ಜೆಡಿಎಸ್‌ ಪರ ಪ್ರಚಾರಕ್ಕೆ ಆಂಧ್ರದಿಂದ ಕಾರ್ಯಕರ್ತರು

7
ಕೆಲವು ಕ್ಷೇತ್ರಗಳಲ್ಲಿ ಒವೈಸಿಯಿಂದಲೂ ಪ್ರಚಾರ

ಜೆಡಿಎಸ್‌ ಪರ ಪ್ರಚಾರಕ್ಕೆ ಆಂಧ್ರದಿಂದ ಕಾರ್ಯಕರ್ತರು

Published:
Updated:
ಜೆಡಿಎಸ್‌ ಪರ ಪ್ರಚಾರಕ್ಕೆ ಆಂಧ್ರದಿಂದ ಕಾರ್ಯಕರ್ತರು

ಬೆಂಗಳೂರು: ಜೆಡಿಎಸ್‌ಗೆ ಬೆಂಬಲ ಘೋಷಿಸಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ)ಅಧ್ಯಕ್ಷ ಅಸಾದುದ್ದೀನ್ ಒವೈಸಿ, ಪಕ್ಷದ ಕಾರ್ಯಕರ್ತರನ್ನು ಪ್ರಚಾರಕ್ಕಾಗಿ ಹೈದರಾಬಾದ್‌– ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳಿಗೆ ಕಳುಹಿಸಿದ್ದಾರೆ.

ಹೈದರಾಬಾದ್‌ನಿಂದ ತೆರಳಿರುವ ಕಾರ್ಯಕರ್ತರಿಗೆ ಓಡಾಟಕ್ಕೆ ವಾಹನ ಮತ್ತಿತರ ವ್ಯವಸ್ಥೆಗಳನ್ನು ಮಾಡಿದ್ದಾರೆ. ಈ ಕಾರ್ಯಕರ್ತರು ಕೇವಲ ಮುಸ್ಲಿಂ ಮತದಾರರು ಹೆಚ್ಚಾಗಿರುವ ಪ್ರದೇಶಗಳಲ್ಲೇ ಓಡಾಡಿ ಜೆಡಿಎಸ್‌ ಪರ ಮನವೊಲಿಸುವ ಕಾರ್ಯ ನಡೆಸುತ್ತಾರೆ ಎಂದು ಮೂಲಗಳು ಹೇಳಿವೆ.

ಹಿಂದೆ ಹೈದರಾಬಾದ್‌ ನಿಜಾಮರ ಆಡಳಿತದ ವ್ಯಾಪ್ತಿಯಲ್ಲಿದ್ದ ಬೀದರ್‌, ಕಲಬುರ್ಗಿ, ರಾಯಚೂರು, ವಿಜಯಪುರ, ಕೊಪ್ಪಳ, ಯಾದಗಿರಿ ಜಿಲ್ಲೆಗಳಲ್ಲಿ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ ಪರ ಮತ ಕೋರಲು ಸ್ವತಃ ಒವೈಸಿಯೇ ಬರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಮುಸ್ಲಿಂ ಮತದಾರರು ಹೆಚ್ಚಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಂಐಎಂ ಹೆಜ್ಜೆಯೂರಿದೆ. ಆದರೆ, ಈ ಬಾರಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೇ ಇರಲು ಪಕ್ಷ ನಿರ್ಧರಿಸಿದೆ.

‘ಬಿಜೆಪಿ ಮುಸ್ಲಿಂ ವಿರೋಧಿಯಾಗಿದೆ. ಕಾಂಗ್ರೆಸ್‌ ಮುಸ್ಲಿಮರ ಪರ ಮೊಸಳೆ ಕಣ್ಣೀರು ಸುರಿಸುತ್ತಿದೆಯೇ ಹೊರತು ಈ ಸಮುದಾಯದ ಅಭಿವೃದ್ಧಿಗಾಗಿ ಏನೂ ಮಾಡುತ್ತಿಲ್ಲ. ದೇವೇಗೌಡರ ನೇತೃತ್ವದ ಜೆಡಿಎಸ್‌ ಮುಸ್ಲಿಮರ ಪರ ನೈಜ ಕಾಳಜಿ ಹೊಂದಿರುವುದರಿಂದ ಅವರಿಗೆ ಬೆಂಬಲ ನೀಡಿದ್ದೇವೆ’ ಎಂದು ಒವೈಸಿ ಹೈದರಾಬಾದ್‌ನಲ್ಲಿ ತಿಳಿಸಿದ್ದಾರೆ.

‘ಫೈರ್‌ಬ್ರ್ಯಾಂಡ್‌ ಮಾತುಗಾರರಾಗಿರುವ ಒವೈಸಿ, ಮುಸ್ಲಿಂ ಮತದಾರರ ಮೇಲೆ ಪ್ರಭಾವ ಬೀರಬಲ್ಲರು. ಬೆಂಗಳೂರಿನಲ್ಲಿ ಕೆಲವು ಕ್ಷೇತ್ರಗಳಿಗೂ ಬಂದು ಅವರು ಭಾಷಣ ಮಾಡಲಿದ್ದಾರೆ’ ಎಂದು ಜೆಡಿಎಸ್‌ ಮುಖಂಡರೊಬ್ಬರು ತಿಳಿಸಿದರು.

ಬಿಎಸ್‌ಪಿ ಜತೆಗೆ ಮೈತ್ರಿ ಮತ್ತು ಎಐಎಂಐಎಂ ಬೆಂಬಲದಿಂದ ಜೆಡಿಎಸ್‌ಗೆ ಹೆಚ್ಚಿನ ಶಕ್ತಿ ಲಭಿಸಿದೆ. ಇದರಿಂದ ದಲಿತ ಮತ್ತು ಮುಸ್ಲಿಂ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲು ಸಾಧ್ಯ. ಕಾಂಗ್ರೆಸ್‌, ಮುಸ್ಲಿಂ ಮೌಲ್ವಿಗಳ ಮೂಲಕ ಸಮುದಾಯದ ಮತ ಪಕ್ಷ ಬಿಟ್ಟು ಕದಲದಂತೆ ವ್ಯವಸ್ಥೆ ಮಾಡಿರುವಾಗ, ಒವೈಸಿ ಬೆಂಬಲ ಮಹತ್ವದ್ದಾಗಿದೆ ಎಂದು ಹೇಳಿದರು.

ಮಾಯಾವತಿ ಪ್ರಚಾರ

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ರಾಜ್ಯದಲ್ಲಿ ಜೆಡಿಎಸ್‌ ಪರ ಇದೇ 25 ಮತ್ತು 26ರಂದು ಪ್ರಚಾರ ನಡೆಸಲಿದ್ದಾರೆ. ಅವರು ಮೈಸೂರು, ಕೋಲಾರ, ಬಳ್ಳಾರಿ, ಚಿತ್ರದುರ್ಗದಲ್ಲಿ ಜೆಡಿಎಸ್‌– ಬಿಎಸ್‌ಪಿ ಜಂಟಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಜೆಡಿಎಸ್‌ ವಕ್ತಾರ ಟಿ.ಎಸ್‌.ಶರವಣ ತಿಳಿಸಿದರು.

ಅಲ್ಲದೆ, ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷವು ತೆಲುಗು ಭಾಷಿಗರು ಹೆಚ್ಚಾಗಿರುವ ಪ್ರದೇಶದಲ್ಲಿ ಜೆಡಿಎಸ್‌ ಪರವಾಗಿ ಪ್ರಚಾರ ನಡೆಸಲಿದೆ. ಕೆಲವು ಕಡೆಗಳಲ್ಲಿ ತೆಲಂಗಾಣ ಮುಖ್ಯಮಂತ್ರಿ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry