಭವಿಸಿದೆ. ತನಿಖೆ ಮುಂದುವರಿದಿದೆ’ ಎಂದು ಎಸ್ಪಿ ವಿವರಿಸಿದರು.

ಸಚಿವರು ಪ್ರಯಾಣಿಸುತ್ತಿದ್ದ ಕಾರಿಗೆ ಯಾವುದೇ ಹಾನಿಯಾಗಿಲ್ಲ. ಅಲ್ಲದೇ, ಘಟನೆಯ ಬಗ್ಗೆ ಸಚಿವರು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿಲ್ಲ. ಆದರೆ, ಗಾಯಗೊಂಡಿರುವ, ಹೈವೇ ಪೆಟ್ರೋಲಿಂಗ್ ವಾಹನದಲ್ಲಿದ್ದ ಎಎಸ್‌ಐ ಪ್ರಭು ತಳವಾರ ಅವರು ಲಾರಿ ಚಾಲಕನ ನಿಷ್ಕಾಳಜಿಯಿಂದ ಈ ಅಪಘಾತ ಸಂಭವಿಸಿದ್ದಾಗಿ ರಾಣೆಬೆನ್ನೂರು ಸಂಚಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಆಕಸ್ಮಿಕ ಅಪಘಾತ’

ನರಸಿಂಹರಾಜಪುರ:
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಭದ್ರತಾ ಸಿಬ್ಬಂದಿ ವಾಹನಕ್ಕೆ ಡಿಕ್ಕಿ ಹೊಡೆದ ಲಾರಿ ಎನ್.ಆರ್.ಪುರದಿಂದ ಹುಬ್ಬಳ್ಳಿಗೆ ರಬ್ಬರ್ ಮರದ ದಿಮ್ಮಿ ಸಾಗಿಸಿ ವಾಪಸ್‌ ಬರುತ್ತಿತ್ತು, ಇದೊಂದು ಆಕಸ್ಮಿಕ ಅಪಘಾತ ಎಂದು ಲಾರಿ ಮಾಲೀಕ ರಶೀದ್ ತಿಳಿಸಿದ್ದಾರೆ.

‘ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಹಲಗೇರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕ ಏಕಾಏಕಿ ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಪಘಾತ ಸಂಭವಿಸಿದೆ. ಚಾಲಕ ನಾಸೀರ್ ಅಹ್ಮದ್ ಮೊಫಿನ್ ಪಟ್ಟಣದ ಕಣಗಲ ಬೀದಿ ನಿವಾಸಿಯಾಗಿದ್ದು, ನಾಲ್ಕು ವರ್ಷದಿಂದ ನಮ್ಮ ಲಾರಿ ಚಾಲಕನಾಗಿ ದುಡಿಯುತ್ತಿದ್ದಾನೆ. ಲಾರಿಯಲ್ಲಿ ಹುಬ್ಬಳ್ಳಿಗೆ ನಿರಂತರವಾಗಿ ರಬ್ಬರ್ ಮರದ ದಿಮ್ಮಿ ಸಾಗಿಸಲಾಗುತ್ತಿದೆ’ ಎಂದು ರಶೀದ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.