7
ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ಅಭ್ಯರ್ಥಿಗಳು: ಭಾರತೀಯ ಪ್ರಜಾ ಪಕ್ಷದ ಎ.ಸಲೀಂ ನಾಮಪತ್ರ

ಈಶ್ವರ, ಪ್ರಕಾಶ, ಬಂಡೆಪ್ಪ ನಾಮಪತ್ರ ಸಲ್ಲಿಕೆ

Published:
Updated:

ಬೀದರ್: ಜಿಲ್ಲೆಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಒಟ್ಟು ನಾಲ್ವರು ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ. ಬೀದರ್‌ ದಕ್ಷಿಣ ಹಾಗೂ ಭಾಲ್ಕಿಯಲ್ಲಿ ತಲಾ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಬೀದರ್, ಹುಮನಾಬಾದ್, ಬಸವಕಲ್ಯಾಣ ಹಾಗೂ ಔರಾದ್‌ದಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಭಾಲ್ಕಿಯಲ್ಲಿ ಈಶ್ವರ ಖಂಡ್ರೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಬೀದರ್‌ ದಕ್ಷಿಣ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಹಾಗೂ ಭಾರತೀಯ ಪ್ರಜಾ ಪಕ್ಷದ ಅಭ್ಯರ್ಥಿಯಾಗಿ ಎ.ಸಲೀಂ ನಾಮಪತ್ರ ದಾಖಲು ಮಾಡಿದರು.

ಜೆಡಿಎಸ್‌: ಹಳೆಯ ಡಿಎಚ್‌ಒ ಕಚೇರಿ ಸಮೀಪದ ನಿವಾಸದಿಂದ ಬಂಡೆಪ್ಪ ಕಾಶೆಂಪುರ ಅವರು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ತಹಶೀಲ್ದಾರ್‌ ಕಚೇರಿಗೆ ಬಂದರು. ಚುನಾವಣಾ ಅಧಿಕಾರಿ ಮನೋಹರ ಅವರಿಗೆ ನಾಮಪತ್ರ ಸಲ್ಲಿಸಿದರು.

ಮಾಜಿ ಶಾಸಕ ಮಾರುತಿರಾವ್‌ ಮುಳೆ, ಹುಮನಾಬಾದ್‌ನ ಜೆಡಿಎಸ್‌ ಅಭ್ಯರ್ಥಿ  ನಸಿಮೋದ್ದಿನ್‌ ಪಟೇಲ್, ಬಿಜೆಪಿ ಮುಖಂಡ ಮಾರಸಂದ್ರ ಮುನಿಯಪ್ಪ, ಅಶೋಕಕುಮಾರ ಕರಂಜಿ ಇದ್ದರು.

ಬಂಡೆಪ್ಪ ಅವರು ಜೆಡಿಎಸ್‌ ಹಾಗೂ ಬಿಎಸ್‌ಪಿ ಚಿನ್ಹೆ ಇದ್ದ ಶಲ್ಯವನ್ನು ಕೊರಳಲ್ಲಿ ಹಾಕಿಕೊಂಡಿದ್ದರು. ಕಾರ್ಯಕರ್ತರು ತಮ್ಮ ಪಕ್ಷದ ಚಿನ್ಹೆಯ ಶಲ್ಯ ಹಾಗೂ ಟೊಪ್ಪಿಗೆ ಧರಿಸಿದ್ದರು. ಮೆರವಣಿಯುದ್ದಕ್ಕೂ ಕಾರ್ಯಕರ್ತರ ಕೈಯಲ್ಲಿ ಜೆಡಿಎಸ್‌ ಧ್ವಜ ರಾರಾಜಿಸಿತು. ಕಲಾವಿದರು ಡೊಳ್ಳು ಬಾರಿಸಿ ಗಮನ ಸೆಳೆದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ ಇದೆ. ರೈತರು ತಮ್ಮ ಸಂಕಷ್ಟಗಳಿಗೆ ಸ್ಪಂದಿಸುವಂತಹ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ. ಈ ಚುನಾವಣೆಯಲ್ಲಿ ರೈತ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಬಂಡೆಪ್ಪ ಕಾಶೆಂಪುರ ಹೇಳಿದರು.

ಭಾಲ್ಕಿ ವರದಿ: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪಟ್ಟಣದ ಭಾಲ್ಕೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ತಹಶೀಲ್ದಾರ್‌ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ಮಹಾತ್ಮರ ಪ್ರತಿಮೆಗಳಿಗೆ ಹೂವಿನ ಹಾರ ಹಾಕಿದರು. ಕಾರ್ಯಕರ್ತರು ಖಂಡ್ರೆ ಅವರ ಪರ ಘೋಷಣೆ ಕೂಗಿದರು. ಹಲಿಗೆ ವಾದನಕ್ಕೆ ಹೆಜ್ಜೆ ಹಾಕಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕರಾದ ರಹೀಂಖಾನ್‌, ಅಶೋಕ ಖೇಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಪುರಸಭೆ ಅಧ್ಯಕ್ಷ ವಿಶಾಲ ಪುರಿ, ಮುಖಂಡ ಮಡಿವಾಳಪ್ಪ ಮಂಗಲಗಿ, ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ, ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತರಾವ್‌ ಚವ್ಹಾಣ ಇದ್ದರು.

ಪೊಲೀಸ್‌ ಬಿಗಿ ಬಂದೋಬಸ್ತ್‌

ಬೀದರ್‌: ಇಲ್ಲಿಯ ತಹಶೀಲ್ದಾರ್‌ ಕಚೇರಿಯಲ್ಲಿ ಬೀದರ್‌ ದಕ್ಷಿಣ ಕ್ಷೇತ್ರ ಹಾಗೂ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಬೀದರ್‌ ಕ್ಷೇತ್ರದ ನಾಮಪತ್ರ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಎರಡೂ ಕಚೇರಿಗಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು.

ಭದ್ರತಾ ಸಿಬ್ಬಂದಿ ಅಭ್ಯರ್ಥಿ ಹಾಗೂ ಅವರ ಐವರು ಬೆಂಬಲಿಗರನ್ನು ಬಿಟ್ಟು ಯಾರನ್ನೂ ಒಳಗೆ ಪ್ರವೇಶಿಸಲು ಬಿಡಲಿಲ್ಲ. ಅಭ್ಯರ್ಥಿಗಳೊಂದಿಗೆ ಬಂದಿದ್ದ ಬೆಂಬಲಿಗರು ಹಾಗೂ ಕಾರ್ಯಕರ್ತರು ಸುಡು ಬಿಸಿಲಲ್ಲೇ ನಿಂತು ಬಸವಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry