ಕೊನೇ ಪುಸ್ತಕ ಮಳಿಗೆಯಲ್ಲಿ ಸುಸ್ತಾಗುವಷ್ಟು ಸುತ್ತಿ!

7

ಕೊನೇ ಪುಸ್ತಕ ಮಳಿಗೆಯಲ್ಲಿ ಸುಸ್ತಾಗುವಷ್ಟು ಸುತ್ತಿ!

Published:
Updated:
ಕೊನೇ ಪುಸ್ತಕ ಮಳಿಗೆಯಲ್ಲಿ ಸುಸ್ತಾಗುವಷ್ಟು ಸುತ್ತಿ!

ಕ್ಯಾಪ್ಟನ್ ಪೂರ್ಣಪ್ರಜ್ಞ

‘The Last Bookstore’ ಡೌನ್ ಟೌನ್ ಲಾಸ್ ಏಂಜಲೀಸ್‌ನಲ್ಲಿ ಅಡ್ಡಾಡುತ್ತಿದ್ದ ನಮಗೆ ಕಂಡಂತಹ ಈ ಬಿತ್ತಿ ಫಲಕ ಕುತೂಹಲ ಹುಟ್ಟಿಸಿತು. ಅದರ ಕೆಳಗೆ ‘ನಾವು ಪುಸ್ತಕಗಳನ್ನು ಹಾಗೂ ರೆಕಾರ್ಡುಗಳನ್ನು ಕೊಂಡುಕೊಳ್ಳುತ್ತೇವೆ’ ಎಂಬ ಬರಹ ನಮ್ಮ ಕುತೂಹಲವನ್ನು ಇನ್ನೂ ಜಾಸ್ತಿ ಮಾಡಿತು. ಏನಿದು ಎಂದು ದೊಡ್ಡ ಗಾಜಿನ ಕಿಟಕಿಯಲ್ಲಿ ಇಣುಕಿ ನೋಡಿದಾಗ ಒಳಗಡೆ ವಿಶಾಲವಾದ ಜಾಗದಲ್ಲಿ ಒಪ್ಪವಾಗಿ ಜೋಡಿಸಿರುವ ಪುಸ್ತಕಗಳ ರಾಶಿ ಹಾಗು ಹಳೆಯ LP ರೆಕಾರ್ಡುಗಳು! ಮೊದಲೇ ಪುಸ್ತಕ ಪ್ರೇಮಿಗಳಾದ ನಮಗೆ ಈ ರೀತಿಯ ಅವಕಾಶವನ್ನು ಬಿಡಲು ಆದೀತೆ? ಒಳಗೆ ಕಾಲಿಟ್ಟೆವು.

‘‌ಲಾಸ್ಟ್ ಬುಕ್ ಸ್ಟೋರಿಗೆ ಸುಸ್ವಾಗತ ಸರ್’ ಅಂದರು ಬಾಗಿಲಲ್ಲಿ ನಿಂತಿದ್ದ ಭದ್ರತಾ ಅಧಿಕಾರಿ. ನಮ್ಮ ಬ್ಯಾಕ್‌ಪ್ಯಾಕ್‌ ಅನ್ನು ಅವನ ಹತ್ತಿರ ಇಟ್ಟು, ಟೋಕನ್ ತೊಗೊಂಡು ಒಳಗೆ ಕಾಲಿಟ್ಟೊಡನೆಯೇ ನಮ್ಮನ್ನು ಆಶ್ಚರ್ಯಗೊಳಿಸಿದ್ದು ಬೃಹದಾಕಾರವಾದಂತ ಮಳಿಗೆ! 10,000 ಚದರಡಿಗೂ ಮೀರಿದ ನೆಲ ಹಾಗು ಮೊದಲನೆಯ ಮಹಡಿಯಲ್ಲಿ ಹರಡಿಕೊಂಡಂತ ಕಟ್ಟಡ! 1915ರಲ್ಲಿ ನಿರ್ಮಿಸಿದ ಈ ಪಾರಂಪರಿಕ ಕಟ್ಟಡವು ಮೊದಲು ಒಂದು ಬ್ಯಾಂಕ್ ಆಗಿತ್ತು. ಈಗ ಪುಸ್ತಕ ಮಳಿಗೆಯಾಗಿದೆ. 25 ಅಡಿ ಎತ್ತರವಾದ ಕಂಬಗಳು ಆಲಂಕಾರಿಕ ಚಾವಣಿಯ ಆಧಾರ ಸ್ತಂಭಗಳಿವೆ. ಹಳೇ ಪಿಂಗಾಣಿ ಟೈಲೆಗಳ ಸುಂದರ ಚಿತ್ತಾರ ಕಲೆಯ ನೆಲ ಈ ಜಾಗವನ್ನು ಮತ್ತಷ್ಟು ಆಕರ್ಷಕವಾಗಿಸಿದೆ!

ಎರಡು ಹೆಜ್ಜೆ ಹಾಕಿದ ನಮಗೆ ಮೊದಲು ಕಣ್ಣಿಗೆ ಬಿದ್ದದ್ದು ಕ್ಯಾಶ್ ಕೌಂಟರ್. ಪುಸ್ತಕಗಳನ್ನು ಒಂದರ ಮೇಲೊಂದು ಜೋಡಿಸಿ ಅಡಿಪಾಯವನ್ನಾಗಿ ಮಾಡಿ ಅದರ ಮೇಲೆ ಕೌಂಟರನ್ನು ಬಹಳ ಸುಂದರವಾಗಿ ಮಾಡಿದ್ದಾರೆ. ಯಾವುದೇ ಪುಸ್ತಕ ಪ್ರೇಮಿಯು ಇದನ್ನು ನೋಡಿದಮೇಲೆ ಹಿಂತಿರುಗುವ ಪ್ರಮೇಯವೇ ಬರುವುದಿಲ್ಲ.

ಪ್ರಪಂಚದ ಅತಿ ದೊಡ್ಡ ಹಳೆಯ ಹಾಗೂ ಹೊಸದಾದ ಪುಸ್ತಕ ಮಳಿಗೆಗಳಲ್ಲಿ ಒಂದಾದ ‘The Last Book Store’ ಅಥವಾ ‘ಕೊನೆಯ ಪುಸ್ತಕ ಮಳಿಗೆ’ಗೆ ತಮ್ಮೆಲ್ಲರಿಗೂ ಸ್ವಾಗತ! ಇಲ್ಲಿ ಎಲ್ಲ ಪುಸ್ತಕಮಯ! ಎಲ್ಲಿ ನೋಡಿದರೂ ಪುಸ್ತಕಗಳು!ಲಾಸ್ಟ್ ಬುಕ್ ಸ್ಟೋರ್‌

ಜೋಶ್ ಸ್ಪೆನ್ಸರ್ ಎಂಬ ಮಹನೀಯನು 2009ರಲ್ಲಿ ebayನಲ್ಲಿ ಪುಸ್ತಕಗಳು ಹಾಗೂ ಸೀಡಿಗಳನ್ನು ಮಾರುತ್ತಿದ್ದನು. ನಂತರ ಈ ಮಳಿಗೆಯನ್ನು ಪ್ರಾರಂಭಿಸಿದಾಗ ಅಕ್ಕಪಕ್ಕದಲ್ಲಿದ್ದ ಕೆಲವು ಪ್ರಮುಖ ಪುಸ್ತಕದ ಅಂಗಡಿಗಳು ಮುಚ್ಚಿದವು. ‘ಯಾವುದೇ ತಯಾರಿ ಇಲ್ಲದೆ ಕೇವಲ ಪುಸ್ತಕಪ್ರೇಮದಿಂದ ಪ್ರಾರಂಭಿಸಿದ ಪುಸ್ತಕ ಮಳಿಗೆಗೆ ಪುಸ್ತಕಪ್ರೇಮಿಗಳೇ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸದಿಂದ ನಾನು ಇದನ್ನು ಶುರು ಮಾಡಿದೆ. ನಾವೇನೂ ಅತಿ ಹೆಚ್ಚು ಲಾಭ ಮಾಡುತ್ತಿಲ್ಲ. ನಷ್ಟ ಕೂಡ ಇಲ್ಲ. ಇದುವರೆಗೂ ಪುಸ್ತಕಪ್ರೇಮಿಗಳು ನಮ್ಮ ಕೈ ಬಿಟ್ಟಿಲ್ಲ. ಮುಂದೆ ನೋಡೋಣ’ ಎನ್ನುತ್ತಾರೆ ಜೋಶ್. ಒಂದಾದ ಮೇಲೆ ಒಂದರಂತೆ ಮುಚ್ಚಿದ ಪುಸ್ತಕದ ಅಂಗಡಿಗಳು ಜೋಶ್ ತನ್ನ ಮಳಿಗೆಯನ್ನು ‘ದಿ ಲಾಸ್ಟ್ ಬುಕ್‌ ಸ್ಟೋರ್‌’ ಎಂದು ನಾಮಕರಣ ಮಾಡಲು ಪ್ರೇರೇಪಿಸಿತು.

ನಮ್ಮ ಪುಸ್ತಕ ಪಯಣ ಕಲಾ ಪುಸ್ತಕಗಳ ವಿಭಾಗದಿಂದ ಶುರು. ಇದು ಹೊಸದಾಗಿ ಶುರುವಾದಂತಹ ವಿಭಾಗ. ಇಲ್ಲಿ ಕಲೆ, ಛಾಯಾಗ್ರಹಣ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಇತ್ಯಾದಿ ಕಲೆಗೆ ಸಂಬಂಧಪಟ್ಟ ವಿಷಯಗಳ ಪುಸ್ತಕಗಳು ಇವೆ. ಬಹಳಷ್ಟು ಪುಸ್ತಕಗಳು ಅತ್ಯಂತ ಕಡಿಮೆ ದರದಲ್ಲಿ ಇಲ್ಲಿ ಇಟ್ಟಿದ್ದಾರೆ. ನಮಗೆ ಇಲ್ಲಿ ಗಮನ ಸೆಳೆದದ್ದು, ಹಳೆಯ ಬೆಲೆಬಾಳುವ ಪುಸ್ತಕಗಳು. ಉದಾಹರಣೆಗೆ Nabakov ಬರೆದ Lolitaದ ಮೊದಲ ಮುದ್ರಣದ ಪ್ರತಿ. Kiplingನ Junglebookನ ಮೊದಲ ಮುದ್ರಣ ಪ್ರತಿ! ಇವೆಲ್ಲ ಸಂಗ್ರಾಹಕರು ಕೊಳ್ಳುವಂತಹ ದುಬಾರಿಯಾದ ಪುಸ್ತಕಗಳಾಗಿದ್ದರಿಂದ ನಾವು ನೋಡಿ ತೃಪ್ತಿಪಟ್ಟುಕೊಳ್ಳಬೇಕಾಯಿತು!

ನಮಗೆ ಬಹಳ ಹಿಡಿಸಿದ್ದು, ಪುಸ್ತಕಗಳ ವಿಂಗಡಣೆ ಹಾಗೂ ಅವುಗಳನ್ನು ಜೋಡಿಸಿದ ರೀತಿ. ಪ್ರತಿಯೊಂದು ವಿಷಯಕ್ಕೂ ಒಂದು ಕಪಾಟು. ಅದರಲ್ಲಿ ಲೇಖಕರ ಹೆಸರಿನಂತೆ ಜೋಡಣೆ. ಅಲ್ಲಲ್ಲಿ ‘ನಿಮಗೆ ಬೇಕಾದಂಥ ಪುಸ್ತಕ ಸಿಗದಿದ್ದರೆ ನಮ್ಮನ್ನು ಕೇಳಿ’ ಎಂಬ ಫಲಕ!

ಸಲ್ಮಾನ್ ರಶ್ದಿಯ ಭಾರತದಲ್ಲಿ ನಿಷೇಧಿಸಿದ ‘ಸಟಾನಿಕ್ ವರ್ಸೆಸ್’, ಕಾಮು ಬರೆದ ‘ದಿ ಸ್ಟ್ರೇಂಜರ್’ ಮತ್ತೆ ಹಲವಾರು ಪುಸ್ತಕಗಳನ್ನು ಇಲ್ಲಿ ಕಂಡೆವು. ಪ್ರಾಚೀನ ಆಂಗ್ಲಸಾಹಿತ್ಯದಿಂದ ಹಿಡಿದು ಪ್ರವಾಸ ಕಥನ, ಕವಿತೆ, ವಿಜ್ಞಾನ, ಇತಿಹಾಸ, ಮಕ್ಕಳ ಪುಸ್ತಕಗಳು ಹೀಗೆ ಎಲ್ಲ ತರಹದ ಪುಸ್ತಕಗಳು ಇಲ್ಲಿವೆ.

ಪುಸ್ತಕಗಳನ್ನು ನೋಡುತ್ತಾ, ಸವಿಯುತ್ತ, ಹುಡುಕುತ್ತ ಸಾಗಿದ್ದ ನಮಗೆ ಹಲವು ಆಕರ್ಷಕ ಪುಸ್ತಕಗಳು ಕಣ್ಣಿಗೆ ಬಿದ್ದು ಬಿಡಲಾಗದೆ ಕೊಂಡೆವು. 1935ರಲ್ಲಿ ಪ್ರಕಾಶನಗೊಂಡ ಪುಸ್ತಕವೊಂದು ಕೇವಲ ಮೂರು ಡಾಲರ್‌ಗೆ ಸಿಕ್ಕಿತು! ಹಾಗೆಯೇ ಬ್ಯಾರಿ ಲೋಪೆಜ್ ಬರೆದ ‘ಆರ್ಕ್ಟಿಕ್ ಡ್ರೀಮ್ಸ್’. ಕತ್ತೆತ್ತಿ ಮೇಲೆ ನೋಡಿದರೆ ಚಾವಣಿಯಿಂದ ಇಳಿಬಿಟ್ಟಂತಹ ಒಂದು ಸುಂದರ ಕಲಾಕೃತಿ! ಬರೀ ಪುಸ್ತಕಗಳಿಂದಲೇ ಮಾಡಿದಂತಹ ಸಮುದ್ರದ ಅಲೆಯಂತಿರುವ ಈ ಕಲಾಕೃತಿಗೆ The Wave ಎಂದು ಹೆಸರಿಟ್ಟಿದ್ದಾರೆ!

ಪುಸ್ತಕಗಳಿಂದ ಮಾಡಿದ ಸುರಂಗ

‘ಪ್ರವಾಸ ಕಥನ ಸಾಹಿತ್ಯ ಎಲ್ಲಿವೆ?’ ಎಂದು ಕೇಳಿದ ನಮಗೆ ‘ದಯವಿಟ್ಟು ಮೊದಲನೇ ಮಹಡಿಗೆ ಹೋಗಿ ಸರ್’ ಎಂಬ ನಮ್ರ ಉತ್ತರ. ಹಳೆಯ ಮರದಿಂದ ಮಾಡಿದಂಥ ಮೆಟ್ಟಲುಗಳನ್ನು ಹತ್ತುತ್ತಿದಂತೆ ಮತ್ತೊಂದು ಶಿಲ್ಪಕೃತಿ ಗೋಚರ. ಕಾಗದದ ಸರಪಣಿಯಿಂದ ಮಾಡಿದ ಇದು ಚಾವಣಿಯಿಂದ ಇಳಿಬಿಟ್ಟಿದ್ದು ಅತ್ಯಂತ ಸುಂದರವಾಗಿದೆ. ಮೊದಲನೇ ಮಹಡಿಯಲ್ಲಿ ರಾಜಕೀಯ, ಪ್ರವಾಸ ಕಥನ, ಇತಿಹಾಸ, ವಿಜ್ಞಾನ, ಆತ್ಮಕಥೆ, ಕ್ರೀಡೆ ಹೀಗೆ ಹಲವು ಪ್ರಕಾರದ ಪುಸ್ತಕಗಳು ಇವೆ.

‘ನೀವು ಈಗ ಪುಸ್ತಕ ಸುರಂಗದಲ್ಲಿ ಹೋಗುವರಿದ್ದೀರಿ’ ಎಂಬ ಫಲಕ ಮತ್ತಷ್ಟು ಕುತೂಹಲ ಹೆಚ್ಚಿಸಿತು. ಮೊದಲಿಗೆ ಪುಸ್ತಕಗಳ ಮಧ್ಯದಲ್ಲಿ ಮಾಡಿದ ರಂಧ್ರ. ಪುಸ್ತಕಗಳಿಂದಲೇ ಮಾಡಿದ ಈ ದೊಡ್ಡ ರಂಧ್ರದಲ್ಲಿ ಮುಖವಿಟ್ಟು ಪುಸ್ತಕವನ್ನು ಓದುತ್ತಿರುವಂತೆ ಪೋಸ್ ಕೊಟ್ಟು ಫೋಟೊ ಕ್ಲಿಕ್ಕಿಸಬಹುದು! ಮುಂದುವರೆದು, ಪುಸ್ತಕ ಸುರಂಗದಲ್ಲಿ ನಡೆದೆವು! ಹೌದು! ಪುಸ್ತಕಗಳಿಂದಲೇ ಮಾಡಿದಂತ ಸುರಂಗ! ಪುಸ್ತಕಗಳನ್ನು ಸುರಂಗಕಾರದಲ್ಲಿ ಜೋಡಿಸಿ ಇದನ್ನು ತಯಾರಿಸಿದ್ದಾರೆ!

ಸುರಂಗದ ಪಕ್ಕದಲ್ಲಿದೆ Horror Vault. Horror ಪುಸ್ತಕಗಳು ಹಾಗೂ ಪರಿಕರಣಗಳಿಗಾಗಿಯೇ ಮೀಸಲಿಡಲ್ಪಟ್ಟ ಒಂದು ಪ್ರತ್ಯೇಕ ಕೊಠಡಿ! ಇಲ್ಲಿ ನೀವು ಡ್ರಾಕುಲಾ, ಎಕ್ಸಾರ್ಸಿಸ್ಟ್ ನಂಥ ಹಾರರ್ ಪುಸ್ತಕಗಳನ್ನು ನೋಡಬಹುದು.

ನಿಧಾನವಾಗಿ ಪುಸ್ತಕಗಳನ್ನು ಸವಿಯುತ್ತಿದ್ದ ನಮಗೆ ಬಹಳಷ್ಟು ಒಳ್ಳೆಯ ಪುಸ್ತಕಗಳು ಸಿಕ್ಕವು. ನಮ್ಮ ನೆಚ್ಚಿನ ಪ್ರವಾಸ ಸಾಹಿತ್ಯದಲ್ಲಂತೂ ಹಲವಾರು ಒಳ್ಳೆಯ ಪುಸ್ತಕಗಳು ಸಿಕ್ಕವು. ಪಿಕೋ ಐಯ್ಯರ್ ಬರೆದ ‘ವಿಡಿಯೊ ನೈಟ್‌ ಇನ್ ಕಠ್ಮಂಡು’ವಿನ ಮೊದಲ ಮುದ್ರಣದ ಪ್ರತಿ ಕೇವಲ 4 ಡಾಲರ್‌ಗೆ! ಥೆರೋ, ಚಾಟ್ವಿನ್, ಬ್ರಯ್ಸುನ್ ಮೊದಲಾದ ಹೆಸರಾಂತ ಪ್ರವಾಸಿ ಕಥನಕಾರರ ಪುಸ್ತಕಗಳ ಸುಗ್ಗಿ!

ಮೇಲಿನ ಮಹಡಿಯನ್ನು ನೋಡಿ ಕೆಳಗೆ ಬಂದ ನಮ್ಮ ಮುಂದಿನ ನಡಿಗೆ ಹಳೆ ರೆಕಾರ್ಡುಗಳು ಇದ್ದ ಕಡೆಗೆ ಹೊರಟಿತು. ಇಲ್ಲಿಗೆ ಬರುತ್ತಿದ್ದ ಹಾಗೆ ಒಂದು ರೋಮಾಂಚಕ ಅನುಭವ! ಹಳೆಯ LP ರೆಕಾರ್ಡ್‌ಗಳ ಸಮೂಹವೇ ಇದೆ ಇಲ್ಲಿ! Boney M, ಅಬ್ಬಾ, Dylan Thomas, Bob Dylan ಮತ್ತು ಕೆಲವು ಹಳೆ ಬಾಲಿವುಡ್ ಸಿನಿಮಾಗಳ ರೆಕಾರ್ಡುಗಳೂ ಇಲ್ಲಿವೆ! ಬಹಳಷ್ಟು ಖರೀದಿಸಲು ಇಚ್ಛೆ ಇದ್ದರೂ ಭಾರತಕ್ಕೆ ಹೇಗೆ ತರುವುದು ಅನ್ನೋ ಯೋಚನೆಯಲ್ಲಿ ಕೈಬಿಟ್ಟೆವು!

ಹೀಗೂ ಜೋಡಿಸಬಹುದು ಪುಸ್ತಕಗಳನ್ನು!

ಒಂದು ಬಾರಿ ಸುತ್ತಿ ಆದ ಮೇಲೆ ಮೊತ್ತೊಂದು ಸಲ ನೋಡುವ ಆಸೆ. ಯಾವುದಾದರೂ ಒಳ್ಳೆಯ ಪುಸ್ತಕ ಸಿಕ್ಕತ್ತೋ ಎಂಬ ಬಯಕೆ. ನಮ್ಮ ಎರಡನೇ ಸುತ್ತು ನಿರಾಶಾದಾಯಕವಾಗಲಿಲ್ಲ. J. D. Salinger ಬರೆದಂತಹ ಅಪರೂಪದ ಪುಸ್ತಕ, 1981ರಲ್ಲಿ ಪ್ರಕಾಶಗೊಂಡ ಸಿಕ್ಕಿತು! ಕೇವಲ 4 ಡಾಲರಿಗೆ !

ದಿ ಲಾಸ್ಟ್‌ ಬುಕ್‌ ಸ್ಟೋರ್ - ಹೆಸರೇ ಹೇಳುವಂತೆ ಕೊನೆಯ ಪುಸ್ತಕದ ಅಂಗಡಿ ಆಗಬಹುದು. ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಾ ಹೋದಂತೆ ಹಾಗು ಅಂತರ್ಜಾಲದಲ್ಲಿ ಪುಸ್ತಕ ಕೊಳ್ಳುವುದು ಹೆಚ್ಚಾದಂತೆ ಬಹಳಷ್ಟು ಪುಸ್ತಕದ ಅಂಗಡಿಗಳು ಮುಚ್ಚುತ್ತಿವೆ. ಈ ನಿಟ್ಟಿನಲ್ಲಿ ಜೋಶ್‌ ಸ್ಪೆನ್ಸರ್‌ನಂಥವರು ಇನ್ನೂ ಪುಸ್ತಕ ಪ್ರೇಮವನ್ನು ಉಳಿಸಿಕೊಂಡು ಈ ರೀತಿಯ ಮಳಿಗೆಗಳನ್ನು ನಡೆಸಿಕೊಂಡು ಬರುತ್ತಿರುವುದು ಸದ್ಯದ ಪರಿಸ್ಥಿತಿಯಲ್ಲಿ ಶ್ಲಾಘನೀಯ ಸಂಗತಿ.

ಮನಸ್ಸಿಲ್ಲದ ಮನಸ್ಸಿನಿಂದ ಅಂಗಡಿಯಿಂದ ಹೊರಗೆ ಬಂದೆವು. ಭದ್ರತಾ ಅಧಿಕಾರಿ ನಮ್ಮ ಬ್ಯಾಕ್‌ಪ್ಯಾಕ್‌ ಕೊಟ್ಟು ‘ನಿಮಗೆ ಇಷ್ಟವಾದ ಪುಸ್ತಕ ಸಿಕ್ಕಿತೆ?’ ಎಂದು ಕೇಳಿದ. ನಾವು ಖರೀದಿಸಿದ ಪುಸ್ತಕಗಳನ್ನು ತೋರಿಸಿದೆ. “ನಾನು ‘Blue Highways’ ಓದಿದ್ದೇನೆ. ತುಂಬಾ ಚೆನ್ನಾಗಿದೆ” ಅಂದ.

ಅವನಿಗೆ ವಿದಾಯ ಹೇಳಿ ಮತ್ತೊಮ್ಮೆ ಲಾಸ್ ಏಂಜಲೀಸ್‌ಗೆ ಬಂದರೆ ದಿ ಲಾಸ್ಟ್‌ ಬುಕ್‌ ಸ್ಟೋರ್‌ಗೆ ಬಂದೇ ಬರುತ್ತೇವೆ ಎಂಬ ಆಶ್ವಾಸನೆಯೊಂದಿಗೆ ಹೊರನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry