ಮೋದಿಗೆ ‘ಸ್ಟಾರ್‌’ಗಳ ಎದಿರೇಟು!

7
ಪ್ರಚಾರಕ್ಕೆ ಖುಷ್ಬೂ, ನಗ್ಮಾ, ಅಜರುದ್ದೀನ್‌ ಕರೆತರಲು ಕಾಂಗ್ರೆಸ್‌ ನಿರ್ಧಾರ

ಮೋದಿಗೆ ‘ಸ್ಟಾರ್‌’ಗಳ ಎದಿರೇಟು!

Published:
Updated:
ಮೋದಿಗೆ ‘ಸ್ಟಾರ್‌’ಗಳ ಎದಿರೇಟು!

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್‌ ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನ, ಗೊಂದಲ, ಗದ್ದಲ ತಣ್ಣಗಾಗುತ್ತಿದ್ದಂತೆ, ಭರ್ಜರಿ ಪ್ರಚಾರ ತಂತ್ರಗಳ ಮೂಲಕ ಪಕ್ಷದ ಅಭ್ಯರ್ಥಿಗಳ ಪರ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಕಾರ್ಯತಂತ್ರ ರೂಪಿಸಿದೆ.

ರಾಷ್ಟ್ರೀಯ ನಾಯಕರ ಜೊತೆ ಕ್ರಿಕೆಟ್‌, ಸಿನಿಮಾ ತಾರೆಯರನ್ನು ‘ಸ್ಟಾರ್‌’ ಪ್ರಚಾರಕರನ್ನಾಗಿ ಬಳಸಿಕೊಂಡು ಜನಾಕರ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೆಪಿಸಿಸಿ ತೀರ್ಮಾನಿಸಿದೆ.

ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್‌, ಸಂಸತ್‌ ಸದಸ್ಯ ಜೋತಿರಾದಿತ್ಯ ಸಿಂಧಿಯಾ, ಕ್ರಿಕೆಟ್‌ ಕ್ಷೇತ್ರದಿಂದ ಬಂದು ರಾಜಕಾರಣಿಗಳಾಗಿ ಬದಲಾಗಿರುವ ಅಜರುದ್ದೀನ್‌, ನವಜೋತ್‌ ಸಿಂಗ್‌ ಸಿಧು ಕಾಂಗ್ರೆಸ್‌ ಪರ ಪ್ರಚಾರಕ್ಕೆ ರಾಜ್ಯಕ್ಕೆ ಬರಲಿದ್ದಾರೆ.

ಭಾರತೀಯ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಅಜರುದ್ದೀನ್‌, ಲೋಕಸಭೆ ಮಾಜಿ ಸದಸ್ಯ ಕೂಡ. ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದ ಮಾಜಿ ಕ್ರಿಕೆಟಿಗ ಸಿಧು, ಪಂಜಾಬ್‌ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲು ಕಾರಣರಾಗಿದ್ದರು. ಈಗ ಅವರು ಅಲ್ಲಿನ ಸ್ಥಳೀಯ ಸಂಸ್ಥೆಗಳ ಸಚಿವ.

ಅಲ್ಲದೆ ಥಳಕು ಬೆಳಕಿನ ಲೋಕದಲ್ಲಿ ಮೆರೆದು, ರಾಜಕೀಯ ಕ್ಷೇತ್ರಕ್ಕೆ ಬಂದಿರುವ ಖುಷ್ಬೂ ಮತ್ತು ನಗ್ಮಾ ಕೂಡ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರಲಿದ್ದಾರೆ ಎಂದು ಎಐಸಿಸಿ ಮೂಲಗಳು ತಿಳಿಸಿವೆ.

ಚುನಾವಣೆ ದಿನ (ಮೇ 12) ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ವಿವಿಧೆಡೆ ಸಾರ್ವಜನಿಕ ಸಭೆ, ರೋಡ್‌ ಷೋಗಳಲ್ಲಿ ಭಾಗವಹಿಸುವ ಮಾಹಿತಿ ಇದೆ. ಮೋದಿ ಬರುವ ದಿನಗಳಲ್ಲೇ ಸ್ಟಾರ್‌ ಪ್ರಚಾರಕರನ್ನು ಬಳಸಿಕೊಂಡು ಅವರ ಪ್ರಚಾರ ಶೈಲಿಗೆ ಎದಿರೇಟು ನೀಡಲು ಕಾಂಗ್ರೆಸ್‌ ಉದ್ದೇಶಿಸಿದೆ.

‘ಮೋದಿ ನೀಡಿದ ಸುಳ್ಳು ಭರವಸೆಗಳು ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಹೆಚ್ಚು ಬಿಂಬಿಸುವ ಮೂಲಕ ಮತದಾರರನ್ನು ಸೆಳೆಯಲಾಗುವುದು. ವಿಧಾನಸಭೆ ಚುನಾವಣೆಯ ಪ್ರಚಾರ, 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ದೃಷ್ಟಿಯಿಂದಲೂ ಅತಿ ಮಹತ್ವದ್ದು’ ಎಂದೂ ಎಐಸಿಸಿ ಹಿರಿಯ ನಾಯಕರೊಬ್ಬರು ತಿಳಿಸಿದರು.

ರಾಹುಲ್‌ ಪ್ರವಾಸ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇದೇ 26 ಮತ್ತು 27ರಂದು ಗದಗ, ಹಾವೇರಿ, ಉತ್ತರ ಕನ್ನಡ, ಮಡಿಕೇರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಮತ್ತೆ ಮೇ 3, 4 ಹಾಗೂ 8, 9ರಂದು ರಾಹುಲ್‌ ರಾಜ್ಯಕ್ಕೆ ಬರಲಿದ್ದಾರೆ. ಬೆಂಗಳೂರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ, ಬೃಹತ್‌ ರೋಡ್‌ ಷೋ ಹಮ್ಮಿಕೊಳ್ಳಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry