ಶುಕ್ರವಾರ, ಡಿಸೆಂಬರ್ 13, 2019
19 °C

ಎಟಿಎಂನಲ್ಲಿ ಒಬ್ಬ ರಗೆಡ್ ಅಧಿಕಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಟಿಎಂನಲ್ಲಿ ಒಬ್ಬ ರಗೆಡ್ ಅಧಿಕಾರಿ!

ಶುಕ್ರವಾರ ತೆರೆಗೆ ಬರಲಿರುವ ‘ಎಟಿಎಂ’ ಚಿತ್ರದ ಟ್ರೇಲರ್‌ ವೀಕ್ಷಿಸಿದವರ ಕಣ್ಣು ಒಂದು ಪಾತ್ರದ ಮೇಲೆ ತುಸು ಹೆಚ್ಚು ಹೊತ್ತು ನೆಟ್ಟಿರುತ್ತದೆ. ಆ ಪಾತ್ರ ಖಡಕ್ ದನಿ, ರಗೆಡ್‌ ಹಾವ–ಭಾವ ಹೊಂದಿದೆ. ಈ ಪಾತ್ರದ ಹೆಸರು ಅಮರ್. ಈತ ಒಬ್ಬ ತನಿಖಾಧಿಕಾರಿ. ಈ ಪಾತ್ರ ಮಾಡಿರುವವರು ವಿನಯ್.

ಇವರು ‘ಚಂದನವನ’ಕ್ಕೆ ಹೊಸಬರು. ವೃತ್ತಿಯಿಂದ ಸಿವಿಲ್ ಕಾಂಟ್ರಾಕ್ಟರ್‌. ಆದರೆ ನಟಿಸಬೇಕು ಎನ್ನುವುದು ಇವರ ಪಾಲಿಗೆ ಬಹುದಿನಗಳ ಆಸೆ. ಅದು ‘ಎಟಿಎಂ’ ಚಿತ್ರದ ಮೂಲಕ ಈಡೇರುತ್ತಿದೆ. ವಿನಯ್ ಅವರು ‘ಚಂದನವನ’ದ ಜೊತೆ ಮಾತಿಗೆ ಸಿಕ್ಕಿದ್ದರು. ಅವರೊಂದಿಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

ನೀವು ಸಿನಿಮಾಕ್ಕೆ ಬಂದಿದ್ದರ ಹಿಂದಿನ ಕಥೆ?

ಚಿಕ್ಕ ವಯಸ್ಸಿನಿಂದಲೂ ನನಗೆ ನಾಟಕಗಳಲ್ಲಿ ಆಸಕ್ತಿ ಇತ್ತು. ಶಾಲೆ, ಕಾಲೇಜು ದಿನಗಳಲ್ಲಿ ನಾಟಕ ಮಾಡುತ್ತಿದ್ದೆವು. ಈಗ ಮುಂಚೂಣಿಯಲ್ಲಿ ಇರುವ ಹಲವು ನಟರು ನನಗೆ ರಂಗಭೂಮಿ ಮೂಲಕ ಪರಿಚಯವೂ ಹೌದು. ನನಗೆ ನಾಟಕಗಳ ಮೂಲಕವೇ ಒಂದು ನಟನಾ ವೇದಿಕೆ ಸಿಕ್ಕಿತ್ತು.

ಈ ಸಿನಿಮಾ ನಿರ್ದೇಶಕ ಅಮರ್ ಮತ್ತು ನಾನು ಎಂಟು ವರ್ಷಗಳ ಸ್ನೇಹಿತರು. ಸಿನಿಮಾ ಮಾಡುವ ತುಡಿತ ಅವರಲ್ಲಿ ಇತ್ತು, ನಟನಾಗುವ ಹಂಬಲ ನನ್ನಲ್ಲಿ ಇತ್ತು. ಆದರೆ ನಮಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಅಮರ್ ಅವರು ಈ ಸಿನಿಮಾ ಮಾಡುತ್ತಿರುವುದು ನನಗೆ ಮೊದಲು ಗೊತ್ತಿರಲಿಲ್ಲ. ನಾನು ನನ್ನ ವೃತ್ತಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಪ್ರಾಜೆಕ್ಟ್‌ನ ಕೆಲಸಗಳಲ್ಲಿ ತೊಡಗಿದ್ದೆ. ಹೀಗಿರುವಾಗ ಒಂದು ದಿನ ಅಮರ್ ನನ್ನಲ್ಲಿಗೆ ಬಂದು, ಈ ಸಿನಿಮಾದಲ್ಲಿ ನಟಿಸುವಂತೆ ಕೇಳಿದರು. ಕೆಲಸದ ಒತ್ತಡ ಇರುವ ಕಾರಣ ನಟಿಸುವುದು ಆಗದ ಕೆಲಸ ಎಂದು ಹೇಳಿದ್ದೆ. ಆದರೂ ಅಮರ್ ಒತ್ತಾಯಮಾಡಿ ನನ್ನನ್ನು ಒಪ್ಪಿಸಿದರು. ಆಗ ನಾನು ಈ ಪಾತ್ರವನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿರಲಿಲ್ಲ. ಸ್ನೇಹಿತ ಕೇಳುತ್ತಿದ್ದಾನಲ್ಲಾ ಎಂದು ಒಪ್ಪಿಕೊಂಡಿದ್ದೆ. ಈಗ ಅನಿಸುತ್ತಿದೆ, ಇದನ್ನು ಬೇಡ ಎಂದಿದ್ದರೆ ಒಂದು ಒಳ್ಳೆಯ ಅವಕಾಶ ತಪ್ಪಿಹೋಗುತ್ತಿತ್ತು!

ನಟ ಸುದೀಪ್‌ ಅವರು ನನಗೆ ಐದು ವರ್ಷಗಳಿಂದ ಪರಿಚಯ. ಒಮ್ಮೆ ಅವರ ಜೊತೆ ಊಟ ಮಾಡುತ್ತಿದ್ದಾಗ ಅವರು, ‘ನಿನ್ನ ಧ್ವನಿ ಇಷ್ಟವಾಯಿತು’ ಎಂದು ಹೇಳಿದ್ದರು. ಇಷ್ಟು ದೊಡ್ಡವರು ಹೀಗೆ ಹೇಳುತ್ತಿದ್ದಾರೆ ಎಂದಾದರೆ ನಾನು ಅಭಿನಯಿಸಲೇಬೇಕು ಎಂಬ ಆಸೆ ನನ್ನಲ್ಲಿ ಗಟ್ಟಿಯಾಗಿತ್ತು.

ತನಿಖಾಧಿಕಾರಿಯ ಪಾತ್ರಕ್ಕೆ ನಿಮ್ಮನ್ನು ಆಯ್ಕೆ ಮಾಡಿದ್ದು ಯಾರು?

ಇದು ಅಮರ್‌ ಅವರ ಆಲೋಚನೆ. ಈ ಚಿತ್ರದಲ್ಲಿ ನಾನು ಸಮವಸ್ತ್ರದಲ್ಲಿ ಇರುವ ಪೊಲೀಸ್ ಅಧಿಕಾರಿ ಅಲ್ಲ. ನಾನು ಸಿವಿಲ್ ಧಿರಿಸಿನಲ್ಲಿ ಇರುವ ತನಿಖಾಧಿಕಾರಿ. ನನ್ನ ಸಂಭಾಷಣೆ ಶೈಲಿಯಲ್ಲಿ, ಹಾವ–ಭಾವಗಳಲ್ಲಿ ಖದರ್‌ ತಂದುಕೊಳ್ಳಬೇಕಿತ್ತು. ಆ ಕೆಲಸ ಹೇಗೆ ಆಗುತ್ತಿದೆ ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಅದರಲ್ಲೆಲ್ಲ ಸುಧಾರಣೆ ಮಾಡಿದ್ದು ಅಮರ್. ಈ ಪಾತ್ರಕ್ಕಾಗಿ ನಾನು ತರಬೇತಿಯನ್ನೇನೂ ಪಡೆದಿಲ್ಲ. ದೇವರು ಕೊಟ್ಟ ಕಂಠ ನನ್ನ ಸಹಾಯಕ್ಕೆ ಬಂತು. ನನ್ನದು ಸಪೂರ ದೇಹ ಆಗಿರುವ ಕಾರಣ, ನನ್ನ ಪಾತ್ರಕ್ಕೆ ನನ್ನ ದೇಹ ಸೂಕ್ತವಾಗಿ ಕಾಣಬೇಕು ಎಂದು ನನ್ನನ್ನು ಚಿತ್ರದಲ್ಲಿ ಚೈನ್ ಸ್ಮೋಕರ್‌ ಆಗಿ ತೋರಿಸಿದ್ದಾರೆ. ವಾಸ್ತವವಾಗಿ ನನಗೆ ಸಿಗರೇಟ್ ಸೇದುವ ಅಭ್ಯಾಸ ಇಲ್ಲ. ಹಾಗಾಗಿ, ಸಿಗರೇಟ್ ಬಾಯಿಗೆ ಇಟ್ಟುಕೊಳ್ಳುವುದು ತುಸು ಕಷ್ಟವಾಗುತ್ತಿತ್ತು!

ನಾವು ಈ ಸಿನಿಮಾ ಕೆಲಸ ಆರಂಭಿಸುವ ಮೊದಲು ಒಂದು ಕಥೆಯನ್ನು ಆಲೋಚಿಸಿದ್ದೆವು. ಅದು ಹಾಸ್ಯಪ್ರಧಾನವಾಗಿತ್ತು. ಹಾಸ್ಯ ಪಾತ್ರಕ್ಕೆ ಸಂಭಾಷಣೆಯನ್ನು ಕೂಡ ಅಭ್ಯಾಸ ಮಾಡಿದ್ದೆ.

ಪೊಲೀಸ್ ಅಥವಾ ತನಿಖಾಧಿಕಾರಿ ಪಾತ್ರಗಳು ಮ್ಯಾನರಿಸಂನಿಂದಾಗಿ ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ. ಅದನ್ನು ಹೇಗೆ ರೂಢಿಸಿಕೊಂಡಿರಿ?

ನನಗೆ ತೆರೆಯ ಮೇಲೆ ಹೀಗೇ ಕಾಣಿಸಿಕೊಳ್ಳಬೇಕು ಎಂಬ ಆಲೋಚನೆ ಮೊದಲೇ ಇತ್ತು. ನನ್ನ ಪಾತ್ರ ಮಾಸ್‌ ಡೈಲಾಗ್‌ಗಳನ್ನು ಹೇಳುವುದಿಲ್ಲ. ಇದರಲ್ಲಿನ ಸಂಭಾಷಣೆ ಚುಟುಕಾಗಿದೆ. ಇದು ಎಲ್ಲರ ಮನಸ್ಸಿನಲ್ಲಿ ಉಳಿದುಕೊಳ್ಳುವ ಪಾತ್ರ ಆಗುತ್ತದೆ. ನನ್ನ ಪಾತ್ರವನ್ನು ಕಟ್ಟಿರುವ ಶ್ರೇಯಸ್ಸು ನನಗೆ ಮತ್ತು ಅಮರ್‌ಗೆ ಸಲ್ಲಬೇಕು. ಕ್ಯಾಮೆರಾ ಮುಂದೆ ನಿಂತಾಗ ಇದು ಇಷ್ಟೊಂದು ಪವರ್‌ಫುಲ್‌ ಪಾತ್ರ ಅನಿಸಿರಲಿಲ್ಲ. ಆದರೆ ಪಾತ್ರದ ತಾಕತ್ತು ಏನು ಎಂಬುದು ಡಬ್ಬಿಂಗ್ ಸಮಯದಲ್ಲಿ ನನಗೆ ಗೊತ್ತಾಯಿತು. ಸುದೀಪ್‌ ಮತ್ತು ಯಶ್ ಅವರು ಮೆಚ್ಚುಗೆ ಸೂಚಿಸಿದರು. ಈ ಪಾತ್ರ ಲವ್ ಮಾಡುವ ಗೋಜಿಗೆ ಗೋಗುವುದಿಲ್ಲ, ಅಪರಾಧಿಯನ್ನು ಹಿಡಿಯುವುದರ ಮೇಲೆಯೇ ಈ ಪಾತ್ರದ ಗಮನ ಇರುತ್ತದೆ. ಒಂದು ರಗೆಡ್ ಪಾತ್ರ ಅದು.

ರಗೆಡ್‌ ಪಾತ್ರದಲ್ಲಿ ಈಗ ಕಾಣಿಸಿಕೊಂಡು, ಮುಂದೆ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ಅನಿಸುತ್ತಿದೆಯಾ?

ಸಿನಿಮಾ ರಂಗದಲ್ಲಿ ನಾನು ಮುಂದುವರಿಯಬೇಕು ಎಂಬ ಆಸೆ ಇದೆ. ಕಲಾವಿದನಾಗಿ ನಾನು ಇನ್ನೂ ಬೇರೆ ಬೇರೆ ಬಗೆಯ ಪಾತ್ರಗಳನ್ನು ಮಾಡಬೇಕು ಎಂಬ ಆಸೆಯೂ ಇದೆ. ಸಿಂಪಲ್ ಸುನಿ ಜತೆ ಈಗ ಒಂದು ಪ್ರೋಮೊ ಸಿದ್ಧಪಡಿಸಿದ್ದೇವೆ. 

ಪ್ರತಿಕ್ರಿಯಿಸಿ (+)