ಭಾನುವಾರ, ಡಿಸೆಂಬರ್ 15, 2019
19 °C

ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ತರಬೇಕು ಎಂದು ಕಾನೂನು ಆಯೋಗವು ಶಿಫಾರಸು ಮಾಡಿದೆ. ಕ್ರಿಕೆಟ್‌ ಮಂಡಳಿಯಲ್ಲಿ ಉತ್ತರದಾಯಿತ್ವ ತರಲು ಈ ಕ್ರಮವು ಸ್ವಾಗತಾರ್ಹವಾಗಿದೆ. ಪ್ರತಿವರ್ಷ ಬಹುಕೋಟಿ ಆದಾಯ ಗಳಿಸುತ್ತಿರುವ ಮಂಡಳಿಗೆ ಸಾರ್ವಜನಿಕ ಸಂಸ್ಥೆಯ ರೂಪು ಕೊಡಲು ಸಹಕಾರಿಯಾಗಲಿದೆ. ಆದರೆ ಯಥಾಪ್ರಕಾರ ಮಂಡಳಿಯ ಪದಾಧಿಕಾರಿಗಳಿಂದ ಈ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ‘ನಮ್ಮ ಮಂಡಳಿಯು ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯುತ್ತಿಲ್ಲ. ಆದರೂ ಇವತ್ತು ಮಂಡಳಿಯನ್ನು ಆರ್‌ಟಿಐ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಮುಂದೊಂದು ದಿನ ಭಾರತ ಒಲಿಂಪಿಕ್ಸ್‌ ಸಂಸ್ಥೆಯ (ಐಒಎ) ವ್ಯಾಪ್ತಿಗೂ ಸೇರಿಸಬಹುದು. ಆಗ ಉಳಿದ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ ಮಾದರಿಯಲ್ಲಿ ಸರ್ಕಾರದ ಅನುದಾನವನ್ನು ಬಿಸಿಸಿಐ ಅವಲಂಬಿಸಬೇಕಾಗುತ್ತದೆ. ಕ್ರಿಕೆಟ್‌ ಸೊರಗುತ್ತದೆ’ ಎಂದು ವಾದಿಸುತ್ತಿದ್ದಾರೆ. ಆದರೆ ಕೇಂದ್ರ ಕಾನೂನು ಸಚಿವಾಲಯಕ್ಕೆ ಬುಧವಾರ ಶಿಫಾರಸು ವರದಿಯನ್ನು ಸಲ್ಲಿಸಿರುವ ಬಿ.ಎಸ್. ಚೌಹಾಣ್ ನೇತೃತ್ವದ ಸಮಿತಿಯು ಮಂಡಳಿ ಪದಾಧಿಕಾರಿಗಳ ವಾದವನ್ನು ಅಲ್ಲಗಳೆಯುತ್ತದೆ. ಆಟಗಾರರು ತಮ್ಮ ಹೆಲ್ಮೆಟ್‌ಗಳ ಮೇಲೆ ‘ಅಶೋಕ ಚಕ್ರ’, ಪೋಷಾಕಿನಲ್ಲಿ ರಾಷ್ಟ್ರಧ್ವಜದ ‘ಬಣ್ಣ’ಗಳನ್ನು ಬಳಸುತ್ತಾರೆ. ತನ್ನ ಆಟಗಾರರಿಗೆ ಖೇಲ್‌ರತ್ನ, ಅರ್ಜುನ ಪುರಸ್ಕಾರಗಳನ್ನು ನೀಡುವಂತೆ ಬಿಸಿಸಿಐ ಪ್ರತಿವರ್ಷವೂ ಶಿಫಾರಸು ಮಾಡುತ್ತದೆ. ಕ್ರಿಕೆಟಿಗರೂ ಈ ಪುರಸ್ಕಾರಗಳನ್ನು ಸ್ವೀಕರಿಸುತ್ತಲೇ ಇದ್ದಾರೆ.

ದೇಶದಲ್ಲಿರುವ ಬಹುತೇಕ ಕ್ರಿಕೆಟ್‌ ಕ್ರೀಡಾಂಗಣಗಳು ಇರುವುದು ಸರ್ಕಾರದ ಜಮೀನುಗಳಲ್ಲಿ. ಗುತ್ತಿಗೆ, ಒಡಂಬಡಿಕೆಗಳ ಮೂಲಕ ಮಂಡಳಿಯು ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳಿಂದ ಜಮೀನು ಪಡೆದುಕೊಂಡು ನಿರ್ವಹಣೆ ಮಾಡುತ್ತಿದೆ. ವಿದ್ಯುತ್, ನೀರು ಹಾಗೂ ಪಂದ್ಯಗಳ ಸಂದರ್ಭದಲ್ಲಿ ಪೊಲೀಸ್ ಭದ್ರತೆ, ಸಾರಿಗೆ ವ್ಯವಸ್ಥೆಗಳನ್ನು ಪಡೆಯುತ್ತಿದೆ. ಪಂದ್ಯಗಳನ್ನು ವೀಕ್ಷಿಸಲು ಸಂಸ್ಥೆಗಳು ಮಾರಾಟ ಮಾಡುವ ಟಿಕೆಟ್‌ಗಳಿಂದ ಸಂಗ್ರಹವಾಗುವ ದುಡ್ಡು ಸಾರ್ವಜನಿಕರಿಂದಲೇ ಬರುತ್ತದೆ ಅಲ್ಲವೇ? ಇಷ್ಟೆಲ್ಲವೂ ಇದ್ದ ಮೇಲೂ ನೆಲದ ಕಾನೂನುಗಳು ತಮಗೆ ಅನ್ವಯಿಸುವುದಿಲ್ಲ ಎಂದು ಮಂಡಳಿಯು ಮೊಂಡುವಾದ ಮಾಡುತ್ತಿದೆ. ಹಣ, ಅಧಿಕಾರ, ಪ್ರತಿಷ್ಠೆ, ತಾರಾವರ್ಚಸ್ಸಿನ ಮೇಲಿನ ಏಕಸ್ವಾಮ್ಯವನ್ನು ಬಿಟ್ಟು ಕೊಡಲು ಮಂಡಳಿಯೊಳಗಿನ ಸ್ಥಾಪಿತ ಹಿತಾಸಕ್ತಿಗಳಿಗೆ ಇಷ್ಟವಿಲ್ಲ. ಕ್ರಿಕೆಟ್ ಇವತ್ತು ಕೇವಲ ಆಟವಾಗಿ ಉಳಿದಿಲ್ಲ. ದೊಡ್ಡ ಉದ್ಯಮವಾಗಿ ಬೆಳೆದಿದೆ. ಅದರೊಂದಿಗೆ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್, ಸ್ಪಾಟ್ ಫಿಕ್ಸಿಂಗ್ ಮತ್ತಿತರ ಮೋಸದಾಟಗಳೂ ನಡೆಯುತ್ತಿವೆ. ಇದೆಲ್ಲದರ ನಡುವೆಯೂ ಕ್ರಿಕೆಟ್‌ ನೋಡುವವರ, ಆರಾಧಿಸುವವರ, ಆಡುವವರ ಸಂಖ್ಯೆಯೂ ಹೆಚ್ಚುತ್ತಲೇ ಸಾಗಿದೆ. ಬೇರೆಲ್ಲ  ಆಟಗಳು ಮತ್ತು ವಿದ್ಯಾಭ್ಯಾಸವನ್ನು ಬದಿಗೊತ್ತಿ ಕ್ರಿಕೆಟ್‌ನಲ್ಲಿಯೇ ಭವಿಷ್ಯ ಕಾಣುವ ಕನಸಿನೊಂದಿಗೆ ಕಣಕ್ಕಿಳಿಯುವ ಮಕ್ಕಳಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಪಾಲಕರೂ ಆಪಾರ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರ ಹಿತದೃಷ್ಟಿಯಿಂದ ಮಂಡಳಿಯನ್ನು ಆರ್‌ಟಿಐ ವ್ಯಾಪ್ತಿಗೆ ತರಲು ಇದು ಸಕಾಲ. ಆದರೆ ಕೇಂದ್ರ ಸರ್ಕಾರದಲ್ಲಿರುವ ಕೆಲವು ಪ್ರಭಾವಿ ನಾಯಕರು ಬಿಸಿಸಿಐನ ಆಯಕಟ್ಟಿನ ಸ್ಥಳದಲ್ಲಿಯೂ ಇದ್ದಾರೆ. ಅವರು ಕಾನೂನು ಆಯೋಗದ ಶಿಫಾರಸು ಜಾರಿಯಾಗದಂತೆ ತಡೆಯಲು ತಮ್ಮ ಪ್ರಭಾವ ಬಳಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ತಡೆಯೊಡ್ಡುತ್ತಿರುವ ಹಿತಾಸಕ್ತಿಗಳು ಆರ್‌ಟಿಐಗೂ ಅಡ್ಡಗಾಲು ಹಾಕುವುದು ಖಚಿತ. ಬಿಸಿಸಿಐ ಆಡಳಿತ ಸುಧಾರಣೆಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕ್ರಿಕೆಟ್ ಆಡಳಿತ ಸಮಿತಿಯೂ (ಸಿಒಎ) ಕಾನೂನು ಆಯೋಗದ ಶಿಫಾರಸನ್ನು ಬೆಂಬಲಿಸಿ, ಸರ್ಕಾರದ ಮೇಲೆ ಒತ್ತಡ ಹಾಕಿದರೆ ಆರ್‌ಟಿಐ ಜಾರಿ ಸಾಧ್ಯವಾಗಬಹುದು.

ಪ್ರತಿಕ್ರಿಯಿಸಿ (+)