ಅಪೂರ್ಣ ಕಾಮಗಾರಿ ಉದ್ಘಾಟನೆ: ಟೀಕೆ

7

ಅಪೂರ್ಣ ಕಾಮಗಾರಿ ಉದ್ಘಾಟನೆ: ಟೀಕೆ

Published:
Updated:

ಇಳಕಲ್‍: ‘ದೇಶದಲ್ಲಿಯೇ ಬೃಹತ್‍ ಎನ್ನಬಹುದಾದ ಇಸ್ರೇಲ್ ಮಾದರಿಯ ಮರೋಳ ಏತ ನೀರಾವರಿಯ ಹನಿ ನೀರಾವರಿ ಯೋಜನೆ ನಾನು ಶಾಸಕನಾಗಿದ್ದಾಗ ಬಿಜೆಪಿ ಸರ್ಕಾರ ಮಂಜೂರು ಮಾಡಿತ್ತು. ಆದರೆ ಅಪೂರ್ಣ ಕಾಮಗಾರಿಯನ್ನು ಮುಖ್ಯಮಂತ್ರಿ ಅವರನ್ನು ಕರೆಸಿ ಉದ್ಘಾಟಿಸುವ ಮೂಲಕ ಕಲ್ಲಿನಲ್ಲಿ ಹೆಸರು ಬರೆಸಿಕೊಳ್ಳಲು ಶಾಸಕ ವಿಜಯಾನಂದ ಕಾಶಪ್ಪನವರ ಅವರು ರೈತರ ತಲೆಯ ಮೇಲೆ ಕಲ್ಲು ಹಾಕಿದ್ದಾರೆ’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.

ಇಲ್ಲಿಯ ಎಸ್.ಆರ್. ಕಂಠಿ ವೃತ್ತದಲ್ಲಿ ಎಸ್‍ಸಿ ಮೋರ್ಚಾ ಆಯೋಜಿಸಿದ ಸಮಾರಂಭದಲ್ಲಿ ದಲಿತ ಮುಖಂಡರಾದ ಸಾವಿತ್ರಿ ನಾಮದೇವ ಕೋಟೆಗಾರ, ನಗರಸಭೆ ಸದಸ್ಯರಾದ ಶೋಭಾ ಆಮದಿಹಾಳ, ಮಂಜುನಾಥ ಹೊಸಮನಿ ಹಾಗೂ ಅವರ

ಸಾವಿರಾರು ಬೆಂಬಲಿಗರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

‘ಶೇ 80ರಷ್ಟು ರೈತರ ಹೊಲಕ್ಕೆ ನೀರು ತಲುಪಿಲ್ಲ. ಗುತ್ತಿಗೆದಾರನೇ 5 ವರ್ಷಗಳ ಕಾಲ ಈ ಯೋಜನೆಯನ್ನು ನಿರ್ವಹಿಸಬೇಕಿದ್ದು, ಎಂದಿನಿಂದ ಜಾರಿಗೆ ಬರುತ್ತದೆ?’ ಎಂದು ಪ್ರಶ್ನಿಸಿದರು.

ಇಳಕಲ್ ನಗರಕ್ಕೆ ಆಲಮಟ್ಟಿಯಿಂದ ಕುಡಿಯವ ನೀರು ಪೂರೈಕೆ ಯೋಜನೆ, ಎಡಿಬಿ ನೆರವಿನ ನಿರಂತರ ನೀರು ಸರಬರಾಜು ಯೋಜನೆ ಹಾಗೂ ಒಳಚರಂಡಿ ಯೋಜನೆಗಳು ನಾನು ಶಾಸಕನಾಗಿದ್ದಾಗ ಮಂಜೂರಾಗಿ ಚಾಲನೆಗೊಂಡಿದ್ದವು. ಹೆದ್ದಾರಿ ಪಕ್ಕದ ಆಸರೆ ಬಡಾವಣೆ, ಕಂದಗಲ್‍ ರಸ್ತೆಯ ನೇಕಾರ ಕಾಲೋನಿ ನಿರ್ಮಾಣಗೊಂಡಿದ್ದು, 72 ಎಕರೆ ಜಮೀನು ಖರೀದಿಯ ಪ್ರಸ್ತಾವ ಸಲ್ಲಿಕೆಯಾಗಿದ್ದು ನಾನು ಶಾಸಕನಾಗಿದ್ದ ಅವಧಿಯಲ್ಲಿ. ಆದರೆ ಶಾಸಕರು ಇವೆಲ್ಲಾ ತಮ್ಮ ಸಾಧನೆ, ತಮ್ಮ ತಂದೆಯ ಕನಸು ಎಂದೆಲ್ಲಾ ಸುಳ್ಳು ಹೇಳುತ್ತಿದ್ದಾರೆ’ ಎಂದು ವಾಗ್ದಾಳಿ ಮಾಡಿದರು.

ಬಿಜೆಪಿ ಹಿರಿಯ ಮುಖಂಡ ಜಿ.ಪಿ. ಪಾಟೀಲ ಮಾತನಾಡಿ, ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ತಾಲೂಕಿನ ದಲಿತ ಸಮುದಾಯ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸೇತರ ಪಕ್ಷವನ್ನು ಬೆಂಬಲಿಸುತ್ತಿರುವುದು ಇದೇ ಮೊದಲು. ಕಾರ್ಯಕರ್ತರ ಇವತ್ತಿನ ಹುಮ್ಮಸ್ಸು ಮೇ 12ರವರೆಗೂ ಇರಬೇಕು. ಗೆಲುವು ಒಂದೇ ಗುರಿಯಾಗಿರಬೇಕು. ಪ್ರತಿಸ್ಪರ್ಧಿಗಳ ಬಗ್ಗೆ ತಲೆಕೆಸಿಕೊಳ್ಳಬಾರದು’ ಎಂದರು.

ರಾಹುಲ್‍ ಆಮದಿಹಾಳ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ವಿರೇಶ ಉಂಡೋಡಿ, ಉದ್ಯಮಿ ಮೋಹನ ಹೊಸಮನಿ, ಆನಂದ ಚಲವಾದಿ, ಸುರೇಶ ಜಂಗ್ಲಿ, ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಯ್ಯ ಮೂಗನೂರಮಠ, ಎಸ್‍.ಸಿ. ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಚಂದ್ರಗಿರಿ, ನಗರಸಭೆ ಸದಸ್ಯ ಲಕ್ಷ್ಮಣ ಗುರಂ, ಚಂದ್ರಶೇಖರ ಜಾಪಗಾಲ, ಮುಖಂಡರಾದ ಮಹಾಂತಗೌಡ ಪಾಟೀಲ, ವೆಂಕಟೇಶ ಪೋತಾ, ಶಿವನಗೌಡ ಪಾಟೀಲ ಇದ್ದರು.

**

ಶಾಸಕರು ನನ್ನ ತಾಕತ್ತಿನ ಬಗ್ಗೆ ಮಾತನಾಡುತ್ತಾರೆ. ಅವರ ತಾಕತ್ತು ನನಗೆ ಗೊತ್ತಿದೆ. ನಾವು ಕುಸ್ತಿಯಾಡಲು ನಿಂತಿಲ್ಲ. ಮೇ12 ರಂದು ಜನರು ತಮ್ಮ ತಾಕತ್ತು ತೋರಿಸುತ್ತಾರೆ - ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ.

***

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry