ಮಂಗಳವಾರ, ಆಗಸ್ಟ್ 11, 2020
26 °C

ಶಾ ನೋಡಲು ಅಮಿತೋತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾ ನೋಡಲು ಅಮಿತೋತ್ಸಾಹ

ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ಹೊಸಕೋಟೆಯ ಪ್ರಮುಖ ಬೀದಿಗಳಲ್ಲಿ ಭರ್ಜರಿ ರೋಡ್ ಷೋ ನಡೆಸಿದರು.

ಇಲ್ಲಿನ ಜೆ‌.ಸಿ‌ ಸರ್ಕಲ್‌ನಿಂದ ಸಂಜೆ 5.20ಕ್ಕೆ ಆರಂಭಗೊಂಡ ಷೋ 7.05 ನಿಮಿಷಕ್ಕೆ ಹೂವಿನ ಮಂಡಿ ಸರ್ಕಲ್‌ನಲ್ಲಿ ಮುಕ್ತಾಯಗೊಂಡಿತು.

ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಆಜುಬಾಜಿನ ಕಟ್ಟಡಗಳ ಮೇಲೆ ನೆರೆದಿದ್ದ ಸಹಸ್ರಾರು ಜನರು ಕೇಸರಿ ರಂಗಿನ ಚೆಂಡು ಹೂ ಪಕಳೆಗಳೊಂದಿಗೆ ಅಮಿತ್ ಶಾಗೆ ಪುಷ್ಪವೃಷ್ಟಿಗರೆದರು.

ಡೊಳ್ಳು ಕುಣಿತ, ಮಹಿಳೆಯರು–ಯುವಕರ ನೃತ್ಯದೊಂದಿಗೆ ಸಾಗಿದ ಮೆರವಣಿಗೆ ಹಳೆ ಬಸ್ ನಿಲ್ದಾಣ, ತೇರು ಬೀದಿ, ಕುರುಬರ ಪೇಟೆ, ನಗರೇಶ್ವರ ಸ್ವಾಮಿ ರಸ್ತೆ ಮಾರ್ಗವಾಗಿ ಮಾರುಕಟ್ಟೆಯ ಕಿರಿದಾದ ಗಲ್ಲಿಗಳಲ್ಲಿ ಸಾಗಿತು. ಮಾರ್ಗಮಧ್ಯೆ ಹಳೆ ಬಸ್‌ ನಿಲ್ದಾಣದ ಬಳಿಯ ಬಸವೇಶ್ವರ ಪುತ್ಥಳಿಗೆ ಶಾ ನಮಸ್ಕರಿಸಿ ಮುನ್ನಡೆದರು. ಆಗಾಗ್ಗೆ ‘ತೊಲಗಿಸಿ, ತೊಲಗಿಸಿ ಕಾಂಗ್ರೆಸ್‌ ತೊಲಗಿಸಿ ಹಾಗೂ ಕಮಲವು ಅರಳಲಿ, ಕೇಸರಿ ಹರಡಲಿ’ ಎಂಬ ಜಯಘೋಷಗಳು ಮಾರ್ದನಿಸಿದವು.

ಷೋ ಮುಗಿದ ನಂತರ ಮಾತನಾಡಿದ ಶಾ, ‘ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯುವ ಕಾಲ ಬಂದಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಿದೆ’ ಎಂದು ಸಭಿಕರಲ್ಲಿ ಮನವಿ ಮಾಡಿದರು.

ಯಡಿಯೂರಪ್ಪ ಮಾತನಾಡಿ, ‘ಈ ಷೋ ನೋಡಿದರೆ, ಶರತ್ ಈಗಾಗಲೇ ಗೆದ್ದಿದ್ದಾರೆ ಎಂದು ಭಾಸವಾಗುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿ.ಎನ್.ಬಚ್ಚೇಗೌಡ ಮತ್ತು ಪಕ್ಷದ ಇತರ ಪ್ರಮುಖರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.