‘ಬಕ್ರೆವಾಲಾ ಬಾಲಕಿ: ಸೈದ್ಧಾಂತಿಕ ಧಾರ್ಮಿಕ ಅತ್ಯಾಚಾರ’

7

‘ಬಕ್ರೆವಾಲಾ ಬಾಲಕಿ: ಸೈದ್ಧಾಂತಿಕ ಧಾರ್ಮಿಕ ಅತ್ಯಾಚಾರ’

Published:
Updated:
‘ಬಕ್ರೆವಾಲಾ ಬಾಲಕಿ: ಸೈದ್ಧಾಂತಿಕ ಧಾರ್ಮಿಕ ಅತ್ಯಾಚಾರ’

ಬೆಂಗಳೂರು: ‘ಜಮ್ಮುವಿನ ಬಕ್ರೆವಾಲಾ ಅಲೆಮಾರಿ ಸಮುದಾಯದ 8 ವರ್ಷದ ಬಾಲಕಿ ಮೇಲೆ ನಡೆದದ್ದು ದೈಹಿಕ ಅತ್ಯಾಚಾರವಲ್ಲ. ಅದು ಸೈದ್ಧಾಂತಿಕ, ಧಾರ್ಮಿಕ ದ್ವೇಷದ ಅತ್ಯಾಚಾರ’ ಎಂದು ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ಲಿಬರ್ಟೀಸ್‌ (ಪಿಯುಸಿಎಲ್‌) ರಾಷ್ಟ್ರೀಯ ಉಪಾಧ್ಯಕ್ಷ ಡಾ.ವಿ.ಲಕ್ಷ್ಮಿನಾರಾಯಣ ದೂರಿದರು.

ಪಿಯುಸಿಎಲ್ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ‘ಸಂವಿಧಾನ ಮತ್ತು ಪ್ರಚಲಿತ ವಿದ್ಯಮಾನಗಳು’ ಕುರಿತು ಅವರು. ಸಮಾವೇಶದಲ್ಲಿ ಮಾತನಾಡಿದರು. ಈ ಅತ್ಯಾಚಾರ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದಕ್ಕೆ ರಾಜಕೀಯ ಪಕ್ಷಗಳು ಉತ್ತರಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ ಎಂದರು.

ದೇಶವು ಮೌಲ್ಯಗಳ ಮೇಲೆ ನಿಂತಿದೆ. ಆದರೆ, ಆ ಮೌಲ್ಯಗಳ ಮೇಲೆ ಅಪಚಾರ ನಡೆಸುತ್ತಿದ್ದಾರೆ. ಸಂವಿಧಾನವನ್ನು ಬದಲಿಸುವ ಹುನ್ನಾರದ ಜತೆಗೆ, ಮನುಸ್ಮೃತಿಯನ್ನು ಹೇರುವ ಪ್ರಯತ್ನ ನಡೆಸುತ್ತಿದ್ದಾರೆ. ಇವುಗಳ ನಿರ್ಮೂಲನೆ ಮಾಡಿ, ಪರ್ಯಾಯ ಸಮಾಜವನ್ನು ಕಟ್ಟಬೇಕು ಎಂದರು.

ಸಾಹಿತಿ ಶೂದ್ರ ಶ್ರೀನಿವಾಸ್‌, ‘ಭಾರತದ ಸಂವಿಧಾನ ಬದಲಾಯಿಸುವ ಕುರಿತು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ನೀಡಿದ್ದ ಹೇಳಿಕೆಗೆ ವ್ಯಕ್ತವಾದ ಪ್ರತಿಕ್ರಿಯೆಗಳು ಗಂಭೀರವಾಗಿದ್ದವು. ಸಂವಿಧಾನವನ್ನು ಕಾಪಾಡಿಕೊಳ್ಳುವ ನಿಷ್ಠೆಯನ್ನು ಅವು ತೋರಿಸುತ್ತವೆ. ಹೆಗಡೆ ಅಂತಹ ಸಾವಿರ ಮಂದಿ ಬಂದರೂ ಸಂವಿಧಾನಕ್ಕೆ ಯಾವುದೇ ಆಪತ್ತು ಎದುರಾಗುವುದಿಲ್ಲ. ಬಹುಸಂಸ್ಕೃತಿ ಹೊಂದಿರುವ ಈ ದೇಶದಲ್ಲಿ ದುಷ್ಟಶಕ್ತಿಗಳು ಹಾಗೂ ಮನುಸ್ಮೃತಿ ನಾಯಕರು ಬಹುಬೇಗ ಮಾಯವಾಗುತ್ತಾರೆ’ ಎಂದರು. ‘ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಮನಬಂದಂತೆ ಮಾತನಾಡಬಾರದು. ಮಾತಿನಲ್ಲಿ ವಿನಯ, ಸಂಯಮ ಇರಬೇಕು’ ಎಂದು ಸಲಹೆ ನೀಡಿದರು.

ಪಿಯುಸಿಎಲ್‌ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ವೈ.ಜೆ.ರಾಜೇಂದ್ರ, ‘ಸಂವಿಧಾನವನ್ನು ದುರ್ಬಲಗೊಳಿಸುವ, ನಾಗರಿಕ ಸಂಘಟನೆಗಳ ಧ್ವನಿಯನ್ನು ಅಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸುವಂತಹ ಕರಾಳ ಆದೇಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ’ ಎಂದರು.

‘ಫ್ಯಾಸಿಸಂ ನಮ್ಮ ದೇಶಕ್ಕೆ ಹೊಸದಲ್ಲ. ಹೆದರಬೇಕಾದ ಅಗತ್ಯವಿಲ್ಲ. ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ನಮ್ಮೊಳಗಿರುವ ಫ್ಯಾಸಿಸಂ ಹೋಗಬೇಕು’

– ಮಧುಭೂಷಣ್‌, ಮಾನವ ಹಕ್ಕು ಹೋರಾಟಗಾರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry