ಮಾಲೀಕಯ್ಯ ಗೆಲ್ಲಿಸಿದರೆ ಸಚಿವ ಸ್ಥಾನ

7
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ

ಮಾಲೀಕಯ್ಯ ಗೆಲ್ಲಿಸಿದರೆ ಸಚಿವ ಸ್ಥಾನ

Published:
Updated:

ಕಲಬುರ್ಗಿ: ‘ಅಫಜಲಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಅವರನ್ನು ಗೆಲ್ಲಿಸಿ ಕಳುಹಿಸಿ. ಸಚಿವ ಸ್ಥಾನ ಕೊಟ್ಟು ಅವರೊಂದಿಗೆ ಇಲ್ಲಿಗೆ ಬರುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅಫಜಲಪುರ ಹೊರವಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಆರು ಬಾರಿ ಶಾಸಕರಾಗಿದ್ದರೂ ಮಾಲೀಕಯ್ಯ ಅವರಿಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನ ನೀಡದೆ ಕಡೆಗಣಿಸಿದೆ. ಇದರಿಂದ ಬೇಸತ್ತ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿ 150 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ. ನೀವು ಮಾಲೀಕಯ್ಯ ಅವರನ್ನು ಗೆಲ್ಲಿಸಿದರೆ, ಅವರನ್ನು ಸಚಿವರನ್ನಾಗಿ ಮಾಡುವುದು ನನ್ನ ಜವಾಬ್ದಾರಿ’ ಎಂದು ವಾಗ್ದಾನ ಮಾಡಿದರು.

15 ಕ್ಷೇತ್ರಗಳನ್ನು ಗೆಲ್ಲಬೇಕು: ‘ಮಾಲೀಕಯ್ಯ ಬಿಜೆಪಿ ಸೇರ್ಪಡೆಯಿಂದ ಆನೆ ಬಲ ಬಂದಿದೆ. ಅವರು ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸುತ್ತಾಡಿ ಕನಿಷ್ಠ 14–15 ಸ್ಥಾನಗಳನ್ನು ಗೆಲ್ಲಿಸಬೇಕಾಗಿದೆ. ಆದ್ದರಿಂದ ಅವರನ್ನು ಹೊರಗೆ ಸುತ್ತಾಡಲು ಕಳುಹಿಸಿ, ನೀವೆ ಪ್ರಚಾರ ಮಾಡಿ ಅವರನ್ನು ಗೆಲ್ಲಿಸಿ. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಕೈಜೋಡಿಸಿ’ ಎಂದರು.

‘ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಹಾಗೂ ಮರಾಠ ಸಮುದಾಯವನ್ನು 2ಎ ಗೆ ಸೇರ್ಪಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ–ಲಿಂಗಾಯತ ಧರ್ಮವನ್ನು ಒಡೆದು ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿದರು.

ಅಫಜಲಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ಗಾಂಧಿ ತತ್ವ ಉಳಿದಿಲ್ಲ. 21 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಕಾಂಗ್ರೆಸ್‌ 50–60 ಸ್ಥಾನಗಳನ್ನು ಗೆದ್ದರೆ ಹೆಚ್ಚು’ ಎಂದು ತಿಳಿಸಿದರು.

‘ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ. ಹೀಗಾಗಿ ಅಫಜಲಪುರ ಕ್ಷೇತ್ರದಲ್ಲಿ ಸುತ್ತಾಡುವುದಿಲ್ಲ. ನನ್ನ ಬದಲು ಸಹೋದರ ನಿತಿನ್ ಗುತ್ತೇದಾರ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ನಾಕೇದಾರ ಮತಯಾಚಿಸಲಿದ್ದಾರೆ. ನೀವೆಲ್ಲರೂ ನಿಮ್ಮ ಮನೆಯ ಮಗನೆಂದು ತಿಳಿದುಕೊಂಡು ನನ್ನನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರವಾಗಿದೆ. ಭಾಗ್ಯಗಳನ್ನು ಕೊಟ್ಟ ಭಾಗ್ಯದಾತ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿಯಲ್ಲೇ ಸೋಲಿನ ಭೀತಿ ಎದುರಾಗಿದೆ. ಬಾದಾಮಿಗೆ ಪಲಾಯನ  ಮಾಡುವ ಮೂಲಕ ದಂಡ ನಾಯಕ ಸೋಲು ಒಪ್ಪಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸೇಡಂ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ ತೆಲ್ಕೂರ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಶೋಭಾ ಬಾಣಿ ಇದ್ದರು.

ನಿತಿನ್ ಗುತ್ತೇದಾರ ಬಿಜೆಪಿ ಸೇರ್ಪಡೆ

ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ ಅವರ ಸಹೋದರ, ಕಾಂಗ್ರೆಸ್ ಯುವ ಮುಖಂಡ ನಿತಿನ್ ಗುತ್ತೇದಾರ ಅವರು ತಮ್ಮ ಬೆಂಬಲಿಗರೊಂದಿಗೆ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಮಾಲೀಕಯ್ಯ, ‘ಕಾಂಗ್ರೆಸ್‌ನವರು ನಮ್ಮ ಮನೆಯಲ್ಲೇ ಜಗಳ ಹಚ್ಚುವ ಕೆಲಸ ಮಾಡಿದ್ದರು. ಹೀಗಾಗಿ ಕಾರ್ಯಕರ್ತರ ಸಮಾವೇಶದಲ್ಲೇ ನಿತಿನ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದ್ದೇನೆ’ ಎಂದು ಹೇಳಿದರು.

17 ವರ್ಷ ವನವಾಸ!

‘ರಾಮ 14 ವರ್ಷ ವನವಾಸ ಮಾಡಿದರೆ, ನಾನು 17 ವರ್ಷ ವನವಾಸ ಮಾಡಿದ್ದೇನೆ. ಕಾಂಗ್ರೆಸ್‌ ಪಕ್ಷದಲ್ಲಿ ನನಗೆ ಯಾವುದೇ ಸ್ಥಾನಮಾನ ನೀಡಲಿಲ್ಲ’ ಎಂದು ಮಾಲೀಕಯ್ಯ ಗುತ್ತೇದಾರ ಬೇಸರ ವ್ಯಕ್ತಪಡಿಸಿದರು. ‘ಕಾಂಗ್ರೆಸ್‌ನಲ್ಲಿ ಹಿಂದುಳಿದವರಿಗೆ ನ್ಯಾಯ, ಅಧಿಕಾರ ಸಿಗುವುದಿಲ್ಲ. ಮಕ್ಕಳು, ಹಿಂಬಾಲಕರಿಗೆ ಅಧಿಕಾರ ಕೊಡುತ್ತಾರೆ. ನನಗೆ ಸಚಿವ ಸ್ಥಾನ ಕೊಡಿಸಲಿಲ್ಲ. ಆದರೆ ತಮ್ಮ ಮಗನನ್ನು ಮಂತ್ರಿ ಮಾಡಿದರು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

**

ಕಾಂಗ್ರೆಸ್ ಮುಕ್ತ ಭಾರತ ಪ್ರಧಾನಿ ನರೇಂದ್ರ ಮೋದಿ ಆಶಯವಾದರೆ, ಕಾಂಗ್ರೆಸ್ ಮುಕ್ತ ಹೈ ಕ ನನ್ನ ಗುರಿ. ಕನಿಷ್ಠ 15–20 ಸ್ಥಾನಗಳನ್ನು ಗೆಲ್ಲಿಸಿ ಕೊಡುತ್ತೇನೆ – ಮಾಲೀಕಯ್ಯ ಗುತ್ತೇದಾರ, ಬಿಜೆಪಿ ಅಭ್ಯರ್ಥಿ, ಅಫಜಲಪುರ ಮತಕ್ಷೇತ್ರ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry