ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಭಟನೆಯ ಕೂಗು

7

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಭಟನೆಯ ಕೂಗು

Published:
Updated:
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಭಟನೆಯ ಕೂಗು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಗೊಂದಲ, ಪ್ರತಿಭಟನೆಗಳಿಗೆ ವೇದಿಕೆಯಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಮಾಹಿತಿ ಆಯುಕ್ತ ಸುಚೇತನ್‌ ಸ್ವರೂಪ್‌ ಅವರನ್ನು ಆಹ್ವಾನಿಸಿದ್ದಕ್ಕೆ ಮಾಹಿತಿ ಹಕ್ಕು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸುಚೇತನ್‌ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನೂ ಕಾರ್ಯಕರ್ತರು ವಿರೋಧಿಸಿದರು.

ಸಮಾರಂಭ ಆರಂಭವಾಗುವವರೆಗೂ ಸುಮ್ಮನಿದ್ದ ಮಾಹಿತಿ ಹಕ್ಕು ಕಾರ್ಯಕರ್ತರು, ಇನ್ನೇನು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎನ್ನುವಾಗ ಎದ್ದು ನಿಂತು ಘೋಷಣೆ ಕೂಗಲಾರಂಭಿಸಿದರು.

‘ಸಾಧಕರಿಗೆ ನಿಷ್ಕಳಂಕ ವ್ಯಕ್ತಿಗಳು ಪ್ರಶಸ್ತಿ ನೀಡಬೇಕು. ಅಯೋಗ್ಯರಿಂದ ಪ್ರಶಸ್ತಿ ಕೊಡಿಸಬಾರದು. ಸುಚೇತನ್‌ ಅವರು ವಿನಾಕಾರಣ ಅರ್ಜಿಗಳನ್ನು ವಜಾಗೊಳಿಸುವುದಲ್ಲದೆ ಅರ್ಜಿದಾರ ರಿಗೆ ಬೆದರಿಕೆ ಹಾಕುತ್ತಾರೆ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸುವವರನ್ನು ಸುಲಿಗೆ ಕೋ‌ರರು ಎಂದು ಅವಮಾನಿಸಿದ್ದಾರೆ. ಅವರಿಗೆ ಧಿಕ್ಕಾರ’ ಎಂದು ಕೂಗಿದರು.

ಈ ಅನಿರೀಕ್ಷಿತ ಬೆಳವಣಿಗೆಯನ್ನು ಸುಚೇತನ್‌ ಮೂಕವಿಸ್ಮಿತರಾಗಿ ನೋಡುತ್ತಿದ್ದರು. ಬಳಿಕ ಅವರು ವೇದಿಕೆಯಲ್ಲೇ ಕುಳಿತಿದ್ದರಾದರೂ, ಪ್ರಶಸ್ತಿ ಪ್ರದಾನ ಮಾಡಲಿಲ್ಲ.

ಹಿರಿಯ ಸಾಹಿತಿ ಎ.ಪಂಕಜಾ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕವಯತ್ರಿ ಪ್ರತಿಭಾ ನಂದಕುಮಾರ್‌ ಅವರಿಗೆ ‘ಪಂಕಜಶ್ರೀ ಸಾಹಿತ್ಯ ಪ್ರಶಸ್ತಿ’, ಪತ್ರಕರ್ತ ಪ್ರೇಮಕುಮಾರ ಹರಿಯಬ್ಬೆ ಅವರಿಗೆ ‘ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತೀರ್ಥಹಳ್ಳಿ ದತ್ತಿ ಪ್ರಶಸ್ತಿ’ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಎನ್‌.ಹನುಮೇಗೌಡ ಅವರಿಗೆ ‘ಮಾಹಿತಿ ಹಕ್ಕು ತಜ್ಞ ಜೆ.ಎಂ.ರಾಜಶೇಖರ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರತಿಭಾ ನಂದಕುಮಾರ್‌ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಿಕ್ಕಿದ ಈ ಪ್ರಶಸ್ತಿ ಎಲ್ಲಾ ಪ್ರಶಸ್ತಿಗಳಿಗಿಂತ ಹೆಚ್ಚಿನ ಖುಷಿ ನೀಡಿದೆ. ನನ್ನ ಬದುಕಿನ ಅರ್ಥಪೂರ್ಣ ಗಳಿಗೆ ಇದು. ನಮ್ಮತನ, ಸಂಸ್ಕೃತಿ ಅರಿತು ಸಮಾಜದ ಜೊತೆ ನಡೆಯಬೇಕು. ಇಲ್ಲದಿದ್ದರೆ ಸನಾತನ ಕೂಪಕ್ಕೆ, ಗುಹೆಗೆ ಹೆಣ್ಣು ಮಕ್ಕಳನ್ನು ದೂಡಿಬಿಡುತ್ತಾರೆ’ ಎಂದರು. ‘ದೇವಿ’ ಕವಿತೆಯನ್ನು ಅವರು ವಾಚಿಸಿದರು.

ಹನುಮೇಗೌಡ, ‘ಎಲ್ಲರೂ ಹಕ್ಕನ್ನು ಕೇಳುತ್ತಾರೆ. ಆದರೆ ಕರ್ತವ್ಯವನ್ನು ಮರೆತೇ ಬಿಡುತ್ತಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಎಂದರೆ ಸಾವನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾ ಡಿದಂತೆ. ಸಾಕಷ್ಟು ಬೆದರಿಕೆ ಕರೆಗಳು, ದಾಳಿಗಳು ನನ್ನ ಮೇಲೆ ನಡೆದಿವೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆಲ್ಲ ಹೆದ ರದೆ ನನ್ನ ಕರ್ತವ್ಯ ಎಂದು ಕೆಲಸ ಮಾಡು ತ್ತಿದ್ದೇನೆ’ ಎಂದರು.

‘ಸಮಾಜದ ಹಿತಕ್ಕಾಗಿ ಕೆಲಸ ಮಾಡುವವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಿ’ ಎಂದ ಅವರು ತಮಗೆ ನೀಡಿದ ₹5000 ಪ್ರಶಸ್ತಿ ಮೊತ್ತವನ್ನು ಪರಿಷತ್ತಿಗೆ ಮರಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry