ಶುಕ್ರವಾರ, ಡಿಸೆಂಬರ್ 6, 2019
25 °C
ಬಿಜೆಪಿ, ಕಾಂಗ್ರೆಸ್‌ ಜತೆಗೆ ಜೆಡಿಎಸ್‌ನಲ್ಲೂ ಮೂಲ ಕಾರ್ಯಕರ್ತರ ಅಸಮಾಧಾನ; ಕೆಲವರ ರಾಜೀನಾಮೆ ?

ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ‘ಗಾಳಿ’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ‘ಗಾಳಿ’!

ವಿಜಯಪುರ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡರೂ, ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರವೊಂದನ್ನು ಹೊರತುಪಡಿಸಿದರೆ, ಉಳಿದ ಏಳು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಇನ್ನೂ ತಣ್ಣಗಾಗಿಲ್ಲ.

ವಿಜಯಪುರ ನಗರ, ಇಂಡಿ, ದೇವರಹಿಪ್ಪರಗಿ, ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯ ಬಿರುಸುಗೊಂಡಿದ್ದು, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ತಮ್ಮ ನಿಗೂಢ ನಡೆಯನ್ನು ಬಿಟ್ಟುಕೊಟ್ಟಿಲ್ಲ. ವರಿಷ್ಠರ ಸಂಪರ್ಕಕ್ಕೂ ಲಭ್ಯರಾಗದೆ ತಮ್ಮ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

‘ಘೋಷಿತ ಆರು ಅಭ್ಯರ್ಥಿಗಳಲ್ಲಿ ಜಿಲ್ಲೆಯ ಮೂರು ಪ್ರಮುಖ ಸಮುದಾಯಗಳಿಗೆ ತಲಾ ಎರಡು ಕ್ಷೇತ್ರಗಳಂತೆ ಮನ್ನಣೆ ನೀಡಲಾಗಿದೆ. ಉಳಿದಿರುವುದು ಬಣಜಿಗ ಸಮುದಾಯ ಮಾತ್ರ. ಅವಕಾಶ ಸಿಗದಿದ್ದರೆ ಬಿಜೆಪಿ ವಿರುದ್ಧ ಸಿಡಿದೇಳುವುದು ಖಚಿತ’ ಎಂಬ ಮಾತುಗಳು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿವೆ.

ಬಿಜೆಪಿ ಘೋಷಿತ ಅಭ್ಯರ್ಥಿ ಬಸನ ಗೌಡ ಪಾಟೀಲ ಯತ್ನಾಳ ಸೋಮವಾರ ಪಕ್ಷದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿದ್ದು, ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಸೇರಿದಂತೆ, ಅಪ್ಪು ಬೆಂಬಲಿಗರಾದ ಬಿಜೆಪಿಯ ಕೆಲ ಸದಸ್ಯರು ಗೈರಾಗಿದ್ದು, ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರುಗೊಳಿಸಿತು.

ವಿಜಯಪುರ ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ, ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ರಾಜು ಮಗಿಮಠ, ಚಂದ್ರಶೇಖರ ಕವಟಗಿ ಹಾಜರಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೀಡಾಗಿದೆ. ಇನ್ನೂ ಕೆಲ ಆಕಾಂಕ್ಷಿಗಳು ಬಸನಗೌಡ ಜತೆ ಗುರುತಿಸಿಕೊಳ್ಳದಿರುವುದು ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ಸಾಬೀತು ಪಡಿಸಿತು.

ಕಾಂಗ್ರೆಸ್‌ನ ಘೋಷಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರಿಂದ ಬಿ ಫಾರಂ ಪಡೆಯುವ ಮೂಲಕ, ಅಭ್ಯರ್ಥಿ ಬದಲಾವಣೆಯ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಜೆಡಿಎಸ್‌ನಲ್ಲೂ ತೀವ್ರ ಪೈಪೋಟಿ ನಡೆದಿದ್ದು, ತಿಕ್ಕಾಟದಲ್ಲಿ ಟಿಕೆಟ್‌ ಕೈ ತಪ್ಪಿದರೆ, ಅಲ್ಪಸಂಖ್ಯಾತ ಸಮಾಜದ ಪ್ರಮುಖ ಮುಖಂಡರೊಬ್ಬರು ಹೊರೆಯನ್ನು ತಮ್ಮ ತಲೆಯ ಮೇಲಿಂದ ಕೆಳಗಿಳಿಸಲಿದ್ದಾರೆ ಎಂಬುದನ್ನು ಮೂಲಗಳು ಖಚಿತಪಡಿಸಿವೆ.

ಮಾಜಿ ಶಾಸಕ ರವಿಕಾಂತ ಪಾಟೀಲ ಇಂಡಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇದು ಬಿಜೆಪಿ ವರಿಷ್ಠರಿಗೆ ತಲೆ ನೋವಾಗಿದೆ ಎನ್ನಲಾಗಿದೆ.

‘ಇದು ಅನಿರೀಕ್ಷಿತ ಬೆಳವಣಿಗೆಯಲ್ಲ. ಪೂರ್ವ ನಿರ್ಧರಿತ. ಬಿಜೆಪಿ ವರಿಷ್ಠರೇ ಪಕ್ಷದ ಟಿಕೆಟ್‌ ನಿನಗೆ ಸಿಗಲ್ಲ. ಪಕ್ಷೇತರನಾಗಿ ಕಣಕ್ಕಿಳಿ ಎಂಬ ಸೂಚನೆಯನ್ನು ಮೊದಲ ಪಟ್ಟಿ ಬಿಡುಗಡೆಗೊಳ್ಳುವ ಮುನ್ನವೇ ಸೂಚಿಸಿದ್ದರು’ ಎಂಬ ಮಾತು ಕಮಲ ಪಾಳೆಯದಿಂದ ಕೇಳಿ ಬರುತ್ತಿವೆ.

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ, ಯಡಿಯೂರಪ್ಪ ಒಡನಾಡಿ ರಾಜುಗೌಡ ಪಾಟೀಲ ಕುದರಿಸಾಲವಾಡಗಿ, ಮುದ್ದೇಬಿಹಾಳ ಕ್ಷೇತ್ರದ ಮಂಗಳಾದೇವಿ ಬಿರಾದಾರ ಸಹ ಬಿಜೆಪಿ ತೊರೆದಿದ್ದು, ಆಯಾ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

‘ಈ ನಾಲ್ಕು ಕ್ಷೇತ್ರಗಳಲ್ಲಿನ ಅಸಮಾಧಾನಿತರು ಬಿಜೆಪಿ ಗೆಲುವಿಗೆ ಅಡ್ಡಿಯಾಗದ್ದಾರೆ. ಇಬ್ಬರೂ ಈಗಾಗಲೇ ಜೆಡಿಎಸ್‌ ಹೊರೆ ಹೊತ್ತು ಚುನಾವಣಾ ಅಖಾಡಕ್ಕಿಳಿದಿದ್ದಾರೆ. ರವಿಕಾಂತ ಪಾಟೀಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗದಿರುವುದರಿಂದ ಅಸಮಾಧಾನಗೊಂಡಿರುವ ಅಪ್ಪು ಪಟ್ಟಣಶೆಟ್ಟಿ ಮೌನಕ್ಕೆ ಶರಣಾಗಿದ್ದಾರೆ.

ಅಂತಿಮ ಪಟ್ಟಿ ಬಿಡುಗಡೆ ಯಾಗುವವರೆಗೂ ಕಾದು ನೋಡುವ ತಂತ್ರಗಾರಿಕೆ ಅನುಸರಿಸಿದ್ದಾರೆ. ಆದರೆ ಪಕ್ಷ ನಿಷ್ಠನಾಗಿದ್ದರೂ; ಯಾವೊಬ್ಬ ವರಿಷ್ಠರು ಮನವೊಲಿಕೆಗೆ ಮುಂದಾಗದಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಯಾವುದೇ ಸಂದರ್ಭದಲ್ಲಿಯೂ ಅಸಮಾಧಾನ ಸ್ಫೋಟಗೊಳ್ಳಬಹುದಾಗಿದೆ’ ಎಂದು ಜಿಲ್ಲಾ ಬಿಜೆಪಿಯ ಪ್ರಭಾವಿ ಮುಖಂಡ ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

**

ಕಟಕದೊಂಡಗೆ ಟಿಕೆಟ್‌ ಅನುಮಾನ?

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ಅವರಿಗೆ ಈ ಬಾರಿ ನಾಗಠಾಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ ದೊರೆಯುವುದು ಅನುಮಾನ ಎಂಬ ಮಾತು ಕಮಲ ಪಾಳೆಯದ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗೀಡಾಗಿವೆ.

ರಾಜ್ಯ ರಾಜಕಾರಣಕ್ಕೆ ಮರಳುವ ಇರಾದೆ ಹೊಂದಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿಗೆ ವರಿಷ್ಠರು ಹಸಿರು ನಿಶಾನೆ ತೋರಲಿದ್ದಾರೋ ? ಗೋವಿಂದ ಕಾರಜೋಳ ಪುತ್ರನಿಗೆ ಮಣೆ ಹಾಕಲಿದ್ದಾರೋ ? ಇಲ್ಲವೇ ಹಿಂದಿನ ಬಾರಿ ಅಭ್ಯರ್ಥಿಯಾಗಿದ್ದ ಜಿಗಜಿಣಗಿ ಅಳಿಯ ನಾಗೇಂದ್ರ ಮಾಯವಂಶಿಗೆ ಅವಕಾಶ ಕೊಡುತ್ತಾರೋ ? ಸೂಪರ್‌ ಕಾಪ್‌ ಮಹೇಂದ್ರ ನಾಯ್ಕ್‌ ಕಣಕ್ಕಿಳಿಯುತ್ತಾರೋ ? ಎಂಬದು ತೀವ್ರ ಕುತೂಹಲ ಕೆರಳಿಸಿದೆ.

**

ಪಕ್ಷದೊಳಗಿನ ಭಿನ್ನಮತ, ಅಸಮಾಧಾನವನ್ನು ವರಿಷ್ಠರು ನಿಭಾಯಿಸಲಿದ್ದಾರೆ. ಎಲ್ಲ ಗೊಂದಲ ಪರಿಹರಿಸಲಿದ್ದಾರೆ. ಬಿಜೆಪಿ ಜಯಭೇರಿ ಖಚಿತ.

-ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಘೋಷಿತ ಅಭ್ಯರ್ಥಿ

ಪ್ರತಿಕ್ರಿಯಿಸಿ (+)